ICC: ಸಿಂಹಳೀಯರಿಗೆ ಬಿಗ್ ರಿಲೀಫ್; ಶ್ರೀಲಂಕಾ ಕ್ರಿಕೆಟ್ ಮೇಲಿನ ನಿಷೇಧ ಹಿಂಪಡೆದ ಐಸಿಸಿ

|

Updated on: Jan 29, 2024 | 2:51 PM

ICC: ಶ್ರೀಲಂಕಾ ಕ್ರಿಕೆಟ್ ಮಂಡಳಿಯಲ್ಲಿ ಸರ್ಕಾರದ ಹಸ್ತಕ್ಷೇಪವನ್ನು ಗಮನಿಸಿದ ಐಸಿಸಿ, ಸರ್ಕಾರದ ನಡೆಗೆ ಸಾಕಷ್ಟು ಅಸಮಾಧಾನ ವ್ಯಕ್ತಪಡಿಸಿತ್ತು. ಇದಾದ ಬಳಿಕ ಐಸಿಸಿ ಮಹತ್ವದ ನಿರ್ಧಾರ ಕೈಗೊಂಡು ಶ್ರೀಲಂಕಾ ಕ್ರಿಕೆಟ್ ಮಂಡಳಿಯನ್ನು ನಿಷೇಧಿಸಿತ್ತು.

ICC: ಸಿಂಹಳೀಯರಿಗೆ ಬಿಗ್ ರಿಲೀಫ್; ಶ್ರೀಲಂಕಾ ಕ್ರಿಕೆಟ್ ಮೇಲಿನ ನಿಷೇಧ ಹಿಂಪಡೆದ ಐಸಿಸಿ
ಶ್ರೀಲಂಕಾ ತಂಡ
Follow us on

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಶ್ರೀಲಂಕಾ ಕ್ರಿಕೆಟ್ ಮಂಡಳಿಗೆ (Sri Lanka Cricket) ಬಿಗ್ ರಿಲೀಫ್ ನೀಡಿದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಲಂಕಾ ಕ್ರಿಕೆಟ್ ಮಂಡಳಿಯ ಮೇಲೆ ಹೇರಿದ್ದ ನಿಷೇಧವನ್ನು ಐಸಿಸಿ ಹಿಂಪಡೆದಿದೆ. ವಾಸ್ತವವಾಗಿ ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್​ನಲ್ಲಿ (ODI World Cup 2023) ಶ್ರೀಲಂಕಾ ತಂಡದ ಪ್ರದರ್ಶನ ತೀರ ಕಳಪೆಯಾಗಿತ್ತು. ಅಲ್ಲದೆ ಈ ಟೂರ್ನಿಗೂ ಮುನ್ನ ನಡೆದ ಏಷ್ಯಾಕಪ್ (Asia Cup 2023) ಫೈನಲ್ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ತಂಡ ತನ್ನ ತವರು ಮೈದಾನದಲ್ಲೇ ಭಾರತದ ವಿರುದ್ಧ ಕೇವಲ 50 ರನ್​ಗಳಿಗೆ ಆಲೌಟ್ ಆಗಿತ್ತು. ತಂಡದ ಕಳಪೆ ಪ್ರದರ್ಶನದಿಂದಾಗಿ ಲಂಕಾ ಕ್ರಿಕೆಟ್ ಮಂಡಳಿಯಲ್ಲಿ ಸಾಕಷ್ಟು ಗೊಂದಲ ಸೃಷ್ಟಿಯಾಗಿತ್ತು. ಇದಾದ ನಂತರ ಲಂಕಾ ಕ್ರಿಕೆಟ್​ ಮಂಡಳಿಯನ್ನು ವಜಾಗೊಳಿಸಿ ಶ್ರೀಲಂಕಾ ಸರ್ಕಾರ ಆದೇಶ ಹೊರಡಿಸಿತ್ತು. ಕ್ರಿಕೆಟ್ ಮಂಡಳಿಯಲ್ಲಿ ಸರ್ಕಾರದ ಹಸ್ತಕ್ಷೇಪವನ್ನು ಒಪ್ಪದ ಐಸಿಸಿ, ಇದು ಐಸಿಸಿ ನಿಯಮಗಳಿಗೆ ವಿರುದ್ಧವಾಗಿದೆ ಎಂಬ ತೀರ್ಮಾನಕ್ಕೆ ಬಂದು ಲಂಕಾ ಮಂಡಳಿಯ ಮೇಲೆ ನಿಷೇಧದ ಶಿಕ್ಷೆ ವಿಧಿಸಿತ್ತು.

ನಿಷೇಧದ ಶಿಕ್ಷೆ ವಿಧಿಸಿದ್ದ ಐಸಿಸಿ

ಶ್ರೀಲಂಕಾ ಕ್ರಿಕೆಟ್ ಮಂಡಳಿಯಲ್ಲಿ ಸರ್ಕಾರದ ಹಸ್ತಕ್ಷೇಪವನ್ನು ಗಮನಿಸಿದ ಐಸಿಸಿ, ಸರ್ಕಾರದ ನಡೆಗೆ ಸಾಕಷ್ಟು ಅಸಮಾಧಾನ ವ್ಯಕ್ತಪಡಿಸಿತ್ತು. ಇದಾದ ಬಳಿಕ ಐಸಿಸಿ ಮಹತ್ವದ ನಿರ್ಧಾರ ಕೈಗೊಂಡು ಶ್ರೀಲಂಕಾ ಕ್ರಿಕೆಟ್ ಮಂಡಳಿಯನ್ನು ನಿಷೇಧಿಸಿತ್ತು. 10 ನವೆಂಬರ್ 2023 ರಂದು ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಐಸಿಸಿ ನಿಯಮಗಳನ್ನು ಉಲ್ಲಂಘಿಸಿದ ಆರೋಪವನ್ನು ಹೊರಿಸಿದ ಐಸಿಸಿ ಲಂಕಾ ಮಂಡಳಿಗೆ ನಿಷೇಧ ಹೇರಿ ಆದೇಶ ಹೊರಡಿಸಿತ್ತು. ಇದರಿಂದಾಗಿ ಶ್ರೀಲಂಕಾ ಐಸಿಸಿ ಅಂಡರ್ 19 ವಿಶ್ವಕಪ್ ಆತಿಥ್ಯದಿಂದ ವಂಚಿತವಾಯಿತು.

ನಿಷೇಧವನ್ನು ತೆಗೆದುಹಾಕಲು ನಿರ್ಧರಿಸಿದೆ

ಹಾಗೆಯೇ ಶ್ರೀಲಂಕಾ ಕ್ರಿಕೆಟ್ ದ್ವಿಪಕ್ಷೀಯ ಸರಣಿಗಳು ಮತ್ತು ಐಸಿಸಿ ಈವೆಂಟ್‌ಗಳಲ್ಲಿ ಆಡುವುದನ್ನು ಮುಂದುವರಿಸಲು ಅನುಮತಿ ನೀಡಿದ ಐಸಿಸಿ, ಮಂಡಳಿಗೆ ಯಾವುದೇ ಪ್ರಮುಖ ಪಂದ್ಯಾವಳಿಯನ್ನು ಆಯೋಜಿಸದಂತೆ ನಿರ್ಬಂಧ ಹೇರಿ ತೀರ್ಮಾನ ಕೈಗೊಂಡಿತ್ತು. ಇದೀಗ ಶ್ರೀಲಂಕಾ ಕ್ರಿಕೆಟ್ ಮಂಡಳಿಯಲ್ಲಿ ಐಸಿಸಿ, ಮೇಲ್ವಿಚಾರಣೆ ನಡೆಸಿದ್ದು, ಇನ್ನು ಮುಂದೆ ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಜವಾಬ್ದಾರಿಯುತವಾಗಿ ನಡೆದುಕೊಳ್ಳುವುದಾಗಿಯೂ ಹಾಗೂ ಐಸಿಸಿ ನಿಯಮಗಳನ್ನು ಪಾಲಿಸುವುದಾಗಿಯೂ ಒಪ್ಪಿಕೊಂಡಿದೆ ಎಂಬುದನ್ನು ಗಣನೆಗೆ ತೆಗೆದುಕೊಂಡು ಶ್ರೀಲಂಕಾ ಕ್ರಿಕೆಟ್ ಮಂಡಳಿ ಮೇಲೆ ಹೇರಿದ್ದ ನಿಷೇಧವನ್ನು ತೆಗೆದುಹಾಕಲು ನಿರ್ಧರಿಸಿದೆ.

ಐಸಿಸಿ ನಿಷೇಧದ ನಂತರ ಶ್ರೀಲಂಕಾ ಕ್ರಿಕೆಟ್ ಮಂಡಳಿ ಆಯ್ಕೆ ಸಮಿತಿಯಲ್ಲಿ ಬದಲಾವಣೆ ಮಾಡಿದೆ. ಇದರಲ್ಲಿ ಮಾಜಿ ಕ್ರಿಕೆಟಿಗ ಉಪುಲ್ ತರಂಗ ಅವರನ್ನು 5 ಸದಸ್ಯರ ಆಯ್ಕೆ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಇವರಲ್ಲದೆ ಅಜಂತಾ ಮೆಂಡಿಸ್, ಇಂಡಿಕಾ ಡಿ ಸಾರಮ್, ತರಂಗ ಪರಣವಿತಾನ ಮತ್ತು ದಿಲ್ರುವಾನ್ ಪೆರೇರಾ ಅವರನ್ನು ಆಯ್ಕೆಗಾರರನ್ನಾಗಿ ಮಾಡಲಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:50 pm, Mon, 29 January 24