World Cup 2027: 3 ದೇಶಗಳು, 54 ಪಂದ್ಯಗಳು; 2027 ರ ಏಕದಿನ ವಿಶ್ವಕಪ್​ಗೆ ಸ್ಥಳ ನಿಗದಿ

World Cup 2027: 2027ರಲ್ಲಿ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾ ಜಂಟಿಯಾಗಿ ಆಯೋಜಿಸಲಿರುವ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್‌ನ ಸ್ಥಳಗಳನ್ನು ಘೋಷಿಸಲಾಗಿದೆ. ದಕ್ಷಿಣ ಆಫ್ರಿಕಾದಲ್ಲಿ 44 ಪಂದ್ಯಗಳು, ಜಿಂಬಾಬ್ವೆಯಲ್ಲಿ 6-7 ಮತ್ತು ನಮೀಬಿಯಾದಲ್ಲಿ 3-4 ಪಂದ್ಯಗಳು ನಡೆಯಲಿವೆ. ಭಾರತ-ಆಸ್ಟ್ರೇಲಿಯಾ ನಡುವಿನ ಉದ್ಘಾಟನಾ ಪಂದ್ಯದ ಸಾಧ್ಯತೆಯಿದೆ. 14 ತಂಡಗಳು ತಲಾ 7 ತಂಡಗಳ ಎರಡು ಗುಂಪುಗಳಲ್ಲಿ ಸ್ಪರ್ಧಿಸಲಿವೆ.

World Cup 2027: 3 ದೇಶಗಳು, 54 ಪಂದ್ಯಗಳು; 2027 ರ ಏಕದಿನ ವಿಶ್ವಕಪ್​ಗೆ ಸ್ಥಳ ನಿಗದಿ
2027 World Cup

Updated on: Aug 23, 2025 | 7:00 PM

2027 ರಲ್ಲಿ ನಡೆಯಲಿರುವ ಐಸಿಸಿ ಪುರುಷರ ಏಕದಿನ ವಿಶ್ವಕಪ್ ( World Cup 2027) ತನ್ನ ಸಿದ್ಧತೆಗಳೊಂದಿಗೆ ಸುದ್ದಿಯಲ್ಲಿದೆ. ಈ ಪಂದ್ಯಾವಳಿಯನ್ನು ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾ ಜಂಟಿಯಾಗಿ ಆಯೋಜಿಸಲಿವೆ. ಕ್ರಿಕೆಟ್ ದಕ್ಷಿಣ ಆಫ್ರಿಕಾ (CSA) ಈ ಮೆಗಾ ಈವೆಂಟ್‌ಗಾಗಿ ಆಯ್ಕೆ ಮಾಡಲಾದ ಕ್ರೀಡಾಂಗಣಗಳನ್ನು ಘೋಷಿಸಿದ್ದು, ಇದರಲ್ಲಿ ಒಟ್ಟು 54 ಪಂದ್ಯಗಳು ನಡೆಯಲಿವೆ. ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ಜಂಟಿಯಾಗಿ ವಿಶ್ವಕಪ್ ಅನ್ನು ಆಯೋಜಿಸುತ್ತಿರುವುದು ಇದು ಎರಡನೇ ಬಾರಿಯಾಗಿದ್ದರೆ, ನಮೀಬಿಯಾ ಮೊದಲ ಬಾರಿಗೆ ಈ ದೊಡ್ಡ ಪಂದ್ಯಾವಳಿಯನ್ನು ಆಯೋಜಿಸಲಿದೆ.

ಈ ಕ್ರೀಡಾಂಗಣಗಳಲ್ಲಿ ನಡೆಯಲಿವೆ ಪಂದ್ಯಗಳು

ಈ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ 44 ಪಂದ್ಯಗಳನ್ನು ಆಯೋಜಿಸಲಿದ್ದು, ಉಳಿದ 10 ಪಂದ್ಯಗಳು ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯಲಿವೆ. ದಕ್ಷಿಣ ಆಫ್ರಿಕಾದಲ್ಲಿ ಎಂಟು ಕ್ರೀಡಾಂಗಣಗಳನ್ನು ಆಯ್ಕೆ ಮಾಡಲಾಗಿದೆ, ಅವುಗಳಲ್ಲಿ ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಕ್ರೀಡಾಂಗಣ, ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್ ಕ್ರಿಕೆಟ್ ಮೈದಾನ, ಡರ್ಬನ್‌ನ ಕಿಂಗ್ಸ್‌ಮೀಡ್ ಕ್ರಿಕೆಟ್ ಮೈದಾನ, ಪ್ರಿಟೋರಿಯಾದ ಸೆಂಚುರಿಯನ್ ಪಾರ್ಕ್, ಬ್ಲೂಮ್‌ಫಾಂಟೈನ್‌ನ ಮಂಗಾಂಗ್ ಓವಲ್, ಗ್ಕೆಬೆರಾದಲ್ಲಿನ ಸೇಂಟ್ ಜಾರ್ಜ್ ಪಾರ್ಕ್, ಪೂರ್ವ ಲಂಡನ್‌ನ ಬಫಲೋ ಪಾರ್ಕ್ ಮತ್ತು ಪಾರ್ಲ್‌ನ ಬೋಲ್ಯಾಂಡ್ ಪಾರ್ಕ್ ಸೇರಿವೆ.

ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ಜೋಹಾನ್ಸ್‌ಬರ್ಗ್ ಮತ್ತು ಸೆಂಚುರಿಯನ್ ಕ್ರೀಡಾಂಗಣದಲ್ಲಿ ನಡೆಯುವ ಸಾಧ್ಯತೆ ಇದೆ. ಆದಾಗ್ಯೂ, ಇಲ್ಲಿಯವರೆಗೆ ಪಂದ್ಯಗಳ ಸಂಖ್ಯೆಯನ್ನು ಮಾತ್ರ ಬಹಿರಂಗಪಡಿಸಲಾಗಿದ್ದು, ವೇಳಾಪಟ್ಟಿಯನ್ನು ಇನ್ನೂ ಬಿಡುಗಡೆ ಮಾಡಲಾಗಿಲ್ಲ. ಪಂದ್ಯಾವಳಿ ಪ್ರಾರಂಭವಾಗುವ ಸುಮಾರು ಎರಡು ತಿಂಗಳ ಮೊದಲು ಐಸಿಸಿ ಸಂಪೂರ್ಣ ವೇಳಾಪಟ್ಟಿಯನ್ನು ಬಿಡುಗಡೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ.

10 ಪಂದ್ಯಗಳಿಗೆ ಜಿಂಬಾಬ್ವೆ, ನಮೀಬಿಯಾದ ಆತಿಥ್ಯ

ದಕ್ಷಿಣ ಆಫ್ರಿಕಾ ಒಟ್ಟು 44 ಪಂದ್ಯಗಳ ಆತಿಥ್ಯ ಹಕ್ಕು ಪಡೆಯಲಿದ್ದು, ಉಳಿದ 10 ಪಂದ್ಯಗಳನ್ನು ಜಿಂಬಾಬ್ವೆ ಮತ್ತು ನಮೀಬಿಯಾ ನೆಲದಲ್ಲಿ ಆಡಬಹುದು. ಅದರಲ್ಲಿ ಜಿಂಬಾಬ್ವೆಯಲ್ಲಿ 6 ರಿಂದ 7 ಪಂದ್ಯಗಳು ನಡೆಯಲಿದ್ದು, ಉಳಿದ 3 ರಿಂದ 4 ಪಂದ್ಯಗಳನ್ನು ನಮೀಬಿಯಾದಲ್ಲಿ ಆಡಬಹುದು ಎಂದು ನಿರೀಕ್ಷಿಸಲಾಗಿದೆ. ಇದರಿಂದ ನಮೀಬಿಯಾದಲ್ಲಿ ಕ್ರಿಕೆಟ್ ಅನ್ನು ಪ್ರಚಾರ ಮಾಡುವುದರ ಜೊತೆಗೆ ಅಭಿಮಾನಿಗಳನ್ನು ಸಹ ಆಕರ್ಷಿಸಬಹುದು.

ಭಾರತ-ಆಸೀಸ್ ನಡುವೆ ಮೊದಲ ಪಂದ್ಯ?

2027 ರ ಏಕದಿನ ವಿಶ್ವಕಪ್ ಅನ್ನು ಅಬ್ಬರದಿಂದ ಪ್ರಾರಂಭಿಸಲು ಐಸಿಸಿ, ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಉದ್ಘಾಟನಾ ಪಂದ್ಯವನ್ನು ಆಯೋಜಿಸಬಹುದು. ಏಕೆಂದರೆ 2023 ರ ವಿಶ್ವಕಪ್​ನಲ್ಲಿ ಈ ಎರಡೂ ತಂಡಗಳು ಫೈನಲ್‌ ಆಡಿದ್ದವು.

ತಲಾ 7 ತಂಡಗಳ 2 ಗುಂಪುಗಳು

2027ರ ವಿಶ್ವಕಪ್‌ನಲ್ಲಿ 14 ತಂಡಗಳು ಭಾಗವಹಿಸಲಿದ್ದು, ಇದರ ಸ್ವರೂಪ 2003 ರ ವಿಶ್ವಕಪ್‌ನಂತೆಯೇ ಇರುತ್ತದೆ. ಅಂದರೆ ತಲಾ 7 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗುತ್ತದೆ. 2003ರಲ್ಲಿ ದಕ್ಷಿಣ ಆಫ್ರಿಕಾ ಜಿಂಬಾಬ್ವೆ ಮತ್ತು ಕೀನ್ಯಾ ಜೊತೆಗೂಡಿ ಈ ಪಂದ್ಯಾವಳಿಯನ್ನು ಆಯೋಜಿಸಿತ್ತು. ಆ ಆವೃತ್ತಿಯಲ್ಲಿ ಆಸ್ಟ್ರೇಲಿಯಾ ತಂಡ ವಿಶ್ವಕಪ್ ಎತ್ತಿಹಿಡಿದಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:54 pm, Sat, 23 August 25