ಕರ್ನಾಟಕ ಕ್ರಿಕೆಟ್ ಪ್ರಿಯರಿಗೆ ಮತ್ತೊಂದು ಆಘಾತ; ಏಕದಿನ ವಿಶ್ವಕಪ್ ಪಂದ್ಯಗಳು ಬೆಂಗಳೂರಿನಿಂದ ಶಿಫ್ಟ್
2025 Women's Cricket World Cup Schedule Update: 2025ರ ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್‌ನ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆಗಳಾಗಿವೆ. ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ದುರಂತದಿಂದಾಗಿ, ಬೆಂಗಳೂರಿನಲ್ಲಿ ನಡೆಯಬೇಕಿದ್ದ ಕೆಲವು ಲೀಗ್ ಹಾಗೂ ಸೆಮಿಫೈನಲ್ ಪಂದ್ಯಗಳನ್ನು ಮುಂಬೈಗೆ ಸ್ಥಳಾಂತರಿಸಲಾಗಿದೆ. ಹೊಸ ವೇಳಾಪಟ್ಟಿಯ ಪ್ರಕಾರ, ಮುಂಬೈನಲ್ಲಿ ಐದು ಪಂದ್ಯಗಳು ನಡೆಯಲಿವೆ. ಫೈನಲ್ ಪಂದ್ಯ ಕೊಲಂಬೊ ಅಥವಾ ಮುಂಬೈನಲ್ಲಿ ನಡೆಯಲಿದೆ.

2025 ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ (ICC Women’s World Cup 2025) ವೇಳಾಪಟ್ಟಿಯಲ್ಲಿ ದೊಡ್ಡ ಬದಲಾವಣೆಯಾಗಿದೆ. ಈ ಮೊದಲೇ ಊಹಿಸಿದಂತೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Bengaluru Cricket Stadium) ನಡೆಯಬೇಕಿದ್ದ ಲೀಗ್ ಹಂತದ ಹಾಗೂ ಸೆಮಿಫೈನಲ್ ಪಂದ್ಯಗಳನ್ನು ನವಿ ಮುಂಬೈನಲ್ಲಿ ನಡೆಸಲು ಐಸಿಸಿ ನಿರ್ಧರಿಸಿದೆ. ವಾಸ್ತವವಾಗಿ ಐಸಿಸಿ ನಿರ್ಧಾರಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಉಂಟಾಗಿದ್ದ ಕಾಲ್ತುಳಿತ ದುರಂತವೇ ಪ್ರಮುಖ ಕಾರಣ ಎನ್ನಬಹುದು. ಇದರಿಂದಾಗಿ ವಿಶ್ವಕಪ್ ಪಂದ್ಯಗಳು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಬದಲು ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿವೆ.
ಹೊಸ ವೇಳಾಪಟ್ಟಿ ಪ್ರಕಟ
ಮಹಿಳಾ ವಿಶ್ವಕಪ್‌ನ ಹೊಸ ವೇಳಾಪಟ್ಟಿಯ ಪ್ರಕಾರ, ಐದು ಪಂದ್ಯಗಳು ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿವೆ. ಈ ಪಂದ್ಯಗಳಲ್ಲಿ ಮೂರು ಲೀಗ್ ಪಂದ್ಯಗಳು ಮತ್ತು ಒಂದು ಸೆಮಿಫೈನಲ್ ಸೇರಿವೆ. ಪಾಕಿಸ್ತಾನ ಫೈನಲ್ ತಲುಪದಿದ್ದರೆ, ಪಂದ್ಯಾವಳಿಯ ಫೈನಲ್ ಕೂಡ ಈ ಕ್ರೀಡಾಂಗಣದಲ್ಲಿ ನಡೆಯಲಿದೆ. ನವಿ ಮುಂಬೈ ಜೊತೆಗೆ, ವಿಶ್ವಕಪ್ ಪಂದ್ಯಗಳನ್ನು ಎಸಿಎ ಕ್ರೀಡಾಂಗಣ (ಗುವಾಹಟಿ), ಹೋಳ್ಕರ್ ಕ್ರೀಡಾಂಗಣ (ಇಂದೋರ್), ಎಸಿಎ-ವಿಡಿಸಿಎ ಕ್ರೀಡಾಂಗಣ (ವಿಶಾಖಪಟ್ಟಣ) ಮತ್ತು ಆರ್. ಪ್ರೇಮದಾಸ ಕ್ರೀಡಾಂಗಣ (ಕೊಲಂಬೊ, ಶ್ರೀಲಂಕಾ) ಗಳಲ್ಲಿಯೂ ನಡೆಸಲಾಗುವುದು.
The updated match schedule for #CWC25 is out now 🏆
All the action starts on 30 September! 🗓️
✍️: https://t.co/jBoQOHox5V pic.twitter.com/RcErcJR6yU
— ICC (@ICC) August 22, 2025
ಬೆಂಗಳೂರಿನಿಂದ ಸ್ಥಳಾಂತರ
ಹಳೆಯ ವೇಳಾಪಟ್ಟಿಯ ಪ್ರಕಾರ, ಭಾರತ ಮತ್ತು ಶ್ರೀಲಂಕಾ ನಡುವಿನ ಪಂದ್ಯ ಸೆಪ್ಟೆಂಬರ್ 30 ರಂದು ಬೆಂಗಳೂರಿನ ಮೈದಾನದಲ್ಲಿ ನಡೆಯಬೇಕಿತ್ತು. ಈಗ ಅದು ಗುವಾಹಟಿ ಮೈದಾನದಲ್ಲಿ ನಡೆಯಲಿದೆ. ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯವು ಅಕ್ಟೋಬರ್ 3 ರಂದು ಬೆಂಗಳೂರಿನಲ್ಲಿ ನಡೆಯಬೇಕಿತ್ತು, ಈಗ ಅದು ಗುವಾಹಟಿಯಲ್ಲಿ ನಡೆಯಲಿದೆ.
ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯವು ಅಕ್ಟೋಬರ್ 20 ರಂದು ಕೊಲಂಬೊ ಮೈದಾನದಲ್ಲಿ ನಡೆಯಬೇಕಿತ್ತು, ಈಗ ಅದು ನವಿ ಮುಂಬೈ ಮೈದಾನದಲ್ಲಿ ನಡೆಯಲಿದೆ. ಇವುಗಳು ಮಾತ್ರವಲ್ಲದೆ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಭಾರತ ಹಾಗೂ ನ್ಯೂಜಿಲೆಂಡ್ (ಅಕ್ಟೋಬರ್ 23) ಮತ್ತು ಭಾರತ ಹಾಗೂ ಬಾಂಗ್ಲಾದೇಶ (ಅಕ್ಟೋಬರ್ 26) ನಡುವಿನ ಲೀಗ್ ಪಂದ್ಯಗಳು ಕೂಡ ನವಿ ಮುಂಬೈ ಮೈದಾನದಲ್ಲಿ ನಡೆಯಲಿವೆ.
ಮಹಿಳಾ ಏಕದಿನ ವಿಶ್ವಕಪ್ ಗೆ ಭಾರತ ತಂಡ ಪ್ರಕಟ, ಟೀಮ್ನಲ್ಲಿ ಯಾರಿಗೆಲ್ಲಾ ಸಿಕ್ತು ಚಾನ್ಸ್?
ಪಾಕ್ ಪ್ರದರ್ಶನದ ಮೇಲೆ ಫೈನಲ್ ನಿರ್ಧಾರ
ಉಳಿದಂತೆ ಮಹಿಳಾ ವಿಶ್ವಕಪ್ ಫೈನಲ್ ನವೆಂಬರ್ 2 ರಂದು ಕೊಲಂಬೊ ಅಥವಾ ನವಿ ಮುಂಬೈನಲ್ಲಿ ನಡೆಯಲಿದೆ. ಮೊದಲ ಸೆಮಿಫೈನಲ್ ಅಕ್ಟೋಬರ್ 29 ರಂದು ಗುವಾಹಟಿ ಅಥವಾ ಕೊಲಂಬೊದಲ್ಲಿ ಮತ್ತು ಎರಡನೇ ಸೆಮಿಫೈನಲ್ ಅಕ್ಟೋಬರ್ 30 ರಂದು ನವಿ ಮುಂಬೈನಲ್ಲಿ ನಡೆಯಲಿದೆ. ಪಾಕಿಸ್ತಾನ ಅರ್ಹತೆ ಪಡೆದರೆ, ಅದು ಕೊಲಂಬೊದಲ್ಲಿ ಮೊದಲ ಸೆಮಿಫೈನಲ್ ಅನ್ನು ಆಡುತ್ತದೆ. ಆ ಬಳಿಕ ಪಾಕಿಸ್ತಾನ ಫೈನಲ್ ತಲುಪಿದರೆ, ಫೈನಲ್ ಪಂದ್ಯ ಕೊಲಂಬೊದಲ್ಲಿ ನಡೆಯಲಿದೆ. ಪಾಕಿಸ್ತಾನ ಸೆಮಿಫೈನಲ್ ತಲುಪದಿದ್ದರೆ, ಎಲ್ಲಾ ನಾಕೌಟ್ ಪಂದ್ಯಗಳನ್ನು ಭಾರತದಲ್ಲಿ ನಡೆಸಲಾಗುತ್ತದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:46 pm, Fri, 22 August 25
