
ಐಸಿಸಿ ಮಹಿಳಾ ಟಿ20 ವಿಶ್ವಕಪ್ ಆರಂಭಕ್ಕೆ ಇನ್ನೇರಡು ತಿಂಗಳು ಬಾಕಿ ಉಳಿದಿದೆ. ಅಕ್ಟೋಬರ್ 3ರಿಂದ ಆರಂಭವಾಗಲಿರುವ ಚುಟುಕು ವಿಶ್ವಸಮರಕ್ಕೆ ಬಾಂಗ್ಲಾದೇಶ ಆತಿಥ್ಯವಹಿಸುತ್ತಿದೆ. ಆದರೆ ಸದ್ಯದ ಪರಿಸ್ಥಿತಿಯನ್ನು ನೋಡಿದರೆ, ಮಹಿಳಾ ಟಿ20 ವಿಶ್ವಕಪ್ ಬೇರೆಗೆ ಸ್ಥಳಾಂತರಗೊಳ್ಳುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ವಾಸ್ತವವಾಗಿ ಸರ್ಕಾರಿ ಹುದ್ದೆಯಲ್ಲಿನ ಮೀಸಲಾತಿಗೆ ಸಂಬಂಧಿಸಿದಂತೆ ಬಾಂಗ್ಲಾದೇಶದಲ್ಲಿ ಹಿಂಸಾಚಾರ ಭುಗಿಲೆದಿದ್ದೆ. ದಿನೇ ದಿನೇ ಹೋರಾಟದ ಸ್ವರೂಪ ಬದಲಾಗುತ್ತಿದೆ. ಈಗಾಗಲೇ ಈ ಹೋರಾಟದಲ್ಲಿ ನೂರಾರು ಸಾವುಗಳು ಸಂಭವಿಸಿವೆ. ಇದೀಗ ದೇಶದ ಪ್ರಧಾನಿ ಶೇಖ್ ಹಸೀನಾ ಕೂಡ ದೇಶ ತೊರೆದು ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ಬಾಂಗ್ಲಾದೇಶದಲ್ಲಿ ಇಂತಹ ಪರಿಸ್ಥಿತಿ ಇರುವಾಗ ಮಹಿಳಾ ಟಿ20 ವಿಶ್ವಕಪ್ ನಡೆಯುವುದರ ಬಗ್ಗೆ ಅನುಮಾನ ಮೂಡಿದೆ.
ಬಾಂಗ್ಲಾದೇಶದಲ್ಲಿ ಸರ್ಕಾರದ ವಿರುದ್ಧ ಸಾವಿರಾರು ಜನ ಬೀದಿಗಿಳಿದಿದ್ದಾರೆ. ದೇಶದ ಪ್ರಧಾನಿ ಶೇಖ್ ಹಸೀನಾ ಅವರ ಕಚೇರಿಗೂ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಹಿಂಸಾಚಾರ ಮತ್ತಷ್ಟು ಉಗ್ರರೂಪ ತಾಳುವುದರಲ್ಲಿ ಸಂದೇಹವಿಲ್ಲ. ಉದ್ಯೋಗ ಮೀಸಲಾತಿಯನ್ನು ತೆಗೆದುಹಾಕುವಂತೆ ಮತ್ತು ಪ್ರಧಾನಿ ಶೇಖ್ ಹಸೀನಾ ಅವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನಾಕಾರರು ಬೀದಿಗಿಳಿದಿದ್ದಾರೆ. ಈ ಹಿಂಸಾಚಾರದಲ್ಲಿ ಇದುವರೆಗೆ 19 ಪೊಲೀಸರು ಮತ್ತು 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ನೂರಾರು ಜನರು ಕೂಡ ಗಾಯಗೊಂಡಿದ್ದಾರೆ. ಹಿಂಸಾಚಾರದ ಹಿನ್ನೆಲೆಯಲ್ಲಿ ದೇಶದಲ್ಲಿ ಅನಿರ್ದಿಷ್ಟಾವಧಿ ಕರ್ಫ್ಯೂ ಹೇರಲಾಗಿದೆ.
ಬಾಂಗ್ಲಾದೇಶದ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಬಿಎಸ್ಎಫ್ ಗಡಿಯಲ್ಲಿ ಭದ್ರತೆಯನ್ನು ಹೆಚ್ಚಿಸಿದೆ. ಬಾಂಗ್ಲಾದೇಶದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಭಾರತದಲ್ಲೂ ಎಚ್ಚರಿಕೆ ನೀಡಲಾಗಿದೆ. ಈ ಎಲ್ಲಾ ಪರಿಸ್ಥಿತಿಯಿಂದ ಟಿ20 ವಿಶ್ವಕಪ್ ಆಯೋಜನೆಯ ಮೇಲೆ ಪ್ರಶ್ನಾರ್ಥಕ ಚಿಹ್ನೆ ಮೂಡಿದೆ. ಬಾಂಗ್ಲಾದೇಶವನ್ನು ಹೊರತುಪಡಿಸಿ ಇತರ ತಂಡಗಳ ಭದ್ರತೆಯ ಜವಾಬ್ದಾರಿಯನ್ನು ಯಾರು ತೆಗೆದುಕೊಳ್ಳುತ್ತಾರೆ? ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಹೀಗಾಗಿ ಬಾಂಗ್ಲಾದೇಶದಲ್ಲಿ ನಡೆಯಲಿರುವ ಟೂರ್ನಿಯಿಂದ ಕೆಲ ದೇಶಗಳು ಹಿಂದೆ ಸರಿಯುವ ಸಾಧ್ಯತೆಗಳಿವೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಐಸಿಸಿ, ಮಹಿಳಾ ಟಿ20 ವಿಶ್ವಕಪ್ಗೆ ಬೇರೆ ಸ್ಥಳವನ್ನು ನಿಗದಿಪಡಿಸುವ ಸಾಧ್ಯತೆಗಳಿವೆ.
ಇನ್ನು ಮಹಿಳಾ ಟಿ20 ವಿಶ್ವಕಪ್ ಬಗ್ಗೆ ಹೇಳುವುದಾದರೆ.. ಈ ಟೂರ್ನಿಯಲ್ಲಿ 10 ತಂಡಗಳು ಭಾಗವಹಿಸಲಿವೆ. 17 ದಿನಗಳ ಈ ಟೂರ್ನಿಯಲ್ಲಿ ಒಟ್ಟು 23 ಪಂದ್ಯಗಳು ನಡೆಯಲಿವೆ. ಅಕ್ಟೋಬರ್ 3 ರಿಂದ ಅಕ್ಟೋಬರ್ 14 ರವರೆಗೆ ಲೀಗ್ ಪಂದ್ಯಗಳು ನಡೆಯಲಿವೆ. ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ನಂತರ ಸೆಮಿಫೈನಲ್‌ಗೆ ಮುನ್ನಡೆಯುತ್ತವೆ. ಸೆಮಿಫೈನಲ್ ಪಂದ್ಯಗಳು ಅಕ್ಟೋಬರ್ 17 ಮತ್ತು 18 ರಂದು ನಡೆಯಲಿದೆ. ಈ ಟೂರ್ನಿಯ ಫೈನಲ್ ಪಂದ್ಯ ಅಕ್ಟೋಬರ್ 20 ರಂದು ನಡೆಯಲಿದೆ. ಎ ಗುಂಪಿನಲ್ಲಿ ಆಸ್ಟ್ರೇಲಿಯಾ, ಭಾರತ, ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡವಿದ್ದರೆ, ಬಾಂಗ್ಲಾದೇಶ, ಇಂಗ್ಲೆಂಡ್, ಸ್ಕಾಟ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ಬಿ ಗುಂಪಿನಲ್ಲಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ