
ಭಾರತ ಮತ್ತು ನ್ಯೂಜಿಲೆಂಡ್ (India and New Zealand) ನಡುವಿನ ಏಕದಿನ ಸರಣಿಯ ಮೊದಲ ಪಂದ್ಯ ಇಂದು ಹೈದರಾಬಾದ್‌ನಲ್ಲಿ ನಡೆಯಲಿದೆ. 3 ಪಂದ್ಯಗಳ ಏಕದಿನ ಸರಣಿ ಆರಂಭಕ್ಕೂ ಮುನ್ನ ಭಾರತ ತಂಡದ ಅಭಿಮಾನಿಗಳಿಗೆ ಸಂತಸದ ಸುದ್ದಿ ಸಿಕ್ಕಿದೆ. ಐಸಿಸಿ ಬಿಡುಗಡೆ ಮಾಡಿರುವ ನೂತನ ಏಕದಿನ ರ್ಯಾಂಕಿಂಗ್ (ICC ODI Ranking) ಪಟ್ಟಿಯಲ್ಲಿ ಟೀಂ ಇಂಡಿಯಾದ (Team India) ರನ್ ಮಷಿನ್ ವಿರಾಟ್ ಕೊಹ್ಲಿ (Virat Kohli ) ಮತ್ತು ವೇಗಿ ಮೊಹಮ್ಮದ್ ಸಿರಾಜ್ (Mohammad Siraj) ಇಬ್ಬರೂ ಈಗ ವಿಶ್ವದ ಅಗ್ರ ಐದು ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಕೊಹ್ಲಿ ಮತ್ತೊಮ್ಮೆ ಈ ಪಟ್ಟಿಗೆ ತಲುಪಿದ್ದರೆ, ಸಿರಾಜ್ ಮೊದಲ ಬಾರಿಗೆ ಈ ಸ್ಥಾನಕ್ಕೆ ಎಂಟ್ರಿಕೊಟ್ಟ ಸಾಧನೆ ಮಾಡಿದ್ದಾರೆ. ನೂತನ ರ್ಯಾಂಕಿಂಗ್ ಪ್ರಕಾರ ಸಿರಾಜ್ 15 ಸ್ಥಾನ ಮೇಲಕ್ಕೇರಿದರೆ, ಕೊಹ್ಲಿ 4 ಸ್ಥಾನ ಮುಂಬಡ್ತಿ ಪಡೆದಿದ್ದಾರೆ.
ಸದ್ಯ, ಸಿರಾಜ್ ಅದ್ಭುತ ಫಾರ್ಮ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪವರ್ ಪ್ಲೇನಲ್ಲಿ ಟೀಂ ಇಂಡಿಯಾ ಪರ ಉತ್ತಮ ಬೌಲಿಂಗ್ ಮಾಡುತ್ತಿರಯವ ಸಿರಾಜ್ ಡೆತ್ ಓವರ್ಗಳಲ್ಲಿಯೂ ನಿರೀಕ್ಷೆಯಂತೆಯೇ ವಿಕೆಟ್ ಕಬಳಿಸುತ್ತಿದ್ದಾರೆ. ಇದೀಗ ವಿಶ್ವದ ಮೂರನೇ ಶ್ರೇಯಾಂಕದ ಬೌಲರ್ ಎನಿಸಿಕೊಂಡಿರುವ ಸಿರಾಜ್ ಹೊಸ ರ‍್ಯಾಂಕಿಂಗ್‌ನಲ್ಲಿ 15 ಸ್ಥಾನ ಮೇಲೇರಿ ಈ ಸ್ಥಾನಕ್ಕೆ ತಲುಪಿದ್ದಾರೆ.
ICC Rankings: ಐಸಿಸಿ ಎಡವಟ್ಟು; ಕೇವಲ ಎರಡೂವರೆ ಗಂಟೆಗಳಲ್ಲಿ ನಂ.1 ಪಟ್ಟದಿಂದ ಕೆಳಗಿಳಿದ ಟೀಂ ಇಂಡಿಯಾ!
ಮೊದಲು 18ನೇ ಸ್ಥಾನದಲ್ಲಿದ್ದ ಸಿರಾಜ್, ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ 9 ವಿಕೆಟ್ ಪಡೆದಿದ್ದರು. ಇದರೊಂದಿಗೆ ಅವರ ಶ್ರೇಯಾಂಕವೂ ಸುಧಾರಿಸಿತು. ಈಗ ಕಿವೀಸ್ ವಿರುದ್ಧ ಆರಂಭವಾಗುವ ಏಕದಿನ ಸರಣಿಯಲ್ಲೂ ಇದೇ ಫಾರ್ಮ್ ಕಾಯ್ದುಕೊಂಡರೆ ವಿಶ್ವದ ನಂಬರ್ ಒನ್ ಬೌಲರ್ ಆಗುವ ಎಲ್ಲಾ ಸಾಧ್ಯತೆಗಳು ಸಿರಾಜ್ಗೆ ಇವೆ. ಪ್ರಸ್ತುತ ಸಿರಾಜ್ 685 ಅಂಕಗಳನ್ನು ಹೊಂದಿದ್ದು, 727 ಅಂಕಗಳೊಂದಿಗೆ ಜೋಶ್ ಹ್ಯಾಜಲ್‌ವುಡ್ ಎರಡನೇ ಸ್ಥಾನದಲ್ಲಿದ್ದಾರೆ. ಟ್ರೆಂಟ್ ಬೋಲ್ಟ್ 730 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ.
ಸದ್ಯ ವಿಶ್ವ ಕ್ರಿಕೆಟ್ನಲ್ಲಿ ರನ್‌ಗಳ ಲೂಟಿ ಮಾಡುತ್ತಿರುವ ಕಿಂಗ್ ಕೊಹ್ಲಿ ಮತ್ತೊಮ್ಮೆ ರ‍್ಯಾಂಕಿಂಗ್‌ನಲ್ಲಿ ತಮ್ಮ ಅದಿಪತ್ಯವನ್ನು ಸಾಧಿಸುವತ್ತ ಚಿತ್ತ ಹರಿಸಿದ್ದಾರೆ. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಕೊಹ್ಲಿ ತಿರುವನಂತಪುರಂನಲ್ಲಿ ನಡೆದ ಅಂತಿಮ ಏಕದಿನ ಪಂದ್ಯದಲ್ಲಿ 166 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು. ಇದಕ್ಕೂ ಮುನ್ನ ಗುವಾಹಟಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲೂ ಶತಕ ಬಾರಿಸಿದ್ದರು. ಹೀಗಾಗಿ ಸರಣಿಯಲ್ಲಿ 2 ಶತಕ ಬಾರಿಸಿದ್ದ ಕೊಹ್ಲಿ ಐಸಿಸಿ ಶ್ರೇಯಾಂಕದಲ್ಲಿ ಲಾಭ ಪಡೆದಿದ್ದಾರೆ. ಈ ಮುಂಚೆ 8ನೇ ಸ್ಥಾನದಲ್ಲಿದ್ದ ವಿರಾಟ್ ಕೊಹ್ಲಿ ಇದೀಗ ನೇರವಾಗಿ 4ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.
ಈ ಪಟ್ಟಿಯಲ್ಲಿ ಪಾಕಿಸ್ತಾನದ ನಾಯಕ ಬಾಬರ್ ಅಜಮ್ 887 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾದ ರಾಸ್ಸಿ ಡೆರ್ ದುಸ್ಸೆನ್ 766 ಅಂಕಗಳೊಂದಿಗೆ ಎರಡನೇ ಮತ್ತು ದಕ್ಷಿಣ ಆಫ್ರಿಕಾದ ಕ್ವಿಂಟ್ ಡಿ ಕಾಕ್ 759 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ ಅವರ ಜಿಗಿತದೊಂದಿಗೆ ಡೇವಿಡ್ ವಾರ್ನರ್, ಇಮಾಮ್-ಉಲ್-ಹಕ್, ಕೇನ್ ವಿಲಿಯಮ್ಸನ್ ಮತ್ತು ಸ್ಟೀವ್ ಸ್ಮಿತ್ ತಲಾ ಒಂದು ಸ್ಥಾನ ಕುಸಿದಿದ್ದಾರೆ. ಈ ಪಟ್ಟಿಯಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ 704 ಅಂಕಗಳೊಂದಿಗೆ 10ನೇ ಸ್ಥಾನದಲ್ಲಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:52 am, Wed, 18 January 23