AUS vs SA: ಅನುಮಾನಾಸ್ಪದ ಬೌಲಿಂಗ್ ಶೈಲಿ; ಚೊಚ್ಚಲ ಪಂದ್ಯದಲ್ಲೇ ಯುವ ಸ್ಪಿನ್ನರ್ ವಿರುದ್ಧ ಐಸಿಸಿಗೆ ದೂರು
AUS vs SA: ದಕ್ಷಿಣ ಆಫ್ರಿಕಾದ ಯುವ ಆಫ್ ಸ್ಪಿನ್ನರ್ ಪ್ರೆನೆಲನ್ ಸುಬ್ರಯನ್ ಅವರ ಬೌಲಿಂಗ್ ಶೈಲಿಯ ಕುರಿತು ಸಂಶಯ ವ್ಯಕ್ತವಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದ ಬಳಿಕ ಪಂದ್ಯಾಧಿಕಾರಿಗಳು ಐಸಿಸಿಗೆ ದೂರು ಸಲ್ಲಿಸಿದ್ದಾರೆ. ಸುಬ್ರಯನ್ ಅವರ ಬೌಲಿಂಗ್ ಕ್ರಿಯೆಯನ್ನು ಪರೀಕ್ಷಿಸಲು ಐಸಿಸಿ ಮಾನ್ಯತೆ ಪಡೆದ ಪರೀಕ್ಷೆಗೆ ಒಳಗಾಗಬೇಕಾಗಿದೆ. ಆದಾಗ್ಯೂ, ಪರೀಕ್ಷಾ ಫಲಿತಾಂಶಗಳು ಹೊರಬರುವವರೆಗೂ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡುವುದನ್ನು ಮುಂದುವರಿಸುತ್ತಾರೆ.

ದಕ್ಷಿಣ ಆಫ್ರಿಕಾ ತಂಡ ಪ್ರಸ್ತುತ ಆಸ್ಟ್ರೇಲಿಯಾ (SA vs AUS) ಪ್ರವಾಸದಲ್ಲಿದ್ದು, ಉಭಯ ತಂಡಗಳ ನಡುವೆ ಟಿ20 ಹಾಗೂ ಏಕದಿನ ಸರಣಿ ನಡೆಯುತ್ತಿದೆ. ಈ ಮೊದಲು ನಡೆದಿದ್ದ ಟಿ20 ಸರಣಿಯನ್ನು ಆಸ್ಟ್ರೇಲಿಯಾ ತಂಡ 2-1 ಅಂತರದಿಂದ ಗೆದ್ದುಕೊಂಡಿತ್ತು. ಇದೀಗ ಎರಡೂ ತಂಡಗಳ ನಡುವೆ 3 ಪಂದ್ಯಗಳ ಏಕದಿನ ಸರಣಿ ನಡೆಯುತ್ತಿದೆ. ಈ ಸರಣಿಯ ಮೊದಲ ಪಂದ್ಯವನ್ನು ದಕ್ಷಿಣ ಆಫ್ರಿಕಾ ಗೆದ್ದುಕೊಂಡಿದ್ದು, ಸರಣಿಯಲ್ಲಿ ಶುಭಾರಂಭ ಮಾಡಿದೆ. ಆದಾಗ್ಯೂ ಈ ಪಂದ್ಯದ ಮೂಲಕ ದಕ್ಷಿಣ ಆಫ್ರಿಕಾ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ಯುವ ಬೌಲರ್ ವಿರುದ್ಧ ಪಂದ್ಯದ ಅಧಿಕಾರಿಗಳು ಐಸಿಸಿಗೆ ದೂರು ನೀಡಿದ್ದಾರೆ.
ಸಂಶಯಾಸ್ಪದ ಬೌಲಿಂಗ್ ಶೈಲಿ
ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಪರ ಏಕದಿನ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದ ಆಫ್ ಸ್ಪಿನ್ನರ್ ಪ್ರೆನೆಲನ್ ಸುಬ್ರಿಯನ್ ಅದ್ಭುತ ಪ್ರದರ್ಶನ ನೀಡಿದ್ದರು. ಆದರೆ ಪಂದ್ಯದ ಬಳಿಕ ಪ್ರೆನೆಲನ್ ಸುಬ್ರಿಯನ್ ಅವರ ಬೌಲಿಂಗ್ ಶೈಲಿಯ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಹೀಗಾಗಿ ಈ ಬಗ್ಗೆ ಐಸಿಸಿಗೆ ದೂರು ನೀಡಲಾಗಿದೆ. ಇದರಿಂದಾಗಿ ಅವರ ಬೌಲಿಂಗ್ ಅನ್ನು ಪರೀಕ್ಷಿಸಲು ಅವರು ಐಸಿಸಿ ಮಾನ್ಯತೆ ಪಡೆದ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ.
Prenelan Subrayen has been reported for a suspect bowling action following his debut in the first ODI against Australia pic.twitter.com/prQNYZHAoO
— Cricbuzz (@cricbuzz) August 20, 2025
ಪ್ರೆನೆಲನ್ ಸುಬ್ರಿಯಾನ್ ಬೌಲಿಂಗ್‌ನ ಕಾನೂನುಬದ್ಧತೆಯನ್ನು ಪ್ರಶ್ನಿಸಿ ಪಂದ್ಯದ ಅಧಿಕಾರಿಗಳು ಐಸಿಸಿಗೆ ವರದಿಯನ್ನು ಸಲ್ಲಿಸಿದ್ದಾರೆ. ಈ ಪಂದ್ಯದಲ್ಲಿ 10 ಓವರ್‌ಗಳನ್ನು ಬೌಲ್ ಮಾಡಿದ ಅವರು ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಟ್ರಾವಿಸ್ ಹೆಡ್ ಅವರ ಪ್ರಮುಖ ವಿಕೆಟ್ ಪಡೆದರು. ಇದಕ್ಕೂ ಮೊದಲು ಈ ವರ್ಷ ಬುಲವಾಯೊದಲ್ಲಿ ನಡೆದ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ್ದ ಸುಬ್ರಿಯಾನ್, ಮೊದಲ ಇನ್ನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ್ದರು . ಐಸಿಸಿ ನಿಯಮಗಳ ಪ್ರಕಾರ , ಸುಬ್ರಿಯಾನ್ ಈಗ ತಮ್ಮ ಬೌಲಿಂಗ್ ಶೈಲಿಯನ್ನು ಪರಿಶೀಲಿಸಲು ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಈ ಪರೀಕ್ಷೆಯನ್ನು ಐಸಿಸಿ ಗುರುತಿಸಿದ ಪರೀಕ್ಷಾ ಕೇಂದ್ರದಲ್ಲಿ ಮಾಡಲಾಗುತ್ತದೆ. ಆದಾಗ್ಯೂ ಈ ಪ್ರಕ್ರಿಯೆಯ ಸಮಯದಲ್ಲಿ, ಪರೀಕ್ಷಾ ಫಲಿತಾಂಶಗಳು ಹೊರಬರುವವರೆಗೆ ಸುಬ್ರಿಯಾನ್ ಅವರಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬೌಲಿಂಗ್ ಮಾಡಲು ಅವಕಾಶ ನೀಡಲಾಗುವುದು.
ದೇಶೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ಅನುಭವ
ಪ್ರೆನೆಲನ್ ಸುಬ್ರಿಯಾನ್ ಕಳೆದ ಹಲವಾರು ವರ್ಷಗಳಿಂದ ದಕ್ಷಿಣ ಆಫ್ರಿಕಾ ಪರ ದೇಶೀಯ ಕ್ರಿಕೆಟ್ ಆಡುತ್ತಿದ್ದಾರೆ. ಅವರು ಇಲ್ಲಿಯವರೆಗೆ 78 ಪ್ರಥಮ ದರ್ಜೆ, 102 ಲಿಸ್ಟ್ ಎ ಮತ್ತು 120 ಟಿ20 ಪಂದ್ಯಗಳನ್ನು ಆಡಿದ್ದಾರೆ. ಹಾಗೆಯೇ ದಕ್ಷಿಣ ಆಫ್ರಿಕಾದ ಟಿ20 ಲೀಗ್ ಎಸ್‌ಎ20 ನ ಭಾಗವೂ ಆಗಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
