IND vs SA: ನ್ಯೂಲ್ಯಾಂಡ್ಸ್ ಪಿಚ್ ಬಗ್ಗೆ ಐಸಿಸಿ ಅತೃಪ್ತಿ: ಒಂದು ಅಂಕ ಕಡಿತ..!

| Updated By: ಝಾಹಿರ್ ಯೂಸುಫ್

Updated on: Jan 10, 2024 | 7:09 AM

IND vs SA: ಕೇಪ್​ಟೌನ್​ನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ನಡೆದ ಭಾರತ-ಸೌತ್ ಆಫ್ರಿಕಾ ನಡುವಣ 2ನೇ ಟೆಸ್ಟ್ ಪಂದ್ಯವು ರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ತಂಡವು ಪ್ರಥಮ ಇನಿಂಗ್ಸ್​ನಲ್ಲಿ ಕೇವಲ 55 ರನ್​ಗಳಿಗೆ ಆಲೌಟ್ ಆಗಿತ್ತು.

IND vs SA: ನ್ಯೂಲ್ಯಾಂಡ್ಸ್ ಪಿಚ್ ಬಗ್ಗೆ ಐಸಿಸಿ ಅತೃಪ್ತಿ: ಒಂದು ಅಂಕ ಕಡಿತ..!
ಸಾಂದರ್ಭಿಕ ಚಿತ್ರ
Follow us on

ಭಾರತ-ಸೌತ್ ಆಫ್ರಿಕಾ (India vs South Africa) ನಡುವಣ ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದ್ದ ನ್ಯೂಲ್ಯಾಂಡ್ಸ್ ಪಿಚ್​ ಅನ್ನು ಐಸಿಸಿ ‘ಅತೃಪ್ತಿಕರ’ ಎಂದು ರೇಟ್ ಮಾಡಿದೆ. ಈ ಮೂಲಕ ನ್ಯೂಲ್ಯಾಂಡ್ಸ್ ಪಿಚ್ ಟೆಸ್ಟ್ ಕ್ರಿಕೆಟ್​ ಆಡಲು ಯೋಗ್ಯವಾಗಿರಲಿಲ್ಲ ಎಂದು ತಿಳಿಸಿದೆ. ಅಷ್ಟೇ ಅಲ್ಲದೆ ಕಳಪೆ ಗುಣಮಟ್ಟದ ಪಿಚ್ ರೂಪಿಸಿದ್ದ ಪರಿಣಾಮ ನ್ಯೂಲ್ಯಾಂಡ್ಸ್ ಮೈದಾನಕ್ಕೆ ಒಂದು ಡಿಮೆರಿಟ್ ಅಂಕ ನೀಡಲಾಗಿದೆ.

ಐಸಿಸಿ ಮ್ಯಾಚ್ ರೆಫರಿ ಕ್ರಿಸ್ ಬ್ರಾಡ್ ತಮ್ಮ ವರದಿಯಲ್ಲಿ ಸೌತ್ ಆಫ್ರಿಕಾದ ನಾಯಕ ಡೀನ್ ಎಲ್ಗರ್ ಮತ್ತು ಭಾರತ ತಂಡದ ನಾಯಕ ರೋಹಿತ್ ಶರ್ಮಾ  ಪಿಚ್ ಗುಣಮಟ್ಟಕ್ಕಿಂತ ಕೆಳಮಟ್ಟದಲ್ಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಹೀಗಾಗಿ ಕೇಪ್​ಟೌನ್​ನಲ್ಲಿನ​ ಮೈದಾನಕ್ಕೆ ಒಂದು ಡಿಮೆರಿಟ್ ಅಂಕ ನೀಡಲಾಗಿದೆ.

ಡಿಮೆರಿಟ್ ಅಂಕದ ಪರಿಣಾಮವೇನು?

ಯಾವುದೇ ಮೈದಾನದ ಪಿಚ್​ ಅನ್ನು ಕಳಪೆ ಎಂದು ಪರಿಗಣಿಸಿದರೆ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗುತ್ತದೆ. ಹೀಗೆ ಒಂದು ಮೈದಾನವು ಆರು ಡಿಮೆರಿಟ್ ಪಾಯಿಂಟ್‌ಗಳನ್ನು ಪಡೆದರೆ, 1 ವರ್ಷಗಳ ಕಾಲ ಆ ಮೈದಾನದಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳನ್ನು ನಿಷೇಧಿಸಲಾಗುತ್ತದೆ. ಅಂದರೆ 12 ತಿಂಗಳವರೆಗೆ ಯಾವುದೇ ಅಂತರರಾಷ್ಟ್ರೀಯ ಪಂದ್ಯಗಳನ್ನು ಆ ಮೈದಾನದಲ್ಲಿ ಆಯೋಜಿಸುವಂತಿಲ್ಲ.

ಒಂದು ವೇಳೆ 6 ಡಿಮೆರಿಟ್ ಬಳಿಕ ಮತ್ತೆ ಅದೇ ಮೈದಾನವು ಅಂತಾರಾಷ್ಟ್ರೀಯ ಪಂದ್ಯಗಳಿಗೆ ಆತಿಥ್ಯವಹಿಸಿ 12 ಡಿಮೆರಿಟ್ ಅಂಕಗಳನ್ನು ಪಡೆದರೆ ಆ ಮೈದಾನವನ್ನು 2 ವರ್ಷಗಳ ಕಾಲ ನಿಷೇಧಿಸಲಾಗುತ್ತದೆ. ಈ ಮೂಲಕ ಗುಣಮಟ್ಟದ ಪಿಚ್​ ರೂಪಿಸಲು ಐಸಿಸಿ ವಿಶೇಷ ನಿಯಮಗಳನ್ನು ಜಾರಿಗೊಳಿಸಿದೆ. ಅದರಂತೆ ಇದೀಗ ಕಳಪೆ ಗುಣಮಟ್ಟದ ಪಿಚ್ ಹೊಂದಿದ್ದ ನ್ಯೂಲ್ಯಾಂಡ್ಸ್​ಗೆ ಒಂದು ಡಿಮೆರಿಟ್ ಅಂಕ ನೀಡಲಾಗಿದೆ.

33 ವಿಕೆಟ್​ಗಳು ಪತನ:

ಕೇಪ್​ಟೌನ್​ನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ನಡೆದ ಭಾರತ-ಸೌತ್ ಆಫ್ರಿಕಾ ನಡುವಣ 2ನೇ ಟೆಸ್ಟ್ ಪಂದ್ಯವು ರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ತಂಡವು ಪ್ರಥಮ ಇನಿಂಗ್ಸ್​ನಲ್ಲಿ ಕೇವಲ 55 ರನ್​ಗಳಿಗೆ ಆಲೌಟ್ ಆಗಿತ್ತು.

ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಟೀಮ್ ಇಂಡಿಯಾ 153 ರನ್​ಗಳಿಸಿ ಸರ್ವಪತನ ಕಂಡಿತು. ಹಾಗೆಯೇ ದ್ವಿತೀಯ ಇನಿಂಗ್ಸ್​ನಲ್ಲಿ ಸೌತ್ ಆಫ್ರಿಕಾ 176 ರನ್​ಗಳಿಸಿ ಆಲೌಟ್ ಆದರೆ, 80 ರನ್​ಗಳ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ 3 ವಿಕೆಟ್ ಕಳೆದುಕೊಂಡಿತು.

ಇದನ್ನೂ ಓದಿ: ನನಗೆ RCB ಪರ ಆಡೋದು ಇಷ್ಟವಿರಲಿಲ್ಲ, ಬೆದರಿಸಿ ಆಡ್ಸಿದ್ರು..!

ಅಂದರೆ ಕೇವಲ ಒಂದುವರೆ ದಿನದಾಟಕ್ಕೆ ಸಾಕ್ಷಿಯಾಗಿದ್ದ ಈ ಪಂದ್ಯದಲ್ಲಿ ಬರೋಬ್ಬರಿ 33 ವಿಕೆಟ್​ಗಳು ಉರುಳಿದ್ದವು. ಹೀಗಾಗಿಯೇ ಇದೀಗ ನ್ಯೂಲ್ಯಾಂಡ್ಸ್ ಮೈದಾನದ ಪಿಚ್ ಟೆಸ್ಟ್ ಪಂದ್ಯವಾಡಲು ಯೋಗ್ಯವಾಗಿರಲಿಲ್ಲ ಎಂದು ಐಸಿಸಿ ರೇಟ್ ಮಾಡಿದೆ.