Jasprit bumrah: ಬುಮ್ರಾ ಬೌಲಿಂಗ್ ಬಗ್ಗೆ ಸಂಶಯ: ಐಸಿಸಿಗೆ ಮನವಿ ಮಾಡಿದ ಪಾಕ್ ಪತ್ರಕರ್ತ

|

Updated on: Jul 01, 2024 | 1:56 PM

Jasprit Bumrah: ಭಾರತ ತಂಡವು ಟಿ20 ವಿಶ್ವಕಪ್ ಗೆಲ್ಲುವಲ್ಲಿ ಜಸ್​ಪ್ರೀತ್ ಬುಮ್ರಾ ಅವರ ಕೊಡುಗೆ ಅಪಾರವಾದದ್ದು, ಏಕೆಂದರೆ ಈ ಬಾರಿಯ ಟೂರ್ನಿಯಲ್ಲಿ ಬುಮ್ರಾ ಒಟ್ಟು 15 ವಿಕೆಟ್​ಗಳನ್ನು ಕಬಳಿಸಿದ್ದಾರೆ. ಇದೇ ವೇಳೆ ಕೇವಲ 4.17 ರ ಸರಾಸರಿಯಲ್ಲಿ ಮಾತ್ರ ರನ್ ಬಿಟ್ಟು ಕೊಟ್ಟಿದ್ದಾರೆ. ಅದರಲ್ಲೂ ಫೈನಲ್​ ಪಂದ್ಯದಲ್ಲಿ ಕರಾರುವಾಕ್ ದಾಳಿ ಸಂಘಟಿಸಿ ಬುಮ್ರಾ ಇಡೀ ಪಂದ್ಯದ ಚಿತ್ರಣ ಬದಲಿಸಿದ್ದರು.

Jasprit bumrah: ಬುಮ್ರಾ ಬೌಲಿಂಗ್ ಬಗ್ಗೆ ಸಂಶಯ: ಐಸಿಸಿಗೆ ಮನವಿ ಮಾಡಿದ ಪಾಕ್ ಪತ್ರಕರ್ತ
Jasprit bumrah
Follow us on

ಟೀಮ್ ಇಂಡಿಯಾ (Team india) 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆದ್ದುಕೊಂಡಿದೆ. ಇತ್ತ ಭಾರತದಲ್ಲಿ ಟಿ20 ವಿಶ್ವಕಪ್ ಗೆಲುವಿನ ಸಂಭ್ರಮ ಮನೆ ಮಾಡಿದರೆ, ಅತ್ತ ಪಾಕಿಸ್ತಾನದ ಕೆಲವರಿಗೆ ಈ ಗೆಲುವನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಇದೇ ಕಾರಣದಿಂದಾಗಿ ಇದೀಗ ಜಸ್​ಪ್ರೀತ್ ಬುಮ್ರಾ ಅವರ ಬೌಲಿಂಗ್ ಶೈಲಿ ಬಗ್ಗೆ ತಗಾದೆ ತೆಗೆದಿದ್ದಾರೆ. ಪಾಕಿಸ್ತಾನದ ಖ್ಯಾತ ಕ್ರೀಡಾ ಪತ್ರಕರ್ತ ಅರ್ಫಾ ಫಿರೋಜ್, ಬುಮ್ರಾ ಅವರ ಬೌಲಿಂಗ್ ಆಕ್ಷನ್ ಪರಿಶೀಲಿಸಬೇಕೆಂದು ಐಸಿಸಿಗೆ ಮನವಿ ಸಲ್ಲಿಸಿದ್ದಾರೆ.

ಐಸಿಸಿಯು ಪಾಕಿಸ್ತಾನದ ಬೌಲರ್‌ಗಳ ವಿರುದ್ಧ ಆಗಾಗ್ಗೆ ಕ್ರಮ ತೆಗೆದುಕೊಳ್ಳುತ್ತದೆ. ಪಾಕಿಸ್ತಾನಿ ಬೌಲರ್ ವಿಶ್ವ ಕ್ರಿಕೆಟ್‌ನಲ್ಲಿ ಪ್ರಭಾವ ಬೀರಿದರೆ, ಅವರ ವಿರುದ್ಧ ತನಿಖೆಯನ್ನು ಪ್ರಾರಂಭಿಸಲಾಗುತ್ತದೆ. ಆದ್ದರಿಂದ, ಜಸ್​ಪ್ರೀತ್ ಬುಮ್ರಾ ಅವರ ವಿಚಿತ್ರ ಬೌಲಿಂಗ್ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಐಸಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಐಸಿಸಿ ನಿಯಮಗಳ ಪ್ರಕಾರ ಜಸ್​ಪ್ರೀತ್ ಬುಮ್ರಾ ಅವರ ಬೌಲಿಂಗ್ ಶೈಲಿ ಸರಿಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಬೇಕು. ಏಕೆಂದರೆ ಅವರ ಬೌಲಿಂಗ್ ಆಕ್ಷನ್​ನಲ್ಲಿ ಅನುಮಾನಗಳಿದ್ದು, ಹೀಗಾಗಿಯೇ ಅವರು ಯಶಸ್ಸು ಸಾಧಿಸುತ್ತಿದ್ದಾರೆ ಎಂದು ಅರ್ಫಾ ಫಿರೋಜ್ ಅಭಿಪ್ರಾಯಪಟ್ಟಿದ್ದಾರೆ.

ಒಂದೇ ಶೈಲಿಯಲ್ಲಿ ಬೂಮ್ ಬೂಮ್:

ಜಸ್​ಪ್ರೀತ್ ಬುಮ್ರಾ ದೇಶೀಯ ಕ್ರಿಕೆಟ್​ನಿಂದ ಒಂದೇ ಆ್ಯಕ್ಷನ್​ನಲ್ಲಿ ಬೌಲಿಂಗ್ ಮಾಡುತ್ತಿದ್ದಾರೆ. ಗುಜರಾತ್ ಪರ ಆಡುತ್ತಿದ್ದ ಬುಮ್ರಾ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಬಳಿಕ ಫೇಮಸ್ ಆದರು.

ಅಲ್ಲದೆ ಆರಂಭದಲ್ಲೇ ಮುಂಬೈ ಇಂಡಿಯನ್ಸ್ ತಂಡದ ಗೆಲುವಿನ ರೂವಾರಿಯಾಗಿ ಮಾರ್ಪಟ್ಟರು. ಅಂದಿನಿಂದ ಇಂದಿನವರೆಗೂ ಯಾರ್ಕರ್ ಸ್ಪೆಷಲಿಸ್ಟ್ ಆಗಿ ಗುರುತಿಸಿಕೊಂಡಿರುವ ಬುಮ್ರಾ ಬ್ಯಾಟ್ಸ್​ಮನ್​ಗಳ ಪಾಲಿಗೆ ಸಿಂಹಸ್ವಪ್ನವಾಗಿದ್ದಾರೆ.

ವಿಶ್ವಕಪ್‌ನಲ್ಲಿ ಮಿಂಚಿಂಗ್:

ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ಜಸ್​ಪ್ರೀತ್ ಬುಮ್ರಾ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಅದರಲ್ಲೂ ವಿಶ್ವಕಪ್ ಇತಿಹಾಸದಲ್ಲೇ ವೇಗದ ಬೌಲರ್‌ಯೊಬ್ಬರು ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ ಪಡೆದಿರುವುದು ಇದೇ ಮೊದಲು.

8 ಪಂದ್ಯಗಳಲ್ಲಿ ಕರಾರುವಾಕ್ ಬೌಲಿಂಗ್ ಸಂಘಟಿಸಿದ ಬುಮ್ರಾ 15 ವಿಕೆಟ್​ಗಳನ್ನು ಕಬಳಿಸಿದ್ದರು. ಅದು ಕೂಡ ಕೇವಲ 4.17 ಎಕಾನಮಿ ರೇಟ್​ನಲ್ಲಿ ಎಂಬುದು ವಿಶೇಷ. ಇದು ಕೂಡ ಟಿ20 ವಿಶ್ವಕಪ್​ನಲ್ಲಿ ಹೊಸ ದಾಖಲೆ.

ಅಷ್ಟೇ ಅಲ್ಲದೆ ಟಿ20 ವಿಶ್ವಕಪ್​ನ ಫೈನಲ್ ಪಂದ್ಯದಲ್ಲಿ 4 ಓವರ್​ಗಳಲ್ಲಿ ಕೇವಲ 18 ರನ್ ನೀಡಿ 2 ವಿಕೆಟ್ ಕಬಳಿಸುವ ಮೂಲಕ ಟೀಮ್ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಮೂಲಕ ಟಿ20 ವಿಶ್ವಕಪ್​ನ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಇದನ್ನೂ ಓದಿ: T20 World Cup 2024: ಟೀಮ್ ಇಂಡಿಯಾ ಪರ ಒಂದೇ ಒಂದು ಪಂದ್ಯವಾಡದ ಮೂವರು ಆಟಗಾರರು..!

ಈ ಅದ್ಭುತ ಪ್ರದರ್ಶನದ ಬೆನ್ನಲ್ಲೇ ಇದೀಗ ಪಾಕಿಸ್ತಾನದ ಜಿಯೋ ಚಾನೆಲ್​ನ ಪತ್ರಕರ್ತ ಅರ್ಫಾ ಫಿರೋಜ್ ಜಸ್​ಪ್ರೀತ್ ಬುಮ್ರಾ ಅವರ ಬೌಲಿಂಗ್ ಶೈಲಿ ಬಗ್ಗೆ ಸಂಶಯ ವ್ಯಕ್ತಪಡಿಸಿ, ಬೌಲಿಂಗ್ ಆಕ್ಷನ್ ಪರಿಶೀಲಿಸುವಂತೆ ಐಸಿಸಿಗೆ ಮನವಿ ಮಾಡಿದ್ದಾರೆ.