AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒನ್ ಪ್ಲಸ್ ತ್ರಿ… ಏಕದಿನ ವಿಶ್ವಕಪ್​ನ ಅರ್ಹತಾ ಸುತ್ತಿನ ಹೊಸ ಸ್ವರೂಪ ಪ್ರಕಟ

ಸೌತ್ ಆಫ್ರಿಕಾ, ಝಿಂಬಾಬ್ವೆ ಮತ್ತು ನಮೀಬಿಯಾ ಜಂಟಿ ಆತಿಥ್ಯದಲ್ಲಿ ನಡೆಯಲಿರುವ 2027ರ ಐಸಿಸಿ ಪುರುಷರ ಏಕದಿನ ವಿಶ್ವಕಪ್‌ಗೆ ಈಗಿನಿಂದಲೇ ರಂಗು ಏರತೊಡಗಿದೆ. ಮಹಾಟೂರ್ನಿಗೆ ಇನ್ನು ಕೆಲವೇ ತಂಡಗಳ ಆಯ್ಕೆ ಬಾಕಿಯಿರುವ ಬೆನ್ನಲ್ಲೇ, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಅರ್ಹತಾ ಸುತ್ತಿನ ಹೊಸ ಮತ್ತು ರೋಚಕ ಸ್ವರೂಪವನ್ನು ಅಧಿಕೃತವಾಗಿ ಪ್ರಕಟಿಸಿದೆ.

ಒನ್ ಪ್ಲಸ್ ತ್ರಿ... ಏಕದಿನ ವಿಶ್ವಕಪ್​ನ ಅರ್ಹತಾ ಸುತ್ತಿನ ಹೊಸ ಸ್ವರೂಪ ಪ್ರಕಟ
Odi World Cup 2027 Image Credit source: ICC
ಝಾಹಿರ್ ಯೂಸುಫ್
|

Updated on:Nov 16, 2026 | 10:28 AM

Share

ಬಹುನಿರೀಕ್ಷಿತ 2027ರ ಐಸಿಸಿ ಪುರುಷರ ಏಕದಿನ ವಿಶ್ವಕಪ್ ಟೂರ್ನಿಗೆ ಅರ್ಹತಾ ಸುತ್ತಿನ ನೂತನ ಸ್ವರೂಪವನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಅಧಿಕೃತವಾಗಿ ಪ್ರಕಟಿಸಿದೆ. ಹಿಂದಿನ ಟೂರ್ನಿಗಳಲ್ಲಿದ್ದ ‘ಸೂಪರ್ ಸಿಕ್ಸ್’  ಹಂತವನ್ನು ಕೈಬಿಟ್ಟು, ನೇರವಾಗಿ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳನ್ನು ನಡೆಸಲು ಐಸಿಸಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

2027ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಈ ಅರ್ಹತಾ ಟೂರ್ನಿಯಲ್ಲಿ ಒಟ್ಟು 10 ತಂಡಗಳು ಭಾಗವಹಿಸಲಿವೆ. ಒಟ್ಟು 23 ಪಂದ್ಯಗಳ ಈ ರೋಚಕ ಕದನದಲ್ಲಿ ಅಗ್ರ ನಾಲ್ಕು ಸ್ಥಾನ ಪಡೆಯುವ ತಂಡಗಳು 14 ತಂಡಗಳ 2027ರ ಏಕದಿನ ವಿಶ್ವಕಪ್‌ಗೆ ಅರ್ಹತೆ ಪಡೆಯಲಿವೆ.

ಹೊಸ ಸ್ವರೂಪ ಹೇಗಿರಲಿದೆ?

ಗುಂಪು ಹಂತ: ಭಾಗವಹಿಸುವ 10 ತಂಡಗಳನ್ನು ತಲಾ ಐದು ತಂಡಗಳಂತೆ ಎರಡು ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಪ್ರತಿ ತಂಡವು ತನ್ನ ಗುಂಪಿನ ಇತರ ತಂಡಗಳ ವಿರುದ್ಧ ರೌಂಡ್ ರಾಬಿನ್ ಮಾದರಿಯಲ್ಲಿ ಸೆಣಸಾಡಲಿದೆ.

ನೇರ ನಾಕೌಟ್: ಹಿಂದಿನ ಆವೃತ್ತಿಗಳಲ್ಲಿದ್ದ ‘ಸೂಪರ್ ಸಿಕ್ಸ್’ ಹಂತವನ್ನು ಈ ಬಾರಿ ರದ್ದುಪಡಿಸಲಾಗಿದೆ. ಎರಡೂ ಗುಂಪುಗಳಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ನೇರವಾಗಿ ಸೆಮಿಫೈನಲ್ ಪ್ರವೇಶಿಸಲಿವೆ. ಸೆಮಿಫೈನಲ್‌ನಲ್ಲಿ ಗೆದ್ದ ಎರಡು ತಂಡಗಳು ಪ್ರಶಸ್ತಿಗಾಗಿ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.

ವಿಶ್ವಕಪ್ ಪ್ರವೇಶದ ಹಾದಿ: ಸೆಮಿಫೈನಲ್ ತಲುಪುವ ಎಲ್ಲಾ ನಾಲ್ಕು ತಂಡಗಳು 2027ರ ವಿಶ್ವಕಪ್‌ಗೆ ಅರ್ಹತೆ ಪಡೆಯಲಿವೆ. ಆದರೆ, ಅವುಗಳ ಪ್ರವೇಶದ ಹಂತಗಳಲ್ಲಿ ಬದಲಾವಣೆ ಹೀಗಿದೆ…

  • ಚಾಂಪಿಯನ್ ತಂಡ: ಅರ್ಹತಾ ಸುತ್ತಿನ ಫೈನಲ್‌ನಲ್ಲಿ ಗೆಲ್ಲುವ ಚಾಂಪಿಯನ್ ತಂಡವು ನೇರವಾಗಿ ವಿಶ್ವಕಪ್‌ನ ಪ್ರಧಾನ 12 ತಂಡಗಳ ‘ಗುಂಪು ಹಂತ’ಕ್ಕೆ ಪ್ರವೇಶ ಪಡೆಯಲಿದೆ.
  • 2, 3 ಮತ್ತು 4ನೇ ಸ್ಥಾನ ಪಡೆದ ತಂಡಗಳು: ರನ್ನರ್-ಅಪ್ ತಂಡ ಮತ್ತು ಸೆಮಿಫೈನಲ್‌ನಲ್ಲಿ ಸೋತ ಎರಡು ತಂಡಗಳು ವಿಶ್ವಕಪ್‌ನ ಆರಂಭಿಕ ಹಂತವಾದ ‘ಸೂಪರ್ ಸೀರೀಸ್’ ಸುತ್ತಿನಲ್ಲಿ ಆಡಲಿವೆ. ಪ್ರಧಾನ ಗುಂಪು ಹಂತದಲ್ಲಿ ಉಳಿದಿರುವ ಒಂದು ಸ್ಥಾನಕ್ಕಾಗಿ ಈ ತಂಡಗಳು ಪೈಪೋಟಿ ನಡೆಸಲಿವೆ.

ಒನ್ ಪ್ಲಸ್ ತ್ರಿ:

ಅರ್ಹತಾ ಸುತ್ತಿನ ಮೂಲಕ ಏಕದಿನ ವಿಶ್ವಕಪ್‌ನ ಪ್ರಧಾನ ಸುತ್ತಿಗೆ ನೇರವಾಗಿ ಪ್ರವೇಶ ಪಡೆಯಲಿರುವುದು ಕೇವಲ ಒಂದು ತಂಡ (ಚಾಂಪಿಯನ್) ಮಾತ್ರ. ಇನ್ನುಳಿದ ಮೂರು ತಂಡಗಳು ವಿಶ್ವಕಪ್‌ನ ಆರಂಭಿಕ ಹಂತವಾದ ‘ಸೂಪರ್ ಸೀರೀಸ್’ನಲ್ಲಿ ಕಣಕ್ಕಿಳಿಯಬೇಕಿದೆ. ಈ ಸೀರೀಸ್‌ನಲ್ಲಿ ಅಗ್ರಸ್ಥಾನ ಪಡೆಯುವ ತಂಡವು ಅಂತಿಮವಾಗಿ 12 ತಂಡಗಳ ಪ್ರಧಾನ ವಿಶ್ವಕಪ್‌ ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿದೆ.

2027ರ ವಿಶ್ವಕಪ್‌ ತಂಡಗಳು:

ಸೌತ್ ಆಫ್ರಿಕಾ, ಝಿಂಬಾಬ್ವೆ ಮತ್ತು ನಮೀಬಿಯಾ ಜಂಟಿ ಆತಿಥ್ಯದಲ್ಲಿ 2027ರ ಅಕ್ಟೋಬರ್ 2ರಿಂದ ನವೆಂಬರ್ 21ರವರೆಗೆ ಪ್ರಧಾನ ವಿಶ್ವಕಪ್ ನಡೆಯಲಿದೆ. ಒಟ್ಟು 14 ತಂಡಗಳ ಆಯ್ಕೆ ಪ್ರಕ್ರಿಯೆ ಈ ಕೆಳಗಿನಂತಿದೆ:

ಆತಿಥೇಯ ತಂಡಗಳು (2 ಸ್ಥಾನ): ಸೌತ್ ಆಫ್ರಿಕಾ ಮತ್ತು ಝಿಂಬಾಬ್ವೆ ತಂಡಗಳು ಆತಿಥೇಯರಾಗಿ ನೇರ ಅರ್ಹತೆ ಪಡೆದಿವೆ.

ಐಸಿಸಿ ಏಕದಿನ ರ‍್ಯಾಂಕಿಂಗ್ (8 ಸ್ಥಾನ): 2026ರ ಸೆಪ್ಟೆಂಬರ್ 30ರ ಅಂತ್ಯಕ್ಕೆ ಐಸಿಸಿ ಏಕದಿನ ರ‍್ಯಾಂಕಿಂಗ್‌ನಲ್ಲಿ ಅಗ್ರ 8 ಸ್ಥಾನ ಪಡೆದ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಝಿಲೆಂಡ್, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ್ ಮತ್ತು ಅಫ್ಘಾನಿಸ್ತಾನ್ ತಂಡಗಳು ನೇರವಾಗಿ ಪ್ರಧಾನ ಸುತ್ತಿಗೆ ಪ್ರವೇಶಿಸಿವೆ.

ಕ್ವಾಲಿಫೈಯರ್ ಪ್ಲೇ-ಆಫ್: 2026ರ ಡಿಸೆಂಬರ್ 4ರಿಂದ 21ರವರೆಗೆ ನೇಪಾಳದಲ್ಲಿ ಪ್ಲೇ-ಆಫ್ ಪಂದ್ಯಗಳು ನಡೆಯಲಿವೆ. ಕೆನಡಾ, ಇಟಲಿ, ಜರ್ಸಿ, ಕುವೈತ್, ನಮೀಬಿಯಾ, ನೇಪಾಳ, ಯುಎಇ ಮತ್ತು ಉಗಾಂಡಾ ತಂಡಗಳು ಇದರಲ್ಲಿ ಆಡಲಿದ್ದು, ಅಗ್ರ 4 ತಂಡಗಳು ಮುಖ್ಯ ಅರ್ಹತಾ ಸುತ್ತಿಗೆ ಮುನ್ನಡೆಯಲಿವೆ.

ವಿಶ್ವಕಪ್ ಅರ್ಹತಾ ಸುತ್ತು: ರ‍್ಯಾಂಕಿಂಗ್‌ನಲ್ಲಿ ಹಿನ್ನಡೆ ಅನುಭವಿಸಿದ ಮಾಜಿ ಚಾಂಪಿಯನ್ ವೆಸ್ಟ್ ಇಂಡೀಸ್, ಐರ್ಲೆಂಡ್, ನೆದರ್ಲ್ಯಾಂಡ್ಸ್, ಒಮಾನ್, ಸ್ಕಾಟ್ಲೆಂಡ್ ಮತ್ತು ಅಮೆರಿಕ ತಂಡಗಳ ಜೊತೆಗೆ ಪ್ಲೇ-ಆಫ್‌ನಿಂದ ಬರುವ 4 ತಂಡಗಳು 2027ರ ಫೆಬ್ರವರಿ-ಮಾರ್ಚ್‌ನಲ್ಲಿ ಸೆಣಸಾಡಲಿವೆ.

ಇದನ್ನೂ ಓದಿ: ವಿರಾಟ್ ಕೊಹ್ಲಿ ಸಲಹೆಗೆ ಕ್ಯಾರೇ ಅನ್ನದ ಶ್ರೇಯಸ್ ಅಯ್ಯರ್: ಫ್ಯಾನ್ಸ್ ಗರಂ!

ಒಟ್ಟಾರೆಯಾಗಿ, 2027ರ ಏಕದಿನ ವಿಶ್ವಕಪ್‌ಗೆ ಪ್ರವೇಶ ಪಡೆಯುವ ಹಾದಿ ಈ ಬಾರಿ ಮತ್ತಷ್ಟು ಕಠಿಣ ಮತ್ತು ರೋಚಕವಾಗಿದೆ. ಸೂಪರ್ ಸಿಕ್ಸ್ ಹಂತದ ರದ್ದತಿಯಿಂದಾಗಿ ಪ್ರತಿಯೊಂದು ಪಂದ್ಯವೂ ‘ಮಾಡು ಇಲ್ಲವೇ ಮಡಿ’ ಎಂಬಂತಾಗಿದ್ದು, ವೆಸ್ಟ್ ಇಂಡೀಸ್‌ನಂತಹ ಬಲಿಷ್ಠ ತಂಡಗಳಿಗೂ ಇದು ಅಗ್ನಿಪರೀಕ್ಷೆಯಾಗಲಿದೆ. ಅಂತಿಮವಾಗಿ ವಿಶ್ವಕಪ್‌ನ ಪ್ರಧಾನ ವೇದಿಕೆಗೆ ಟಿಕೆಟ್ ಗಿಟ್ಟಿಸಿಕೊಳ್ಳುವ ಆ ಅದೃಷ್ಟಶಾಲಿ ತಂಡಗಳು ಯಾವುವು ಎಂಬುದನ್ನು ಕಾದು ನೋಡಬೇಕಿದೆ.

Published On - 10:21 am, Mon, 16 November 26

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More