ಕಮರಿದ ಕೋಟ್ಯಾಂತರ ಅಭಿಮಾನಿಗಳ ಕನಸು; ಟಿ20 ವಿಶ್ವಕಪ್ನಿಂದ ಹೊರಬಿದ್ದ ಟೀಂ ಇಂಡಿಯಾ..!
ICC Women T20 World Cup 2024: ಯುಎಇಯಲ್ಲಿ ಇಂದು ನಡೆದ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ನಡುವಿನ ಮಹಿಳಾ ಟಿ20 ವಿಶ್ವಕಪ್ ಲೀಗ್ ಪಂದ್ಯದಲ್ಲಿ ನಿರೀಕ್ಷೆಯಂತೆ ಪಾಕಿಸ್ತಾನ ತಂಡವನ್ನು 54 ರನ್ಗಳಿಂದ ಮಣಿಸಿದ ನ್ಯೂಜಿಲೆಂಡ್ ತಂಡ ಎ ಗುಂಪಿನಲ್ಲಿ ಎರಡನೇ ತಂಡವಾಗಿ ಸೆಮಿಫೈನಲ್‌ಗೆ ಅರ್ಹತೆಗಿಟ್ಟಿಸಿಕೊಂಡಿದೆ. ಹೀಗಾಗಿ ಹರ್ಮನ್‌ಪ್ರೀತ್ ನಾಯಕತ್ವದ ಟೀಂ ಇಂಡಿಯಾ ತಾನು ಮಾಡಿದ ತಪ್ಪುಗಳಿಗೆ ಶಿಕ್ಷೆಯಾಗಿ ಲೀಗ್ ಹಂತದಲ್ಲೇ ಟೂರ್ನಿಗೆ ವಿದಾಯ ಹೇಳಿದೆ.
ಯುಎಇಯಲ್ಲಿ ಇಂದು ನಡೆದ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ನಡುವಿನ ಮಹಿಳಾ ಟಿ20 ವಿಶ್ವಕಪ್ ಲೀಗ್ ಪಂದ್ಯದಲ್ಲಿ ನಿರೀಕ್ಷೆಯಂತೆ ಪಾಕಿಸ್ತಾನ ತಂಡವನ್ನು 54 ರನ್ಗಳಿಂದ ಮಣಿಸಿದ ನ್ಯೂಜಿಲೆಂಡ್ ತಂಡ ಎ ಗುಂಪಿನಲ್ಲಿ ಎರಡನೇ ತಂಡವಾಗಿ ಸೆಮಿಫೈನಲ್‌ಗೆ ಅರ್ಹತೆಗಿಟ್ಟಿಸಿಕೊಂಡಿದೆ. ಈ ಮೂಲಕ ಈ ಗುಂಪಿನಿಂದ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಸೆಮಿಫೈನಲ್‌ಗೆ ಟಿಕೆಟ್ ಖಚಿತಪಡಿಸಿಕೊಂಡಿದ್ದು, ಇದೇ ಗುಂಪಿನಲ್ಲಿದ್ದ ಹರ್ಮನ್‌ಪ್ರೀತ್ ನಾಯಕತ್ವದ ಟೀಂ ಇಂಡಿಯಾ ತಾನು ಮಾಡಿದ ತಪ್ಪುಗಳಿಗೆ ಶಿಕ್ಷೆಯಾಗಿ ಲೀಗ್ ಹಂತದಲ್ಲೇ ಟೂರ್ನಿಗೆ ವಿದಾಯ ಹೇಳಿದೆ. ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ 110 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ ಕೇವಲ 56 ರನ್ಗಳಿಗೆ ಆಲೌಟ್ ಆಯಿತು. ಈ ಮೂಲಕ ಪಾಕಿಸ್ತಾನ ಕೂಡ ವಿಶ್ವಕಪ್ನಿಂದ ಹೊರಬಿದ್ದಿತು.
ಪಾಕ್ ತಂಡಕ್ಕೆ ಹೀನಾಯ ಸೋಲು
ವಾಸ್ತವವಾಗಿ ಈ ಉಭಯ ತಂಡಗಳ ನಡುವಿನ ಪಂದ್ಯದ ಮೇಲೆ ಟೀಂ ಇಂಡಿಯಾ ಕೂಡ ಕಣ್ಣಿಟ್ಟಿತ್ತು. ಏಕೆಂದರೆ ಈ ಪಂದ್ಯದಲ್ಲಿ ಪಾಕಿಸ್ತಾನ ಗೆದ್ದಿದ್ದರೆ, ಟೀಂ ಇಂಡಿಯಾ ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತಿತ್ತು. ಒಂದು ವೇಳೆ ಈ ಪಂದ್ಯದಲ್ಲಿ ಪಾಕಿಸ್ತಾನ ಅತಿ ದೊಡ್ಡ ಅಂತರದಿಂದ ಗೆಲುವು ಸಾಧಿಸಿದರೆ, ಆಗ ಪಾಕಿಸ್ತಾನ ಸೆಮಿಫೈನಲ್‌ಗೆ ಟಿಕೆಟ್ ಪಡೆಯುತ್ತಿತ್ತು. ಆದರೆ ಈ ಪಂದ್ಯದಲ್ಲಿ ಟೀಂ ಇಂಡಿಯಾ ಅಭಿಮಾನಿಗಳು ನಿರೀಕ್ಷಿಸಿದ ಯಾವ ಫಲಿತಾಂಶವೂ ಹೊರಬೀಳದೆ, ಪಾಕಿಸ್ತಾನ ತಂಡ ಹೀನಾಯ ಸೋಲನ್ನು ಎದುರಿಸಬೇಕಾಯಿತು. ಇತ್ತ ಪಾಕಿಸ್ತಾನ ವಿರುದ್ಧದ ಗೆಲುವಿನೊಂದಿಗೆ ನ್ಯೂಜಿಲೆಂಡ್ ತಂಡ ಆಡಿದ 4 ಪಂದ್ಯಗಳಲ್ಲಿ 3 ಗೆಲುವಿನೊಂದಿಗೆ ಸೆಮಿಫೈನಲ್‌ಗೆ ಅರ್ಹತೆ ಪಡೆಯಿತು. ಮತ್ತೊಂದೆಡೆ, ಪಾಯಿಂಟ್ ಪಟ್ಟಿಯಲ್ಲಿ ಟೀಂ ಇಂಡಿಯಾ ಮೂರನೇ ಮತ್ತು ಪಾಕಿಸ್ತಾನ ನಾಲ್ಕನೇ ಸ್ಥಾನ ಪಡೆಯುವ ಮೂಲಕ ಟೂರ್ನಿಯಿಂದ ಹೊರನಡೆದವು.
ಕೇವಲ 2 ಪಂದ್ಯ ಗೆದ್ದ ಭಾರತ
ಇನ್ನು ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಪ್ರದರ್ಶನದ ಬಗ್ಗೆ ಹೇಳುವುದಾದರೆ.. ಹರ್ಮನ್‌ಪ್ರೀತ್ ಪಡೆ ಗುಂಪು ಹಂತದಲ್ಲಿ ಆಡಿದ 4 ಪಂದ್ಯಗಳಲ್ಲಿ ಕೇವಲ ಎರಡು ಪಂದ್ಯಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಯಿತು. ಉಳಿದಂತೆ ತಂಡ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧ ಸೋಲನ್ನು ಎದುರಿಸಬೇಕಾಯಿತು. ಹೀಗಾಗಿ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದ ಟೀಂ ಇಂಡಿಯಾ ಒಮ್ಮೆಯಾದರೂ ಐಸಿಸಿ ಟ್ರೋಫಿ ಗೆಲ್ಲುವ ಕನಸನ್ನು ಮತ್ತೊಮ್ಮೆ ನನಸು ಮಾಡಿಕೊಳ್ಳದ ನಿರಾಶೆಯೊಂದಿಗೆ ತವರಿಗೆ ಮರಳಬೇಕಾಯಿತು.
ಕಳಪೆ ಬ್ಯಾಟಿಂಗ್, ಫೀಲ್ಡಿಂಗ್ಗೆ ಸೋಲಿಗೆ ಪ್ರಮುಖ ಕಾರಣ
ವಾಸ್ತವವಾಗಿ ಪಂದ್ಯಾವಳಿ ಆರಂಭಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಟೀಂ ಇಂಡಿಯಾ ನಾಯಕಿ ಹರ್ಮನ್‌ಪ್ರೀತ್ ಕೌರ್, ಟಿ20 ವಿಶ್ವಕಪ್ಗೆ ಹೋಗುತ್ತಿರುವ ನಮ್ಮ ತಂಡ ಅತ್ಯಂತ ಬಲಿಷ್ಠವಾಗಿದೆ ಹಾಗೂ ಸಮತೋಲಿನವಾಗಿದೆ. ಹೀಗಾಗಿ ನಾವು ಟಿ20 ವಿಶ್ವಕಪ್ ಗೆಲ್ಲುವ ಫೇವರೇಟ್ ಎಂದಿದ್ದರು. ಆದರೆ ಕಳೆದ ಬಾರಿ ಸೆಮಿಫೈನಲ್ವರೆಗೆ ಪ್ರಯಾಣಿಸಿದ್ದ ಟೀಂ ಇಂಡಿಯಾ, ಈ ಬಾರಿ ಲೀಗ್ ಹಂತದಲ್ಲೇ ಹೊರಬಿದ್ದಿತ್ತು. ತಂಡದ ಈ ಕಳಪೆ ಪ್ರದರ್ಶನಕ್ಕೆ ಹಲವು ಕಾರಣಗಳಿದ್ದು, ಅದರಲ್ಲಿ ಪ್ರಮುಖವಾದದ್ದು, ಬ್ಯಾಟಿಂಗ್ ವಿಭಾಗದ ವೈಫಲ್ಯ ಹಾಗೂ ಇಡೀ ಟೂರ್ನಿಯಲ್ಲಿ ತಂಡ ತೋರಿದ ಕಳಪೆ ಫೀಲ್ಡಿಂಗ್ ಪ್ರದರ್ಶನ.
ಕೈಕೊಟ್ಟ ಸ್ಟಾರ್ ಬ್ಯಾಟರ್ಸ್
ತಂಡದ ಬ್ಯಾಟಿಂಗ್ ಜೀವಾಳ ಎನಿಸಿಕೊಂಡಿರುವ ಶಫಾಲಿ ವರ್ಮಾ ಆಗಲಿ ಸ್ಮೃತಿ ಮಂಧಾನ ಆಗಲಿ ಇಡೀ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಲೇ ಇಲ್ಲ. ಶ್ರೀಲಂಕಾ ವಿರುದ್ಧ ಸ್ಮೃತಿ ಅರ್ಧಶತಕ ಸಿಡಿಸಿದನ್ನು ಬಿಟ್ಟರೆ ಉಳಿದಂತೆ ಅವರ ಬ್ಯಾಟ್ ಮೌನವಾಗಿಯೇ ಉಳಿಯಿತು. ಇನ್ನು ಜೆಮೀಮಾ ಕೂಡ ಲೆಕ್ಕಕಷ್ಟೇ ತಂಡದಲ್ಲಿ ಇದ್ದಹಾಗೆ ತೊರುತ್ತಿತ್ತು. ನಾಯಕಿ ಹರ್ಮನ್‌ಪ್ರೀತ್ ಕೌರ್ ಗಮನಾರ್ಹ ಪ್ರದರ್ಶನ ನೀಡಿದರಾದರೂ ಅವರ ಇನ್ನಿಂಗ್ಸ್ನಲ್ಲಿ ಧಮ್ ಇರಲಿಲ್ಲ. ಇತ್ತ ಸ್ಫೋಟಕ ಬ್ಯಾಟರ್ ರಿಚಾ ಘೋಷ್ ಕೂಡ ವಿಕೆಟ್ ಕೀಪಿಂಗ್ ಜೊತೆಗೆ ಬ್ಯಾಟಿಂಗ್ನಲ್ಲೂ ನೀರಸ ಪ್ರದರ್ಶನ ನೀಡಿದರು. ಹೀಗಾಗಿಯೇ ತಂಡ ಸೆಮಿಫೈನಲ್ಗೂ ಅರ್ಹತೆ ಪಡೆಯಲು ಸಾಧ್ಯವಾಗದೆ ಲೀಗ್ ಹಂತಕ್ಕೆ ತೃಪ್ತಿಪಡಬೇಕಾಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:16 pm, Mon, 14 October 24