ಮಹಿಳಾ ವಿಶ್ವಕಪ್ (Women’s World Cup )ನಲ್ಲಿ ದಕ್ಷಿಣ ಆಫ್ರಿಕಾ ತಂಡ ತನ್ನ ಗೆಲುವಿನ ಅಭಿಯಾನವನ್ನು ಮುಂದುವರೆಸಿದೆ. ಗುರುವಾರ ನಡೆದ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಮೂಲಕ ತಂಡ ಸತತ ನಾಲ್ಕನೇ ಗೆಲುವು ಸಾಧಿಸಿದೆ. ನಾಯಕಿ ಸೋಫಿ ಡಿವೈನ್ (Sophie Devine) ಮತ್ತು ಅಮೆಲಿಯಾ ಕೆರ್ (Amelia Kerr) ಅವರ ಅದ್ಭುತ ಇನ್ನಿಂಗ್ಸ್ ಹೊರತಾಗಿಯೂ ನ್ಯೂಜಿಲೆಂಡ್ ಕೇವಲ 228 ರನ್ ಗಳಿಸಲು ಸಾಧ್ಯವಾಯಿತು. ಈ ಗುರಿಯನ್ನು ದಕ್ಷಿಣ ಆಫ್ರಿಕಾ ಮೂರು ಎಸೆತಗಳು ಬಾಕಿ ಇರುವಂತೆಯೇ ಸಾಧಿಸಿತು. ದಕ್ಷಿಣ ಆಫ್ರಿಕಾದ ಬೌಲರ್ ಮರಿಜಾನ್ ಕ್ಯಾಪ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ದಕ್ಷಿಣ ಆಫ್ರಿಕಾ ಈ ಹಿಂದೆ ಬಾಂಗ್ಲಾದೇಶ, ಇಂಗ್ಲೆಂಡ್ ಮತ್ತು ಪಾಕಿಸ್ತಾನವನ್ನು ಸೋಲಿಸಿತ್ತು. ಆದಾಗ್ಯೂ, ಕಡಿಮೆ ರನ್ ರೇಟ್ ಕಾರಣ, ಅವರು ಇನ್ನೂ ಪಾಯಿಂಟ್ ಪಟ್ಟಿಯಲ್ಲಿ ಆಸ್ಟ್ರೇಲಿಯಾಕ್ಕಿಂತ ಹಿಂದಿದ್ದಾರೆ. ದಕ್ಷಿಣ ಆಫ್ರಿಕಾ ಕೂಡ ನಾಲ್ಕು ಪಂದ್ಯಗಳಿಂದ ನಾಲ್ಕು ಗೆಲುವಿನೊಂದಿಗೆ ಎಂಟು ಅಂಕಗಳನ್ನು ಹೊಂದಿದೆ. ಆದರೂ ಆಸ್ಟ್ರೇಲಿಯಾದ ನೆಟ್ ರನ್ರೈಟ್ ದಕ್ಷಿಣ ಆಫ್ರಿಕಾಕ್ಕಿಂತ ಉತ್ತಮವಾಗಿದೆ.
ಸೋಫಿ ಡಿವೈನ್ ಏಕಾಂಗಿ ಹೋರಾಟ
ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಹಿಂದಿನ ಪಂದ್ಯದ ಸ್ಟಾರ್ ಶಬ್ನಿಮ್ ಇಸ್ಮಾಯಿಲ್ ಸುಜಿ ಬೇಟ್ಸ್ ಅವರನ್ನು ಔಟ್ ಮಾಡುವ ಮೂಲಕ ತಂಡಕ್ಕೆ ಮೊದಲ ಪೆಟ್ಟು ನೀಡಿದರು. ಇಲ್ಲಿಂದ ಅಮೆಲಿಯಾ ಕರ್ ಮತ್ತು ಸೋಫಿ ಡಿವೈನ್ ಇನ್ನಿಂಗ್ಸ್ ಕೈಗೆತ್ತಿಕೊಂಡು 76 ರನ್ಗಳ ಜೊತೆಯಾಟವನ್ನು ಹಂಚಿಕೊಂಡರು. ಮೊದಲು ಅಮೆಲಿಯಾ ಪೆವಿಲಿಯನ್ಗೆ ಮರಳಿದರು. ಇದಾದ ಬಳಿಕ ಸದರ್ವೈತ್ (1) ಮತ್ತು ಮ್ಯಾಡಿ ಗ್ರೀನ್ (30) ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಏತನ್ಮಧ್ಯೆ, ಡಿವೈನ್ ಒಂದು ಬದಿಯಲ್ಲಿ ಇನ್ನಿಂಗ್ಸ್ ಅನ್ನು ಉಳಿಸಿಕೊಂಡರು. 93 ರನ್ ಗಳಿಸಿ ಡಿವೈನ್ ಬೌಲ್ಡ್ ಆದರು. ಹ್ಯಾಲಿಡೆ (24), ಕೇಟೀ ಮಾರ್ಟಿನ್ (9) ಮತ್ತು ಫ್ರಾನ್ಸಿಸ್ ಮ್ಯಾಕಿ (7) ಎರಡಂಕಿ ಮೊತ್ತವನ್ನು ಮುಟ್ಟಲಿಲ್ಲ, ಆದರೆ ಹನಾಹ್ ರೋವ್ ಮತ್ತು ತಹುಹು ಖಾತೆ ತೆರೆಯಲು ಸಹ ಸಾಧ್ಯವಾಗಲಿಲ್ಲ.
ಇದನ್ನೂ ಓದಿ:IPL 2022: ಧೋನಿ 7ನೇ ನಂಬರ್ ಜರ್ಸಿಯನ್ನೇ ತೊಡುವುದ್ಯಾಕೆ? ಇದರ ಸೀಕ್ರೆಟ್ ಏನು ಗೊತ್ತೆ? ವಿಡಿಯೋ ನೋಡಿ