T20 World Cup 2023: ರೋಚಕ ಜಯದೊಂದಿಗೆ ಸೆಮೀಸ್​ಗೆ ಎಂಟ್ರಿ ಕೊಟ್ಟ ಟೀಮ್ ಇಂಡಿಯಾ

|

Updated on: Feb 20, 2023 | 10:08 PM

ICC Womens T20 World Cup 2023: 156 ರನ್​ಗಳ ಕಠಿಣ ಗುರಿ ಪಡೆದ ಐರ್ಲೆಂಡ್ ತಂಡವು 8.2 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ 54 ರನ್​ ಬಾರಿಸಿದ್ದರು. ಈ ವೇಳೆ ಮಳೆ ಬಂದಿದ್ದರಿಂದ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು.

T20 World Cup 2023: ರೋಚಕ ಜಯದೊಂದಿಗೆ ಸೆಮೀಸ್​ಗೆ ಎಂಟ್ರಿ ಕೊಟ್ಟ ಟೀಮ್ ಇಂಡಿಯಾ
Team India
Follow us on

ICC Womens T20 World Cup 2023: ಸೌತ್ ಆಫ್ರಿಕಾದಲ್ಲಿ ನಡೆಯುತ್ತಿರುವ ಮಹಿಳಾ ಟಿ20 ವಿಶ್ವಕಪ್​ನ 18ನೇ ಪಂದ್ಯದಲ್ಲಿ ಭಾರತ ತಂಡವು ಐರ್ಲೆಂಡ್ (India Women vs Ireland Women) ವಿರುದ್ಧ ಜಯ ಸಾಧಿಸಿದೆ. ಮಳೆಗೆ ಅಹುತಿಯಾದ ಈ ಪಂದ್ಯದ ಫಲಿತಾಂಶವನ್ನು ಡಕ್​ವರ್ಥ್ ಲೂಯಿಸ್ ನಿಯಮ ಪ್ರಕಾರ ನಿರ್ಧರಿಸಲಾಗಿದ್ದು, ಅದರಂತೆ ಟೀಮ್ ಇಂಡಿಯಾ 5 ರನ್​ಗಳ ರೋಚಕ ಜಯ ಸಾಧಿಸಿತು. ಇದಕ್ಕೂ ಮುನ್ನ ಟಾಸ್ ಗೆದ್ದ ಭಾರತ ತಂಡದ ನಾಯಕಿ ಹರ್ಮನ್​ಪ್ರೀತ್ ಕೌರ್ ಬ್ಯಾಟಿಂಗ್ ಆಯ್ದುಕೊಂಡಿದ್ದರು.

ಟೀಮ್ ಇಂಡಿಯಾ ಪರ ಇನಿಂಗ್ಸ್ ಆರಂಭಿಸಿದ ಸ್ಮೃತಿ ಮಂಧಾನ ಹಾಗೂ ಶಫಾಲಿ ವರ್ಮಾ  ಉತ್ತಮ ಆರಂಭ ಒದಗಿಸಿದ್ದರು. ಮೊದಲ ವಿಕೆಟ್​ಗೆ 62 ರನ್​ಗಳ ಜೊತೆಯಾಟವಾಡಿದ ಶಫಾಲಿ 24 ರನ್​ಗಳಿಸಿ ಔಟಾದರು. ಇದಾಗ್ಯೂ ಮತ್ತೊಂದೆಡೆ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ ಸ್ಮೃತಿ ಮಂಧಾನ ಐರ್ಲೆಂಡ್ ಬೌಲರ್​ಗಳನ್ನು ಮನಸೋ ಇಚ್ಛೆ ದಂಡಿಸಿದರು.

ಪರಿಣಾಮ ಮಂಧಾನ ಬ್ಯಾಟ್​ನಿಂದ 3 ಭರ್ಜರಿ ಸಿಕ್ಸ್ ಹಾಗೂ 9 ಫೋರ್​ಗಳು ಮೂಡಿಬಂದಿದ್ದವು. ಅಲ್ಲದೆ 56 ಎಸೆತಗಳಲ್ಲಿ 87 ರನ್​ ಬಾರಿಸಿ 19ನೇ ಓವರ್​ನಲ್ಲಿ ಸ್ಮೃತಿ ಮಂಧಾನ ಔಟಾದರು. ಅಷ್ಟರಲ್ಲಾಗಲೇ ಟೀಮ್ ಇಂಡಿಯಾ ಮೊತ್ತವು 150 ರ ಗಡಿ ತಲುಪಿತ್ತು. ಅಂತಿಮವಾಗಿ ಭಾರತ ತಂಡವು 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 155 ರನ್​ ಕಲೆಹಾಕಿತು.

156 ರನ್​ಗಳ ಕಠಿಣ ಗುರಿ ಪಡೆದ ಐರ್ಲೆಂಡ್ ತಂಡವು 8.2 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ 54 ರನ್​ ಬಾರಿಸಿದ್ದರು. ಈ ವೇಳೆ ಮಳೆ ಬಂದಿದ್ದರಿಂದ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ನಿರಂತರ ಮಳೆಯಾಗಿದ್ದರಿಂದ ಪಂದ್ಯ ನಡೆಸುವುದು ಅಸಾಧ್ಯ ಎಂದು ಮ್ಯಾಚ್ ರೆಫರಿ ನಿರ್ಧರಿಸಿದರು. ಅಲ್ಲದೆ ಪಂದ್ಯದ ಫಲಿತಾಂಶವನ್ನು ನಿರ್ಧರಿಸಲು ಡಕ್​ ವರ್ಥ್ ಲೂಯಿಸ್ ನಿಯಮದ ಮೊರೆ ಹೋಗಲಾಯಿತು. ಈ ವೇಳೆ ಐರ್ಲೆಂಡ್ ಮೊತ್ತವು ಟೀಮ್ ಇಂಡಿಯಾಗಿಂತ 5 ರನ್​ ಹಿಂದಿತ್ತು. ಅಂದರೆ 8.2 ಓವರ್​ಗಳಲ್ಲಿ ಭಾರತ ತಂಡವು 59 ರನ್​ ಬಾರಿಸಿದ್ದರೆ, ಐರ್ಲೆಂಡ್ ತಂಡವು 54 ರನ್​ಗಳಿಸಲಷ್ಟೇ ಶಕ್ತರಾಗಿದ್ದರು. ಅದರಂತೆ ಭಾರತ ತಂಡವು 5 ರನ್​ಗಳ ಜಯ ಸಾಧಿಸಿ ಸೆಮಿಫೈನಲ್​ಗೆ ಪ್ರವೇಶಿಸಿದೆ.

ಟೀಮ್ ಇಂಡಿಯಾ ಪ್ಲೇಯಿಂಗ್ 11: ಸ್ಮೃತಿ ಮಂಧಾನ , ಶಫಾಲಿ ವರ್ಮಾ , ಜೆಮಿಮಾ ರಾಡ್ರಿಗಸ್ , ಹರ್ಮನ್‌ಪ್ರೀತ್ ಕೌರ್ (ನಾಯಕಿ) , ರಿಚಾ ಘೋಷ್ (ವಿಕೆಟ್ ಕೀಪರ್) , ದೇವಿಕಾ ವೈದ್ಯ , ದೀಪ್ತಿ ಶರ್ಮಾ , ಪೂಜಾ ವಸ್ತ್ರಾಕರ್ , ಶಿಖಾ ಪಾಂಡೆ , ರಾಜೇಶ್ವರಿ ಗಾಯಕ್ವಾಡ್ , ರೇಣುಕಾ ಠಾಕೂರ್ ಸಿಂಗ್.

ಐರ್ಲೆಂಡ್ ಪ್ಲೇಯಿಂಗ್ 11: ಆಮಿ ಹಂಟರ್ , ಗ್ಯಾಬಿ ಲೆವಿಸ್ , ಓರ್ಲಾ ಪ್ರೆಂಡರ್‌ಗಾಸ್ಟ್ , ಲಾರಾ ಡೆಲಾನಿ (ನಾಯಕಿ) , ಐಮಿಯರ್ ರಿಚರ್ಡ್ಸನ್ , ಲೂಯಿಸ್ ಲಿಟಲ್ , ಮೇರಿ ವಾಲ್ಡ್ರಾನ್ (ವಿಕೆಟ್ ಕೀಪರ್) , ಅರ್ಲೀನ್ ಕೆಲ್ಲಿ , ಲೇಹ್ ಪಾಲ್ , ಕಾರಾ ಮುರ್ರೆ , ಜಾರ್ಜಿನಾ ಡೆಂಪ್ಸೆ.