ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್‌ನ 12ನೇ ಪಂದ್ಯದಲ್ಲಿ ಭಾರತ ವನಿತಾ ಪಡೆ ಹಾಗೂ ಶ್ರೀಲಂಕಾ ಮಹಿಳಾ ತಂಡಗಳು ಮುಖಾಮುಖಿಯಾಗಿದ್ದವು. ಸೆಮಿಫೈನಲ್ ಕನಸನ್ನು ಜೀವಂತವಾಗಿರಿಸಿಕೊಳ್ಳುವ ದೃಷ್ಟಿಯಿಂದ ಈ ಪಂದ್ಯದಲ್ಲಿ ಟೀಂ ಇಂಡಿಯಾ ಬೃಹತ್ ಗೆಲ್ಲುವನ್ನು ದಾಖಲಿಸಲೇಬೇಕಿತ್ತು. ಅದರಂತೆ ಶ್ರೀಲಂಕಾ ತಂಡವನ್ನು ಬರೋಬ್ಬರಿ 82 ರನ್ಗಳಿಂದ ಮಣಿಸಿ ಹರ್ಮನ್‌ಪ್ರೀತ್ ಪಡೆ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನು ಹೊಡೆದ ಸಾಧನೆ ಮಾಡಿದೆ. ಮೊದಲನ್ನೇಯದ್ದು, ಕಳೆದ ಏಷ್ಯಾಕಪ್ ಫೈನಲ್ ಸೋಲಿಗೆ ಸೇಡು ತೀರಿಸಿಕೊಂಡರೆ, ಎರಡನೇಯದ್ದು ಟೂರ್ನಿಯಲ್ಲಿ ಎರಡನೇ ಗೆಲುವು ದಾಖಲಿಸಿದಲ್ಲದೆ ನೆಟ್ ರನ್ರೇಟ್ ಅನ್ನು ಸಹ ಮೈನಸ್ನಿಂದ ಪ್ಲಸ್ಗೆ ಬದಲಾಯಿಸಿದೆ. ಇದರೊಂದಿಗೆ ಸೆಮಿಫೈನಲ್ ಸುತ್ತಿಗೆ ಮತ್ತಷ್ಟು ಹತ್ತಿರವಾಗಿದೆ. ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಹರ್ಮನ್‌ಪ್ರೀತ್ ಪಡೆ 3 ವಿಕೆಟ್ ಕಳೆದುಕೊಂಡು 173 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಶ್ರೀಲಂಕಾ ಪೂರ್ಣ 20 ಓವರ್ಗಳನ್ನು ಆಡಲು ಸಾಧ್ಯವಾಗದೆ 19.5 ಓವರ್‌ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 90 ರನ್ ಗಳಿಸಲಷ್ಟೇ ಶಕ್ತವಾಯಿತು.
ಮೇಲೆ ಹೇಳಿದಂತೆ ಪ್ರಸಕ್ತ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಆರಂಭ ಅತ್ಯಂತ ಕಳಪೆಯಾಗಿತ್ತು. ಮೊದಲ ಪಂದ್ಯದಲ್ಲಿಯೇ ನ್ಯೂಜಿಲೆಂಡ್ ವಿರುದ್ಧ ತಂಡ ಸೋಲನ್ನು ಎದುರಿಸಬೇಕಾಯಿತು. ಇದಾದ ಬಳಿಕ ಮತ್ತೆ ಕಮ್ ಬ್ಯಾಕ್ ಮಾಡಿದ ಟೀಂ ಇಂಡಿಯಾ ಪಾಕಿಸ್ತಾನದ ಮಹಿಳಾ ತಂಡವನ್ನು 6 ವಿಕೆಟ್ಗಳಿಂದ ಸೋಲಿಸಿ ಮೊದಲ ಪಂದ್ಯದಲ್ಲಿ ಸೋಲಿನ ನೋವನ್ನು ತಗ್ಗಿಸುವ ಪ್ರಯತ್ನ ಮಾಡಿತ್ತು. ಇದೀಗ ಲಂಕಾ ವಿರುದ್ಧ ಭರ್ಜರಿ ಗೆಲುವು ದಾಖಲಿಸಿರುವ ಟೀಂ ಇಂಡಿಯಾ ಇದೀಗ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಬಂದು ನಿಂತಿದೆ.
🔙 to 🔙 victories for the #WomeninBlue 💪
A marvellous 82-run win against Sri Lanka – #TeamIndia's largest win in the #T20WorldCup 👏👏
📸: ICC
Scorecard ▶️ https://t.co/4CwKjmWL30#INDvSL pic.twitter.com/lZd9UeoSnJ
— BCCI Women (@BCCIWomen) October 9, 2024
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾಕ್ಕೆ ಉತ್ತಮ ಆರಂಭ ಸಿಕ್ಕಿತು. ವಾಸ್ತವವಾಗಿ ಮೊದಲೆರಡು ಪಂದ್ಯಗಳಲ್ಲಿ ತಂಡದ ಆರಂಭ ಉತ್ತಮವಾಗಿರಲಿಲ್ಲ. ಹೀಗಾಗಿಯೇ ಮೊದಲ ಪಂದ್ಯದಲ್ಲಿ ಭಾರತ ಸೋತಿತ್ತು. ಆದರೆ ಮೂರನೇ ಪಂದ್ಯದಲ್ಲಿ ತಂಡಕ್ಕೆ ಅಗತ್ಯವಾದ ಆರಂಭ ನೀಡಿದ ಸ್ಮೃತಿ ಮಂಧಾನ ಹಾಗೂ ಶಫಾಲಿ ವರ್ಮಾ ಕೇವಲ 12.4 ಓವರ್‌ಗಳಲ್ಲಿ 98 ರನ್ಗಳ ಜೊತೆಯಾಟ ನೀಡಿದರು. ಆದಾಗ್ಯೂ ಆರಂಭದಲ್ಲಿ ಸ್ಮೃತಿ ಮಂಧಾನ ರನ್ ಗಳಿಸಲು ಪರದಾಡಬೇಕಾಯಿತು. ಆದರೆ ಪಿಚ್ನಲ್ಲಿ ನೆಲೆನಿಂತ ಬಳಿಕ ಸ್ಮೃತಿ ಬೌಂಡರಿಗಳ ಮಳೆಗರೆದರು. ಆದರೆ ವೇಗದ ಆರಂಭ ಪಡೆದ ಶೆಫಾಲಿ ವರ್ಮಾ ಆ ನಂತರ ಮಂದಗತಿಯ ಬ್ಯಾಟಿಂಗ್ ಮುಂದುವರೆಸಿದರು. ಈ ವೇಳೆ 50 ರನ್ ಗಳಿಸಿದ ನಂತರ ಸ್ಮೃತಿ ಔಟಾದರೆ, ಶಫಾಲಿ 40 ರನ್ಗಳ ಕಾಣಿಕೆ ನೀಡಿದರು.
ಆ ನಂತರ ಬಂದ ನಾಯಕಿ ಹರ್ಮನ್‌ಪ್ರೀತ್ ಕೌರ್ ಗೆಲ್ಲಲೇಬೇಕಾದ ಪಂದ್ಯದಲ್ಲಿ ತಮ್ಮ ಸಾಮಥ್ಯ್ರ ಪ್ರದರ್ಶಿಸಿ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಹರ್ಮನ್‌ಪ್ರೀತ್ ಕೇವಲ 27 ಎಸೆತಗಳಲ್ಲಿ 52 ರನ್ ಗಳಿಸಿದರು. ಇದು ಟಿ20 ವಿಶ್ವಕಪ್‌ನ ಇತಿಹಾಸದಲ್ಲಿ ಭಾರತದ ವೇಗದ ಅರ್ಧಶತಕವಾಗಿದೆ. ಹರ್ಮನ್ಗೆ ಸಾಥ್ ನೀಡಿದ ಜಮೀಮಾ 16 ರನ್ಗಳ ಕಾಣಿಕೆ ನೀಡಿದರು. ಅಂತಿಮವಾಗಿ ಟೀಂ ಇಂಡಿಯಾ 3 ವಿಕೆಟ್ ಕಳೆದುಕೊಂಡು 172 ರನ್ ಕಲೆಹಾಕಿತು.
ಈ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡ ಕೇವಲ 6 ರನ್ಗಳಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡಿತು. ಅದರಲ್ಲೂ ತಂಡದ ಬ್ಯಾಟಿಂಗ್ ಜೀವಾಳ ಎನಿಸಿಕೊಂಡಿರುವ ನಾಯಕಿ ಚಾಮರಿ ಅಟಾಪಟು ಕೇವಲ 1 ರನ್ಗೆ ಕನ್ನಡತಿ ಶ್ರೇಯಾಂಕ ಪಾಟೀಲ್ಗೆ ಬಲಿಯಾದರು. ಹೀಗಾಗಿ ತಂಡ ಆರಂಭದಲ್ಲೇ ಒತ್ತಡಕ್ಕೆ ಸಿಲುಕಿತು. ತಂಡದ ಪರ ಕೆಲ ಸಮಯ ಗೆಲುವಿಗಾಗಿ ಹೋರಾಟ ನೀಡಿದ ಕವಿಶಾ ದಿಲ್ಹಾರಿ ಹಾಗೂ ಅನುಷ್ಕಾ ಸಂಜೀವನಿ ಕ್ರಮವಾಗಿ 21 ಹಾಗೂ 20 ರನ್ಗಳ ಇನ್ನಿಂಗ್ಸ್ ಆಡಿದರು. ಉಳಿದವರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಕಂಡುಬರಲಿಲ್ಲ.
ಭಾರತದ ಪರ ಆಶಾ ಶೋಭನಾ 4 ಓವರ್‌ಗಳಲ್ಲಿ 19 ರನ್ ನೀಡಿ 3 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡರು. ಅರುಂಧತಿ ರೆಡ್ಡಿ 4 ಓವರ್‌ಗಳಲ್ಲಿ 19 ರನ್ ನೀಡಿ 3 ವಿಕೆಟ್ ಪಡೆದರೆ, ರೇಣುಕಾ ಸಿಂಗ್ ಠಾಕೂರ್ 4 ಓವರ್‌ಗಳಲ್ಲಿ 16 ರನ್ ನೀಡಿ 2 ವಿಕೆಟ್ ಪಡೆದರು. ಶ್ರೇಯಾಂಕ ಪಾಟೀಲ್ 4 ಓವರ್‌ಗಳಲ್ಲಿ 15 ರನ್ ನೀಡಿ ಒಂದು ವಿಕೆಟ್ ಪಡೆದರೆ, ಕೊನೆಯ ಓವರ್ನಲ್ಲಿ ದೀಪ್ತಿ ಶರ್ಮಾ ಒಂದು ವಿಕೆಟ್ ಪಡೆದು ಭಾರತಕ್ಕೆ ಜಯ ತಂದುಕೊಟ್ಟರು.
ಈ ಗೆಲುವಿಗೂ ಮುನ್ನ ಭಾರತ ತಂಡ 2 ಅಂಕ ಮತ್ತು -1.217 ನೆಟ್ ರನ್ ರೇಟ್‌ನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿತ್ತು. ಆದರೀಗ ಪಾಯಿಂಟ್ ಪಟ್ಟಿಯಲ್ಲಿ ಭಾರಿ ಬದಲಾವಣೆಯಾಗಿದ್ದು, ಒಟ್ಟು 4 ಅಂಕ ಗಳಿಸುವ ಮೂಲಕ ಭಾರತ ನೇರವಾಗಿ ಎರಡನೇ ಸ್ಥಾನಕ್ಕೆ ಜಿಗಿದಿದೆ. ಆಸ್ಟ್ರೇಲಿಯಾ ಎರಡು ಪಂದ್ಯಗಳಲ್ಲಿ ಎರಡನ್ನು ಗೆದ್ದು 4 ಅಂಕ ಮತ್ತು +2.524 ನೆಟ್ ರನ್ ರೇಟ್‌ನೊಂದಿಗೆ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಪಾಕಿಸ್ತಾನ ತಂಡ 2 ಅಂಕ ಮತ್ತು +0.555 ನೆಟ್ ರನ್ ರೇಟ್‌ನೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, ನ್ಯೂಜಿಲೆಂಡ್ ತಂಡ 2 ಅಂಕ ಹಾಗೂ -0.050 ನೆಟ್ ರನ್ ರೇಟ್ ನೊಂದಿಗೆ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಟೂರ್ನಿಯಲ್ಲಿ ಶ್ರೀಲಂಕಾ ಸತತ ಮೂರು ಪಂದ್ಯಗಳಲ್ಲಿ ಸೋಲನುಭವಿಸಿರುವುದರಿಂದ ಅದರ ಟಿ20 ವಿಶ್ವಕಪ್ ಪ್ರಯಾಣ ಅಂತ್ಯಗೊಂಡಿದೆ.
Published On - 10:49 pm, Wed, 9 October 24