World Cup 2025: ಆಲೌಟ್ ಆದರೂ ಭಾರತಕ್ಕೆ ಬೆಟ್ಟದಂತಹ ಗುರಿ ನೀಡಿದ ಆಸ್ಟ್ರೇಲಿಯಾ

India vs Australia semi-final: ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2025 ರ ಎರಡನೇ ಸೆಮಿಫೈನಲ್‌ನಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ 339 ರನ್‌ಗಳ ಬೃಹತ್ ಗುರಿ ನೀಡಿದೆ. ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಫೋಬೆ ಲಿಚ್‌ಫೀಲ್ಡ್ 119 ರನ್ ಗಳಿಸಿ ಮಿಂಚಿದರು. ಎಲಿಸ್ ಪೆರ್ರಿ ಮತ್ತು ಆಶ್ಲೀ ಗಾರ್ಡ್ನರ್ ಸಹ ಅರ್ಧಶತಕ ಬಾರಿಸಿದರು. ಭಾರತದ ಶ್ರೀ ಚರಣಿ ಹಾಗೂ ದೀಪ್ತಿ ಶರ್ಮಾ ತಲಾ 2 ವಿಕೆಟ್ ಪಡೆದರು.

World Cup 2025: ಆಲೌಟ್ ಆದರೂ ಭಾರತಕ್ಕೆ ಬೆಟ್ಟದಂತಹ ಗುರಿ ನೀಡಿದ ಆಸ್ಟ್ರೇಲಿಯಾ
Ind Vs Aus W

Updated on: Oct 30, 2025 | 7:06 PM

ಐಸಿಸಿ ಏಕದಿನ ಮಹಿಳಾ ವಿಶ್ವಕಪ್ 2025 ರ ಎರಡನೇ ಸೆಮಿಫೈನಲ್‌ (Women’s World Cup 2025 semifinal) ಪಂದ್ಯ ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ (India vs Australia ) ಮಹಿಳಾ ತಂಡಗಳ ನಡುವೆ ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ 49.5 ಓವರ್​ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು ಭಾರತಕ್ಕೆ 339 ರನ್​ಗಳ ಬೃಹತ್ ಗುರಿ ನೀಡಿದೆ. ಆಸ್ಟ್ರೇಲಿಯಾ ತಂಡದ ಪರ ಸ್ಮರಣೀಯ ಇನ್ನಿಂಗ್ಸ್ ಆಡಿದ ಯುವ ಓಪನರ್ ಫೋಬೆ ಲಿಚ್‌ಫೀಲ್ಡ್ 93 ಎಸೆತಗಳಲ್ಲಿ 17 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 119 ರನ್ ಬಾರಿಸಿದರೆ, ಎಲಿಸ್ ಪೆರ್ರಿ ಹಾಗೂ ಆಶ್ಲೀ ಗಾರ್ಡ್ನರ್ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಭಾರತದ ಪರ ಶ್ರೀ ಚರಣಿ ಹಾಗೂ ದೀಪ್ತಿ ಶರ್ಮಾ ತಲಾ 2 ವಿಕೆಟ್ ಪಡೆದರು.

155 ರನ್‌ಗಳ ಜೊತೆಯಾಟ

ಟಾಸ್ ಗೆದ್ದ ಆಸ್ಟ್ರೇಲಿಯಾ ಐದನೇ ಓವರ್​ನಲ್ಲಿಯೇ ನಾಯಕಿಯ ವಿಕೆಟ್ ಕಳೆದುಕೊಂಡಿತು. ಆದಾಗ್ಯೂ ಲಿಚ್‌ಫೀಲ್ಡ್ ಅವರ ಶತಕ ತಂಡವನ್ನು ಒತ್ತಡದಿಂದ ಪಾರು ಮಾಡಿತು. ಅಲ್ಲದೆ ಲಿಚ್‌ಫೀಲ್ಡ್ ಜೊತೆಯಾದ ಆಲ್‌ರೌಂಡರ್ ಎಲ್ಲಿಸ್ ಪೆರ್ರಿ ಕೂಡ ಅರ್ಧಶತಕದ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು 150 ರನ್​ಗಳ ಗಡಿ ದಾಟಿಸಿದರು. ಅಲ್ಲದೆ ಇವರಿಬ್ಬರು ಎರಡನೇ ವಿಕೆಟ್‌ಗೆ 155 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು.

119 ರನ್‌ ಬಾರಿಸಿದ ಲಿಚ್‌ಫೀಲ್ಡ್

ಲಿಚ್‌ಫೀಲ್ಡ್ ಮತ್ತು ಪೆರ್ರಿ ಕ್ರೀಸ್‌ನಲ್ಲಿರುವಾಗ, ಆಸ್ಟ್ರೇಲಿಯಾ 350 ರನ್ ತಲುಪುತ್ತದೆ ಎಂದು ತೋರುತ್ತಿತ್ತು. ಆದರೆ ಅಮನ್‌ಜೋಟ್ ಲಿಚ್‌ಫೀಲ್ಡ್ ಅವರನ್ನು ಔಟ್ ಮಾಡುವ ಮೂಲಕ ಪಾಲುದಾರಿಕೆಯನ್ನು ಮುರಿದರು. ಅಂತಿಮವಾಗಿ ಲಿಚ್‌ಫೀಲ್ಡ್ 119 ರನ್‌ ಗಳಿಸಿ ಔಟಾದರು. ನಂತರ ಜವಾಬ್ದಾರಿ ವಹಿಸಿಕೊಂಡ ಪೆರ್ರಿ ತಮ್ಮ ಅರ್ಧಶತಕವನ್ನು ಪೂರೈಸಿದರು. ಈ ನಡುವೆ ಶ್ರೀ ಚರಣಿ, ಬೆತ್ ಮೂನಿ (24) ಮತ್ತು ಅನ್ನಾಬೆಲ್ ಸದರ್ಲ್ಯಾಂಡ್ (3) ಅವರನ್ನು ಬೇಗನೇ ಪೆವಿಲಿಯನ್​​ಗಟ್ಟುವ ಮೂಲಕ ರನ್​ ವೇಗಕ್ಕೆ ಕಡಿವಾಣ ಹಾಕಿದರು. ನಂತರ ರಾಧಾ ಯಾದವ್, 77 ರನ್ ಬಾರಿಸಿದ್ದ ಪೆರ್ರಿ ಇನ್ನಿಂಗ್ಸ್​ಗೆ ಅಂತ್ಯ ಹಾಡಿದರು.

IND vs AUS: ಓರ್ವ ಆಟಗಾರ ಅಲಭ್ಯ: ಹೀಗಿರಲಿದೆ ಟೀಮ್ ಇಂಡಿಯಾ ಪ್ಲೇಯಿಂಗ್ 11

ಆಶ್ಲೀ ಗಾರ್ಡ್ನರ್ ಸ್ಫೋಟಕ ಬ್ಯಾಟಿಂಗ್

ಆ ಬಳಿಕ ಬಂದ ತಹ್ಲಿಯಾ ಮೆಕ್‌ಗ್ರಾತ್ 12 ರನ್‌ಗಳಿಗೆ ರನೌಟ್ ಆದರು. ಆದರೆ ಕೊನೆಯಲ್ಲಿ ಆಶ್ಲೀ ಗಾರ್ಡ್ನರ್ ಹೊಡಿಬಡಿ ಆಟವನ್ನಾಡಿ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಇದರಿಂದಾಗಿ ಆಸ್ಟ್ರೇಲಿಯಾದ ಸ್ಕೋರ್ 300 ರನ್​ಗಳ ಗಡಿ ದಾಟಿತು. ಗಾರ್ಡ್ನರ್ 63 ರನ್ ಗಳಿಸಿ ರನೌಟ್ ಆದರು. ನಂತರ ದೀಪ್ತಿ ಶರ್ಮಾ ಕೊನೆಯ ಓವರ್‌ನಲ್ಲಿ ಅಲಾನಾ ಕಿಂಗ್ ಮತ್ತು ಸೋಫಿ ಮೊಲಿನಿಯಕ್ಸ್ ಅವರನ್ನು ಔಟ್ ಮಾಡಿದರು. ದೀಪ್ತಿ ಹ್ಯಾಟ್ರಿಕ್ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ, ಆದರೆ ಕಿಮ್ ಗಾರ್ತ್ (17) ರನೌಟ್ ಆದ ಕಾರಣ ಆಸ್ಟ್ರೇಲಿಯಾ ಪೂರ್ಣ 50 ಓವರ್‌ಗಳನ್ನು ಆಡಲು ಸಾಧ್ಯವಾಗಲಿಲ್ಲ. ಭಾರತದ ಪರ ಶ್ರೀ ಚರಣ್ ಮತ್ತು ದೀಪ್ತಿ ಶರ್ಮಾ ತಲಾ ಎರಡು ವಿಕೆಟ್‌ಗಳನ್ನು ಪಡೆದರೆ, ಅಮನ್‌ಜೋತ್ ಕೌರ್, ಕ್ರಾಂತಿ ಗೌರ್ ಮತ್ತು ರಾಧಾ ಯಾದವ್ ತಲಾ ಒಂದು ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:55 pm, Thu, 30 October 25