World Cup 2025: ಕ್ಯಾಚ್ ಬಿಡು, ಮ್ಯಾಚ್ ಸೋಲು; ಬರೋಬ್ಬರಿ 18 ಕ್ಯಾಚ್ ಬಿಟ್ಟ ಟೀಂ ಇಂಡಿಯಾ
India Women's World Cup 2025: 2025ರ ಮಹಿಳಾ ವಿಶ್ವಕಪ್‌ನಲ್ಲಿ ಭಾರತ ತಂಡ ಸೆಮಿಫೈನಲ್ ತಲುಪಿದರೂ ಕಳಪೆ ಫೀಲ್ಡಿಂಗ್‌ನಿಂದಾಗಿ ಸಾಕಷ್ಟು ಹಿನ್ನಡೆ ಅನುಭವಿಸಿದೆ. ಇಡೀ ಟೂರ್ನಿಯಲ್ಲಿ ಭಾರತ 18 ಕ್ಯಾಚ್‌ಗಳನ್ನು ಕೈಬಿಟ್ಟಿದೆ. ಸೆಮಿಫೈನಲ್‌ನಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಸುಲಭ ಕ್ಯಾಚ್ ಕೈಚೆಲ್ಲಿದರು. ಬ್ಯಾಟಿಂಗ್, ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರೂ, ಫೀಲ್ಡಿಂಗ್ ದೌರ್ಬಲ್ಯ ತಂಡಕ್ಕೆ ಹಿನ್ನಡೆಯನ್ನುಂಟು ಮಾಡಿದೆ.

2025 ರ ಐಸಿಸಿ ಮಹಿಳಾ ವಿಶ್ವಕಪ್‌ನಲ್ಲಿ (Women’s World Cup 2025) ಏಳು-ಬೀಳುಗಳೊಂದಿಗೆ ಸೆಮಿಫೈನಲ್ ತಲುಪುವಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಯಶಸ್ವಿಯಾಗಿದೆ. ಇಡೀ ಸರಣಿಯಲ್ಲಿ ತಂಡವನ್ನು ಬೆಂಬಿಡದ ಭೂತದಂತೆ ಕಾಡಿದ ಅದೊಂದು ನ್ಯೂನತೆಯನ್ನು ತಂಡದ ಆಟಗಾರ್ತಿಯರು ಸರಿಪಡಿಸಿಕೊಳ್ಳುವ ಯತ್ನ ಮಾಡಿದಂತೆ ಕಾಣುತ್ತಿಲ್ಲ. ಪಂದ್ಯಾವಳಿ ಮುಗಿಯುವ ಹಂತಕ್ಕೆ ಬಂದಿದ್ದರೂ ಟೀಂ ಇಂಡಿಯಾ (Team India) ಆಟಗಾರ್ತಿರಿಗೆ ಮಾತ್ರ ಇನ್ನು ಬುದ್ಧಿ ಬಂದಿಲ್ಲ. ಅದಕ್ಕೆ ಪೂರಕವಾಗಿ ಇದೀಗ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಸೆಮಿಫೈನಲ್ ಪಂದ್ಯದಲ್ಲೂ ಟೀಂ ಇಂಡಿಯಾ ಮತ್ತೆ ಅದೇ ತಪ್ಪನ್ನು ಮಾಡಿದೆ. ವಾಸ್ತವವಾಗಿ ಇಡೀ ಪಂದ್ಯಾವಳಿಯಲ್ಲಿ ಟೀಂ ಇಂಡಿಯಾದ ಫಿಲ್ಡಿಂಗ್ ಅತ್ಯಂತ ಕಳಪೆಯಾಗಿದೆ. ಇದರ ಪರಿಣಾಮವಾಗಿ ತಂಡ ಗೆಲ್ಲುವ ಪಂದ್ಯಗಳನ್ನು ಸಹ ಸೋತಿದೆ. ಇದಕ್ಕೆ ಕಾರಣ ಆಟಗಾರ್ತಿಯರ ಕಳಪೆ ಫಿಲ್ಡಿಂಗ್. ಅಂಕಿ ಅಂಶಗಳನ್ನು ಮುಂದಿಟ್ಟು ಮಾತನಾಡಿದರೆ ಇಡೀ ಟೂರ್ನಿಯಲ್ಲಿ ಟೀಂ ಇಂಡಿಯಾ ಇದುವರೆಗೆ ಒಂದಲ್ಲ, ಎರಡಲ್ಲ ಬರೋಬ್ಬರಿ 18 ಕ್ಯಾಚ್‌ಗಳನ್ನು ಕೈಚೆಲ್ಲಿದೆ.
ತವರು ನೆಲದಲ್ಲಿ ವಿಶ್ವಕಪ್ ಆಡುತ್ತಿರುವ ಭಾರತ ಮಹಿಳಾ ತಂಡವು ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಲ್ಲಿ ಗಮನಾರ್ಹ ಪ್ರದರ್ಶನ ನೀಡಿದೆ. ಇದರಿಂದಾಗಿಯೇ ತಂಡ ಸೆಮಿಫೈನಲ್ ಕೂಡ ಪ್ರವೇಶಿಸಿದೆ. ಆದರೆ ಟೀಂ ಇಂಡಿಯಾದ ಫಿಲ್ಡಿಂಗ್ ಮಾತ್ರ ತೀರ ಕಳಪೆಯಾಗಿದೆ. ಕೆಲವು ಸಂದರ್ಭಗಳಲ್ಲಿ ತಂಡದ ಸೋಲಿಗೂ ಇದೇ ಕಳಪೆ ಫಿಲ್ಡಿಂಗ್ ಕಾರಣವಾಗಿದೆ. ಸೆಮಿಫೈನಲ್ ಪಂದ್ಯಕ್ಕೂ ಮುನ್ನ ತಂಡ ತನ್ನ ನ್ಯೂನತೆಯನ್ನು ಸರಿಪಡಿಸಿಕೊಳ್ಳಬಹುದು ಎಂದು ನಿರೀಕ್ಷಿಸಿದವರಿಗೆ ಮತ್ತೆ ನಿರಾಸೆ ಎದುರಾಗಿದೆ.
ಸುಲಭ ಕ್ಯಾಚ್ ಬಿಟ್ಟ ಹರ್ಮನ್‌ಪ್ರೀತ್
ನವಿ ಮುಂಬೈನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಮೂರನೇ ಓವರ್‌ನಲ್ಲಿಯೇ ಮೊದಲ ಕ್ಯಾಚ್ ಕೈಚೆಲ್ಲಿತು. ಈ ತಪ್ಪನ್ನು ಬೇರೆ ಯಾವುದೇ ಫೀಲ್ಡರ್ ಮಾಡಿಲ್ಲ, ಬದಲಿಗೆ ನಾಯಕಿ ಹರ್ಮನ್‌ಪ್ರೀತ್ ಕೌರ್ ಮಾಡಿದರು. ರೇಣುಕಾ ಸಿಂಗ್ ಬೌಲಿಂಗ್‌ನಲ್ಲಿ ಮಿಡ್-ಆಫ್‌ನಲ್ಲಿ ಒಂದು ಸರಳ ಕ್ಯಾಚ್ ಕೈಬಿಟ್ಟರು. ಆ ಸಮಯದಲ್ಲಿ ಹೀಲಿ ಕೇವಲ 2 ರನ್ ಗಳಿಸಿದ್ದರು. ಹೀಲಿ ಅವರ ಫಾರ್ಮ್ ನೋಡಿದರೆ, ಈ ತಪ್ಪು ತಂಡಕ್ಕೆ ದುಬಾರಿಯಾಗಬಹುದು ಎಂದು ತೋರುತ್ತಿತ್ತು. ಅದೃಷ್ಟವಶಾತ್ ಹೀಲಿ ಬೇಗನೇ ವಿಕೆಟ್ ಒಪ್ಪಿಸಿದರು.
World Cup 2025: ಒಂದೇ ಒಂದು ಪಂದ್ಯವನ್ನು ಗೆಲ್ಲದೆ ವಿಶ್ವಕಪ್ನಿಂದ ಹೊರಬಿದ್ದ ಪಾಕಿಸ್ತಾನ
ಪಂದ್ಯಾವಳಿಯಲ್ಲಿ 18 ಕ್ಯಾಚ್ ಡ್ರಾಪ್
ಈ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಆಟಗಾರ್ತಿಯರು 18 ಕ್ಯಾಚ್‌ಗಳನ್ನು ಕೈಬಿಟ್ಟಿದ್ದಾರೆ. ಒಟ್ಟಾರೆಯಾಗಿ, ಈ ವಿಶ್ವಕಪ್‌ನಲ್ಲಿ ಭಾರತ ತಂಡ 35 ಕ್ಯಾಚ್‌ಗಳನ್ನು ಹಿಡಿದಿದ್ದರೆ, 18 ಕ್ಯಾಚ್‌ಗಳನ್ನು ಕೈಬಿಟ್ಟಿದೆ. ಟೀಂ ಇಂಡಿಯಾದ ಕ್ಯಾಚಿಂಗ್ ಯಶಸ್ಸಿನ ಪ್ರಮಾಣ ಕೇವಲ 66 ಪ್ರತಿಶತದಷ್ಟಿದ್ದು, ಎಂಟು ತಂಡಗಳ ಟೂರ್ನಮೆಂಟ್‌ನಲ್ಲಿ ಏಳನೇ ಸ್ಥಾನದಲ್ಲಿದೆ.
ಅಷ್ಟೇ ಅಲ್ಲ, ಸೆಮಿಫೈನಲ್‌ನಲ್ಲಿ ಟೀಂ ಇಂಡಿಯಾದ ಫೀಲ್ಡಿಂಗ್ ಅವರ ಕ್ಯಾಚಿಂಗ್‌ಗಿಂತ ಕೆಟ್ಟದಾಗಿತ್ತು. ಆರನೇ ಓವರ್‌ನಲ್ಲಿ ಅಲಿಸಾ ಹೀಲಿ ಔಟಾದ ನಂತರ, ಟೀಂ ಇಂಡಿಯಾ ಒತ್ತಡವನ್ನು ಸೃಷ್ಟಿಸುವ ಅವಕಾಶವನ್ನು ಹೊಂದಿತ್ತು, ಆದರೆ ಮುಂದಿನ ಓವರ್‌ನಲ್ಲಿ, ಆಸ್ಟ್ರೇಲಿಯಾ ಸುಲಭವಾಗಿ 2-3 ಬೌಂಡರಿಗಳನ್ನು ಬಾರಿಸಲು ಅವಕಾಶ ಮಾಡಿಕೊಟ್ಟಿತು. ಅದರ ನಂತರವೂ ಕಥೆ ಹಾಗೆಯೇ ಮುಂದುವರೆಯಿತು. ತಂಡದ ಕಳಪೆ ಫೀಲ್ಡಿಂಗ್‌ನಿಂದಾಗಿ ಆಸ್ಟ್ರೇಲಿಯಾ ಆಗಾಗ್ಗೆ ಹೆಚ್ಚುವರಿ ಬೌಂಡರಿಗಳನ್ನು ಕಲೆಹಾಕುವಲ್ಲಿ ಯಶಸ್ವಿಯಾಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
