World Cup 2025: ಟೀಂ ಇಂಡಿಯಾಕ್ಕೆ ಆಘಾತ; ವಿಶ್ವಕಪ್ನಿಂದ ಹೊರಬಿದ್ದ ಸ್ಟಾರ್ ಓಪನರ್
Pratika Rawal Injury: ಅಕ್ಟೋಬರ್ 30 ರಂದು ಆಸ್ಟ್ರೇಲಿಯಾ ವಿರುದ್ಧದ ಮಹಿಳಾ ವಿಶ್ವಕಪ್ ಸೆಮಿಫೈನಲ್‌ನಿಂದ ಟೀಂ ಇಂಡಿಯಾದ ಆರಂಭಿಕ ಆಟಗಾರ್ತಿ ಪ್ರತೀಕಾ ರಾವಲ್ ಗಾಯದಿಂದ ಹೊರಬಿದ್ದಿದ್ದಾರೆ. ಬಾಂಗ್ಲಾದೇಶ ವಿರುದ್ಧ ಫೀಲ್ಡಿಂಗ್ ವೇಳೆ ಗಾಯಗೊಂಡಿದ್ದ ಪ್ರತೀಕಾ, ಟೂರ್ನಿಯಿಂದಲೇ ಹೊರಗುಳಿದಿರುವುದು ಭಾರತಕ್ಕೆ ದೊಡ್ಡ ಹಿನ್ನಡೆಯಾಗಿದೆ. ಉತ್ತಮ ಫಾರ್ಮ್‌ನಲ್ಲಿದ್ದ ಅವರ ಅನುಪಸ್ಥಿತಿ ತಂಡದ ಮೇಲೆ ಪರಿಣಾಮ ಬೀರಲಿದ್ದು, ಆರಂಭಿಕ ಸ್ಥಾನಕ್ಕೆ ಅಮನ್‌ಜೋತ್ ಕೌರ್ ಅಥವಾ ಹರ್ಲೀನ್ ಡಿಯೋಲ್ ಹೆಸರುಗಳು ಕೇಳಿಬಂದಿವೆ.

ಅಕ್ಟೋಬರ್ 30 ರಂದು ಆಸ್ಟ್ರೇಲಿಯಾ ವಿರುದ್ಧ ವಿಶ್ವಕಪ್ ಸೆಮಿಫೈನಲ್ ಪಂದ್ಯವನ್ನು ಆಡಲು ಸಜ್ಜಾಗಿರುವ ಟೀಂ ಇಂಡಿಯಾಕ್ಕೆ (India vs Australia) ಆಘಾತ ಎದುರಾಗಿದೆ. ಭಾರತ ಮಹಿಳಾ ತಂಡದ ಆರಂಭಿಕ ಆಟಗಾರ್ತಿ ಪ್ರತೀಕಾ ರಾವಲ್ (Pratika Rawal) ವಿಶ್ವಕಪ್ ಸೆಮಿಫೈನಲ್‌ನಿಂದ ಹೊರಬಿದಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಪ್ರತೀಕಾ ಅವರು ಗಂಭೀರ ಗಾಯಕ್ಕೆ ತುತ್ತಾಗಿದ್ದರು. ಇದರಿಂದಾಗಿ ಅವರು ಬ್ಯಾಟಿಂಗ್ ಕೂಡ ಮಾಡಿರಲಿಲ್ಲ. ಹೀಗಾಗಿ ವಿಶ್ವಕಪ್ನ ನಿರ್ಣಾಯಕ ಪಂದ್ಯಗಳಿಗೆ ಅವರ ಲಭ್ಯತೆಯ ಬಗ್ಗೆ ಅನುಮಾನ ಮೂಡಿತ್ತು. ಇದೀಗ ಹೊರಬಿದ್ದಿರುವ ಮಾಹಿತಿ ಪ್ರಕಾರ, ಗಾಯಗೊಂಡಿರುವ ಪ್ರತೀಕಾ ಇಡೀ ಟೂರ್ನಿಯಿಂದಲೇ ಹೊರಬಿದಿದ್ದಾರೆ ಎನ್ನಲಾಗುತ್ತಿದೆ. ವಿಶ್ವಕಪ್ನಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದ ಪ್ರತೀಕಾ ರಾವಲ್ ಅವರ ಅನುಪಸ್ಥಿತಿಯು ಟೀಂ ಇಂಡಿಯಾಕ್ಕೆ ದೊಡ್ಡ ಹೊಡೆತ ನೀಡಿದೆ.
ಅದ್ಭುತ ಫಾರ್ಮ್‌ನಲ್ಲಿದ್ದ ಪ್ರತೀಕಾ ರಾವಲ್
2025 ರ ಮಹಿಳಾ ವಿಶ್ವಕಪ್ನಲ್ಲಿ ಪ್ರತೀಕಾ ಅವರ ಪ್ರದರ್ಶನದ ಬಗ್ಗೆ ಹೇಳುವುದಾದರೆ, ಈ ಟೂರ್ನಿಯಲ್ಲಿ ಆರು ಪಂದ್ಯಗಳನ್ನಾಡಿರುವ ಪ್ರತೀಕಾ 51.33 ಸರಾಸರಿಯಲ್ಲಿ 308 ರನ್ ಬಾರಿಸಿದ್ದರು. ಈ ಮೂಲಕ ಸ್ಮೃತಿ ಮಂಧಾನ ನಂತರ ತಂಡದ ಪರ ಅತೀ ಹೆಚ್ಚು ರನ್ ಗಳಿಸಿದ್ದ ಎರಡನೇ ಆಟಗಾರ್ತಿಯಾಗಿದ್ದರು. ಹಾಗೆಯೇ ಪ್ರತಿಕಾ, ಮಂಧಾನ ಜೊತೆಗೆ, ಹಲವಾರು ಪಂದ್ಯಗಳಲ್ಲಿ ಟೀಂ ಇಂಡಿಯಾಗೆ ಉತ್ತಮ ಆರಂಭವನ್ನು ನೀಡಿದ್ದರು. ಜೊತೆಗೆ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿದ್ದು ಮಾತ್ರವಲ್ಲದೆ ಸ್ಮೃತಿ ಅವರೊಂದಿಗೆ ದಾಖಲೆಯ ದ್ವಿಶತಕದ ಜೊತೆಯಾಟವನ್ನು ನಡೆಸಿದ್ದರು. ಇವರಿಬ್ಬರ ಆಟದಿಂದಾಗಿ ಟೀಂ ಇಂಡಿಯಾಗೆ ಸೆಮಿಫೈನಲ್ ಟಿಕೆಟ್ ಕೂಡ ಸಿಕ್ಕಿತ್ತು.
🚨Pratika Rawal has been ruled out of the ICC Women’s World Cup after suffering an injury in the last league game against Bangladesh #ICCWomensWorldCup2025 #IndianCricket pic.twitter.com/FTA6dchh47
— Cricbuzz (@cricbuzz) October 27, 2025
ಪ್ರತೀಕಾ ರಾವಲ್ ಬದಲಿಗೆ ಯಾರು?
ಈಗ ಪ್ರಶ್ನೆ ಏನೆಂದರೆ ವಿಶ್ವಕಪ್ನಿಂದ ಹೊರಬಿದ್ದಿರುವ ಪ್ರತೀಕಾ ರಾವಲ್ ಅವರ ಬದಲಿಗೆ ಯಾರು ಆಡುತ್ತಾರೆ ಎಂಬುದು. ಬಾಂಗ್ಲಾದೇಶದ ವಿರುದ್ಧ ಪ್ರತಿಕಾ ಅನುಪಸ್ಥಿತಿಯಲ್ಲಿ ಆರಂಭಿಕರಾಗಿ ಆಡಿದ ಅಮನ್‌ಜೋತ್ ಕೌರ್, ಸ್ಮೃತಿ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆಗಳಿವೆ. ಆದರೆ ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡದೆದುರು ಅಮನ್‌ಜೋತ್ ಕೌರ್ ಆರಂಭಿಕ ಸ್ಥಾನಕ್ಕೆ ಎಷ್ಟು ಸೂಕ್ತ ಎಂಬ ಪ್ರಶ್ನೆ ಮೂಡಿದೆ. ಇದೇ ಆಸ್ಟ್ರೇಲಿಯಾ ವಿರುದ್ಧ ಲೀಗ್ ಸುತ್ತಿನಲ್ಲಿ ನಡೆದಿದ್ದ ಪಂದ್ಯದಲ್ಲಿ ಪ್ರತೀಕಾ ಹಾಗೂ ಸ್ಮೃತಿ ಉತ್ತಮ ಆರಂಭ ನೀಡಿದ್ದರು. ಇದೀಗ ಅದೇ ರೀತಿಯ ಜೊತೆಯಾಟವನ್ನು ಸೆಮಿಫೈನಲ್ ಪಂದ್ಯದಲ್ಲಿ ಅಮನ್‌ಜೋತ್ ಕೌರ್ ಕಟ್ಟಿಕೊಡುತ್ತಾರಾ ಎಂಬುದು ಪ್ರಶ್ನೆ. ಹರ್ಲೀನ್ ಡಿಯೋಲ್ ಕೂಡ ಆರಂಭಿಕ ಆಟಗಾರ್ತಿಯಾಗಿ ಆಡುವ ಸಾಧ್ಯತೆಗಳಿವೆ. ಆದಾಗ್ಯೂ, ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯಕ್ಕೆ ಮ್ಯಾನೇಜ್ಮೆಂಟ್ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
