AUS vs ENG: ಇಂಗ್ಲೆಂಡ್​ಗೆ ಸೋಲು: ದಾಖಲೆಯ 7ನೇ ಬಾರಿ ಮಹಿಳಾ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ

AUS vs ENG: ಇಂಗ್ಲೆಂಡ್​ಗೆ ಸೋಲು: ದಾಖಲೆಯ 7ನೇ ಬಾರಿ ಮಹಿಳಾ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ
CWC FInal AUS vs ENG

Australia vs England Women, ICC Women's Cricket World Cup: 12ನೇ ಆವೃತ್ತಿಯ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ (ICC Womens World Cup) ಟೂರ್ನಿಯಲ್ಲಿ ಆಸ್ಟ್ರೇಲಿಯಾ ವನಿತೆಯರು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. 71 ರನ್​ಗಳ ಅಮೋಘ ಗೆಲುವು ಸಾಧಿಸಿ ದಾಖಲೆಯ ಏಳನೇ ಬಾರಿ ಐಸಿಸಿ ಮಹಿಳಾ ವಿಶ್ವಕಪ್ ಗೆದ್ದ ಸಾಧನೆ ಮಾಡಿದೆ.

TV9kannada Web Team

| Edited By: Vinay Bhat

Apr 03, 2022 | 1:32 PM

ನ್ಯೂಜಿಲೆಂಡ್​ನಲ್ಲಿ ನಡೆದ 12ನೇ ಆವೃತ್ತಿಯ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ (ICC Womens World Cup) ಟೂರ್ನಿಯಲ್ಲಿ ಆಸ್ಟ್ರೇಲಿಯಾ ವನಿತೆಯರು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಕ್ರಿಸ್ಟ್​​ಚರ್ಚ್​ನ ಹೇಗ್ಲೆ ಓವಲ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡ (Australia vs England) 71 ರನ್​ಗಳ ಅಮೋಘ ಗೆಲುವು ಸಾಧಿಸಿ ದಾಖಲೆಯ ಏಳನೇ ಬಾರಿ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಗೆದ್ದ ಸಾಧನೆ ಮಾಡಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ಮಹಿಳಾ ತಂಡ 50 ಓವರ್​ಗೆ ಬರೋಬ್ಬರಿ 356 ರನ್ ಸಿಡಿಸಿತು. ವಿಕೆಟ್ ಕೀಪರ್ ಬ್ಯಾಟರ್ ಅಲಿಸಾ ಹೀಲಿ (Alyssa Healy) ಅವರ ದಾಖಲೆ 170 ರನ್ ಮತ್ತು, ರಚೆಲ್‌ ಹೇನ್ಸ್ ಮತ್ತು ಬೆತ್ ಮೂನೆ ಅವರ ಅರ್ಧಶತಕದ ನೆರವಿನಿಂದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಇಂಗ್ಲೆಂಡ್​ಗೆ ಕಠಿಣ ಟಾರ್ಗೆಟ್ ನೀಡಿತ್ತು. ಆದರೆ, ಆಂಗ್ಲರು 285 ರನ್​ಗೆ ಆಲೌಟ್ ಆಗುವ ಮೂಲಕ ರನ್ನರ್ ಅಪ್​ಗೆ ತೃಪ್ತಿ ಪಟ್ಟಿತು.

ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಆಸ್ಟ್ರೇಲಿಯಾ ಮಹಿಳಾ ತಂಡ ಬೊಂಬಾಟ್ ಆರಂಭ ಪಡೆದುಕೊಂಡಿತು. ಓಪನರ್​​ಗಳಾದ ಅಲಿಸಾ ಹೀಲಿ ಹಾಗೂ ರಚೆಲ್‌ ಹೇನ್ಸ್ ಭರ್ಜರಿ ರನ್ ಕಲೆಹಾಕಿದರು. ಇಂಗ್ಲೆಂಡ್ ಬೌಲರ್​ಗಳನ್ನು ಎಚ್ಚರಿಕೆಯಿಂದ ಎದುರಿಸಿದ ಈ ಜೋಡಿ ಮೊದಲ ವಿಕೆಟ್​ಗೆ 160 ರನ್​ಗಳ ಜೊತೆಯಾಟ ಆಡಿದರು. ರಚೆಲ್‌ ಹೇನ್ಸ್ 93 ಎಸೆತಗಳಲ್ಲಿ 68 ರನ್ ಗಳಿಸಿ ಔಟಾದರು. ನಂತರ ಹೀಲಿ ಜೊತೆಯಾದ ಬೆತ್ ಮೂನೆ ಮತ್ತೊಂದು ಅಮೋಘ ಇನ್ನಿಂಗ್ಸ್ ಕಟ್ಟಿದರು. ಅದರಲ್ಲೂ ಅಲಿಸಾ ಸ್ಫೋಟಕ ಆಟವಾಡಿದರು.

ಎದುರಾಳಿ ಬೌಲರ್​ಗಳ ಬೆಂಡೆತ್ತಿದ್ದ ಅಲಿಸಾ ಮೈದಾನದ ಮೂಲೆ ಮೂಲೆಗೆ ಬೌಂಡರಿ ಮೂಲಕ ಚೆಂಡನ್ನು ಅಟ್ಟಿ ಬೆವರಿಳಿಸಿದರು. ವಿಶ್ವಕಪ್ ಇತಿಹಾಸದಲ್ಲೇ ಶ್ರೇಷ್ಠ ಬ್ಯಾಟಿಂಗ್ ಪ್ರದರ್ಶನ ತೋರಿದ ಅಲಿಸಾ ಕೇವಲ 138 ಎಸೆತಗಳಲ್ಲಿ 26 ಬೌಂಡರಿಯೊಂದಿಗೆ 170 ರನ್ ಚಚ್ಚಿದರು. ಕೊನೇ ಹಂತದಲ್ಲಿ ಮೂನೇ ಕೂಡ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಕೇವಲ 47 ಎಸೆತಗಳಲ್ಲಿ 62 ರನ್ ಸಿಡಿಸಿ ಔಟಾದರು. ಆಸ್ಟ್ರೇಲಿಯಾ ಮಹಿಳಾ ತಂಡ ಅಂತಿಮವಾಗಿ 50 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 356 ರನ್ ಗಳಿಸಿತು. ಇಂಗ್ಲೆಂಡ್ ಪರ ಆ್ಯನಿ ಶ್ರುಬ್​ಸೊಲೆ 3 ವಿಕೆಟ್ ಪಡೆದರು.

ಬೆಟ್ಟದಂತಹ ಟಾರ್ಗೆಟ್ ಬೆನ್ನಟ್ಟಿದ ಇಂಗ್ಲೆಂಡ್ 100 ರನ್​ಗೂ ಮೊದಲೇ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಓಪನರ್​ಗಳಾದ ಟಾಮಿ ಬ್ಯೂಮೊಂಟ್ (27)  ಹಾಗೂ ಡೆನಿಯಲ್ ವ್ಯಾಟ್ 4 ರನ್​ಗೆ ನಿರ್ಗಮಿಸಿದರು. ನಾಯಕಿ ಹೆದರ್ ನೈಟ್ ಕೂಡ 26 ರನ್​ಗೆ ಬ್ಯಾಟ್ ಕೆಳಗಿಟ್ಟಿದ್ದು ತಂಡ ಸೋಲಿನ ಸುಳಿಗೆ ಸಿಲುಕಿತು. ನಂತರ ಬಂದ ಬ್ಯಾಟರ್​ಗಳ ಪೈಕಿ ನಥಾಲಿ ಕೀವರ್ ಬಿಟ್ಟು ಉಳಿದವರು ಯಾರೂ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ.

ಆ್ಯಮಿ ಜೋನ್ಸ್ 20 ಮತ್ತು ಸೋಫಿಯ ಡಂಕ್ಲೆ 23 ರನ್​ಗೆ ಸುಸ್ತಾದರು. ಆದರೆ, ನಥಾಲಿ ಕೀವರ್ ಗೆಲುವಿಗಾಗಿ ಏಕಾಂಗಿ ಹೋರಾಟ ನಡೆಸಿದರು. ಒಂದುಕಡೆ ವಿಕೆಟ್ ಉರುಳುತ್ತಿದ್ದರೆ ಕೀವರ್ ರನ್ ಬಾರಿಸುತ್ತಾ ಸಾಗಿ ಶತಕವನ್ನೂ ಪೂರ್ಣ ಗೊಳಿಸಿದರು. ಆದರೆ, ಇತರೆ ಬ್ಯಾಟರ್​ಗಳು ಸಾಥ್ ನೀಡದ ಕಾರಣ ಇಂಗ್ಲೆಂಡ್ 43.4 ಓವರ್​ನಲ್ಲಿ 285 ರನ್​ಗೆ ಆಲೌಟ್ ಆಯಿತು. ನಥಾಲಿ ಕೀವರ್ 121 ಎಸೆತಗಳಲ್ಲಿ 15 ಫೋರ್, 1 ಸಿಕ್ಸರ್​ನೊಂದಿಗೆ 148 ರನ್ ಸಿಡಿಸಿ ಅಜೇಯರಾಗಿ ಉಳಿದರು. ಆಸ್ಟ್ರೇಲಿಯಾ ಪರ ಅಲನ್ ಕಿಂಗ್ ಹಾಗೂ ಜೆಸ್ ಜಾನ್ಸೆನ್ ತಲಾ 3 ವಿಕೆಟ್ ಕಿತ್ತರೆ ಮೆಗನ್ ಸ್ಕಟ್ 2 ವಿಕೆಟ್ ಪಡೆದರು.

71 ರನ್​ಗಳ ಗೆಲುವಿವೊಂದಿಗೆ ಆಸ್ಟ್ರೇಲಿಯಾ ಮಹಿಳಾ ಏಕದಿನ ವಿಶ್ವಕಪ್​ನಲ್ಲಿ ಏಳನೆ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ವಿಶ್ವಕಪ್‌ನಲ್ಲಿ ಚಾಂಪಿಯನ್‌ ಆಗುವ ತಂಡ ಕಳೆದ ಬಾರಿಗಿಂತ ದುಪ್ಪಟ್ಟು ಎಂದರೆ 1.32 ಮಿಲಿಯನ್‌ ಅಮೆರಿಕನ್‌ ಡಾಲರ್‌(ಸುಮಾರು 9.94 ಕೋಟಿ ರು.) ಬಹುಮಾನ ಪಡೆದುಕೊಂಡಿದೆ. ರನ್ನರ್‌ ಅಪ್‌ ಆದ ಇಂಗ್ಲೆಂಡ್ ತಂಡ 4.51 ಕೋಟಿ ರು. ಬಹುಮಾನ ಸ್ವೀಕರಿಸಿದೆ.

IPL 2022: ಐಪಿಎಲ್ 2022 ಪಾಯಿಂಟ್ ಟೇಬಲ್​ನಲ್ಲಿ ದೊಡ್ಡ ಬದಲಾವಣೆ: ಆರೆಂಜ್, ಪರ್ಪಲ್ ಕ್ಯಾಪ್ ಯಾರ ಕೈಯಲ್ಲಿದೆ?

Rishabh Pant: ಸೋಲಿಗೆ ಅಚ್ಚರಿಯ ಕಾರಣ ತಿಳಿಸಿದ ರಿಷಭ್ ಪಂತ್: ಪಂದ್ಯದ ಬಳಿಕ ಏನಂದ್ರು ಕೇಳಿ

Follow us on

Most Read Stories

Click on your DTH Provider to Add TV9 Kannada