Rishabh Pant: ಸೋಲಿಗೆ ಅಚ್ಚರಿಯ ಕಾರಣ ತಿಳಿಸಿದ ರಿಷಭ್ ಪಂತ್: ಪಂದ್ಯದ ಬಳಿಕ ಏನಂದ್ರು ಕೇಳಿ

GT vs DC, IPL 2022: ಗುಜರಾಟ್ ಟೈಟಾನ್ಸ್ ನೀಡಿದ್ದ ಸಾಧಾರಣ ಟಾರ್ಗೆಟ್ ಅನ್ನೂ ಡೆಲ್ಲಿ ಕ್ಯಾಪಿಟಲ್ಸ್ ಬೆನ್ನಟ್ಟುವಲ್ಲಿ ವಿಫಲವಾಯಿತು. ಪಂದ್ಯ ಮುಗಿದ ಬಳಿಕ ಮಾತನಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಏನು ಹೇಳಿದರು ಎಂಬುದನ್ನು ನೋಡೋಣ.

Rishabh Pant: ಸೋಲಿಗೆ ಅಚ್ಚರಿಯ ಕಾರಣ ತಿಳಿಸಿದ ರಿಷಭ್ ಪಂತ್: ಪಂದ್ಯದ ಬಳಿಕ ಏನಂದ್ರು ಕೇಳಿ
Rishabh Pant post-match presentation GT vs DC
Follow us
TV9 Web
| Updated By: Vinay Bhat

Updated on: Apr 03, 2022 | 10:11 AM

ಐಪಿಎಲ್ 2022 ರಲ್ಲಿ (IPL 2022) ಶನಿವಾರ ನಡೆದ ದ್ವಿತೀಯ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಅಬ್ಬರದ ಆಟಕ್ಕೆ ಡೆಲ್ಲಿ ಕ್ಯಾಪಿಟಲ್ಸ್​ ತತ್ತರಿಸಿತು. ಸಾಧಾರಣ ಟಾರ್ಗೆಟ್ ಅನ್ನೂ ರಿಷಭ್ ಪಂತ್ (Risbah Pant) ಪಡೆ ಬೆನ್ನಟ್ಟುವಲ್ಲಿ ವಿಫಲವಾಯಿತು. ಹಾರ್ದಿಕ್ ಪಡೆಯ ಸಂಘಟಿತ ಬೌಲಿಂಗ್ ಪ್ರದರ್ಶನಕ್ಕೆ ಡೆಲ್ಲಿ ತಲೆಬಾಗಿ ಟೂರ್ನಿಯಲ್ಲಿ ಮೊದಲ ಸೋಲು ಕಂಡಿತು. ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾದ ಗುಜರಾತ್‌ ಟೈಟಾನ್ಸ್‌ ತಂಡ ಶುಭಮನ್ ಗಿಲ್ (84 ರನ್‌) ಅವರ ಅದ್ಭುತ ಪ್ರದರ್ಶನದ ನೆರವಿನಿಂದ ತನ್ನ ಪಾಲಿನ 20 ಓವರ್‌ಗಳಿಗೆ 6 ವಿಕೆಟ್‌ ನಷ್ಟಕ್ಕೆ 171 ರನ್‌ ಕಲೆ ಹಾಕಿತ್ತು. ನಂತರ 172 ರನ್‌ ಗುರಿ ಹಿಂಬಾಲಿಸಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ತನ್ನ ಪಾಲಿನೆ 20 ಓವರ್‌ಗಳಿಗೆ 9 ವಿಕೆಟ್‌ ನಷ್ಟಕ್ಕೆ 157 ರನ್‌ಗಳಿಗೆ ಸೀಮಿತವಾಗಿ ಸೋಲು ಕಂಡಿತು. ಪಂದ್ಯ ಮುಗಿದ ಬಳಿಕ ಮಾತನಾಡಿದ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡದ ನಾಯಕ ರಿಷಭ್ ಪಂತ್ ಏನು ಹೇಳಿದರು ಎಂಬುದನ್ನು ನೋಡೋಣ.

“ಇಲ್ಲಿನ ವಿಕೆಟ್ ಅನ್ನು ಗಮನಿಸಿದರೆ ಇದು ದೊಡ್ಡ ಟಾರ್ಗೆಟ್ ಏನೂ ಆಗಿರಲಿಲ್ಲ. ನಾವು ಮಧ್ಯಮ ಕ್ರಮಾಂಕದಲ್ಲಿ ಇನ್ನೂ ಚೆನ್ನಾಗಿ ಬ್ಯಾಟಿಂಗ್ ಮಾಡಬಹುದಿತ್ತು. ಪವರ್ ಪ್ಲೇನಲ್ಲಿ ಪ್ರಮುಖವಾದ ಮೂರು ವಿಕೆಟ್​ಗಳನ್ನು ಕಳೆದುಕೊಂಡೆವು. ಮಧ್ಯಮ ಓವರ್​​ನಲ್ಲೂ ಕೂಡ ಬಹುಮುಖ್ಯ ಮೂರು ವಿಕೆಟ್ ಕೈಚೆಲ್ಲಿದೆವು. ಸಾಮಾನ್ಯವಾಗಿ ವಿಕೆಟ್​ಗಳನ್ನು ಕಳೆದುಕೊಂಡಾಗ ಪ್ರತಿ ಪಂದ್ಯ ಕಠಿಣವಾಗುತ್ತಾ ಸಾಗುತ್ತದೆ”, ಎಂದು ಬ್ಯಾಟರ್​ಗಳೇ ಸೋಲಿಗೆ ಕಾರಣ ಎಂದು ವಿವರಿಸಿದ್ದಾರೆ. “ಟಾಸ್ ಗೆದ್ದಾಗ ಬ್ಯಾಟಿಂಗ್ ಅಥವಾ ಬೌಲಿಂಗ್ ಆಯ್ಕೆ ಮಾಡುವುದು ಅಲ್ಲಿನ ಹವಾಮಾನದ ಪರಿಸ್ಥಿತಿಗೆ ತಕ್ಕಂತೆ ಆಗಿರುತ್ತದೆ. ಆದರೆ, ಈಗ ಅದರ ಬಗ್ಗೆ ಚಿಂತಿಸಿ ಪ್ರಯೋಜನವಿಲ್ಲ, ಮುಂದಿನ ಪಂದ್ಯ ಪುಣೆಯಲ್ಲಿ ನಡೆಯಲಿದ್ದು ಅದರ ಬಗ್ಗೆ ಯೋಚಿಸಬೇಕಿದೆ,” ಎಂದು ಹೇಳಿದ್ದಾರೆ.

“ರಿಕ್ಕಿ ಪಾಂಟಿಂಗ್ ಮೊದಲ ದಿನದಿಂದ ನಮಗೆ ಉತ್ತಮವಾಗಿ ಗೈಡ್ ಮಾಡುತ್ತಿದ್ದಾರೆ. ನಾವು ಒಂದು ಪಂದ್ಯವನ್ನು ಸೋತಾಗ ತುಂಬಾ ನೋವಾಗುತ್ತದೆ. ಆದರೆ, ಅಂತಿಮವಾಗಿ ಪ್ರತಿಯೊಂದು ಪಂದ್ಯದಿಂದ ಕಲಿತು ಮುಂದೆ ಸಾಗಬೇಕಷ್ಟೆ. ಬರುವ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ಗೆಲುವು ಸಾಧಿಸುತ್ತೇವೆ,” ಎಂದು ರಿಷಭ್ ಪಂತ್ ಪಂದ್ಯದ ನಂತರ ಹೇಳಿದರು.

ಇನ್ನು ಗುಜರಾತ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಮಾತನಾಡಿ, “ತಂಡದ ಎಲ್ಲ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಿರುವುದು ಖುಷಿ ತಂದಿದೆ. ಲೂಕಿ ಫರ್ಗುಸನ್ ಡೆಲ್ಲಿ ತಂಡದ ಪ್ರಮುಖ ವಿಕೆಟ್​ಗಳನ್ನು ಕಿತ್ತು ಗೆಲುವು ನಮ್ಮ ಕಡೆ ವಾಲಿಸಿದರು. 10-15 ರನ್​ಗಳನ್ನು ನಾವು ಕಡಿಮೆ ಹೊಡೆದೆವು. ಆದರೆ, ನಮ್ಮ ಬೌಲಿಂಗ್, ಫೀಲ್ಡಿಂಗ್ ಬಗ್ಗೆ ನಂಬಿಕೆಯಿತ್ತು. ವರುಣ್ ಆರುಣ್ ಇಂಜುರಿಯಾದರೂ ನಾವು ಅಂದುಕೊಂಡಿದ್ದ ಯೋಜನೆ ಕಾರ್ಯರೂಪಕ್ಕೆ ಬಂತು. ರಿಷಭ್ ಪಂತ್ ಕ್ರೀಸ್​ನಲ್ಲಿ ಇರುವವರೆಗೆ ಡೆಲ್ಲಿ ಗೆಲುವು ಸಾಧ್ಯವಿತ್ತು. ಬಳಿಕ ಲೂಕಿ ಪಂದ್ಯವನ್ನು ನಮ್ಮ ಕಡೆ ತಿರುಗಿಸಿದರು. ಶುಭ್ಮನ್ ಗಿಲ್ ಅವರಿಂದ ನಾವು ಈರೀತಿಯ ಆಟವನ್ನು ಎದುರು ನೋಡುತ್ತಿದ್ದೇವೆ. ಇದು ಇತರೆ ಬ್ಯಾಟ್ಸ್​​ಮನ್​ಗಳಿಗೂ ಆತ್ಮವಿಶ್ವಾಸ ತುಂಬುತ್ತದೆ,” ಎಂದು ಹೇಳಿದ್ದಾರೆ.

4 ಓವರ್ ಬೌಲಿಂಗ್ ಮಾಡಿ ಕೇವಲ 28 ರನ್​ಗೆ 4 ವಿಕೆಟ್ ಕಿತ್ತು ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡ ಲೂಕಿ ಫರ್ಗುಸನ್ ಮಾತನಾಡಿ, “ಎರಡು ಕಡೆಯಿಂದ ನಮಗೆ ಒತ್ತಡಗಳಿದ್ದವು. ಚೆಂಡು ಚೆನ್ನಾಗಿ ಬೌನ್ಸ್ ಆಗುತ್ತಿತ್ತು. ಗ್ರಿಪ್ ಆಗಿದ್ದ ಚೆಂಡು ರಿಷಭ್ ಪಂತ್ ವಿಕೆಟ್ ಕೀಳಲು ಸಹಕಾರಿ ಆಯಿತು. ಹಾರ್ದಿಕ್ ಪಾಂಡ್ಯ ನಮಗೆ ಯಾವಾಗಲು ಆತ್ಮವಿಶ್ವಾಸ ತುಂಬುತ್ತಿದ್ದರು. ಒಬ್ಬ ನಾಯಕ ಇತರೆ ಆಟಗಾರರ ಕೌಶಲ್ಯವನ್ನು ನಂಬಬೇಕು. ಹಾರ್ದಿಕ್ ಇದೆರೀತಿ ಮಾಡುತ್ತಾರೆ,” ಎಂಬುದು ಫರ್ಗುಸನ್ ಮಾತು.

CSK vs PBKS: ಐಪಿಎಲ್​ನಲ್ಲಿಂದು ಚೆನ್ನೈ–ಪಂಜಾಬ್ ಮುಖಾಮುಖಿ: ಹ್ಯಾಟ್ರಿಕ್ ಸೋಲಿಂದ ಪಾರಾಗುತ್ತಾ ಸಿಎಸ್​​ಕೆ

GT vs DC: ಹಾರ್ದಿಕ್ ಬೊಂಬಾಟ್ ನಾಯಕತ್ವ: ಪದಾರ್ಪಣೆ ಸೀಸನ್​ನಲ್ಲೇ ಗುಜರಾತ್ ಭರ್ಜರಿ ಆಟ