GT vs DC: ಹಾರ್ದಿಕ್ ಬೊಂಬಾಟ್ ನಾಯಕತ್ವ: ಪದಾರ್ಪಣೆ ಸೀಸನ್ನಲ್ಲೇ ಗುಜರಾತ್ ಭರ್ಜರಿ ಆಟ
IPL 2022: ಶನಿವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧವೂ ಗುಜರಾತ್ ಭರ್ಜರಿ ಗೆಲುವು ಕಂಡಿದೆ. ಬೌಲರ್ಗಳ ಸಂಘಟಿತ ಪ್ರದರ್ಶನದಿಂದ ಹಾರ್ದಿಕ್ ಪಡೆ ಎದುರಾಳಿಯನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿ 14 ರನ್ಗಳಿಂದ ಜಯ ಸಾಧಿಸಿತು
15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (IPL) ಸೇರಿಕೊಂಡ ಎರಡು ಹೊಸ ತಂಡಗಳ ಪೈಕಿ ಹಾರ್ದಿಕ್ ಪಾಂಡ್ಯ (Hardik Pandya) ನಾಯಕತ್ವದ ಗುಜರಾತ್ ಟೈಟಾನ್ಸ್ ಕೂಡ ಒಂದು. ಈಗಾಗಲೇ ಆಡಿರುವ ಎರಡು ಪಂದ್ಯಗಳ ಪೈಕಿ ಎರಡರಲ್ಲೂ ಗೆದ್ದು ಬೀಗಿರುವ ಗುಜರಾತ್ ಪಾಯಿಂಟ್ ಪಟ್ಟಿಯಲ್ಲಿ 4 ಅಂಕದೊಂದಿಗೆ ರನ್ರೇಟ್ ಆಧಾರದ ಮೇಲೆ ಮೂರನೇ ಸ್ಥಾನದಲ್ಲಿದೆ. ಶನಿವಾರ ನಡೆದ ರಿಷಭ್ ಪಂತ್ ನೇತೃತ್ವದ ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್ (GT vs DC) ವಿರುದ್ಧವೂ ಗುಜರಾತ್ ಭರ್ಜರಿ ಗೆಲುವು ಕಂಡಿದೆ. ಬೌಲರ್ಗಳ ಸಂಘಟಿತ ಪ್ರದರ್ಶನದಿಂದ ಹಾರ್ದಿಕ್ ಪಡೆ ಎದುರಾಳಿಯನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿ 14 ರನ್ಗಳಿಂದ ಜಯ ಸಾಧಿಸಿತು. ಹಾರ್ದಿಕ್ ಕ್ಯಾಪ್ಟನ್ಸಿಗೆ ಮೆಚ್ಚುಗೆ ಕೇಳಿಬರುತ್ತಿದೆ. ತಂಡದ ಇತರೆ ಆಟಗಾರರು ಕೂಡ ನಾಯಕ ನಮ್ಮ ಮೇಲೆ ನಂಬಿಕೆಯಿಟ್ಟು ಆತ್ಮವಿಶ್ವಾಸ ತುಂಬುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಗುಜರಾತ್ ತಂಡ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು. ಗುಜರಾತ್ ಪರ ಆರಂಭಿಕ ಆಟಗಾರ ಶುಭ್ಮನ್ ಗಿಲ್ 46 ಎಸೆತಗಳಲ್ಲಿ 4 ಸಿಕ್ಸ್ ಮತ್ತು 6 ಬೌಂಡರಿಗಳ ಮೂಲಕ ಬರೋಬ್ಬರಿ 84 ರನ್ ಗಳಸಿದರು. ಈ ಮೂಲಕ ಡೆಲ್ಲಿ ಬೌಲರ್ಗಳ ಬೆವರಿಳಿಸಿದರು. ಉಳಿದಂತೆ ನಾಯಕ ಹಾರ್ಧಿಕ್ ಪಾಂಡ್ಯಾ 31 ರನ್, ಡೇವಿಡ್ ಮಿಲ್ಲರ್ 20 ರನ್ ಮತ್ತು ಕೊನೆಯಲ್ಲಿ ರಾಹುಲ್ ತೆವಾಟಿಯಾ 14 ರನ್ ಗಳಿಸಿ ಮಿಂಚಿದರು.
ಟಾರ್ಗೆಟ್ ಬೆನ್ನಟ್ಟಿದ ಡೆಲ್ಲಿ ತಂಡ ಪವರ್ ಪ್ಲೇಯಲ್ಲಿ ಮುಖ್ಯ ವಿಕೆಟ್ಗಳನ್ನು ಕೈಚೆಲ್ಲಿತು. ನಾಯಕ ರಿಷಭ್ ಪಂತ್ (43) ಹಾಗೂ ಲಲಿತ್ ಯಾದವ್ (25) ಉತ್ತಮ ಆಟದ ಹೊರತಾಗಿಯೂ ಒಂಬತ್ತು ವಿಕೆಟ್ ನಷ್ಟಕ್ಕೆ 157 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಇತರೆ ಯಾವ ಬ್ಯಾಟರ್ ಮಿಂಚದ ಕಾರಣ ಡೆಲ್ಲಿ ಸೋಲುಂಡಿತು. ಗುಜರಾತ್ ಪರ ಲಾಕಿ ಫರ್ಗ್ಯೂಸನ್ 28 ರನ್ನಿಗೆ ನಾಲ್ಕು ವಿಕೆಟ್ ಕಿತ್ತು ಮಿಂಚಿ ಪಂದ್ಯಶ್ರೇಷ್ಠವನ್ನು ಕೂಡ ಪಡೆದುಕೊಂಡರು.
ಇನ್ನು ನಿನ್ನೆ ನಡೆದ ಮತ್ತೊಂದು ಪಂದ್ಯದಲ್ಲಿ ಜೋಸ್ ಬಟ್ಲರ್ ಅವರ ಅಮೋಘ ಶತಕದ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡ ಮುಂಬೈ ಇಂಡಿಯನ್ಸ್ ವಿರುದ್ದ 23 ರನ್ ಅಂತರದ ರೋಚಕ ಗೆಲುವು ದಾಖಲಿಸಿದೆ. ಈ ಮೂಲಕ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿರುವ ಸಂಜು ಸ್ಯಾಮ್ಸನ್ ಪಡೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಭದ್ರ ಪಡಿಸಿಕೊಂಡಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ ರಾಜಸ್ಥಾನ್, ಎಂಟು ವಿಕೆಟ್ ನಷ್ಟಕ್ಕೆ 193 ರನ್ ಪೇರಿಸಿತ್ತು. ನಾಯಕ ಸಂಜು 21 ಎಸೆತಗಳಲ್ಲಿ 30 ಹಾಗೂ ಹೆಟ್ಮೆಯರ್ 14 ಎಸೆತಗಳಲ್ಲಿ 35 ರನ್ ಗಳಿಸಿದರು. 68 ಎಸೆತಗಳನ್ನು ಎದುರಿಸಿದ ಬಟ್ಲರ್ ಇನ್ನಿಂಗ್ಸ್‌ನಲ್ಲಿ 11 ಬೌಂಡರಿ ಹಾಗೂ ಐದು ಸಿಕ್ಸರ್‌ಗಳು ಸೇರಿದ್ದವು. ಬಳಿಕ ಗುರಿ ಬೆನ್ನತ್ತಿದ ಮುಂಬೈ, ಇಶಾನ್ ಕಿಶಾನ್ (54) ಹಾಗೂ ತಿಲಕ್ ವರ್ಮಾ (61) ಅರ್ಧಶತಕಗಳ ಹೊರತಾಗಿಯೂ ಎಂಟು ವಿಕೆಟ್ ನಷ್ಟಕ್ಕೆ 170 ರನ್ ಗಳಿಸಲಷ್ಟೇ ಸಾಧ್ಯವಾಯಿತು.
Tilak Varma: ಇಶಾನ್ ಕಿಶನ್ ದಾಖಲೆ ಮುರಿದ ಮುಂಬೈ ಇಂಡಿಯನ್ಸ್ ಯುವ ದಾಂಡಿಗ