ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಸುನಾಮಿ ಎಬ್ಬಿಸಿದ ಆಸೀಸ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ (Glenn Maxwell) ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ (Australia vs Afghanistan) ಸಿಡಿಲಬ್ಬರದ ದ್ವಿಶತಕ ಸಿಡಿಸಿದಲ್ಲದೆ ಏಕಾಂಗಿಯಾಗಿ ತಂಡವನ್ನು ಗೆಲುವಿನ ದಡ ಸೇರಿಸಿದ್ದಾರೆ. ಅಫ್ಘಾನಿಸ್ತಾನ ನೀಡಿದ 292 ರನ್‌ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ ಕೇವಲ 49 ರನ್‌ಗಳಿಗೆ ತನ್ನ ಐದು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಆ ನಂತರ ಜವಾಬ್ದಾರಿಯುತವಾಗಿ ಬ್ಯಾಟ್ ಬೀಸಿದ ಮ್ಯಾಕ್ಸ್‌ವೆಲ್, ದ್ವಿಶತಕ ಸಿಡಿಸಿ ಆಸ್ಟ್ರೇಲಿಯಾಕ್ಕೆ ಮೂರು ವಿಕೆಟ್‌ಗಳ ಜಯ ನೀಡಿದರು. ಈ ಸ್ಫೋಟಕ ದ್ವಿಶತಕದಲ್ಲಿ ಅವರು ಪ್ಯಾಟ್ ಕಮಿನ್ಸ್ (Pat Cummins) ಅವರೊಂದಿಗೆ 202 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು ಅದರಲ್ಲಿ 179 ರನ್‌ಗಳು ಮ್ಯಾಕ್ಸ್‌ವೆಲ್ ಬ್ಯಾಟ್‌ನಿಂದ ಬಂದವು. ಮ್ಯಾಕ್ಸ್‌ವೆಲ್ 128 ಎಸೆತಗಳನ್ನು ಎದುರಿಸಿ 21 ಬೌಂಡರಿ ಮತ್ತು 10 ಸಿಕ್ಸರ್‌ಗಳೊಂದಿಗೆ 201 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು. ಈ ಐತಿಹಾಸಿಕ ದ್ವಿಶತಕದೊಂದಿಗೆ ಮ್ಯಾಕ್ಸ್‌ವೆಲ್, ಭಾರತದ ಲೆಜೆಂಡ್ ಕಪಿಲ್ ದೇವ್ (Kapil Dev) ಅವರ ದಾಖಲೆಯನ್ನೂ ಮುರಿದರು.
ಈ ಪಂದ್ಯದಲ್ಲಿ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಗ್ಲೆನ್ ಮ್ಯಾಕ್ಸ್‌ವೆಲ್, ವಿಶ್ವಕಪ್ ಆವೃತ್ತಿಯಲ್ಲಿ ನಂ. 5 ಅಥವಾ ಅದಕ್ಕಿಂತ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದು ದ್ವಿಶತಕ ಸಿಡಿಸಿದ ಮೊದಲ ಆಟಗಾರ ಎನಿಸಿಕೊಂಡರು. ಈ ಮೂಲಕ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಕಪಿಲ್ ದೇವ್ ಹೊಂದಿದ್ದ ಹಿಂದಿನ ದಾಖಲೆಯನ್ನು ಮ್ಯಾಕ್ಸ್‌ವೆಲ್ ಮುರಿದರು.
ವಾಸ್ತವವಾಗಿ 1983 ರ ವಿಶ್ವಕಪ್‌ನಲ್ಲಿ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದಿದ್ದ ಕಪಿಲ್ ದೇವ್, 138 ಎಸೆತಗಳನ್ನು ಎದುರಿಸಿ 16 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ ಅಜೇಯ 175 ರನ್ ಸಿಡಿಸಿದ್ದರು. ಕಪಿಲ್ ಸಿಡಿಸಿದ ಈ ಶತಕದಿಂದ ಟೀಂ ಇಂಡಿಯಾ ರೋಚಕ ಜಯ ಸಾಧಿಸಿತ್ತು. ಅಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ಕೇವಲ 17 ರನ್‌ಗಳಿಗೆ ತನ್ನ 5 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿಕೊಂಡಿತ್ತು. ಆದರೆ ಅಂದು ನಾಯಕನ ಆಟ ಆಡಿದ್ದ ಕಪಿಲ್ ದೇವ್ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅಲ್ಲದೆ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ 175 ರನ್ ಸಿಡಿಸುವುದರೊಂದಿಗೆ, ಈ ಕ್ರಮಾಂಕದಲ್ಲಿ ಬ್ಯಾಟರ್ ಒಬ್ಬ ದಾಖಲಿಸಿದ ಅತ್ಯಧಿಕ ಮೊತ್ತದ ದಾಖಲೆಯನ್ನು ಕಪಿಲ್ ತನ್ನ ಹೆಸರಿಗೆ ಬರೆದುಕೊಂಡಿದ್ದರು.
ಅಫ್ಘಾನ್ ವಿರುದ್ಧದ ಪಂದ್ಯದಲ್ಲೂ ಸಹ ಕಪಿಲ್ರನ್ನು ನೆನಪಿಸುವ ಆಟ ಆಡಿದ ಮ್ಯಾಕ್ಸ್‌ವೆಲ್, ಕಪಿಲ್ರಂತೆ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದು ಭರ್ಜರಿ ದ್ವಿಶತಕ ಸಿಡಿಸುವುದರೊಂದಿಗೆ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಅತಿ ಹೆಚ್ಚು ರನ್ ಸಿಡಿಸಿದ ಆಟಗಾರ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಗ್ಲೆನ್ ಮ್ಯಾಕ್ಸ್‌ವೆಲ್ ಈ ಬಾರಿಯ ವಿಶ್ವಕಪ್‌ನಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ವಿಶ್ವಕಪ್‌ನ ಅತ್ಯಂತ ವೇಗದ ಶತಕವೂ ಅವರ ಬ್ಯಾಟ್‌ನಿಂದ ಬಂದಿದ್ದು, ಅವರು ಕೇವಲ 40 ಎಸೆತಗಳಲ್ಲಿ ಈ ಶತಕ ಪೂರೈಸಿದರು. ಈ ಮೂಲಕ ಮ್ಯಾಕ್ಸ್‌ವೆಲ್ ವಿಶ್ವಕಪ್ ಇತಿಹಾಸದಲ್ಲಿ ಅತಿ ವೇಗದ ಶತಕ ಸಿಡಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:51 am, Wed, 8 November 23