2023ರ ಏಕದಿನ ವಿಶ್ವಕಪ್‌ನಲ್ಲಿ (ICC World Cup 2023) ಅಫ್ಘಾನಿಸ್ತಾನದ ಎದುರು ಪಾಕಿಸ್ತಾನ (Pakistan vs Afghanistan) ಹೀನಾಯ ಸೋಲು ಕಂಡಿದ್ದು ಗೊತ್ತೇ ಇದೆ. ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನ 8 ವಿಕೆಟ್‌ಗಳಿಂದ ಪಾಕಿಸ್ತಾನವನ್ನು ಸೋಲಿಸಿತು. ಪಾಕಿಸ್ತಾನ ಏಕದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಸೋತಿದ್ದು ಇದೇ ಮೊದಲು. ಈ ಸೋಲಿನ ನಂತರ ಪಾಕಿಸ್ತಾನ ತಂಡದ ಮೇಲೆ ಭಾರೀ ಟೀಕೆಗಳ ಸುರಿಮಳೆಯಾಗುತ್ತಿದೆ. ಈ ನಡುವೆ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದ್ದು, 2023 ರ ವಿಶ್ವಕಪ್ ನಂತರ ಕ್ಯಾಪ್ಟನ್ ಬಾಬರ್ ಆಝಂ (Babar Azam) ಅವರನ್ನು ನಾಯಕತ್ವದಿಂದ ಕೆಳಗಿಳಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ವಿಶ್ವಕಪ್ ನಂತರ, ಪಾಕಿಸ್ತಾನ ತಂಡ ತಕ್ಷಣವೇ ಆಸ್ಟ್ರೇಲಿಯಾ ಪ್ರವಾಸ ಮಾಡಲಿದೆ. ಇದಲ್ಲದೆ, ತಂಡವು 2024 ರ ಟಿ 20 ವಿಶ್ವಕಪ್ ಮತ್ತು 2025 ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಗಮನದಲ್ಲಿಟ್ಟುಕೊಂಡು ಈ ರೀತಿಯ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ವಿಶ್ವಕಪ್ ಸೆಮಿಫೈನಲ್‌ನಲ್ಲಿ ಆಡದೆ ತಂಡವು ಸ್ವದೇಶಕ್ಕೆ ಮರಳಿದರೆ ಬಾಬರ್ ತಮ್ಮ ನಾಯಕತ್ವಕ್ಕೆ ರಾಜೀನಾಮೆ ನೀಡಬಹುದು ಎಂದು ಒಂದು ವಿಶ್ವಾಸಾರ್ಹ ಮೂಲವು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದೆ. ‘ಬಾಬರ್ ಅಧಿಕಾರವಾದಿ ಮುಗಿದಿದೆ. ಏಕೆಂದರೆ ಅವರಿಗೆ ನಾಯಕನಾಗಿ ಎಲ್ಲಾ ರೀತಿಯ ಅಧಿಕಾರವನ್ನು ನೀಡಲಾಗಿದೆ. ಮುಖ್ಯವಾಗಿ ಅವರು ಕೇಳಿದ ಆಟಗಾರರನ್ನೇ ಯಾವಾಗಲೂ ತಂಡದಲ್ಲಿ ಆಡಿಸಲಾಗಿದೆ. ಅಲ್ಲದೆ ಅವರ ಅಧಿಕಾರವನ್ನು ಕಡಿಮೆ ಮಾಡುವ ಯಾವುದೇ ಪ್ರಯತ್ನಗಳು ಎಂದಿಗೂ ನಡೆದಿಲ್ಲ. ಆದ್ದರಿಂದ ಬಾಬರ್ ಈಗ ಏಷ್ಯಾಕಪ್ ಮತ್ತು ವಿಶ್ವಕಪ್ ಸೋಲಿಗೆ ಸಂಪೂರ್ಣ ಹೊಣೆಗಾರರಾಗಿದ್ದಾರೆ’ ಎಂದು ಮೂಲವನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.
ಕೊಹ್ಲಿಯಂತೆ ಬಾಬರ್ ನಾಯಕತ್ವ ತ್ಯಜಿಸಲಿ ಎಂದ ಪಾಕಿಸ್ತಾನದ ಮಾಜಿ ಬ್ಯಾಟರ್..!
ತಂಡದ ಮಾಜಿ ನಾಯಕರಾದ ಮಿಸ್ಬಾ ಉಲ್ ಹಕ್ ಮತ್ತು ಮುಹಮ್ಮದ್ ಹಫೀಜ್ ಅವರು ಭಾರತದಲ್ಲಿ ನಡೆಯಲ್ಲಿರುವ ಈ ಮೆಗಾ ಈವೆಂಟ್‌ಗೆ ತಂಡದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ಒತ್ತಾಯಿಸಿದರು. ಆದರೆ ಏಷ್ಯಾಕಪ್ ಮತ್ತು ವಿಶ್ವಕಪ್‌ಗೆ ಬಾಬರ್ ಕೇಳಿದ ಆಟಗಾರರನ್ನೇ ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಪಿಸಿಬಿ ಅಧ್ಯಕ್ಷ ಝಕಾ ಅಶ್ರಫ್ ಅವರು ಮಿಸ್ಬಾ ಮತ್ತು ಹಫೀಜ್ ಮತ್ತು ಇತರ ಕೆಲವು ಮಾಜಿ ಆಟಗಾರರ ಸಲಹೆಯನ್ನು ನಿರ್ಲಕ್ಷಿಸಿದ್ದಾರೆ. ಏಕೆಂದರೆ ಮಾಜಿ ಆಟಗಾರರಿಗಿಂತ ಪಿಸಿಬಿ ಬಾಬರ್ ಮಾತಿಗೆ ಹೆಚ್ಚು ಮನ್ನಣೆ ನೀಡಿತ್ತು. ಹೀಗಾಗಿ ತಂಡದ ಸೋಲಿಗೆ ಬಾಬರ್ ಹೊಣೆ ಎಂದು ಪಾಕ್ ಮಂಡಳಿಯ ಆಪ್ತ ಮೂಲಗಳು ತಿಳಿಸಿವೆ’ ಎಂದು ಪಿಟಿಐ ವರದಿ ಮಾಡಿದೆ.
ಪಿಟಿಐ ವರದಿಯ ಪ್ರಕಾರ, ಪಾಕ್ ತಂಡ ವಿಶ್ವಕಪ್ ಮುಗಿಸಿ ತವರಿಗೆ ವಾಪಸ್ಸಾದ ಬಳಿಕ ಸರ್ಫರಾಜ್ ಅಹ್ಮದ್, ಮುಹಮ್ಮದ್ ರಿಜ್ವಾನ್ ಮತ್ತು ಶಾಹೀನ್ ಶಾ ಆಫ್ರಿದಿ ಈ ಮೂವರಲ್ಲಿ ಒಬ್ಬರು ಬಾಬರ್ ಆಝಂ ಬದಲಿಗೆ ತಂಡದ ನಾಯಕತ್ವವಹಿಸಿಕೊಳ್ಳುವ ಸಾಧ್ಯತೆ ಇದೆ. ಅಲ್ಲದೆ ಮಂಡಳಿಯು ಟೆಸ್ಟ್ ಮತ್ತು ಟಿ20, ಏಕದಿನ ಮಾದರಿಗೆ ವಿವಿಧ ನಾಯಕರನ್ನು ನೇಮಿಸುವ ಸಾಧ್ಯತೆಯಿದೆ ಎಂದು ಮೂಲಗಳು ಏಜೆನ್ಸಿಗೆ ತಿಳಿಸಿದ್ದು, ಸರ್ಫರಾಜ್ ಅಹ್ಮದ್ ಟೆಸ್ಟ್ ತಂಡದ ನಾಯಕತ್ವವಹಿಸಿಕೊಳ್ಳಲಿದ್ದು, ಏಕದಿನ ಮತ್ತು ಟಿ20 ತಂಡಗಳ ನಾಯಕತ್ವವನ್ನು ಶಾಹೀನ್ ಶಾ ಆಫ್ರಿದಿಗೆ ನೀಡುವ ಸಾಧ್ಯತೆಯಿದೆ ಎಂದು ಪಿಟಿಐ ವರದಿ ಮಾಡಿದೆ.
ಬಾಬರ್ ಆಝಂ ಹೊರತಾಗಿ, ತಂಡದ ಕೋಚಿಂಗ್ ಸಿಬ್ಬಂದಿ ಮಿಕ್ಕಿ ಆರ್ಥರ್, ಗ್ರಾಂಟ್ ಬ್ರಾಡ್‌ಬರ್ನ್, ಮೊರ್ನಿ ಮರ್ಕೆಲ್, ಆಂಡ್ರ್ಯೂ ಪುಟ್ಟಿಕ್ ಮತ್ತು ಮ್ಯಾನೇಜರ್ ರೆಹಾನ್ ಉಲ್ ಹಕ್ ಕೂಡ ವಿಶ್ವಕಪ್ ನಂತರ ತಮ್ಮ ಸ್ಥಾನದಿಂದ ವಜಾಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ಬಹಿರಂಗಪಡಿಸಿವೆ.
ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡಕ್ಕೆ ಇನ್ನೂ ನಾಲ್ಕು ಲೀಗ್ ಪಂದ್ಯಗಳು ಬಾಕಿ ಇವೆ. ಹೀಗಾಗಿ ತಂಡಕ್ಕೆ ಇನ್ನೂ ಸೆಮಿಫೈನಲ್‌ಗೆ ಅರ್ಹತೆ ಪಡೆಯುವ ಅವಕಾಶವಿದೆ. ಈ ವಿಶ್ವಕಪ್‌ನ ಸೆಮಿ-ಫೈನಲ್‌ಗೆ ಅರ್ಹತೆ ಪಡೆಯಲು ತನ್ನ ಉಳಿದ ಎಲ್ಲಾ ಪಂದ್ಯಗಳನ್ನು ಗೆದ್ದರೆ ಮಾತ್ರ ಬಾಬರ್ ನಾಯಕನಾಗಿ ಉಳಿದುಕೊಳ್ಳುವ ಕೊನೆಯ ಅವಕಾಶ ಲಭಿಸಲಿದೆ. ಆದರೆ ಅದು ಅಷ್ಟು ಸುಲಭವಲ್ಲ. ಏಕೆಂದರೆ ಪಾಕ್ ತಂಡ ತನ್ನ ಮುಂದಿನ ಪಂದ್ಯಗಳನ್ನು ಇಂಗ್ಲೆಂಡ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾದಂತಹ ಬಲಿಷ್ಠ ತಂಡಗಳೆದುರು ಆಡಬೇಕಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:37 pm, Wed, 25 October 23