10 ಎಸೆತಗಳಲ್ಲಿ 3 ವಿಕೆಟ್; ಜಡೇಜಾ ಮ್ಯಾಜಿಕ್​ಗೆ ಕಾಂಗರೂಗಳ ಪೆವಿಲಿಯನ್ ಪರೇಡ್..!

ICC World Cup 2023: ವಾರ್ನರ್ ವಿಕೆಟ್ ಬಳಿಕ ಬಂದ ಲಬುಶೇನ್, ಸ್ಮಿತ್​​ಗೆ ಸಾಥ್ ನೀಡುವ ಮೂಲಕ ಆಸೀಸ್ ಮೊತ್ತವನ್ನು 100ರ ಗಡಿ ದಾಟಿಸಿದರು. ಈ ಇಬ್ಬರ ನಡುವೆ 44 ರನ್​ಗಳ ಜೊತೆಯಾಟ ಕೂಡ ಏರ್ಪಟ್ಟಿತ್ತು. ಈ ವೇಳೆ ದಾಳಿಗಿಳಿದ ಜಡೇಜಾ, ಕೇವಲ ಎರಡೇ ಎರಡು ಓವರ್​ಗಳ ಅಂತರದಲ್ಲಿ ಪ್ರಮುಖ ಮೂರು ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದರು.

10 ಎಸೆತಗಳಲ್ಲಿ 3 ವಿಕೆಟ್; ಜಡೇಜಾ ಮ್ಯಾಜಿಕ್​ಗೆ ಕಾಂಗರೂಗಳ ಪೆವಿಲಿಯನ್ ಪರೇಡ್..!
ರವೀಂದ್ರ ಜಡೇಜಾ

Updated on: Oct 08, 2023 | 6:46 PM

ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ನಡುವೆ ಚೆನ್ನೈನಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್​ನ (World Cup 2023) ಐದನೇ ಪಂದ್ಯದಲ್ಲಿ, ಟೀಂ ಇಂಡಿಯಾ, ಕಾಂಗರೂ ಪಡೆಯನ್ನು ಕೇವಲ 199 ರನ್​ಗಳಿಗೆ ಆಲೌಟ್ ಮಾಡಿದೆ. ಟೀಂ ಇಂಡಿಯಾ (Team India) ವೇಗಿಗಳ ಕರಾರುವಕ್ಕಾದ ದಾಳಿಯಿಂದ ಕಾಂಗರೂಗಳಿಗೆ ಸಂಪೂರ್ಣ 50 ಓವರ್​ಗಳನ್ನು ಆಡಲು ಸಾಧ್ಯವಾಗಲಿಲ್ಲ. ಅದರಲ್ಲೂ ತಂಡದ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾರ (Ravindra Jadeja) ಸ್ಪಿನ್ ಮ್ಯಾಜಿಕ್​ಗೆ ದಿಕ್ಕೆಟ್ಟ ಕಮ್ಮಿನ್ಸ್ ಪಡೆಯ ಬ್ಯಾಟರ್​ಗಳು ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಚೆಪಾಕ್ ಮೈದಾನ ಸ್ಪಿನ್ನರ್‌ಗಳಿಗೆ ಹೆಚ್ಚು ನೆರವಾಗುವುದರ ಲಾಭ ಪಡೆದ ಜಡೇಜಾ ದಾಳಿಗಿಳಿದ ಕೂಡಲೇ ಕಾಂಗರೂ ಪಡೆಯನ್ನು ಇನ್ನಿಲ್ಲದಂತೆ ಕಾಡಲಾರಂಭಿಸಿದರು. ಈ ನಡುವೆ 28 ಮತ್ತು 30ನೇ ಓವರ್​ನಲ್ಲಿ ತನ್ನ ಜಾದು ತೋರಿದ ಜಡೇಜಾ ಕೇವಲ 10 ಎಸೆತಗಳಲ್ಲಿ ಆಸೀಸ್ ಪಾಳಯದ ಪ್ರಮುಖ 3 ವಿಕೆಟ್ ಉರುಳಿಸಿದರು.

ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸೀಸ್ ನಾಯಕ ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದರು. ಆದರೆ ಆರಂಭಿಕರಾಗಿ ಕಣಕ್ಕಿಳಿದಿದ್ದ ಮಿಚೆಲ್ ಮಾರ್ಷ್​ ಶೂನ್ಯಕ್ಕೆ ವಿಕೆಟ್ ಒಪ್ಪಿಸುವ ಮೂಲಕ ತಂಡಕ್ಕೆ ಆರಂಭದಲ್ಲೇ ಆಘಾತ ನೀಡಿದರು. ಆದರೆ ಆ ಬಳಿಕ ಜೊತೆಯಾದ ವಾರ್ನರ್ ಹಾಗೂ ಸ್ಮಿತ್ ಅರ್ಧಶತಕದ ಜೊತೆಯಾಟ ಆಡುವ ಮೂಲಕ ತಂಡದ ಇನ್ನಿಂಗ್ಸ್ ನಿಭಾಯಿಸಲು ಪ್ರಯತ್ನಿಸಿದರು. ಈ ವೇಳೆ 17ನೇ ಓವರ್​ನಲ್ಲಿ ದಾಳಿಗಿಳಿದ ಕುಲ್ದೀಪ್ ಯಾದವ್, ಅರ್ಧಶತಕದ ಸನಿಹದಲ್ಲಿದ್ದ ವಾರ್ನರ್ (41 ರನ್) ಅವರನ್ನು ಕೆಡ್ಡಾಕೆ ಕೆಡುವಿದರು.

ಏಕದಿನ ವಿಶ್ವಕಪ್​ನಲ್ಲಿ ಧೋನಿ- ರಾಹುಲ್​ರನ್ನು ಹಿಂದಿಕ್ಕಿದ ರೋಹಿತ್ ಶರ್ಮಾ..!

2 ಓವರ್​ಗಳ ಅಂತರದಲ್ಲಿ 3 ವಿಕೆಟ್

ವಾರ್ನರ್ ವಿಕೆಟ್ ಬಳಿಕ ಬಂದ ಲಬುಶೇನ್, ಸ್ಮಿತ್​​ಗೆ ಸಾಥ್ ನೀಡುವ ಮೂಲಕ ಆಸೀಸ್ ಮೊತ್ತವನ್ನು 100ರ ಗಡಿ ದಾಟಿಸಿದರು. ಈ ಇಬ್ಬರ ನಡುವೆ 44 ರನ್​ಗಳ ಜೊತೆಯಾಟ ಕೂಡ ಏರ್ಪಟ್ಟಿತ್ತು. ಈ ವೇಳೆ ದಾಳಿಗಿಳಿದ ಜಡೇಜಾ, ಕೇವಲ ಎರಡೇ ಎರಡು ಓವರ್​ಗಳ ಅಂತರದಲ್ಲಿ ಪ್ರಮುಖ ಮೂರು ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದರು.

ಜಡೇಜಾ ಮ್ಯಾಜಿಕ್

28ನೇ ಓವರ್​ನಲ್ಲಿ ಸ್ಟೀವ್ ಸ್ಮಿತ್ ಅವರನ್ನು ಔಟ್ ಮಾಡಿದ ಜಡೇಜಾ, ಇದರ ನಂತರ, ಮುಂದಿನ ಓವರ್‌ನಲ್ಲಿ ಮಾರ್ನಸ್ ಲಬುಶೇನ್ ಮತ್ತು ಅಲೆಕ್ಸ್ ಕ್ಯಾರಿ ಅವರ ವಿಕೆಟ್ ಪಡೆದರು. ಮೊದಲು 28ನೇ ಓವರ್​ನ ಮೊದಲ ಎಸೆತದಲ್ಲಿ ಸ್ಮಿತ್​ರನ್ನು ಜಡೇಜಾ ಕ್ಲೀನ್ ಬೌಲ್ಡ್ ಮಾಡಿದರು. ಆ ಬಳಿಕ 30ನೇ ಓವರ್​ನಲ್ಲಿ ಜಡೇಜಾ ಅವರ ಎರಡನೇ ಎಸೆತವನ್ನು​ ಸ್ವೀಪ್ ಆಡಲು ಪ್ರಯತ್ನಿಸಿದ ಲಬುಶೇನ್, ವಿಕೆಟ್ ಕೀಪರ್ ರಾಹುಲ್​ಗೆ ಕ್ಯಾಚಿತ್ತು ನಿರ್ಗಮಿಸಿದರು. ಇದೇ ಓವರ್​ನ ಎರಡು ಎಸೆತಗಳ ಬಳಿಕ ಅಲೆಕ್ಸ್ ಕ್ಯಾರಿಯನ್ನು ಎಲ್ ಬಿಡಬ್ಲ್ಯು ಬಲೆಗೆ ಬೀಳಿಸುವ ಮೂಲಕ ಜಡೇಜಾ ಕೇವಲ10 ಎಸೆತಗಳಲ್ಲಿ 3 ವಿಕೆಟ್ ಉರುಳಿಸಿದರು.

ಆಸೀಸ್ ಇನ್ನಿಂಗ್ಸ್ ಹೀಗಿತ್ತು

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ 199 ರನ್​ಗಳಿಗೆ ಇನ್ನಿಂಗ್ಸ್ ಮುಗಿಸಿದೆ. ತಂಡದ ಪರ ಆರಂಭಿಕ ಡೇವಿಡ್ ವಾರ್ನರ್ 41 ರನ್ ಹಾಗೂ ಸ್ಟೀವ್ ಸ್ಮಿತ್ 46 ರನ್ ಬಾರಿಸಿದರೆ, ಲಬುಶೇನ್ 27 ರನ್ ಹಾಗೂ ಮಿಚೆಲ್ ಸ್ಟಾರ್ಕ್​ 28 ರನ್​ಗಳ ಕೊಡುಗೆ ನೀಡಿದರು. ಇವರ ಹೊರತಾಗಿ ಮ್ಯಾಕ್ಸ್‌ವೆಲ್ ಹಾಗೂ ಪ್ಯಾಟ್ ಕಮ್ಮಿನ್ಸ್ ತಲಾ 17 ರನ್ ಸಿಡಿಸಿದರು. ಟೀಂ ಇಂಡಿಯಾ ಪರ ಜಡೇಜಾ 3 ವಿಕೆಟ್, ಬುಮ್ರಾ ಹಾಗೂ ಕುಲ್ದೀಪ್ ತಲಾ 2 ವಿಕೆಟ್ ಪಡೆದರು. ಉಳಿದಂತೆ ಸಿರಾಜ್, ಪಾಂಡ್ಯ, ಅಶ್ವಿನ್ ತಲಾ ಒಂದೊಂದು ವಿಕೆಟ್ ಪಡೆದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ