ಪ್ರಸ್ತುತ ಭಾರತದಲ್ಲಿ 17ನೇ ಆವೃತ್ತಿಯ ಐಪಿಎಲ್ (IPL 2024) ನಡೆಯುತ್ತಿದೆ. ಆ ಬಳಿಕ ಎರಡು ದೇಶಗಳ ಆತಿಥ್ಯದಡಿಯಲ್ಲಿ ಟಿ20 ವಿಶ್ವಕಪ್ (T20 Wolrd Cup 2024) ನಡೆಯಲ್ಲಿದೆ. ಈ ಮಿನಿಸಮರಕ್ಕೆ ಅಮೇರಿಕಾ ಹಾಗೂ ವೆಸ್ಟ್ ಇಂಡೀಸ್ ಆತಿಥ್ಯವಹಿಸುತ್ತಿವೆ. ಈ ನಡುವೆ ಮುಂಬರುವ ಏಕದಿನ ವಿಶ್ವಕಪ್‌ಗೆ ಅಂದರೆ 2027 ರಂದು ನಡೆಯಲ್ಲಿರುವ ಏಕದಿನ ವಿಶ್ವಕಪ್‌ಗೆ (ICC ODI World Cup 2027) ಸಂಬಂಧಿಸಿದಂತೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ಅದರಂತೆ 2027 ರ ಏಕದಿನ ವಿಶ್ವಕಪ್‌ಗೆ ಮೂರು ದೇಶಗಳು ಆತಿಥ್ಯದ ಜವಬ್ದಾರಿ ಹೊತ್ತುಕೊಂಡಿವೆ. ಹರಿಣಗಳ ನಾಡು ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ಏಕದಿನ ವಿಶ್ವಕಪ್ ನಡೆಯಲ್ಲಿದೆ. ವಿಶ್ವಕಪ್ ಇತಿಹಾಸದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ಐಸಿಸಿ ವಿಶ್ವಕಪ್‌ಗೆ ಆತಿಥ್ಯ ವಹಿಸುತ್ತಿರುವುದು ಇದು ಎರಡನೇ ಬಾರಿಯಾಗಿದ್ದು, ಈ ಹಿಂದೆ 2003ರಲ್ಲಿ ಈ ಎರಡು ದೇಶಗಳು ಒಟ್ಟಾರೆಯಾಗಿ ವಿಶ್ವಸಮರಕ್ಕೆ ಆತಿಥ್ಯವಹಿಸಿದ್ದವು. ಆದರೆ, ಇದೇ ಮೊದಲ ಬಾರಿಗೆ ನಮೀಬಿಯಾಗೆ ಟೂರ್ನಿಯ ಆತಿಥ್ಯ ವಹಿಸುವ ಅವಕಾಶ ಸಿಕ್ಕಿದೆ. 2003ರ ನಂತರ ಮೊದಲ ಬಾರಿಗೆ 14 ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿದ್ದು, 2027ರ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಈ ಪಂದ್ಯಾವಳಿ ನಡೆಯಲಿದೆ.
ದಕ್ಷಿಣ ಆಫ್ರಿಕಾದ ಒಟ್ಟು 8 ಕ್ರೀಡಾಂಗಣಗಳಲ್ಲಿ 2027ರ ಏಕದಿನ ವಿಶ್ವಕಪ್ ಪಂದ್ಯಗಳು ನಡೆಯಲ್ಲಿವೆ. ಜೋಹಾನ್ಸ್‌ಬರ್ಗ್‌ನಲ್ಲಿ ವಾಂಡರರ್ಸ್, ಪ್ರಿಟೋರಿಯಾದ ಸೆಂಚುರಿಯನ್ ಪಾರ್ಕ್, ಡರ್ಬನ್‌ನ ಕಿಂಗ್ಸ್‌ಮೀಡ್, ಗ್ಕೆಬರ್ಹಾದಲ್ಲಿನ ಸೇಂಟ್ ಜಾರ್ಜ್ ಪಾರ್ಕ್, ಪರ್ಲ್‌ನ ಬೋಲ್ಯಾಂಡ್ ಪಾರ್ಕ್ ಮತ್ತು ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್ ಪ್ರಮುಖ ಸ್ಥಳಗಳಾಗಿವೆ. ಬ್ಲೋಮ್‌ಫಾಂಟೈನ್‌ನಲ್ಲಿರುವ ಮಂಗೌಂಗ್ ಓವಲ್ ಮತ್ತು ಪೂರ್ವ ಲಂಡನ್‌ನ ಬಫಲೋ ಪಾರ್ಕ್‌ನಲ್ಲಿ ಕೆಲವು ಐಸಿಸಿ ವಿಶ್ವಕಪ್ ಪಂದ್ಯಗಳು ಸಹ ನಡೆಯಲಿವೆ.
ಸ್ಥಳಗಳ ಆಯ್ಕೆ ಕುರಿತು ಮಾತನಾಡಿದ ಕ್ರಿಕೆಟ್ ದಕ್ಷಿಣ ಆಫ್ರಿಕಾ ಸಿಇಒ ಫೋಲೆಟ್ಸಿ ಮೊಸೆಕಿ, ಸ್ಥಳಗಳ ಜೊತೆಗೆ ಹೋಟೆಲ್ ಕೊಠಡಿಗಳು ಮತ್ತು ವಿಮಾನ ನಿಲ್ದಾಣಗಳ ಲಭ್ಯತೆಯನ್ನು ಪರಿಗಣಿಸಬೇಕಾಗಿದೆ. ನಾವು 11 ಐಸಿಸಿ ಮಾನ್ಯತೆ ಪಡೆದ ಸ್ಥಳಗಳನ್ನು ಹೊಂದಿದ್ದೇವೆ, ಆದ್ದರಿಂದ ಮೂರು ಸ್ಥಳಗಳನ್ನು ಪಟ್ಟಿಯಿಂದ ಬಿಡುವುದು ಕಠಿಣವಾಗಿತ್ತು, ಆದರೆ ಬಹಳಷ್ಟು ವಿಷಯಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಲಭ್ಯವಿರುವ ಸ್ಥಳಗಳ ಹೊರತಾಗಿ, ತರಬೇತಿ ಸ್ಥಳಗಳು ಸಹ ಪ್ರಮುಖ ವಿಷಯವಾಗಿದೆ ಎಂದರು.
ಆತಿಥೇಯ ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ 2027ರ ಐಸಿಸಿ ವಿಶ್ವಕಪ್‌ಗೆ ನೇರವಾಗಿ ಅರ್ಹತೆ ಪಡೆದಿವೆ. ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಅಗ್ರ 8 ತಂಡಗಳು ಟೂರ್ನಿಯಲ್ಲಿ ಮುನ್ನಡೆಯಲಿವೆ. ಉಳಿದ 4 ತಂಡಗಳು ಟೂರ್ನಿಗೆ ಪ್ರವೇಶ ಪಡೆಯಲು ಅರ್ಹತಾ ಸುತ್ತಿನ ಮೂಲಕ ಹೋಗಬೇಕಾಗಿದೆ. ನಮೀಬಿಯಾ, ನೆದರ್ಲ್ಯಾಂಡ್ಸ್, ಸ್ಕಾಟ್ಲೆಂಡ್, ಯುಎಇ, ಯುಎಸ್ಎ, ನೇಪಾಳ ಮತ್ತು ಓಮನ್ ತಂಡಗಳು ವಿಶ್ವಕಪ್‌ನಲ್ಲಿ ಸ್ಥಾನಕ್ಕಾಗಿ ಪರಸ್ಪರ ಪೈಪೋಟಿ ನಡೆಸಲಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:42 pm, Wed, 10 April 24