ICC World Cup Qualifiers 2023: ಹರಾರೆಯಲ್ಲಿ ನಡೆದ ಏಕದಿನ ವಿಶ್ವಕಪ್ ಅರ್ಹತಾ ಸುತ್ತಿನ ಫೈನಲ್ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಶ್ರೀಲಂಕಾ (Sri Lanka) ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ನೆದರ್ಲ್ಯಾಂಡ್ಸ್ ಶ್ರೀಲಂಕಾ ತಂಡವನ್ನು ಮೊದಲು ಬ್ಯಾಟಿಂಗ್ಗೆ ಆಹ್ವಾನಿಸಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಲಂಕಾ ಪರ ಆರಂಭಿಕರಾದ ಪಾತುಂ ನಿಸ್ಸಂಕಾ (23) ಹಾಗೂ ಸಮರವಿಕ್ರಮ (19) ಮೊದಲ ವಿಕೆಟ್ಗೆ 39 ರನ್ ಪೇರಿಸಿದರು.
ಇನ್ನು ಕುಸಾಲ್ ಮೆಂಡಿಸ್ 43 ರನ್ ಬಾರಿಸಿದರೆ, ಸಹಾನ್ ಅರಚ್ಚಿಗೆ 71 ಎಸೆತಗಳಲ್ಲಿ 57 ರನ್ ಕಲೆಹಾಕಿದರು. ಹಾಗೆಯೇ ಅಸಲಂಕಾ 36 ರನ್ಗಳ ಕಾಣಿಕೆ ನೀಡಿದರು. ಪರಿಣಾಮ 35 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಶ್ರೀಲಂಕಾ ತಂಡವು 180 ರನ್ ಕಲೆಹಾಕಿತು.
ಆದರೆ ಈ ಹಂತದಲ್ಲಿ ದಿಢೀರ್ ಕುಸಿತಕ್ಕೊಳಗಾದ ಶ್ರೀಲಂಕಾ ತಂಡವು ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡಿತು. ಪರಿಣಾಮ 47.5 ಓವರ್ಗಳಲ್ಲಿ 233 ರನ್ಗಳಿಗೆ ಶ್ರೀಲಂಕಾ ಆಲೌಟ್ ಆಯಿತು. ನೆದರ್ಲ್ಯಾಂಡ್ಸ್ ಪರ ವ್ಯಾನ್ ಬೀಕ್, ರಯಾನ್ ಕ್ಲೈನ್, ವಿಕ್ರಮಜಿತ್ ಸಿಂಗ್ ಹಾಗೂ ಸಾಕಿಬ್ ತಲಾ 2 ವಿಕೆಟ್ ಕಬಳಿಸಿ ಮಿಂಚಿದರು.
234 ರನ್ಗಳ ಸುಲಭ ಗುರಿಯೊಂದಿಗೆ ಇನಿಂಗ್ಸ್ ಆರಂಭಿಸಿದ ನೆದರ್ಲ್ಯಾಂಡ್ಸ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಶ್ರೀಲಂಕಾ ಬೌಲರ್ಗಳು ಯಶಸ್ವಿಯಾದರು. ದಿಲ್ಶನ್ ಮಧುಶಂಕ, ಮತೀಶ ಪತಿರಾಣ ಹಾಗೂ ಹಸರಂಗ ಎಸೆತಗಳಿಗೆ ತತ್ತರಿಸಿದ ನೆದರ್ಲ್ಯಾಂಡ್ಸ್ ತಂಡವು ಕೇವಲ 49 ರನ್ಗಳಿಗೆ 6 ಪ್ರಮುಖ ವಿಕೆಟ್ ಕಳೆದುಕೊಂಡಿತು.
ಇದಾಗ್ಯೂ ಮತ್ತೊಂದೆಡೆ ಆರಂಭಿಕ ಆಟಗಾರ ಮ್ಯಾಕ್ಸ್ ಒಡೌಡ್ ಕ್ರೀಸ್ ಕಚ್ಚಿ ನಿಲ್ಲುವ ಪ್ರಯತ್ನ ಮಾಡಿದ್ದರು. ಅಲ್ಲದೆ 63 ಎಸೆತಗಳನ್ನು ಎದುರಿಸಿ 33 ರನ್ಗಳಿಸಿದರು. ಈ ಹಂತದಲ್ಲಿ ಮಹೀಶ್ ತೀಕ್ಷಣ ಎಸೆತವನ್ನು ಗುರುತಿಸುವಲ್ಲಿ ಎಡವಿದ ಒಡೌಡ್ ಕ್ಲೀನ್ ಬೌಲ್ಡ್ ಆದರು. ಅಲ್ಲದೆ 23.3 ಓವರ್ಗಳಲ್ಲಿ 105 ರನ್ಗಳಿಗೆ ನೆದರ್ಲ್ಯಾಂಡ್ಸ್ ತಂಡವನ್ನು ಆಲೌಟ್ ಮಾಡಿ ಶ್ರೀಲಂಕಾ ತಂಡವು 128 ರನ್ಗಳ ಭರ್ಜರಿ ಜಯ ಸಾಧಿಸಿತು. ಈ ಮೂಲಕ ಏಕದಿನ ವಿಶ್ವಕಪ್ನ ಅರ್ಹತಾ ಸುತ್ತಿನಲ್ಲಿ ಶ್ರೀಲಂಕಾ ತಂಡವು ಟ್ರೋಫಿಯನ್ನು ಎತ್ತಿ ಹಿಡಿದಿದೆ.
ಶ್ರೀಲಂಕಾ ಪ್ಲೇಯಿಂಗ್ 11: ಪಾತುಮ್ ನಿಸ್ಸಾಂಕ , ಸದೀರ ಸಮರವಿಕ್ರಮ , ಕುಸಲ್ ಮೆಂಡಿಸ್ (ವಿಕೆಟ್ ಕೀಪರ್) , ಚರಿತ್ ಅಸಲಂಕ , ಧನಂಜಯ ಡಿ ಸಿಲ್ವ , ಸಹನ್ ಅರಚ್ಚಿಗೆ , ದಸುನ್ ಶಾನಕ (ನಾಯಕ) , ವನಿಂದು ಹಸರಂಗ , ಮಹೇಶ್ ತೀಕ್ಷಣ , ಮತೀಶ ಪತಿರಾಣ , ದಿಲ್ಶನ್ ಮಧುಶಂಕ.
ನೆದರ್ಲ್ಯಾಂಡ್ಸ್ ಪ್ಲೇಯಿಂಗ್ 11: ವಿಕ್ರಮಜಿತ್ ಸಿಂಗ್ , ಮ್ಯಾಕ್ಸ್ ಒಡೌಡ್ , ನೋಹ್ ಕ್ರೋಸ್ , ವೆಸ್ಲಿ ಬ್ಯಾರೆಸಿ , ತೇಜ ನಿಡಮನೂರು , ಸ್ಕಾಟ್ ಎಡ್ವರ್ಡ್ಸ್ (ನಾಯಕ) , ಸಾಕಿಬ್ ಜುಲ್ಫಿಕರ್ , ಲೋಗನ್ ವ್ಯಾನ್ ಬೀಕ್ , ರಿಯಾನ್ ಕ್ಲೈನ್ , ಆರ್ಯನ್ ದತ್ , ಕ್ಲೇಟನ್ ಫ್ಲಾಯ್ಡ್.
ODI World Cup 2023: ಏಕದಿನ ವಿಶ್ವಕಪ್ನಲ್ಲಿ ಕಣಕ್ಕಿಳಿಯುವ 10 ತಂಡಗಳು ಫೈನಲ್
ಏಕದಿನ ವಿಶ್ವಕಪ್ಗೆ 2 ತಂಡಗಳು ಎಂಟ್ರಿ:
ಏಕದಿನ ವಿಶ್ವಕಪ್ನ ಅರ್ಹತಾ ಸುತ್ತಿನ ಸೂಪರ್ ಸಿಕ್ಸ್ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರ 2 ತಂಡಗಳಾಗಿ ಕಾಣಿಸಿಕೊಂಡ ಶ್ರೀಲಂಕಾ ಹಾಗೂ ನೆದರ್ಲ್ಯಾಂಡ್ಸ್ ತಂಡಗಳು ಏಕದಿನ ವಿಶ್ವಕಪ್ಗೆ ಅರ್ಹತೆ ಪಡೆದುಕೊಂಡಿದೆ. ಅದರಂತೆ ಭಾರತದಲ್ಲಿ ಅಕ್ಟೋಬರ್-ನವೆಂಬರ್ನಲ್ಲಿ ನಡೆಯಲಿರುವ ಕ್ರಿಕೆಟ್ ಮಹಾ ಸಮರದಲ್ಲಿ ಉಭಯ ತಂಡಗಳು ಕಾಣಿಸಿಕೊಳ್ಳಲಿದೆ.