Ashes 2023: ಆಸ್ಟ್ರೇಲಿಯಾ ವಿರುದ್ಧ ಗೆದ್ದು ಬೀಗಿದ ಇಂಗ್ಲೆಂಡ್
England vs Australia: ಮೊದಲ ಇನಿಂಗ್ಸ್ನ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಶುರು ಮಾಡಿದ ಆಸ್ಟ್ರೇಲಿಯಾ ತಂಡವು ಈ ಬಾರಿ ಕೂಡ ಆರಂಭಿಕ ಆಘಾತಕ್ಕೆ ಒಳಗಾಯಿತು.
Ashes 2023: ಲೀಡ್ಸ್ನ ಹೆಡಿಂಗ್ಲಿ ಮೈದಾನದಲ್ಲಿ ನಡೆದ ಆ್ಯಶಸ್ ಸರಣಿಯ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ (England) ತಂಡವು ಜಯಭೇರಿ ಬಾರಿಸಿದೆ. ಆಸ್ಟ್ರೇಲಿಯಾ (Australia) ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಬೆನ್ ಸ್ಟೋಕ್ಸ್ ಫೀಲ್ಡಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕರಾದ ಡೇವಿಡ್ ವಾರ್ನರ್ (4) ಹಾಗೂ ಉಸ್ಮಾನ್ ಖ್ವಾಜಾ (13) ಬೇಗನೆ ನಿರ್ಗಮಿಸಿದರೆ, ಆ ಬಳಿಕ ಬಂದ ಲ್ಯಾಬುಶೇನ್ (21) ಹಾಗೂ ಸ್ಟೀವ್ ಸ್ಮಿತ್ (22) ಕ್ರೀಸ್ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಇದರ ನಡುವೆ ಟ್ರಾವಿಡ್ ಹೆಡ್ 39 ರನ್ಗಳ ಕಾಣಿಕೆ ನೀಡಿದರು.
ಒಂದು ಹಂತದಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದ ಇಂಗ್ಲೆಂಡ್ಗೆ ಮಿಚೆಲ್ ಮಾರ್ಷ್ ಮಾರಕವಾಗಿ ಪರಿಣಮಿಸಿದರು. ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಮಾರ್ಷ್ 118 ಎಸೆತಗಳಲ್ಲಿ 118 ರನ್ ಬಾರಿಸಿ ತಂಡದ ಮೊತ್ತವನ್ನು 200 ರ ಗಡಿದಾಟಿಸಿದರು. ಆದರೆ ಮಾರ್ಷ್ ಔಟಾಗುತ್ತಿದ್ದಂತೆ ಮತ್ತೆ ಮೇಲುಗೈ ಸಾಧಿಸಿದ ಇಂಗ್ಲೆಂಡ್ ಬೌಲರ್ಗಳು ಆಸ್ಟ್ರೇಲಿಯಾವನ್ನು 263 ರನ್ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾದರು. ಇಂಗ್ಲೆಂಡ್ ಪರ ವೇಗಿ ಮಾರ್ಕ್ ವುಡ್ ಕೇವಲ 34 ರನ್ ನೀಡಿ 5 ವಿಕೆಟ್ ಕಬಳಿಸಿ ಮಿಂಚಿದರು.
ಇದಾದ ಬಳಿಕ ಪ್ರಥಮ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡ ಕೂಡ ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 87 ರನ್ಗಳಿಸುವಷ್ಟರಲ್ಲಿ ಝಾಕ್ ಕ್ರಾಲಿ (33), ಬೆನ್ ಡಕೆಟ್ (2), ಹ್ಯಾರಿ ಬ್ರೂಕ್ (3), ಜೋ ರೂಟ್ (19) ಹಾಗೂ ಜಾನಿ ಬೈರ್‌ಸ್ಟೋವ್ (12) ವಿಕೆಟ್ ಕಳೆದುಕೊಂಡಿತು.
ಈ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ 80 ರನ್ಗಳನ್ನು ಬಾರಿಸಿದರು. ಇದಾಗ್ಯೂ ಪ್ಯಾಟ್ ಕಮಿನ್ಸ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ತಂಡವು 237 ರನ್ಗಳಿಗೆ ಸರ್ವಪತನ ಕಂಡಿತು. ಆಸ್ಟ್ರೇಲಿಯಾ ಪರ ಪ್ಯಾಟ್ ಕಮಿನ್ಸ್ 91 ರನ್ ನೀಡಿ 6 ವಿಕೆಟ್ ಕಬಳಿಸಿದರು.
ಮೊದಲ ಇನಿಂಗ್ಸ್ನ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಶುರು ಮಾಡಿದ ಆಸ್ಟ್ರೇಲಿಯಾ ತಂಡವು ಈ ಬಾರಿ ಕೂಡ ಆರಂಭಿಕ ಆಘಾತಕ್ಕೆ ಒಳಗಾಯಿತು. ಕೇವಲ 94 ರನ್ಗಳಿಸುವಷ್ಟರಲ್ಲಿ ಅಗ್ರ ನಾಲ್ವರು ಬ್ಯಾಟರ್ಗಳನ್ನು ಕಳೆದುಕೊಂಡಿತು. ಈ ಹಂತದಲ್ಲಿ 5ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಟ್ರಾವಿಸ್ ಹೆಡ್ 77 ರನ್ ಚಚ್ಚಿದರು.
ಆದರೆ ಕೆಳ ಕ್ರಮಾಂಕದ ಬ್ಯಾಟರ್ಗಳಿಂದ ನಿರೀಕ್ಷಿತ ಸಾಥ್ ದೊರೆತಿರಲಿಲ್ಲ. ಪರಿಣಾಮ ಆಸ್ಟ್ರೇಲಿಯಾ ತಂಡವು ದ್ವಿತೀಯ ಇನಿಂಗ್ಸ್ ಅನ್ನು ಕೇವಲ 223 ರನ್ಗಳಿಗೆ ಅಂತ್ಯಗೊಳಿಸಿತು. ಇಂಗ್ಲೆಂಡ್ ಪರ ಸ್ಟುವರ್ಟ್ ಬ್ರಾಡ್ ಹಾಗೂ ಕ್ರಿಸ್ ವೋಕ್ಸ್ ತಲಾ 3 ವಿಕೆಟ್ ಪಡೆದು ಮಿಂಚಿದರು.
ಮೊದಲ ಇನಿಂಗ್ಸ್ನ ಹಿನ್ನಡೆಯೊಂದಿಗೆ 251 ರನ್ಗಳ ಟಾರ್ಗೆಟ್ ಪಡೆದ ಇಂಗ್ಲೆಂಡ್ ತಂಡವು ಉತ್ತಮ ಆರಂಭ ಪಡೆಯಿತು. ಝಾಕ್ ಕ್ರಾಲಿ ಹಾಗೂ ಬೆನ್ ಡಕೆಟ್ ಮೊದಲ ವಿಕೆಟ್ಗೆ 42 ರನ್ ಪೇರಿಸಿದರು. ಈ ವೇಳೆ ದಾಳಿಗಿಳಿದ ಮಿಚೆಲ್ ಸ್ಟಾರ್ಕ್, ಡಕೆಟ್ (23) ವಿಕೆಟ್ ಪಡೆದರು. ಇದರ ಬೆನ್ನಲ್ಲೇ ಮೊಯೀನ್ ಅಲಿ (5) ಯನ್ನು ಕ್ಲೀನ್ ಬೌಲ್ಡ್ ಮಾಡಿದರು.
ಆ ಬಳಿಕ ಜೋ ರೂಟ್ (21) ಗೆ ಪ್ಯಾಟ್ ಕಮಿನ್ಸ್ ಪೆವಿಲಿಯನ್ ಹಾದಿ ತೋರಿಸಿದರೆ, ಅಪಕಾರಿಯಾಗಿ ಬ್ಯಾಟ್ ಬೀಸುತ್ತಿದ್ದ ಝಾಕ್ ಕ್ರಾಲಿ (44) ಯನ್ನು ಮಿಚೆಲ್ ಮಾರ್ಷ್ ಔಟ್ ಮಾಡಿದರು. ಇನ್ನು ತಂಡದ ಮೊತ್ತ 161 ಆಗಿದ್ದ ವೇಳೆ ಬೆನ್ ಸ್ಟೋಕ್ಸ್ (13) ಮಿಚೆಲ್ ಸ್ಟಾರ್ಕ್ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದರು. ಇದರ ಬೆನ್ನಲ್ಲೇ ಜಾನಿ ಬೈರ್‌ಸ್ಟೋವ್ (5) ಕೂಡ ಕ್ಲೀನ್ ಬೌಲ್ಡ್ ಆದರು.
171 ರನ್ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಇಂಗ್ಲೆಂಡ್ ತಂಡಕ್ಕೆ ಹ್ಯಾರಿ ಬ್ರೂಕ್ ಆಸರೆಯಾದರು. 67 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಬ್ರೂಕ್ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ಭರವಸೆ ಮೂಡಿಸಿದರು. ಅಲ್ಲದೆ ಕ್ರಿಸ್ ವೋಕ್ಸ್ ಜೊತೆಗೂಡಿ 7ನೇ ವಿಕೆಟ್ಗೆ 59 ರನ್ಗಳ ಜೊತೆಯಾಟವಾಡಿದರು.
ಇನ್ನು ಇಂಗ್ಲೆಂಡ್ಗೆ ಗೆಲ್ಲಲು ಕೇವಲ 21 ರನ್ಗಳ ಅವಶ್ಯಕತೆಯಿದ್ದಾಗ ಭರ್ಜರಿ ಹೊಡೆತಕ್ಕೆ ಮುಂದಾಗಿ ಹ್ಯಾರಿ ಬ್ರೂಕ್ (75) ಕ್ಯಾಚ್ ನೀಡಿ ಔಟಾದರು. ಈ ಹಂತದಲ್ಲಿ ಜೊತೆಗೂಡಿದ ಕ್ರಿಸ್ ವೋಕ್ಸ್ (32) ಹಾಗೂ ಮಾರ್ಕ್ ವುಡ್ (16) 8ನೇ ವಿಕೆಟ್ಗೆ 24 ರನ್ಗಳ ಜೊತೆಯಾಟವಾಡಿದರು. ಈ ಮೂಲಕ ಇಂಗ್ಲೆಂಡ್ ತಂಡಕ್ಕೆ 3 ವಿಕೆಟ್ಗಳ ರೋಚಕ ಜಯ ತಂದುಕೊಟ್ಟರು.
ಇಂಗ್ಲೆಂಡ್ ಸರಣಿ ಆಸೆ ಜೀವಂತ:
5 ಪಂದ್ಯಗಳ ಆ್ಯಶಸ್ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡವು ಜಯ ಸಾಧಿಸಿತ್ತು. ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಪ್ಯಾಟ್ ಕಮಿನ್ಸ್ ಪಡೆದ 2 ವಿಕೆಟ್ಗಳಿಂದ ಗೆದ್ದುಕೊಂಡಿತ್ತು. ಇನ್ನು ಲಾರ್ಡ್ಸ್ ಮೈದಾನದಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ 43 ರನ್ಗಳಿಂದ ಜಯ ಸಾಧಿಸಿತ್ತು. ಒಂದು ವೇಳೆ ಮೂರನೇ ಟೆಸ್ಟ್ನಲ್ಲಿ ಗೆದ್ದಿದ್ರೆ ಸರಣಿ ಆಸ್ಟ್ರೇಲಿಯಾ ಪಾಲಾಗುತ್ತಿತ್ತು. ಆದರೆ ಲೀಡ್ಸ್ ಮೈದಾನದಲ್ಲಿ ಜಯ ಸಾಧಿಸುವ ಮೂಲಕ ಇಂಗ್ಲೆಂಡ್ ತಂಡವು ಸರಣಿಯನ್ನು 2-1 ಅಂತರಕ್ಕೆ ಇಳಿಸಿದ್ದಾರೆ. ಈ ಮೂಲಕ ಸರಣಿ ಗೆಲ್ಲುವ ಆಸೆಯನ್ನು ಜೀವಂತವಿರಿಸಿಕೊಂಡಿದೆ.
ಇಂಗ್ಲೆಂಡ್ ಪ್ಲೇಯಿಂಗ್ 11: ಝಾಕ್ ಕ್ರಾಲಿ , ಬೆನ್ ಡಕೆಟ್ , ಹ್ಯಾರಿ ಬ್ರೂಕ್ , ಜೋ ರೂಟ್ , ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್) , ಬೆನ್ ಸ್ಟೋಕ್ಸ್ (ನಾಯಕ) , ಮೊಯಿನ್ ಅಲಿ , ಕ್ರಿಸ್ ವೋಕ್ಸ್ , ಮಾರ್ಕ್ ವುಡ್ , ಒಲ್ಲಿ ರಾಬಿನ್ಸನ್ , ಸ್ಟುವರ್ಟ್ ಬ್ರಾಡ್.
ಆಸ್ಟ್ರೇಲಿಯಾ ಪ್ಲೇಯಿಂಗ್ 11: ಡೇವಿಡ್ ವಾರ್ನರ್ , ಉಸ್ಮಾನ್ ಖ್ವಾಜಾ, ಮಾರ್ನಸ್ ಲ್ಯಾಬುಶೇನ್, ಸ್ಟೀವ್ ಸ್ಮಿತ್ , ಟ್ರಾವಿಸ್ ಹೆಡ್ , ಮಿಚೆಲ್ ಮಾರ್ಷ್ , ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್) , ಪ್ಯಾಟ್ ಕಮ್ಮಿನ್ಸ್ (ನಾಯಕ) , ಮಿಚೆಲ್ ಸ್ಟಾರ್ಕ್ , ಟಾಡ್ ಮರ್ಫಿ , ಸ್ಕಾಟ್ ಬೋಲ್ಯಾಂಡ್.