ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ (WCL 2024) ಟೂರ್ನಿಯ 8ನೇ ಪಂದ್ಯದಲ್ಲಿ ಇಂಡಿಯಾ ಚಾಂಪಿಯನ್ಸ್ ವಿರುದ್ಧ ಪಾಕಿಸ್ತಾನ್ ಚಾಂಪಿಯನ್ಸ್ ಜಯಭೇರಿ ಬಾರಿಸಿದೆ. ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಡಿಯಾ ಚಾಂಪಿಯನ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿತು.
ಅದರಂತೆ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ಚಾಂಪಿಯನ್ಸ್ ತಂಡಕ್ಕೆ ಕಮ್ರಾನ್ ಅಕ್ಮಲ್ ಹಾಗೂ ಶರ್ಜೀಲ್ ಖಾನ್ ಸ್ಪೋಟಕ ಆರಂಭ ಒದಗಿಸಿದ್ದರು.
ಮೊದಲ ವಿಕೆಟ್ಗೆ 145 ರನ್ ಪೇರಿಸಿದ ಬಳಿಕ 30 ಎಸೆತಗಳಲ್ಲಿ 72 ರನ್ ಬಾರಿಸಿದ ಶರ್ಜೀಲ್ ಖಾನ್ ಔಟಾದರು. ಇದರ ಬೆನ್ನಲ್ಲೇ 40 ಎಸೆತಗಳಲ್ಲಿ 77 ರನ್ ಸಿಡಿಸಿದ ಕಮ್ರಾನ್ ಅಕ್ಮಲ್ ಕೂಡ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ಸೊಹೈಬ್ ಮಕ್ಸೂದ್ ಕೇವಲ 26 ಎಸೆತಗಳಲ್ಲಿ 5 ಸಿಕ್ಸ್ ಹಾಗೂ 2 ಫೋರ್ಗಳೊಂದಿಗೆ 51 ರನ್ ಚಚ್ಚಿದರು. ಈ ಮೂಲಕ ಪಾಕಿಸ್ತಾನ್ ಚಾಂಪಿಯನ್ಸ್ ತಂಡವು 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 243 ರನ್ ಕಲೆಹಾಕಿತು.
244 ರನ್ಗಳ ಕಠಿಣ ಗುರಿ ಬೆನ್ನತ್ತಿದ ಇಂಡಿಯಾ ಚಾಂಪಿಯನ್ಸ್ ತಂಡಕ್ಕೆ ರಾಬಿನ್ ಉತ್ತಪ್ಪ ಹಾಗೂ ಅಂಬಾಟಿ ರಾಯುಡು ಉತ್ತಮ ಆರಂಭ ಒದಗಿಸಿದ್ದರು. ಆದರೆ 12 ಎಸೆತಗಳಲ್ಲಿ 22 ರನ್ ಬಾರಿಸಿದ ಉತ್ತಪ್ಪ ಬಿರುಸಿನ ಆಟಕ್ಕೆ ಮುಂದಾಗಿ ಔಟಾದರು.
ಮತ್ತೊಂದೆಡೆ ರಾಯುಡು 23 ಎಸೆತಗಳಲ್ಲಿ 39 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸುರೇಶ್ ರೈನಾ 52 ರನ್ ಬಾರಿಸಲು 40 ಎಸೆತಗಳನ್ನು ತೆಗೆದುಕೊಂಡಿದ್ದರು.
ಇನ್ನು ಯೂಸುಫ್ ಪಠಾಣ್ ಶೂನ್ಯಕ್ಕೆ ಔಟಾದರೆ, ಯುವರಾಜ್ ಸಿಂಗ್ 14 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಹಾಗೆಯೇ ಇರ್ಫಾನ್ ಪಠಾಣ್ 15 ರನ್ಗಳಿಸಲಷ್ಟೇ ಶಕ್ತರಾದರು. ಅಂತಿಮವಾಗಿ ಇಂಡಿಯಾ ಚಾಂಪಿಯನ್ಸ್ ತಂಡ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 175 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಪಾಕಿಸ್ತಾನ್ ಚಾಂಪಿಯನ್ಸ್ ತಂಡವು 68 ರನ್ಗಳ ಭರ್ಜರಿ ಜಯ ಸಾಧಿಸಿದೆ.
ಇಂಡಿಯಾ ಚಾಂಪಿಯನ್ಸ್ ಪ್ಲೇಯಿಂಗ್ 11: ರಾಬಿನ್ ಉತ್ತಪ್ಪ (ವಿಕೆಟ್ ಕೀಪರ್) , ಅಂಬಾಟಿ ರಾಯುಡು , ಸುರೇಶ್ ರೈನಾ , ಗುರುಕೀರತ್ ಸಿಂಗ್ ಮಾನ್ , ಇರ್ಫಾನ್ ಪಠಾಣ್ , ಯೂಸುಫ್ ಪಠಾಣ್ , ಪವನ್ ನೇಗಿ , ಹರ್ಭಜನ್ ಸಿಂಗ್ (ನಾಯಕ), ಅನುರೀತ್ ಸಿಂಗ್ , ಆರ್ಪಿ ಸಿಂಗ್ , ಧವಲ್ ಕುಲಕರ್ಣಿ. ಯುವರಾಜ್ ಸಿಂಗ್ (ಇಂಪ್ಯಾಕ್ಟ್ ಪ್ಲೇಯರ್).
ಇದನ್ನೂ ಓದಿ: ಟಿ20 ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ನಿವೃತ್ತಿ ಘೋಷಿಸಿದ ಐವರು ಆಟಗಾರರು..!
ಪಾಕಿಸ್ತಾನ್ ಚಾಂಪಿಯನ್ಸ್ ಪ್ಲೇಯಿಂಗ್ 11: ಕಮ್ರಾನ್ ಅಕ್ಮಲ್ (ವಿಕೆಟ್ ಕೀಪರ್) , ಶರ್ಜೀಲ್ ಖಾನ್ , ಸೊಹೈಬ್ ಮಕ್ಸೂದ್ , ಶೋಯೆಬ್ ಮಲಿಕ್ , ಯೂನಿಸ್ ಖಾನ್ (ನಾಯಕ) , ಮಿಸ್ಬಾ-ಉಲ್-ಹಕ್ , ಶಾಹಿದ್ ಅಫ್ರಿದಿ , ವಹಾಬ್ ರಿಯಾಝ್ , ಸೊಹೈಲ್ ತನ್ವೀರ್ , ಅಮರ್ ಯಾಮಿನ್ , ಸೊಹೈಲ್ ಖಾನ್.