WCL 2024: ರಾಬಿನ್ ಉತ್ತಪ್ಪ ಸಿಡಿಲಬ್ಬರ: ಇಂಡಿಯಾ ಚಾಂಪಿಯನ್ಸ್ಗೆ ಜಯ
World Championship of Legends 2024: ಇಂಗ್ಲೆಂಡ್ನಲ್ಲಿ ಮಾಜಿ ಕ್ರಿಕೆಟಿಗರ ನಡುವಣ ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಟೂರ್ನಿ ನಡೆಯುತ್ತಿದೆ. ಈ ಟೂರ್ನಿಯಲ್ಲಿ ಇಂಡಿಯಾ, ಇಂಗ್ಲೆಂಡ್, ಪಾಕಿಸ್ತಾನ್, ಸೌತ್ ಆಫ್ರಿಕಾ, ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ ಸೇರಿದಂತೆ ಒಟ್ಟು 6 ತಂಡಗಳು ಕಣಕ್ಕಿಳಿಯುತ್ತಿದೆ. ಇಲ್ಲಿ ಇಂಡಿಯಾ ಚಾಂಪಿಯನ್ಸ್ ತಂಡವನ್ನು ಯುವರಾಜ್ ಸಿಂಗ್ ಮುನ್ನಡೆಸುತ್ತಿರುವುದು ವಿಶೇಷ.
ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ (WCL 2024) ಟೂರ್ನಿಯ ಮೊದಲ ಪಂದ್ಯದಲ್ಲೇ ಇಂಡಿಯಾ ಚಾಂಪಿಯನ್ಸ್ ಜಯಭೇರಿ ಬಾರಿಸಿದೆ. ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ನಲ್ಲಿ ನಡೆದ ಈ ಪಂದ್ಯದಲ್ಲಿ ಇಂಡಿಯಾ ಚಾಂಪಿಯನ್ಸ್ ಮತ್ತು ಇಂಗ್ಲೆಂಡ್ ಚಾಂಪಿಯನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಟಾಸ್ ಗೆದ್ದ ಇಂಡಿಯಾ ತಂಡದ ನಾಯಕ ಯುವರಾಜ್ ಸಿಂಗ್ ಬೌಲಿಂಗ್ ಆಯ್ದುಕೊಂಡರು.
ಅದರಂತೆ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಚಾಂಪಿಯನ್ಸ್ ಪರ ಇಯಾನ್ ಬೆಲ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. 44 ಎಸೆತಗಳನ್ನು ಎದುರಿಸಿದ ಬೆಲ್ 9 ಫೋರ್ಗಳೊಂದಿಗೆ 59 ರನ್ ಬಾರಿಸಿದರು.
ಇನ್ನು ಅಂತಿಮ ಓವರ್ಗಳ ವೇಳೆ ಅಬ್ಬರಿಸಿದ ಸಮಿತ್ ಪಟೇಲ್ ಕೇವಲ 25 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ 51 ರನ್ ಚಚ್ಚಿದರು. ಈ ಮೂಲಕ ಇಂಗ್ಲೆಂಡ್ ಚಾಂಪಿಯನ್ಸ್ ತಂಡವು 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 165 ರನ್ ಕಲೆಹಾಕಿತು.
166 ರನ್ಗಳ ಟಾರ್ಗೆಟ್:
ಇಂಗ್ಲೆಂಡ್ ಚಾಂಪಿಯನ್ಸ್ ನೀಡಿದ ಸ್ಪರ್ಧಾತ್ಮಕ ಗುರಿಯನ್ನು ಬೆನ್ನತ್ತಿದ ಇಂಡಿಯಾ ಚಾಂಪಿಯನ್ಸ್ ತಂಡಕ್ಕೆ ರಾಬಿನ್ ಉತ್ತಪ್ಪ ಸ್ಪೋಟಕ ಆರಂಭ ಒದಗಿಸಿದರು. ಮೊದಲ ಓವರ್ನಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಉತ್ತಪ್ಪ ಸಿಕ್ಸ್-ಫೋರ್ಗಳ ಸುರಿಮಳೆಗೈದರು.
ಅಲ್ಲದೆ 32 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ 50 ರನ್ ಬಾರಿಸಿ ಔಟಾದರು. ಇನ್ನು ಒಮನ್ ಓಜಾ 25 ರನ್ ಬಾರಿಸಿದರೆ, ಗುರುಕೀರತ್ ಸಿಂಗ್ ಮಾನ್ 33 ರನ್ಗಳ ಕೊಡುಗೆ ನೀಡಿದರು.
ಇನ್ನು ಇರ್ಫಾನ್ ಪಠಾಣ್ 22 ರನ್ಗಳ ಕೊಡುಗೆ ನೀಡಿದರು. ಈ ಮೂಲಕ ಇಂಡಿಯಾ ಚಾಂಪಿಯನ್ಸ್ ತಂಡವು 19 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 166 ರನ್ ಬಾರಿಸುವ ಮೂಲಕ 3 ವಿಕೆಟ್ಗಳ ರೋಚಕ ಜಯ ಸಾಧಿಸಿತು.
ಇಂಗ್ಲೆಂಡ್ ಚಾಂಪಿಯನ್ಸ್ ಪ್ಲೇಯಿಂಗ್ 11: ಇಯಾನ್ ಬೆಲ್ , ಕೆವಿನ್ ಒ ಬ್ರಿಯಾನ್ , ಕೆವಿನ್ ಪೀಟರ್ಸನ್ (ನಾಯಕ) , ಫಿಲ್ ಮಸ್ಟರ್ಡ್ (ವಿಕೆಟ್ ಕೀಪರ್) , ರವಿ ಬೋಪಾರ , ಸಮಿತ್ ಪಟೇಲ್ , ಓವೈಸ್ ಶಾ , ರಿಯಾನ್ ಜೇ ಸೈಡ್ಬಾಟಮ್ , ಅಜ್ಮಲ್ ಶಹಜಾದ್ , ಕ್ರಿಸ್ ಸ್ಕೋಫೀಲ್ಡ್ , ಡ್ಯಾರೆನ್ ಮ್ಯಾಡಿ , ಸ್ಟುವರ್ಟ್ ಮೀಕರ್.
ಇದನ್ನೂ ಓದಿ: ಟಿ20 ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ನಿವೃತ್ತಿ ಘೋಷಿಸಿದ ಐವರು ಆಟಗಾರರು..!
ಇಂಡಿಯಾ ಚಾಂಪಿಯನ್ಸ್ ಪ್ಲೇಯಿಂಗ್ 11: ರಾಬಿನ್ ಉತ್ತಪ್ಪ , ನಮನ್ ಓಜಾ (ವಿಕೆಟ್ ಕೀಪರ್) , ಸುರೇಶ್ ರೈನಾ , ಯುವರಾಜ್ ಸಿಂಗ್ (ನಾಯಕ) , ಯೂಸುಫ್ ಪಠಾಣ್ , ಇರ್ಫಾನ್ ಪಠಾಣ್ , ಹರ್ಭಜನ್ ಸಿಂಗ್ , ಧವಲ್ ಕುಲಕರ್ಣಿ , ರಾಹುಲ್ ಶುಕ್ಲಾ , ಆರ್ಪಿ ಸಿಂಗ್ , ವಿನಯ್ ಕುಮಾರ್ , ಗುರುಕೀರತ್ ಸಿಂಗ್ ಮಾನ್.