ಸತತ ನಾಲ್ಕನೇ ಬಾರಿ ಟಾಸ್ ಗೆದ್ದ ಶ್ರೇಯಸ್ ಅಯ್ಯರ್; ತಂಡದಲ್ಲಿ 2 ಬದಲಾವಣೆ
ನ್ಯೂಜಿಲೆಂಡ್ ವಿರುದ್ಧದ 4ನೇ ಟಿ20 ಪಂದ್ಯಕ್ಕೆ ಆಕ್ಲೆಂಡ್ ಸಜ್ಜು. ಸರಣಿ 3-0 ಅಂತರದಲ್ಲಿ ಗೆದ್ದಿರುವ ಭಾರತ ಕ್ಲೀನ್ ಸ್ವೀಪ್ ಗುರಿ ಹೊಂದಿದೆ. ಟಾಸ್ ಗೆದ್ದ ನಾಯಕ ಅಯ್ಯರ್ ಬೌಲಿಂಗ್ ಆಯ್ದರು. ಇಶಾನ್ ಕಿಶನ್ ಹಾಗೂ ಮಯಾಂಕ್ ಯಾದವ್ ತಂಡ ಸೇರಿದ್ದು, ವೈಭವ್ ಸೂರ್ಯವಂಶಿ ಮತ್ತು ಭುವನೇಶ್ವರ್ ಕುಮಾರ್ಗೆ ವಿಶ್ರಾಂತಿ ನೀಡಲಾಗಿದೆ. ಭಾರತ ಗೆಲುವಿನ ಓಟ ಮುಂದುವರಿಸಲು ಸಿದ್ಧವಾಗಿದೆ.

ನ್ಯೂಜಿಲೆಂಡ್ ಮತ್ತು ಭಾರತ ನಡುವಿನ ನಾಲ್ಕನೇ ಟಿ20 ಪಂದ್ಯಕ್ಕೆ ಆಕ್ಲೆಂಡ್‌ನ ಈಡನ್ ಪಾರ್ಕ್ ಮೈದಾನ ಸಜ್ಜಾಗಿದೆ. ಈಗಾಗಲೇ ಮೊದಲ ಮೂರು ಪಂದ್ಯಗಳನ್ನು ಗೆದ್ದಿರುವ ಭಾರತ ತಂಡ ಸರಣಿಯನ್ನು 3-0 ಅಂತರದಲ್ಲಿ ತನ್ನದಾಗಿಸಿಕೊಂಡಿದೆ. ಇದೀಗ ಕ್ಲೀನ್ ಸ್ವೀಪ್ ಮಾಡುವ ಗುರಿಯೊಂದಿಗೆ ಟೀಂ ಇಂಡಿಯಾ ಕಣಕ್ಕಿಳಿಯಲಿದೆ. ಇತ್ತ ಆತಿಥೇಯ ನ್ಯೂಜಿಲೆಂಡ್ ತಂಡ ಉಳಿದ ಎರಡು ಪಂದ್ಯಗಳನ್ನು ಗೆದ್ದು ಸತತ ಸೋಲುಗಳಿಂದ ಪಾರಾಗಲು ಪ್ರಯತ್ನಿಸಲಿದೆ.
ಸತತ ನಾಲ್ಕನೇ ಟಾಸ್ ಗೆಲುವು
ಈ ಪಂದ್ಯದ ಟಾಸ್ ಕೂಡ ನಡೆದಿದ್ದು ಭಾರತ ತಂಡದ ನಾಯಕ ಶ್ರೇಯಸ್ ಅಯ್ಯರ್ ಮತ್ತೊಮ್ಮೆ ಟಾಸ್ ಗೆದ್ದಿದ್ದಾರೆ. ಇದು ಈ ಸರಣಿಯಲ್ಲಿ ಅಯ್ಯರ್ ಅವರ ಸತತ ನಾಲ್ಕನೇ ಟಾಸ್ ಗೆಲುವಾಗಿದೆ. ನಿರೀಕ್ಷೆಯಂತೆಯೇ ಟಾಸ್ ಗೆದ್ದ ಅಯ್ಯರ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ನ್ಯೂಜಿಲೆಂಡ್ ತಂಡ ಮೊದಲು ಬ್ಯಾಟಿಂಗ್ ಮಾಡಲಿದೆ.
ಟಾಸ್ ಬಳಿಕ ಮಾತನಾಡಿದ ಶ್ರೇಯಸ್ ಅಯ್ಯರ್ ಮಾತನಾಡಿ, ಮೊದಲ ಎಸೆತದಿಂದಲೇ ನಾವು ತೋರಿದ ಸಕಾರಾತ್ಮಕ ಮನೋಭಾವ ಮತ್ತು ಅದನ್ನು ಮೈದಾನದಲ್ಲಿ ಕಾರ್ಯರೂಪಕ್ಕೆ ತಂದ ರೀತಿ ಅದ್ಭುತವಾಗಿತ್ತು. ಎಲ್ಲೆಡೆ ನಮಗೆ ಗೆಲುವಿನ ಗಾಳಿ ಬೆಂಬಲವಾಗಿ ಬೀಸುತ್ತಿದೆ. ಆದರೆ ಹವಾಮಾನ ದಿನದಿಂದ ದಿನಕ್ಕೆ ತಂಪಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಎದುರಾಳಿಗಳ ವಿರುದ್ಧ ಯಾವುದೇ ದಯೆ ತೋರದೆ ಕಠಿಣವಾಗಿ ಆಡಬೇಕು ಎಂದು ಹೇಳಿದ್ದಾರೆ.
ಪ್ಲೇಯಿಂಗ್ 11 ನಲ್ಲಿ ಎರಡು ಬದಲಾವಣೆ
ಇನ್ನು ಈ ಪಂದ್ಯಕ್ಕೆ ಟೀಂ ಇಂಡಿಯಾದ ಪ್ಲೇಯಿಂಗ್ 11 ನಲ್ಲಿ ಎರಡು ಬದಲಾವಣೆಗಳನ್ನು ಮಾಡಲಾಗಿದೆ. ಇಶಾನ್ ಕಿಶನ್ ಇಂಜುರಿಯಿಂದಾಗಿ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಪಡೆದಿದ್ದ ವೈಭವ್ ಸೂರ್ಯವಂಶಿಯನ್ನು ಈ ಪಂದ್ಯದಿಂದ ಕೈಬಿಡಲಾಗಿದೆ. ಇದಕ್ಕೆ ಕಾರಣ ಇಂಜುರಿಯಿಂದ ಚೇತರಿಸಿಕೊಂಡಿರುವ ಇಶಾನ್ ಕಿಶನ್ ತಂಡವನ್ನು ಸೇರಿಕೊಂಡಿರುವುದು. ಕಳೆದ ಪಂದ್ಯದಲ್ಲಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ವೈಭವ್ರನ್ನು ಪ್ಲೇಯಿಂಗ್ 11 ನಿಂದ ಹೊರಗಿಟ್ಟಿದ್ದು, ಅಭಿಮಾನಿಗಳಲ್ಲಿ ಅಸಮಾಧಾನ ಮೂಡಿಸಿದೆ. ಹಾಗೆಯೇ ಅನುಭವಿ ಭುವನೇಶ್ವರ್ ಕುಮಾರ್ ಅವರ ಬದಲಿಗೆ ಮಯಾಂಕ್ ಯಾದವ್ ಅವರನ್ನು ಈ ಪಂದ್ಯದಲ್ಲಿ ಆಡಿಸಲಾಗುತ್ತಿದೆ.
#TeamIndia opt to bowl first at Eden Park.
Ishan Kishan and Mayank Yadav back in the XI.
Updates ▶️ https://t.co/fx264c9iLe
#NZvIND https://t.co/9PxADM0gvq
— BCCI (@BCCI) October 30, 2026
ಉಭಯ ತಂಡಗಳ ಪ್ಲೇಯಿಂಗ್ 11
ಭಾರತ ತಂಡ: ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವೈಭವ್ ಸೂರ್ಯವಂಶಿ ಬದಲಿಗೆ), ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ನಮನ್ ಧೀರ್, ಅಕ್ಷರ್ ಪಟೇಲ್, ನಿತೀಶ್ ಕುಮಾರ್ ರೆಡ್ಡಿ, ಅರ್ಷದೀಪ್ ಸಿಂಗ್, ಪ್ರಿನ್ಸ್ ಯಾದವ್ ಮತ್ತು ಮಯಾಂಕ್ ಯಾದವ್ (ಭುವನೇಶ್ವರ್ ಕುಮಾರ್ ಬದಲಿಗೆ).
ನ್ಯೂಜಿಲೆಂಡ್ ತಂಡ: ಟಿಮ್ ಸೈಫರ್ಟ್ (ವಿಕೆಟ್ ಕೀಪರ್), ಫಿನ್ ಅಲೆನ್, ಡೇರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಬೆವೋನ್ ಜಾಕೋಬ್ಸ್, ಮೈಕೆಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್ (ನಾಯಕ), ನಾಥನ್ ಸ್ಮಿತ್ (ಕೈಲ್ ಜೇಮಿಸನ್ ಬದಲಿಗೆ), ಜಾಕೋಬ್ ಡಫಿ, ಆಡಮ್ ಮಿಲ್ನೆ ಮತ್ತು ಮ್ಯಾಥ್ಯೂ ಫಿಶರ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:23 pm, Fri, 30 October 26




