ಶ್ರೀಲಂಕಾ ವಿರುದ್ಧದ (India Vs Sri Lanka) ಮೂರು ಪಂದ್ಯಗಳ ಏಕದಿನ ಸರಣಿ ಆರಂಭಕ್ಕೆ ಇನ್ನೊಂದೆ ದಿನ ಬಾಕಿ ಉಳಿದಿದೆ. ಆದರೆ ಮೊದಲ ಏಕದಿನ ಪಂದ್ಯಕ್ಕೂ ಮುನ್ನವೇ ಟೀಂ ಇಂಡಿಯಾಕ್ಕೆ (Team India) ಬಿಗ್ ಶಾಕ್ ಎದುರಾಗಿದೆ. ಇಂಜುರಿಯಿಂದಾಗಿ ಬಹಳ ದಿನಗಳಿಂದ ಟೀಂ ಇಂಡಿಯಾದಿಂದ ಹೊರಗುಳಿದಿದ್ದ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಅವರನ್ನು ಲಂಕಾ ವಿರುದ್ಧದ ಏಕದಿನ ಸರಣಿಗೆ ತಂಡದಲ್ಲಿ ಆಯ್ಕೆ ಮಾಡಲಾಗಿತ್ತು. ಆದರೆ ಇದೀಗ ಕೇಳಿಬಂದಿರುವ ಸುದ್ದಿ ಪ್ರಕಾರ ಜಸ್ಪ್ರೀತ್ ಬುಮ್ರಾ ಅವರನ್ನು ಏಕದಿನ ಸರಣಿಯಿಂದ ಕೈಬಿಡಲಾಗಿದೆ. ವಾಸ್ತವವಾಗಿ ಜನವರಿ 3 ರಂದು ಜಸ್ಪ್ರೀತ್ ಬುಮ್ರಾ ಅವರನ್ನು ಏಕದಿನ ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಆದರೆ ಇದೀಗ ಈ ನಿರ್ಧಾರ ತೆಗೆದುಕೊಂಡ ಕೇವಲ 6 ದಿನಗಳಲ್ಲಿ ಬುಮ್ರಾ ಅವರನ್ನು ಮತ್ತೆ ತಂಡದಿಂದ ಕೈಬಿಡಲಾಗಿದೆ.
ವರದಿಯ ಪ್ರಕಾರ, ಫಿಟ್‌ನೆಸ್ ಕಾಳಜಿಯಿಂದಾಗಿ ಬುಮ್ರಾ ಅವರನ್ನು ಏಕದಿನ ಸರಣಿಯಿಂದ ಕೈಬಿಡಲಾಗಿದೆ ಎಂದು ತಿಳಿದುಬಂದಿದೆ. ಶ್ರೀಲಂಕಾ ಮತ್ತು ಭಾರತ ನಡುವಿನ ಮೊದಲ ಏಕದಿನ ಪಂದ್ಯ ಗುವಾಹಟಿಯಲ್ಲಿ ನಡೆಯಲಿದ್ದು, ಬುಮ್ರಾ ತಂಡದೊಂದಿಗೆ ಅಲ್ಲಿಗೆ ಪ್ರಯಾಣ ಬೆಳೆಸಿಲ್ಲ ಎಂದು ವರದಿಯಾಗಿದೆ.
IND vs SL: 152, 140 ರನ್.. ಗುವಾಹಟಿಯಲ್ಲಿ ಕಿಂಗ್ ಕೊಹ್ಲಿ- ಹಿಟ್ಮ್ಯಾನ್ ರೋಹಿತ್ನದ್ದೇ ದರ್ಬಾರು..!
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕೊನೆಯ ಬಾರಿಗೆ ಆಸ್ಟ್ರೇಲಿಯಾ ವಿರುದ್ಧದ ಟಿ20 ಪಂದ್ಯವನ್ನಾಡಿದ್ದ ಬುಮ್ರಾ ಅಂದಿನಿಂದ ಟೀಂ ಇಂಡಿಯಾ ಪರ ಕಣಕ್ಕಿಳಿದಿಲ್ಲ. ಬಳಿಕ ಏಷ್ಯಾಕಪ್ ಮತ್ತು ಟಿ20 ವಿಶ್ವಕಪ್ ಸೇರಿದಂತೆ ಹಲವು ಬಿಗ್ ಈವೆಂಟ್ಗಳಲ್ಲಿ ಬುಮ್ರಾ ಅಲಭ್ಯತೆಯ ಹೊರೆಯನ್ನು ಭಾರತ ಹೊರಬೇಕಾಯಿತು. ಆದರೆ ಇಂಜುರಿಯಿಂದ ಚೇತರಿಸಿಕೊಂಡಿದ್ದ ಬುಮ್ರಾ ಅವರನ್ನು ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಟೀಂ ಇಂಡಿಯಾ ಪರ ಕಣಕ್ಕಿಳಿಸುವ ಯೋಜನೆಯನ್ನು ಬಿಸಿಸಿಐ ಹಾಕಿಕೊಂಡಿತ್ತು. ಆದರೆ ಈಗ ಬಿಸಿಸಿಐ ತೆಗೆದುಕೊಂಡಿರುವ ನಿರ್ಧಾರವನ್ನು ಗಮನಿಸಿದರೆ, ಬುಮ್ರಾ ಇನ್ನೂ ಪೂರ್ಣವಾಗಿ ಫಿಟ್ ಆಗಿಲ್ಲ ಎಂದು ತೋರುತ್ತದೆ.
ಸೆಪ್ಟೆಂಬರ್ 2022 ರಿಂದ ಕ್ರಿಕೆಟ್ ಮೈದಾನದಿಂದ ದೂರವಿರುವ ಜಸ್ಪ್ರೀತ್ ಬುಮ್ರಾ, ಬೆನ್ನುನೋವಿನ ಕಾರಣದಿಂದಾಗಿ ವಿಶ್ವಕಪ್ ಕೂಡ ಆಡಿರಲಿಲ್ಲ. ಇದರ ನಂತರ, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ತಮ್ಮ ಫಿಟ್ನೆಸ್ ಮೇಲೆ ಕೆಲಸ ಮಾಡಿದ ಬುಮ್ರಾ ತಂಡಕ್ಕೆ ಎಂಟ್ರಿಕೊಡುವ ಇರಾದೆಯಲ್ಲಿದ್ದರು. ಇದಕ್ಕೆ ಪೂರಕವೆಂಬಂತೆ ಎನ್ಸಿಎ ಕೂಡ ಬುಮ್ರಾ ಫಿಟ್ ಎಂದು ಸರ್ಟಿಫಿಕೇಟ್ ನೀಡಿತ್ತು. ಇದಾದ ಬಳಿಕವೇ ಟೀಂ ಇಂಡಿಯಾದ ಆಯ್ಕೆಗಾರರು ಅವರನ್ನು ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಆಯ್ಕೆ ಮಾಡಿದ್ದರು. ಆದರೆ ಈಗ ಇದ್ದಕ್ಕಿದ್ದಂತೆ ಬುಮ್ರಾಗೆ ಮತ್ತಷ್ಟು ವಿಶ್ರಾಂತಿ ನೀಡುವ ಸಲುವಾಗಿ ಅವರನ್ನು ತಂಡದಿಂದ ಕೈಬಿಡುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ, ಜಸ್ಪ್ರೀತ್ ಬುಮ್ರಾ ನ್ಯೂಜಿಲೆಂಡ್ ವಿರುದ್ಧದ ಏಕದಿನ ಮತ್ತು ಟಿ 20 ಸರಣಿಯಲ್ಲಿ ತಂಡದ ಪರ ಕಣಕ್ಕಿಳಿಯಲಿದ್ದಾರೆ ಎಂದು ತಿಳಿದುಬಂದಿದೆ. ಜನವರಿ 18ರಿಂದ ಈ ಸರಣಿ ಆರಂಭವಾಗಲಿದ್ದು, ಇದಾದ ಬಳಿಕ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಲಿದೆ. ಹೀಗಾಗಿ ಈ ಸರಣಿಯಲ್ಲಿ ಜಸ್ಪ್ರೀತ್ ಬುಮ್ರಾ ಅವರ ಫಿಟ್ನೆಸ್ ಟೀಂ ಇಂಡಿಯಾಕ್ಕೆ ಬಹಳ ಮುಖ್ಯವಾಗಿದೆ. ಏಕೆಂದರೆ ಈ ವರ್ಷ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಆಡುವುದರ ಜೊತೆಗೆ ಟೀಂ ಇಂಡಿಯಾ ವಿಶ್ವಕಪ್ ಕೂಡ ಆಡಬೇಕಿದೆ. ಮತ್ತೊಂದೆಡೆ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ತಂಡವು ಫೈನಲ್ ತಲುಪಿದರೆ, ಅಲ್ಲಿಯೂ ಬುಮ್ರಾ ಪಾತ್ರ ಪ್ರಮುಖವಾಗಿರುತ್ತದೆ.
ಭಾರತ ಏಕದಿನ ತಂಡ: ರೋಹಿತ್ ಶರ್ಮಾ, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್ ಮತ್ತು ಅರ್ಷದೀಪ್ ಸಿಂಗ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:56 pm, Mon, 9 January 23