ಟಿ20 ಸರಣಿ ಮುಗಿದ ಬಳಿಕ ಇದೀಗ ಎಲ್ಲರ ಗಮನ ಭಾರತ ಹಾಗೂ ಶ್ರೀಲಂಕಾ ನಡುವೆ ನಡೆಯಲಿರುವ ಏಕದಿನ ಸರಣಿಯತ್ತ ನೆಟ್ಟಿದೆ. ಈ ಸರಣಿ ಜನವರಿ 10 ರಿಂದ ಆರಂಭವಾಗಲಿದ್ದು, ಮೊದಲ ಪಂದ್ಯ ಗುವಾಹಟಿಯ ಬರ್ಸಾಪರಾ ಮೈದಾನದಲ್ಲಿ ನಡೆಯಲಿದೆ. ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕೂಡ ಈ ಸರಣಿಯೊಂದಿಗೆ ತಂಡಕ್ಕೆ ಮರಳಲಿದ್ದಾರೆ. ಇದರೊಂದಿಗೆ ಇಬ್ಬರೂ ಒಟ್ಟಾಗಿ 4 ವರ್ಷಗಳ ಹಿಂದಿನ ದಾಖಲೆಯನ್ನು ಮತ್ತೆ ಪುನಾರವರ್ತಿಸುವ ಇರಾದೆಯೊಂದಿಗೆ ಕಣಕ್ಕಿಳಿಯಲಿದ್ದಾರೆ.
ಗುವಾಹಟಿಯ ಈ ಮೈದಾನದಲ್ಲಿ ಇಲ್ಲಿಯವರೆಗೆ ಕೇವಲ ಒಂದು ಏಕದಿನ ಪಂದ್ಯ ಮಾತ್ರ ನಡೆದಿದೆ. 2018ರಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ವೆಸ್ಟ್ ಇಂಡೀಸ್ ತಂಡವನ್ನು 8 ವಿಕೆಟ್ಗಳಿಂದ ಸೋಲಿಸಿತ್ತು. ಆ ಪಂದ್ಯದಲ್ಲಿ ಟೀಂ ಇಂಡಿಯಾ ಪರ ರೋಹಿತ್ ಹಾಗೂ ಕೊಹ್ಲಿ ಭರ್ಜರಿ ಶತಕ ಸಿಡಿಸಿದ್ದರು.
ಈ ಪಂದ್ಯದಲ್ಲಿ ಆರಂಭಿಕರಾಗಿ ಬಂದ ರೋಹಿತ್ ಶರ್ಮಾ ಕೇವಲ 117 ಎಸೆತಗಳಲ್ಲಿ 15 ಬೌಂಡರಿ ಮತ್ತು 8 ಸಿಕ್ಸರ್‌ಗಳ ನೆರವಿನಿಂದ 152 ರನ್ ಗಳಿಸಿದರು. ಕೊನೆಯವರೆಗೂ ಅಜೇಯರಾಗಿ ಉಳಿದು ಭಾರತವನ್ನು ಗೆಲುವಿನ ದಡ ಸೇರಿಸಿದ್ದರು
ಅದೇ ಸಮಯದಲ್ಲಿ, ತಂಡದ ನಾಯಕರಾಗಿದ್ದ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಕೇವಲ 107 ಎಸೆತಗಳಲ್ಲಿ 21 ಬೌಂಡರಿ ಮತ್ತು 2 ಸಿಕ್ಸರ್‌ಗಳೊಂದಿಗೆ 140 ರನ್ ಚಚ್ಚಿದರು. ಇದು ಕೊಹ್ಲಿ ಅವರ ಏಕದಿನ ವೃತ್ತಿ ಬದುಕಿನ 36ನೇ ಶತಕವಾಗಿತ್ತು. ಬಳಿಕ ಈ ಸ್ಫೋಟಕ ಶತಕ ಸಿಡಿಸಿದ್ದ ಕೊಹ್ಲಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಕೂಡ ಲಭಿಸಿತ್ತು.
ಹೀಗಾಗಿ ಜ. 10ರಂದು ನಡೆಯುವ ಪಂದ್ಯದಲ್ಲೂ ಈ ಇಬ್ಬರು ಬ್ಯಾಟ್ಸ್‌ಮನ್‌ಗಳಿಂದ ಅಭಿಮಾನಿಗಳು ಹಳೆಯ ಆಟವನ್ನು ಕಾಣಲು ಕಾತುರದಿಂದ ಕಾಯುತ್ತಿದ್ದಾರೆ. ಅಲ್ಲದೆ ರೋಹಿತ್ ಶರ್ಮಾ ಸುಮಾರು 3 ವರ್ಷಗಳಿಂದ ಏಕದಿನದಲ್ಲಿ ಶತಕ ಸಿಡಿಸಿಲ್ಲ. ಕೊನೆಯದಾಗಿ 19 ಜನವರಿ 2020 ರಂದು ಶತಕ ಸಿಡಿಸಿದ್ದ ರೋಹಿತ್ ಬ್ಯಾಟ್ ಆ ಬಳಿಕ ಆಗಸ ನೋಡಿಲ್ಲ.
ಮತ್ತೊಂದೆಡೆ, ವಿರಾಟ್ ಕೊಹ್ಲಿ 3 ವರ್ಷಗಳ ನಂತರ ಕಳೆದ ತಿಂಗಳಷ್ಟೇ ಬಾಂಗ್ಲಾದೇಶ ವಿರುದ್ಧ ಏಕದಿನ ಶತಕ ಗಳಿಸಿದ್ದರು. ಆದಾಗ್ಯೂ, ನವೆಂಬರ್ 2019 ರಿಂದ, ಅವರು ಇನ್ನೂ ಭಾರತದಲ್ಲಿ ಒಂದೇ ಒಂದು ಶತಕವನ್ನು ಗಳಿಸಿಲ್ಲ. ಹೀಗಾಗಿ ಆ ಕೊರತೆಯನ್ನು ಕೂಡ ಕೊಹ್ಲಿ ಈ ಸರಣಿಯಲ್ಲಿ ಕೊನೆಗೊಳಿಸುವ ತವಕದಲ್ಲಿದ್ದಾರೆ.
Published On - 11:50 am, Mon, 9 January 23