- Kannada News Photo gallery Cricket photos New Universe Boss: Chris Gayle vs Suryakumar Yadav Batting Stats Kannada news zp
‘New Universe Boss’: ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ಗೆ ಸೂರ್ಯನ ಸವಾಲು..!
Chris Gayle vs Suryakumar Yadav Batting Stats: ಟಿ20 ಕ್ರಿಕೆಟ್ನ ಸ್ಪೋಟಕ ಬ್ಯಾಟ್ಸ್ಮನ್ ಕ್ರಿಸ್ ಗೇಲ್ಗಿಂತ ವೇಗವಾಗಿ ಸೂರ್ಯಕುಮಾರ್ ಬ್ಯಾಟ್ ಝಳಪಳಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿಯೇ ಪ್ರಸ್ತುತ ಅಂಕಿ ಅಂಶಗಳು.
Updated on: Jan 08, 2023 | 9:23 PM

ಟಿ20 ಕ್ರಿಕೆಟ್ನ ಯೂನಿವರ್ಸ್ ಬಾಸ್ ಎಂದೇ ಖ್ಯಾತರಾಗಿದ್ದ ಕ್ರಿಸ್ ಗೇಲ್ ಅವರೇ ನಿಬ್ಬೆರಾಗುವಂತೆ ಇದೀಗ ಸೂರ್ಯಕುಮಾರ್ ಯಾದವ್ ಬ್ಯಾಟ್ ಬೀಸುತ್ತಿದ್ದಾರೆ. ಅದು ಕೂಡ ಆರ್ಭಟ ಹಾಗೂ 360 ಡಿಗ್ರಿಯಲ್ಲಿ ಎಂಬುದು ವಿಶೇಷ. ಈ ಭರ್ಜರಿ ಬ್ಯಾಟಿಂಗ್ನೊಂದಿಗೆ ಇದೀಗ ಟಿ20 ಕ್ರಿಕೆಟ್ನಲ್ಲಿ ಸೂರ್ಯಕುಮಾರ್ ಯಾದವ್ ಹೊಸ ಯೂನಿವರ್ಸ್ ಬಾಸ್ ಎನಿಸಿಕೊಳ್ಳುವತ್ತ ಹೆಜ್ಜೆಯನ್ನಿಟ್ಟಿದ್ದಾರೆ.

ಏಕೆಂದರೆ ಟಿ20 ಕ್ರಿಕೆಟ್ನ ಸ್ಪೋಟಕ ಬ್ಯಾಟ್ಸ್ಮನ್ ಕ್ರಿಸ್ ಗೇಲ್ಗಿಂತ ವೇಗವಾಗಿ ಸೂರ್ಯಕುಮಾರ್ ಬ್ಯಾಟ್ ಝಳಪಳಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿಯೇ ಪ್ರಸ್ತುತ ಅಂಕಿ ಅಂಶಗಳು.

ಕ್ರಿಸ್ ಗೇಲ್ ವೆಸ್ಟ್ ಇಂಡೀಸ್ ಪರ 75 ಇನಿಂಗ್ಸ್ ಆಡಿದ್ದಾರೆ. ಈ ವೇಳೆ1899 ರನ್ಗಳನ್ನು ಕಲೆಹಾಕಿದ್ದಾರೆ. ವಿಶೇಷ ಎಂದರೆ ಈ ಅವಧಿಯಲ್ಲಿ ಗೇಲ್ ಬ್ಯಾಟ್ನಿಂದ 14 ಅರ್ಧಶತಕಗಳು ಹಾಗೂ 2 ಶತಕಗಳು ಮೂಡಿಬಂದಿವೆ. ಇನ್ನು 124 ಸಿಕ್ಸ್ ಹಾಗೂ 158 ಫೋರ್ಗಳನ್ನು ಕೂಡ ಚಚ್ಚಿದ್ದಾರೆ.

ಆದರೆ ಕಳೆದೆರಡು ವರ್ಷದಿಂದ ಟಿ20 ಕ್ರಿಕೆಟ್ನಲ್ಲಿ ಬ್ಯಾಟ್ ಬೀಸುತ್ತಿರುವ ಸೂರ್ಯಕುಮಾರ್ ಯಾದವ್ ಅವರ ಆರ್ಭಟ ಗೇಲ್ಗಿಂತ ಜೋರಾಗಿದೆ. ಏಕೆಂದರೆ ಟೀಮ್ ಇಂಡಿಯಾ 43 ಟಿ20 ಇನಿಂಗ್ಸ್ ಆಡಿರುವ ಸೂರ್ಯ ಕಲೆಹಾಕಿರುವುದು 1578 ರನ್ಗಳು. ಈ ವೇಳೆ 3 ಭರ್ಜರಿ ಶತಕಗಳನ್ನು ಬಾರಿಸಿದರೆ, 13 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಹಾಗೆಯೇ 142 ಫೋರ್ಗಳು ಹಾಗೂ 92 ಸಿಕ್ಸ್ಗಳು ಸೂರ್ಯನ ಬ್ಯಾಟ್ನಿಂದ ಸಿಡಿದಿದೆ.

ಅಂದರೆ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ಗಿಂತ ಶತಕದ ವಿಷಯದಲ್ಲಿ ಸೂರ್ಯಕುಮಾರ್ ಯಾದವ್ ಮುಂದಿದ್ದಾರೆ. ಇನ್ನು ಅರ್ಧಶತಕಗಳ ಪಟ್ಟಿಯಲ್ಲಿ ಸೂರ್ಯ ಕೇವಲ 1 ಹಾಫ್ ಸೆಂಚುರಿಯಿಂದ ಹಿಂದೆ ಉಳಿದಿದ್ದಾರೆ. ಅಂದರೆ 75 ಇನಿಂಗ್ಸ್ ಆಡಿರುವ ಕ್ರಿಸ್ ಗೇಲ್ ಅವರ ಬ್ಯಾಟಿಂಗ್ ಅಂಕಿ ಅಂಶಗಳಿಗೆ ಕೇವಲ 43 ಇನಿಂಗ್ಸ್ ಮೂಲಕ ಸೂರ್ಯಕುಮಾರ್ ಯಾದವ್ ಸರಿಸಮಾನರಾಗಿ ನಿಂತಿದ್ದಾರೆ.

ಹೀಗಾಗಿಯೇ ಸೂರ್ಯಕುಮಾರ್ ಯಾದವ್ ಅವರನ್ನು ಹೊಸ ಯೂನಿವರ್ಸ್ ಬಾಸ್ ಎಂದು ಹಾಡಿಹೊಗಳಲಾಗುತ್ತಿದೆ. ಮತ್ತೊಂದೆಡೆ ಎಬಿ ಡಿವಿಲಿಯರ್ಸ್ರಂತೆ 360 ಡಿಗ್ರಿಯಲ್ಲೂ ಬ್ಯಾಟ್ ಬೀಸುವ ಮೂಲಕ ಹೊಸ 360 ಡಿಗ್ರಿ ಎನ್ನುವ ಟ್ಯಾಗ್ ಲೈನ್ ಕೂಡ ಸೂರ್ಯ ಹೊಂದಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಸೂರ್ಯಕುಮಾರ್ ಯಾದವ್ "ಯೂನಿವರ್ಸ್ 360 ಡಿಗ್ರಿ"ಯಾಗಿ ಗುರುತಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.
