‘ಅರೇ ವೀರು.. ಈಗಾಗ್ಲೆ 2 ಸೊನ್ನೆ ಸುತ್ತಿದ್ದೀನಿ ಮಾರಾಯ’; ಅಂಪೈರ್ ನಿರ್ಧಾರಕ್ಕೆ ರೋಹಿತ್ ರಿಯಾಕ್ಷನ್ ವಿಡಿಯೋ ವೈರಲ್

|

Updated on: Jan 18, 2024 | 3:03 PM

IND vs AFG, Rohit Sharma: ಪಂದ್ಯದ ವೇಳೆ ಆನ್ ಫೀಲ್ಡ್ ಅಂಪೈರ್ ವೀರೇಂದ್ರ ಶರ್ಮಾ ಜತೆಗೆ ರೋಹಿತ್ ಶರ್ಮಾ ನಡೆಸಿದ ಸಂಭಾಷಣೆ ಸ್ಟಂಪ್ ಮೈಕ್​ನಲ್ಲಿ ರೆಕಾರ್ಡ್​ ಆಗಿದ್ದು, ಅಂಪೈರ್ ವೀರೇಂದ್ರ ಶರ್ಮಾ ವಿರುದ್ಧ ರೋಹಿತ್ ಅಸಮಾಧಾನಗೊಂಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

‘ಅರೇ ವೀರು.. ಈಗಾಗ್ಲೆ 2 ಸೊನ್ನೆ ಸುತ್ತಿದ್ದೀನಿ ಮಾರಾಯ’; ಅಂಪೈರ್ ನಿರ್ಧಾರಕ್ಕೆ ರೋಹಿತ್ ರಿಯಾಕ್ಷನ್ ವಿಡಿಯೋ ವೈರಲ್
ರೋಹಿತ್ ಶರ್ಮಾ
Follow us on

ಪಂದ್ಯದ ವೇಳೆ ಯಾವಾಗಲೂ ಗಂಭೀರವಾಗಿ ಕಾಣಿಸಿಕೊಳ್ಳುವ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಆಗಾಗ್ಗೆ ಹಾಸ್ಯದ ಮೂಲಕವೂ ತಮ್ಮ ಅಸಮಾಧಾನವನ್ನು ಮೈದಾನದಲ್ಲಿ ಹೊರಹಾಕುವುದನ್ನು ನಾವು ಕಂಡಿದ್ದೇವೆ. ಇದೀಗ ಅಂತಹದ್ದೇ ದೃಶ್ಯ ಬೆಂಗಳೂರಿನಲ್ಲಿ ನಡೆದ ಅಫ್ಘಾನಿಸ್ತಾನ (India vs Afghanistan) ವಿರುದ್ಧದ ಮೂರನೇ ಟಿ20 ಪಂದ್ಯದ ವೇಳೆಯೂ ಕಂಡುಬಂದಿದೆ. ಪಂದ್ಯದ ವೇಳೆ ಆನ್ ಫೀಲ್ಡ್ ಅಂಪೈರ್ ವೀರೇಂದ್ರ ಶರ್ಮಾ (Virender Sharma) ಜತೆಗೆ ರೋಹಿತ್ ಶರ್ಮಾ ನಡೆಸಿದ ಸಂಭಾಷಣೆ ಸ್ಟಂಪ್ ಮೈಕ್​ನಲ್ಲಿ ರೆಕಾರ್ಡ್​ ಆಗಿದ್ದು, ಅಂಪೈರ್ ವೀರೇಂದ್ರ ಶರ್ಮಾ ವಿರುದ್ಧ ರೋಹಿತ್ ಅಸಮಾಧಾನಗೊಂಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

ಘಟನೆಯ ಸಂಪೂರ್ಣ ಚಿತ್ರಣ

ವಾಸ್ತವವಾಗಿ ಭಾರತದ ಇನ್ನಿಂಗ್ಸ್​ನ ಎರಡನೇ ಓವರ್‌ನಲ್ಲಿ ಅಜ್ಮತುಲ್ಲಾ ಒಮರ್ಜಾಯ್ ಬೌಲ್ ಮಾಡಿದ ಮೊದಲ ಎಸೆತ ರೋಹಿತ್ ಅವರ ಬ್ಯಾಟ್‌ನ ಒಳ ಅಂಚಿಗೆ ತಾಗಿ ಆ ಬಳಿಕ ಅವರ ಪ್ಯಾಡ್‌ಗೆ ಬಡಿದು ಫೈನ್ ಲೆಗ್‌ನಲ್ಲಿ ಬೌಂಡರಿ ಗೆರೆ ದಾಟಿತು. ಆದರೆ ಅಂಪೈರ್ ವೀರೇಂದ್ರ ಶರ್ಮಾ ಅದನ್ನು ಲೆಗ್ ಬೈ ಎಂದು ತೀರ್ಪು ನೀಡಿದರು. ಆದರೆ ಆ ಸಮಯದಲ್ಲಿ ರೋಹಿತ್‌ಗೆ ಅಂಪೈರ್ ನಿರ್ಧಾರ ಗಮನಕ್ಕೆ ಬಂದಿರಲಿಲ್ಲ.  ಬಳಿಕ ಪಂದ್ಯದ ಮೂರನೇ ಓವರ್​ ಆರಂಭಕ್ಕೂ ಮುನ್ನ ಸ್ಕೋರ್ ಬೋರ್ಡ್​ ನೋಡಿದ ರೋಹಿತ್ ಶರ್ಮಾಗೆ ಶಾಕ್ ಕಾದಿತ್ತು. ಏಕೆಂದರೆ ರೋಹಿತ್ ಅವರ ಸ್ಕೋರ್‌ನ ಮುಂದೆ ಸೊನ್ನೆ ಬರೆದಿರುವುದು ಕಂಡಿತು.

ಚೆಂಡು ಸ್ಪಷ್ಟವಾಗಿ ನನ್ನ ಬ್ಯಾಟ್‌ಗೆ ತಾಗಿತು

ಇದನ್ನು ನೋಡಿದ ರೋಹಿತ್ ಶರ್ಮಾ ಒಂದು ಕ್ಷಣ ಶಾಕ್​ಗೆ ಒಳಗಾದರು. ಬಳಿಕ ತಕ್ಷಣವೇ ಅಂಪೈರ್ ವೀರೇಂದ್ರ ಶರ್ಮಾ ಜೊತೆ ಮಾತನಾಡಲು ಆರಂಭಿಸಿದ ರೋಹಿತ್, ‘ಹೇ ವೀರು! (ವೀರೇಂದ್ರ ಶರ್ಮಾ), ನೀವು ಮೊದಲ ಚೆಂಡನ್ನು ಲೆಗ್ ಬೈ ನೀಡಿದ್ದೀರಾ? ಚೆಂಡು ಸ್ಪಷ್ಟವಾಗಿ ನನ್ನ ಬ್ಯಾಟ್‌ಗೆ ತಾಗಿತು. ನಾನು ಈಗಾಗಲೇ ಎರಡು ಬಾರಿ ಶೂನ್ಯಕ್ಕೆ ಔಟಾಗಿದ್ದೇನೆ.’ ಎಂದರು. ರೋಹಿತ್ ಹೀಗೆ ಅಂಪೈರ್ ಬಳಿ ಮಾತನಾಡುತ್ತಿರುವ ಸಂಭಾಷಣೆ ಸ್ಟಂಪ್ ಮೈಕ್​ನಲ್ಲಿ ಎಲ್ಲರಿಗೂ ಸ್ಪಷ್ಟವಾಗಿ ಕೇಳುತ್ತಿತ್ತು. ರೋಹಿತ್ ಅವರ ತಮಾಷದಾಯಕ ಅಸಮಾಧಾನವನ್ನು ಕೇಳಿಸಿಕೊಂಡವರೆಲ್ಲರು ನಗಲು ಆರಂಭಿಸಿದರು.

ನೋ ಬಾಲ್​ಗಾಗಿ ಅಂಪೈರ್ ಜೊತೆ ಚರ್ಚೆ

ಅಷ್ಟೇ ಅಲ್ಲ 14ನೇ ಓವರ್‌ನಲ್ಲಿ ರೋಹಿತ್ ಮತ್ತು ಅಂಪೈರ್ ವೀರೇಂದ್ರ ಶರ್ಮಾ ನಡುವೆ ವಾಗ್ವಾದ ಕೂಡ ನಡೆಯಿತು. ವಾಸ್ತವವಾಗಿ, ವೇಗದ ಬೌಲರ್ ಸಲೀಂ ಸೈಫಿ ಓವರ್ ಫುಲ್ ಟಾಸ್ ಬೌಲ್ ಮಾಡಿದರು. ಈ ಎಸೆತದಲ್ಲಿ ರೋಹಿತ್ ಒಂದು ರನ್ ಗಳಿಸಿದರು. ಚೆಂಡಿನ ಎತ್ತರದಿಂದಾಗಿ ಅವರು ಲೆಗ್ ಅಂಪೈರ್‌ ಬಳಿ ನೋ ಬಾಲ್‌ಗೆ ಮನವಿ ಮಾಡಿದರು ಆದರೆ ಅಂಪೈರ್ ಶರ್ಮಾ ಯಾವುದೇ ನಿರ್ಧಾರವನ್ನು ನೀಡಲಿಲ್ಲ. ಇದರಿಂದ ರೋಹಿತ್ ತೀರ ಅಸಮಾಧಾನಗೊಂಡರು. ಓವರ್ ಮುಗಿದ ನಂತರವೂ ಅವರು ಅಂಪೈರ್ ಮುಂದೆ ನೋ ಬಾಲ್ ಬಗ್ಗೆ ಚರ್ಚೆ ನಡೆಸಿದರು.

ಪಂದ್ಯ ಹೀಗಿತ್ತು

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 212 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ ಕೂಡ ಅಷ್ಟೇ ರನ್ ಕಲೆಹಾಕಿ ಪಂದ್ಯವನ್ನು ಡ್ರಾ ಮಾಡಿಕೊಂಡಿತು. ಹೀಗಾಗಿ ಪಂದ್ಯ ಸೂಪರ್ ಓವರ್​ನತ್ತ ಸಾಗಿತು. ಸೂಪರ್​ ಓವರ್​ನಲ್ಲಿ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ 16 ರನ್ ಕಲೆಹಾಕಿತು. ಬಳಿಕ ಬ್ಯಾಟ್ ಮಾಡಿದ ಭಾರತ ಕೂಡ ಅಷ್ಟೇ ರನ್ ಕಲೆಹಾಕಿತು. ಹೀಗಾಗಿ ಪಂದ್ಯ ಎರಡನೇ ಬಾರಿಯೂ ಟೈ ಆಯಿತು. ನಂತರ ನಡೆದ ಎರಡನೇ ಸೂಪರ್ ಓವರ್​ನಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 11 ರನ್ ಕಲೆಹಾಕಿತು. ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ 1 ರನ್​ಗಳಿಗೆ 2 ವಿಕೆಟ್​ ಕಳೆದುಕೊಂಡು 10 ರನ್​ಗಳಿಂದ ಸೋಲೊಪ್ಪಿಕೊಂಡಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:01 pm, Thu, 18 January 24