Super Over Rules: ಸೂಪರ್ ಓವರ್​ನಲ್ಲಿರುವ ನಿಯಮಗಳ ಬಗ್ಗೆ ನಿಮಗೆಷ್ಟು ಗೊತ್ತು?

Super Over Rules: ಸೂಪರ್ ಓವರ್ ಸಮಯದಲ್ಲಿ ಹುಟ್ಟಿಕೊಂಡ ಗೆಲುವು ಪ್ರಶ್ನೆಗಳು ಪ್ರಸ್ತುತ ಕ್ರಿಕೆಟ್​ ಲೋಕದಲ್ಲಿ ಸಾಕಷ್ಟು ಗೊಂದಲ ಸೃಷ್ಟಿ ಮಾಡಿವೆ. ಅಷ್ಟಕ್ಕೂ ನಿನ್ನೆಯ ಪಂದ್ಯದಲ್ಲಿ ಸೂಪರ್ ಓವರ್​ನಲ್ಲಿನ ನಿಯಮಗಳನ್ನು ಉಲ್ಲಂಘಿಸಲಾಯಿತೇ? ಅಥವಾ ನಿಯಮದಂತೆ ಪಂದ್ಯ ನಡೆಯಿತೆ? ಎಂಬುದಕ್ಕೆ ವಿವರಣೆ ಇಲ್ಲಿದೆ.

Super Over Rules: ಸೂಪರ್ ಓವರ್​ನಲ್ಲಿರುವ ನಿಯಮಗಳ ಬಗ್ಗೆ ನಿಮಗೆಷ್ಟು ಗೊತ್ತು?
ಸೂಪರ್ ಓವರ್
Follow us
|

Updated on:Jan 18, 2024 | 5:18 PM

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ (India vs Afghanistan) ಟಿ20 ಪಂದ್ಯ ಎರಡೆರಡು ಸೂಪರ್​ ಓವರ್​ಗಳನ್ನು ಕಾಣುವ ಮೂಲಕ ಕೊನೆಗೂ ವಿಜೇತರನ್ನು ಹುಡುಕಿಕೊಂಡಿತು. ಮೊದಲ ಬಾರಿಗೆ ಟೀಂ ಇಂಡಿಯಾದ ಪಂದ್ಯದಲ್ಲಿ ಎರಡು ಸೂಪರ್ ಓವರ್​ಗಳು ನಡೆದ ಘಟನೆಗೆ ಬೆಂಗಳೂರಿನ ಪ್ರೇಕ್ಷಕರು ಸಾಕ್ಷಿಯಾದರು. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 212 ರನ್ ಕಲೆಹಾಕಿತು. ಹೀಗಾಗಿ ಗೆಲುವು ಭಾರತದ್ದೇ ಎಂದು ಎಲ್ಲರು ಊಹಿಸಿದ್ದರು. ಆದರೆ ಹೋರಾಟ ಬಿಡದ ಅಫ್ಘಾನಿಸ್ತಾನ ಭಾರತದ ನೀಡಿದ 212 ರನ್​ಗಳ ಗುರಿಯನ್ನು ಬೆನ್ನಟ್ಟಿತು. ಹೀಗಾಗಿ ಪಂದ್ಯ ಟ್ರೈ ಆದ್ದರಿಂದ ವಿಜೇತರನ್ನು ಸೂಪರ್ ಓವರ್​ ಮೂಲಕ ನಿರ್ಧರಿಸಲು ತೀರ್ಮಾನಿಸಲಾಯಿತು. ಅಂತಿಮವಾಗಿ ಎರಡೆರಡು ಸೂಪರ್ ಓವರ್​ಗಳ (Double Super Overs) ನಂತರ ಭಾರತ 10 ರನ್​ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಆದರೆ ಸೂಪರ್ ಓವರ್ ಸಮಯದಲ್ಲಿ ಹುಟ್ಟಿಕೊಂಡ ಗೆಲುವು ಪ್ರಶ್ನೆಗಳು ಪ್ರಸ್ತುತ ಕ್ರಿಕೆಟ್​ ಲೋಕದಲ್ಲಿ ಸಾಕಷ್ಟು ಗೊಂದಲ ಸೃಷ್ಟಿ ಮಾಡಿವೆ. ಅಷ್ಟಕ್ಕೂ ನಿನ್ನೆಯ ಪಂದ್ಯದಲ್ಲಿ ಸೂಪರ್ ಓವರ್​ನಲ್ಲಿನ ನಿಯಮಗಳನ್ನು (Super Over Rules) ಉಲ್ಲಂಘಿಸಲಾಯಿತೇ? ಅಥವಾ ನಿಯಮದಂತೆ ಪಂದ್ಯ ನಡೆಯಿತೆ? ಎಂಬುದಕ್ಕೆ ವಿವರಣೆ ಇಲ್ಲಿದೆ.

ವಾಸ್ತವವಾಗಿ 2008ರಲ್ಲಿ ಮೊದಲ ಬಾರಿಗೆ ಸೂಪರ್ ಓವರ್​ ನಿಯಮವನ್ನು ಜಾರಿಗೆ ತರಲಾಯಿತು. ಅಲ್ಲಿಂದ ಇಲ್ಲಿಯವರೆಗೆ ಈ ನಿಯಮದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಆದರೆ ನಿನ್ನೆಯ ಪಂದ್ಯದಲ್ಲಿ ನಡೆದ ಸೂಪರ್ ಓವರ್​ನಲ್ಲಿ ರೋಹಿತ್ ಶರ್ಮಾ ಎರಡನೇ ಸೂಪರ್ ಓವರ್​ನಲ್ಲೂ ಆರಂಭಿಕನಾಗಿ ಕಣಕ್ಕಿಳಿದ ಬಗ್ಗೆ ಹಲವು ಗೊಂದಲಗಳು ಹುಟ್ಟಿಕೊಂಡಿವೆ. ಹೀಗಾಗಿ ಸೂಪರ್​ ಓವರ್​ನಲ್ಲಿರುವ ನಿಯಮಗಳ ಬಗ್ಗೆ ಸಂಪೂರ್ಣ ಬೆಳಕು ಚೆಲ್ಲುವ ಪ್ರಯತ್ನ ಇಲ್ಲಾಗಿದೆ.

Super Over: ಸೂಪರ್ ಓವರ್ ಜಾರಿಗೆ ಬಂದಿದ್ದು ಯಾವಾಗ? ಇಲ್ಲಿದೆ ಸಂಪೂರ್ಣ ಇತಿಹಾಸ

ಬೌಲರ್‌ಗೆ ಸಂಬಂಧಿಸಿದ ನಿಯಮ

ಸೂಪರ್ ಓವರ್​ನಲ್ಲಿರುವ ನಿಯಮದ ಪ್ರಕಾರ, ಒಂದು ಪಂದ್ಯ ಟೈ ಆಗಿ ಆ ಪಂದ್ಯದಲ್ಲಿ ಎರಡೆರಡು ಸೂಪರ್ ಓವರ್ ನಡೆದರೆ, ಮೊದಲ ಸೂಪರ್ ಓವರ್ ಬೌಲ್ ಮಾಡಿದ ಬೌಲರ್ ಎರಡನೇ ಬಾರಿ ಬೌಲ್ ಮಾಡಲು ಸಾಧ್ಯವಿಲ್ಲ. ಹೀಗಾಗಿಯೇ ಎರಡನೇ ಸೂಪರ್ ಓವರ್‌ನಲ್ಲಿ ಅಜ್ಮತುಲ್ಲಾ ಒಮರ್ಜಾಯ್ ಅಥವಾ ಮುಖೇಶ್ ಕುಮಾರ್‌ ಬೌಲ್ ಮಾಡಲಿಲ್ಲ. ಈ ಇಬ್ಬರೂ ವೇಗದ ಬೌಲರ್‌ಗಳು ಮೊದಲ ಸೂಪರ್ ಓವರ್​ನಲ್ಲಿ ಬೌಲಿಂಗ್ ಹೊಣೆ ಹೊತ್ತಿದ್ದರು. ನಿಯಮದಂತೆ ಎರಡನೇ ಸೂಪರ್ ಓವರ್‌ನಲ್ಲಿ ಅಫ್ಘಾನಿಸ್ತಾನ ಪರ ಫರೀದ್ ಅಹ್ಮದ್ ದಾಳಿಗಿಳಿದರೆ, ಭಾರತದ ಪರ ರವಿ ಬಿಷ್ಣೋಯ್ ಬೌಲಿಂಗ್ ಜವಬ್ದಾರಿ ನಿರ್ವಹಿಸಿದರು.

ಬ್ಯಾಟಿಂಗ್​ನಲ್ಲಿ ಬದಲಾವಣೆ

ಸೂಪರ್ ಓವರ್‌ನಲ್ಲಿ ತಂಡಗಳ ಬ್ಯಾಟಿಂಗ್ ಕ್ರಮಾಂಕ ಬದಲಾಗುತ್ತದೆ. ಅಂದರೆ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ ಸೂಪರ್ ಓವರ್​ನಲ್ಲಿ ಮೊದಲು ಬೌಲಿಂಗ್ ಮಾಡಬೇಕಾಗುತ್ತದೆ. ಅದರಂತೆ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ, ಸೂಪರ್​ ಓವರ್​ನಲ್ಲಿ ಬೌಲಿಂಗ್ ಮಾಡಿದರೆ, ಗುರಿ ಬೆನ್ನಟ್ಟಿದ್ದ ಅಫ್ಘಾನಿಸ್ತಾನ ಮೊದಲು ಬ್ಯಾಟಿಂಗ್‌ ಮಾಡಿತು. ಬಳಿಕ ಪಂದ್ಯ ಎರಡನೇ ಸೂಪರ್​ ಓವರ್​ನತ್ತ ಸಾಗಿದರೆ, ಮೊದಲ ಸೂಪರ್​ ಓವರ್​ನಲ್ಲಿ ಬ್ಯಾಟಿಂಗ್ ಮಾಡಿದ ತಂಡ ಎರಡನೇ ಸೂಪರ್​ ಓವರ್​ನಲ್ಲಿ ಮೊದಲು ಬೌಲಿಂಗ್ ಮಾಡಬೇಕಾಗುತ್ತದೆ. ಅದರಂತೆ ಮೊದಲ ಸೂಪರ್​ ಓವರ್​ನಲ್ಲಿ ಮೊದಲು ಬೌಲಿಂಗ್ ಮಾಡಿದ್ದ ಟೀಂ ಇಂಡಿಯಾ, ಎರಡನೇ ಸೂಪರ್​ ಓವರ್​ನಲ್ಲಿ ಮೊದಲು ಬ್ಯಾಟಿಂಗ್ ಮಾಡಿತು.

ಬ್ಯಾಟಿಂಗ್​ಗೆ ಸಂಬಂಧಿಸಿದ ನಿಯಮಗಳು

ಎಂಸಿಸಿ ನಿಯಮಗಳ ಪ್ರಕಾರ, ಮೊದಲ ಸೂಪರ್ ಓವರ್‌ನಲ್ಲಿ ಔಟಾದ ಬ್ಯಾಟ್ಸ್‌ಮನ್ ಎರಡನೇ ಸೂಪರ್ ಓವರ್‌ನಲ್ಲಿ ಬ್ಯಾಟ್ ಮಾಡಲು ಸಾಧ್ಯವಿಲ್ಲ. ವಾಸ್ತವವಾಗಿ ಸೂಪರ್ ಓವರ್‌ನ ಆರಂಭಕ್ಕೂ ಮೊದಲು, ಎರಡೂ ತಂಡಗಳು ತಮ್ಮ ಮೂವರು ಬ್ಯಾಟ್ಸ್‌ಮನ್‌ಗಳ ಹೆಸರನ್ನು ನಿರ್ಧರಿಸಬೇಕು. ನಿರ್ಧರಿಸಿದ ಆ ಮೂವರು ಬ್ಯಾಟರ್​ಗಳೇ ಸೂಪರ್ ಓವರ್‌ನಲ್ಲಿ ಬ್ಯಾಟ್ ಬೀಸಬೇಕು. ಒಂದು ವೇಳೆ ಮೊದಲ ಸೂಪರ್ ಓವರ್‌ನಲ್ಲಿ ಬ್ಯಾಟಿಂಗ್ ಮಾಡಲು ಆಯ್ಕೆಯಾದ ಬ್ಯಾಟರ್​ಗೆ ಬ್ಯಾಟಿಂಗ್ ಮಾಡಲು ಅವಕಾಶ ಸಿಗದಿದ್ದರೆ ಅಥವಾ ಆತ ಮೊದಲ ಸೂಪರ್​ ಓವರ್​ನಲ್ಲಿ ಔಟಾಗದೇ ಇದ್ದರೆ, ಅವನು ಎರಡನೇ ಸೂಪರ್ ಓವರ್‌ನಲ್ಲಿ ಬ್ಯಾಟಿಂಗ್ ಮಾಡಬಹುದು. ಅದೇ ರೀತಿ ಯಾವುದೇ ಬ್ಯಾಟರ್ ಮೊದಲ ಸೂಪರ್ ಓವರ್ ಸಮಯದಲ್ಲಿ ಗಾಯಗೊಂಡು ನಿವೃತ್ತಿ ಹೊಂದಿದರೆ, ಆತ ಮೊದಲ ವಿಕೆಟ್ ಪತನದ ನಂತರ ಅಥವಾ ಮುಂದಿನ ಸೂಪರ್ ಓವರ್‌ನಲ್ಲಿ ಬ್ಯಾಟಿಂಗ್ ಮಾಡಲು ಅರ್ಹರಾಗಿರುತ್ತಾರೆ.

ಈ ನಿಯಮವನ್ನು ಪಂದ್ಯದ ವೇಳೆಯಲ್ಲೂ ಬಳಸಲಾಗುತ್ತದೆ. ಪಂದ್ಯದ ವೇಳೆ ಆಟಗಾರರು ಗಾಯಗೊಂಡರೆ ಆತ ಬ್ಯಾಟಿಂಗ್‌ನಿಂದ ನಿವೃತ್ತರಾಗುತ್ತಾರೆ. ಬಳಿಕ ತಂಡದ ಒಂಬತ್ತನೇ ವಿಕೆಟ್ ಪತನದ ನಂತರ ಗಾಯಗೊಂಡು ಬ್ಯಾಟಿಂಗ್​ನಿಂದ ನಿವೃತ್ತಿಯಾಗಿದ್ದ ಆಟಗಾರ ಮತ್ತೆ ಬ್ಯಾಟಿಂಗ್ ಮಾಡುವುದನ್ನು ಕಾಣಬಹುದಾಗಿದೆ.

ಆದರೆ ಮೊದಲ ಸೂಪರ್​ ಓವರ್​ನಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದ ಯಶಸ್ವಿ ಜೈಸ್ವಾಲ್ ಬದಲಿಗೆ ಭಾರತ, ಎರಡನೇ ಸೂಪರ್ ಓವರ್‌ನಲ್ಲಿ ಸಂಜು ಸ್ಯಾಮ್ಸನ್ ಅವರನ್ನು ಬ್ಯಾಟಿಂಗ್‌ಗೆ ಕಳುಹಿಸಿತು. ಇದು ತಂಡದ ನಿರ್ಧಾರವಾಗಿತ್ತೇ ಹೊರತು ನಿಯಮದ ಉಲ್ಲಂಘನೆಯಾಗಿರಲಿಲ್ಲ. ಮೊದಲ ಸೂಪರ್​ ಓವರ್​ನಲ್ಲಿ ಜೈಸ್ವಾಲ್ ಆರಂಭಿಕರಾಗಿ ಕಣಕ್ಕಿಳಿದು ಯಾವುದೇ ಪರಿಣಾಮಕಾರಿ ಆಟ ಆಡದೆ ಅಜೇಯರಾಗಿ ಉಳಿದಿದ್ದರು. ಹಾಗಾಗಿ ಎರಡನೇ ಸೂಪರ್​ ಓವರ್​ನಲ್ಲಿ ಆರಂಭಿಕನನ್ನು ಬದಲಿಸಿ ರಿಂಕು ಸಿಂಗ್​ರನ್ನು ಆರಂಭಿಕನಾಗಿ ಆಡಿಸಲಾಯಿತು. ಇದು ಕೂಡ ನಿಯಮಗಳಿಗೆ ಬದ್ಧವಾಗಿತ್ತು. ಏಕೆಂದರೆ ರಿಂಕು ಮೊದಲ ಸೂಪರ್​ ಓವರ್​ನಲ್ಲಿ ಬ್ಯಾಟಿಂಗ್​ಗೆ ಬಂದಿದ್ದರೂ ಅವರು ಅಜೇಯರಾಗಿ ಉಳಿದಿದ್ದರು. ಹೀಗಾಗಿ ರಿಂಕು ಎರಡನೇ ಸೂಪರ್ ಓವರ್​ ಆಡಲು ಅರ್ಹರಾಗಿದ್ದರು.

ರೋಹಿತ್​ ಬ್ಯಾಟಿಂಗ್​ ಬಗ್ಗೆ ಗೊಂದಲ

ಆದರೆ ಮೊದಲ ಸೂಪರ್​ ಓವರ್​ನಲ್ಲಿ ವಿಕೆಟ್ ಒಪ್ಪಿಸದೆ ಪೆವಿಲಿಯನ್​ಗೆ ಮರಳಿದ್ದ ರೋಹಿತ್​ಗೆ ಎರಡನೇ ಸೂಪರ್​ ಓವರ್​ನಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ನೀಡಿದ್ದ ಬಗ್ಗೆ ಇನ್ನೂ ಸಾಕಷ್ಟು ಗೊಂದಲವಿದೆ. ಇದಕ್ಕೆ ಕಾರಣವೆಂದರೆ ರೋಹಿತ್, ಸೂಪರ್ ಓವರ್​ನಲ್ಲಿ ರಿಟೈರ್ಡ್ ಔಟಾಗಿದ್ದರೋ? ಅಥವಾ ರಿಟೈರ್ಡ್ ಹರ್ಟ್ ಆಗಿದ್ದರೋ ಎಂಬುದಕ್ಕೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ವಾಸ್ತವವಾಗಿ ರಿಟೈರ್ಡ್ ಔಟ್​ ಹಾಗೂ ರಿಟೈರ್ಡ್ ಹರ್ಟ್ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಸೂಪರ್ ಓವರ್​ ವೇಳೆ ಒಬ್ಬ ಬ್ಯಾಟರ್ ರಿಟೈರ್ಡ್ ಔಟ್ ಆದರೆ ಆತ ಎರಡನೇ ಸೂಪರ್​ ಓವರ್​ನಲ್ಲಿ ಬ್ಯಾಟಿಂಗ್ ಮಾಡುವಂತಿಲ್ಲ. ಒಂದು ವೇಳೆ ಮೊದಲ ಸೂಪರ್ ಓವರ್​ ವೇಳೆ ಬ್ಯಾಟರ್ ರಿಟೈರ್ಡ್ ಹರ್ಟ್ ಆಗಿದ್ದರೆ ಆತ ಎರಡನೇ ಸೂಪರ್ ಓವರ್​ನಲ್ಲಿ ಬ್ಯಾಟಿಂಗ್‌ ಮಾಡಬಹುದು.

ಒಂದು ಪಂದ್ಯದಲ್ಲಿ ಎಷ್ಟು ಸೂಪರ್ ಓವರ್‌ಗಳಿರಬಹುದು?

ಐಸಿಸಿ ನಿಯಮಗಳ ಪ್ರಕಾರ, ಪಂದ್ಯದ ಫಲಿತಾಂಶ ಪ್ರಕಟವಾಗುವವರೆಗೆ ಸೂಪರ್ ಓವರ್‌ಗಳು ನಡೆಯಬೇಕು. ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಎರಡನೇ ಸೂಪರ್ ಓವರ್‌ನಲ್ಲಿ ಟೈ ಆಗಿದ್ದರೆ, ನಂತರ ಮೂರನೇ ಸೂಪರ್ ಓವರ್ ನಡೆಸಲಾಗುತ್ತಿತ್ತು. ಒಂದು ವೇಳೆ ಸೂಪರ್ ಓವರ್ ಪೂರ್ಣಗೊಳ್ಳುವ ಮುನ್ನ ಮಳೆ ಬಂದರೆ ಅಥವಾ ಬೇರೆ ಯಾವುದೇ ಕಾರಣದಿಂದ ಮುಂದಿನ ಆಟ ಸಾಧ್ಯವಾಗದಿದ್ದರೆ ಆಗ ಪಂದ್ಯ ಟೈ ಆಗಿ ಉಳಿಯುತ್ತದೆ.

ಪ್ರತಿ ಸೂಪರ್ ಓವರ್‌ನಲ್ಲಿ ಹೊಸ ಚೆಂಡು ಲಭ್ಯವಿದೆಯೇ?

ನಿಯಮಗಳ ಪ್ರಕಾರ ಸೂಪರ್ ಓವರ್‌ಗೆ ಹೊಸ ಚೆಂಡನ್ನು ನೀಡಲಾಗುವುದಿಲ್ಲ. ಆತಿಥೇಯ ಕ್ರಿಕೆಟ್ ಮಂಡಳಿಯು ಪ್ರತಿ ಟಿ20 ಪಂದ್ಯಕ್ಕೆ ಚೆಂಡುಗಳ ಬಾಕ್ಸ್ ಅನ್ನು ಒದಗಿಸುತ್ತದೆ. ಅದರಲ್ಲಿ ಆರು ಹೊಸ ಚೆಂಡುಗಳು ಮತ್ತು ಹಲವಾರು ಹಳೆಯ ಚೆಂಡುಗಳನ್ನು ವಿವಿಧ ಓವರ್‌ಗಳಿಗೆ ಬಳಸಲಾಗಿದೆ. ಸೂಪರ್ ಓವರ್‌ನಲ್ಲಿ, ಇಡೀ ಪಂದ್ಯವನ್ನು ಆಡಿದ ಅದೇ ಚೆಂಡುಗಳನ್ನು ಬಳಸಲಾಗುತ್ತದೆ. ಬೌಲಿಂಗ್ ತಂಡವು ಸೂಪರ್ ಓವರ್ ಬೌಲ್ ಮಾಡಲು ಪಂದ್ಯದಲ್ಲಿ ಬಳಸಿದ ಯಾವುದೇ ಚೆಂಡನ್ನು ಆಯ್ಕೆ ಮಾಡಬಹುದು. ಸೂಪರ್ ಓವರ್‌ನಲ್ಲಿ, ಎರಡನೇ ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ಮಾಡುವ ತಂಡಕ್ಕೂ ಇದೇ ನಿಯಮ ಅನ್ವಯವಾಗುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:14 pm, Thu, 18 January 24