ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯ ಕೊನೆಯ ಪಂದ್ಯ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ಸ್ಮರಣೀಯವಾಗಿತ್ತು. ಈ ಪಂದ್ಯದಲ್ಲಿ ದಾಖಲೆಯ ಐದನೇ ಟಿ20 ಶತಕ ಸಡಿಸಿದ ನಾಯಕ ರೋಹಿತ್, ಇದಾದ ಬಳಿಕ ಸೂಪರ್ ಓವರ್‌ನಲ್ಲಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಅದೇ ಸಮಯದಲ್ಲಿ, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಡಬಲ್ ಸೂಪರ್ ಓವರ್ ಪಂದ್ಯವನ್ನು ಗೆದ್ದ ಮೊದಲ ನಾಯಕ ಎಂಬ ದಾಖಲೆಯನ್ನು ರೋಹಿತ್ ಬರೆದರು. ಇದರೊಂದಿಗೆ 179 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ಯಾವೊಬ್ಬ ಆಟಗಾರನ ಹೆಸರಲ್ಲೂ ಇಲ್ಲದ ದಾಖಲೆಯನ್ನು ರೋಹಿತ್ ತಮ್ಮ ಖಾತೆಗೆ ಹಾಕಿಕೊಂಡರು.
ಅಫ್ಘಾನಿಸ್ತಾನ ವಿರುದ್ಧದ ಈ ಪಂದ್ಯದಲ್ಲಿ ರೋಹಿತ್ ಶರ್ಮಾ 69 ಎಸೆತಗಳಲ್ಲಿ ಅಜೇಯ 121 ರನ್ ಗಳಿಸಿದ್ದರು. ಇದರಲ್ಲಿ 11 ಬೌಂಡರಿ ಹಾಗೂ 8 ಸಿಕ್ಸರ್‌ಗಳು ಸೇರಿದ್ದವು. ಇದರೊಂದಿಗೆ ಭಾರತದಲ್ಲಿ 300 ಅಂತಾರಾಷ್ಟ್ರೀಯ ಸಿಕ್ಸರ್‌ಗಳನ್ನು ರೋಹಿತ್ ಪೂರೈಸಿದರು.
ಈ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ 300 ಸಿಕ್ಸರ್‌ಗಳ ಗಡಿ ದಾಟಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ರೋಹಿತ್ ಪಾತ್ರರಾದರು. ಭಾರತದಲ್ಲಿ 173 ಪಂದ್ಯಗಳನ್ನು ಆಡಿರುವ ರೋಹಿತ್ ಇದುವರೆಗೆ 301 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
ಇನ್ನು ಈ ಪಟ್ಟಿಯಲ್ಲಿ ತಮ್ಮ ದೇಶದಲ್ಲಿ 256 ಸಿಕ್ಸರ್‌ಗಳನ್ನು ಬಾರಿಸಿರುವ ನ್ಯೂಜಿಲೆಂಡ್‌ನ ಮಾರ್ಟಿನ್ ಗಪ್ಟಿಲ್ ಎರಡನೇ ಸ್ಥಾನದಲ್ಲಿದ್ದರೆ, ಬ್ರೆಂಡನ್ ಮೆಕಲಮ್ 230 ಸಿಕ್ಸರ್‌ಗಳೊಂದಿಗೆ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ಅಷ್ಟೆ ಅಲ್ಲದೆ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನಾಯಕ ರೋಹಿತ್ ಶರ್ಮಾ ಟಿ20ಯಲ್ಲಿ ಇದುವರೆಗೆ 90 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
ಈ ಮೂಲಕ ಟಿ20ಯಲ್ಲಿ ನಾಯಕನಾಗಿ 86 ಸಿಕ್ಸರ್ ಬಾರಿಸಿದ್ದ ಇಯಾನ್ ಮಾರ್ಗನ್ರನ್ನು ರೋಹಿತ್ ಹಿಂದಿಕ್ಕಿದ್ದಾರೆ. ಆರನ್ ಫಿಂಚ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು, ನಾಯಕನಾಗಿ ಅವರು 82 ಸಿಕ್ಸರ್ ಬಾರಿಸಿದ್ದರು. ವಿರಾಟ್ ಕೊಹ್ಲಿ 59 ಸಿಕ್ಸರ್‌ಗಳೊಂದಿಗೆ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಟಿ20 ಯಲ್ಲಿ ನಾಯಕನಾಗಿ ರೋಹಿತ್ ಶರ್ಮಾ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಪ್ರಸ್ತುತ ರೋಹಿತ್ 1648 ರನ್ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ವಿರಾಟ್ ಕೊಹ್ಲಿ 50 ಟಿ20 ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದು, 47.57 ಸರಾಸರಿಯಲ್ಲಿ 1,570 ರನ್ ಕಲೆಹಾಕಿ ಎರಡನೇ ಸ್ಥಾನದಲ್ಲಿದ್ದಾರೆ.
Published On - 6:42 pm, Thu, 18 January 24