SMAT 2025: ವೈಭವ್ ಎದುರು ಸೋತ ಅರ್ಜುನ್; ಆದರೂ ಬಿಹಾರ ವಿರುದ್ಧ ಗೆದ್ದ ಗೋವಾ
Syed Mushtaq Ali Trophy 2025: ಸೈಯದ್ ಮುಷ್ತಾಕ್ ಅಲಿ ಟ್ರೋಫಿ 2025 ರಲ್ಲಿ ಬಿಹಾರ ಮತ್ತು ಗೋವಾ ನಡುವಿನ ಪಂದ್ಯದಲ್ಲಿ 14 ವರ್ಷದ ವೈಭವ್ ಸೂರ್ಯವಂಶಿ ಹಾಗೂ ಅರ್ಜುನ್ ತೆಂಡೂಲ್ಕರ್ ಮುಖಾಮುಖಿಯಾದರು. ವೈಭವ್ ಅರ್ಜುನ್ ಬೌಲಿಂಗ್‌ನಲ್ಲಿ ಮಿಂಚಿ, 25 ಎಸೆತಗಳಲ್ಲಿ 46 ರನ್ ಗಳಿಸಿದರು. ಅರ್ಜುನ್ 2 ವಿಕೆಟ್ ಪಡೆದರೂ ಬ್ಯಾಟಿಂಗ್‌ನಲ್ಲಿ ವಿಫಲರಾದರು. ಗೋವಾ ಈ ರೋಚಕ ಪಂದ್ಯದಲ್ಲಿ ಬಿಹಾರವನ್ನು ಸೋಲಿಸಿ ಗೆಲುವು ಸಾಧಿಸಿತು.

ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ( Syed Mushtaq Ali Trophy 2025) ಇಂದು ಬಿಹಾರ ಮತ್ತು ಗೋವಾ ಮುಖಾಮುಖಿಯಾಗಿದ್ದವು. ಈ ಪಂದ್ಯದ ವಿಶೇಷತೆ ಏನೆಂದರೆ 14 ವರ್ಷದ ವೈಭವ್ ಸೂರ್ಯವಂಶಿಗೆ (Vaibhav Suryavanshi) ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ (Arjun Tendulkar) ಎದುರಾಗಿದ್ದರು. ಹೀಗಾಗಿ ಅಭಿಮಾನಿಗಳು ಈ ಪಂದ್ಯದ ಮೇಲೆ ಸಾಕಷ್ಟು ನಿರೀಕ್ಷೆಗಳನ್ನಿಟ್ಟಿದ್ದರು. ನಿರೀಕ್ಷೆಯಂತೆಯೇ ಇಂದಿನ ಪಂದ್ಯದಲ್ಲಿ ಅರ್ಜುನ್ ತೆಂಡೂಲ್ಕರ್ ಎದುರು ವೈಭವ್ ಸೂರ್ಯವಂಶಿ ಅಬ್ಬರಿಸಿದರಾದರೂ, ಅವರ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಿಹಾರ 180 ರನ್ ಕಲೆಹಾಕಿತು. ಗುರಿ ಬೆನ್ನಟ್ಟಿದ ಗೋವಾ ಕೊನೆಯ ಓವರ್‌ನಲ್ಲಿ ಜಯದ ನಗೆ ಬೀರಿತು.
ವೈಭವ್- ಅರ್ಜುನ್ ಮುಖಾಮುಖಿ
2025 ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಬಿಹಾರ ಮತ್ತು ಗೋವಾ ತಮ್ಮ ಐದನೇ ಪಂದ್ಯವನ್ನು ಆಡಿದವು. ಈ ಪಂದ್ಯವು ವೈಭವ್ ಸೂರ್ಯವಂಶಿ ಮತ್ತು ಅರ್ಜುನ್ ತೆಂಡೂಲ್ಕರ್ ಅವರ ಮೊದಲ ಮುಖಾಮುಖಿಗೆ ಸಾಕ್ಷಿಯಾಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಿಹಾರ ಪರ ವೈಭವ್ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಸೂರ್ಯವಂಶಿ ತಮ್ಮ ಇನ್ನಿಂಗ್ಸ್‌ನಲ್ಲಿ ಅರ್ಜುನ್ ತೆಂಡೂಲ್ಕರ್ ಅವರ 10 ಎಸೆತಗಳನ್ನು ಎದುರಿಸಿ 150 ಸ್ಟ್ರೈಕ್ ರೇಟ್‌ನೊಂದಿಗೆ 15 ರನ್ ಬಾರಿಸಿದರು. ಸೂರ್ಯವಂಶಿ, ಅರ್ಜುನ್ ತೆಂಡೂಲ್ಕರ್ ವಿರುದ್ಧ ಮೂರು ಬೌಂಡರಿ, ಒಂದು ಡಬಲ್ ಮತ್ತು ಒಂದು ಸಿಂಗಲ್ ಕಲೆಹಾಕಿದರು.
46 ರನ್ ಬಾರಿಸಿದ ವೈಭವ್
ಗೋವಾ ವಿರುದ್ಧ ವೈಭವ್ ಸೂರ್ಯವಂಶಿ 25 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 4 ಬೌಂಡರಿಗಳ ಸಹಾಯದಿಂದ 184 ಸ್ಟ್ರೈಕ್ ರೇಟ್‌ನಲ್ಲಿ 46 ರನ್ ಗಳಿಸಿದರು. ಇದರೊಂದಿಗೆ, 2025 ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ವೈಭವ್ ಸೂರ್ಯವಂಶಿ ಇದುವರೆಗೆ ಒಟ್ಟು 186 ಬಾರಿಸಿದ್ದು, ಇದರಲ್ಲಿ 14 ಸಿಕ್ಸರ್‌ಗಳು ಸೇರಿವೆ. ವೈಭವ್ ಸೂರ್ಯವಂಶಿ ಅವರ ಚುರುಕಾದ ಇನ್ನಿಂಗ್ಸ್‌ನಿಂದಾಗಿ ಪವರ್‌ಪ್ಲೇನಲ್ಲಿ ಬಿಹಾರ 59 ರನ್ ಗಳಿಸಿತು. ಆದಾಗ್ಯೂ ಪವರ್‌ಪ್ಲೇಯ ಕೊನೆಯ ಓವರ್‌ನಲ್ಲಿ ವೈಭವ್ ಅವರ ವಿಕೆಟ್ ಪತನವಾಯಿತು.
U19 Asia Cup: U-19 ಏಷ್ಯಾಕಪ್ಗೆ ಭಾರತ ತಂಡ ಪ್ರಕಟ; ಮತ್ತೆ ಅಬ್ಬರಿಸಲು ಸಜ್ಜಾದ ವೈಭವ್
ಬಿಹಾರ ವಿರುದ್ಧ ಗೆದ್ದ ಗೋವಾ
ಇತ್ತ ಬೌಲಿಂಗ್‌ನಲ್ಲಿ 4 ಓವರ್ ಬೌಲ್ ಮಾಡಿ 32 ರನ್ಗಳನ್ನು ಬಿಟ್ಟುಕೊಟ್ಟು 2 ವಿಕೆಟ್ಗಳನ್ನು ಉರುಳಿಸಿದ ಅರ್ಜುನ್ ತೆಂಡೂಲ್ಕರ್ ಬ್ಯಾಟಿಂಗ್‌ನಲ್ಲಿ ಮಾತ್ರ ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. ಎಂದಿನಂತೆ ಗೋವಾ ಇನ್ನಿಂಗ್ಸ್ ಆರಂಭಿಸಿದ ಅರ್ಜುನ್ 5 ರನ್ ಬಾರಿಸಿ ಔಟಾದರು. ಆದಾಗ್ಯೂ ತಂಡದ ಪರ ಕಶ್ಯಪ್ ಬಖಾಲೆ ಹಾಗೂ ನಾಯಕ ಸುಯಶ್ ಪ್ರಭುದೇಸಾಯಿ ಅರ್ಧಶತಕ ಬಾರಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
