India vs Australia 1st T20: ಟೀಮ್ ಇಂಡಿಯಾ ಬೌಲರ್​ಗಳ ಬೆಂಡೆತ್ತಿ ಗೆದ್ದ ಆಸ್ಟ್ರೇಲಿಯಾ

IND vs AUS 1st T20: 209 ರನ್​ಗಳ ಕಠಿಣ ಗುರಿ ಪಡೆದ ಆಸ್ಟ್ರೇಲಿಯಾಗೆ ಆರೋನ್ ಫಿಂಚ್ ಹಾಗೂ ಕ್ಯಾಮರೋನ್ ಗ್ರೀನ್ ಸಿಡಿಲಬ್ಬರದ ಆರಂಭ ಒದಗಿಸಿದ್ದರು. ಮೊದಲ ವಿಕೆಟ್​ಗೆ 39 ರನ್​ಗಳ ಜೊತೆಯಾಟವಾಡಿದ ಈ ಜೋಡಿ ಉತ್ತಮ ಅಡಿಪಾಯ ಹಾಕಿಕೊಟ್ಟರು.

India vs Australia 1st T20: ಟೀಮ್ ಇಂಡಿಯಾ ಬೌಲರ್​ಗಳ ಬೆಂಡೆತ್ತಿ ಗೆದ್ದ ಆಸ್ಟ್ರೇಲಿಯಾ
Ind vs Aus
TV9kannada Web Team

| Edited By: Zahir PY

Sep 20, 2022 | 10:57 PM

India vs Australia 1st T20: ಮೊಹಾಲಿಯಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ದ ಆಸ್ಟ್ರೇಲಿಯಾ ತಂಡವು ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ನಾಯಕ ಆರೋನ್ ಫಿಂಚ್ ಮೊದಲು ಬೌಲಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾಗೆ ನಾಯಕ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಸ್ಪೋಟಕ ಆರಂಭ ಒದಗಿಸಿದ್ದರು. ಆದರೆ 11 ರನ್​ಗಳಿಸಿದ್ದ ವೇಳೆ ಹಿಟ್​ಮ್ಯಾನ್ ಕ್ಯಾಚ್ ನೀಡಿ ಹೊರನಡೆಯಬೇಕಾಯಿತು. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ (2) ಕೂಡ ವಿಕೆಟ್ ಒಪ್ಪಿಸಿದರು. ಆದರೆ ಮತ್ತೊಂದೆಡೆ ಸಿಡಿಲಬ್ಬರದ ಪ್ರದರ್ಶಿಸಿದ ಟೀಮ್ ಇಂಡಿಯಾ ಉಪನಾಯಕ ಕೆಎಲ್ ರಾಹುಲ್ ಭರ್ಜರಿ ಬ್ಯಾಟಿಂಗ್ ಮುಂದುವರೆಸಿದರು. ಪರಿಣಾಮ ಕೇವಲ 32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಕೆಎಲ್ ರಾಹುಲ್​ಗೆ ಉತ್ತಮ ಸಾಥ್ ನೀಡಿದ ಸೂರ್ಯ ಕುಮಾರ್ ಯಾದವ್ ಕೂಡ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು.

ಆದರೆ ಅರ್ಧಶತಕದ ಬೆನ್ನಲ್ಲೇ ಕೆಎಲ್ ರಾಹುಲ್ (55) ಭರ್ಜರಿ ಹೊಡೆತಕ್ಕೆ ಮುಂದಾಗಿ ಕ್ಯಾಚ್ ನೀಡಿದರು. 35 ಎಸೆತಗಳನ್ನು ಎದುರಿಸಿದ್ದ ರಾಹುಲ್ 3 ಸಿಕ್ಸ್ ಹಾಗೂ 4 ಫೋರ್​ ಬಾರಿಸಿ ಗಮನ ಸೆಳೆದರು. ಇದಾಗ್ಯೂ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ್ದ ಸೂರ್ಯಕುಮಾರ್ ಯಾದವ್ 4 ಸಿಕ್ಸ್​ನೊಂದಿಗೆ 25 ಎಸೆತಗಳಲ್ಲಿ 45 ರನ್​ ಬಾರಿಸಿದರು. ಆದರೆ ಹಾಫ್ ಸೆಂಚುರಿ ಹೊಸ್ತಿಲ್ಲಲಿ ಕೀಪರ್​ಗೆ ಕ್ಯಾಚ್ ನೀಡಿದರು.

5ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಹಾರ್ದಿಕ್ ಪಾಂಡ್ಯ ಅಕ್ಷರಶಃ ಅಬ್ಬರಿಸಿದರು. ಆಸೀಸ್ ಬೌಲರ್​ಗಳ ಬೆಂಡೆತ್ತಿದ ಪಾಂಡ್ಯ ಕೇವಲ 25 ಎಸೆತಗಳಲ್ಲಿ ಹಾಫ್ ಸೆಂಚುರಿ ಸಿಡಿಸಿದರು. ಅಷ್ಟೇ ಅಲ್ಲದೆ 5 ಸಿಕ್ಸ್ ಹಾಗೂ 7 ಫೋರ್​ನೊಂದಿಗೆ ಕೇವಲ 30 ಎಸೆತಗಳಲ್ಲಿ ಅಜೇಯ 71 ರನ್ ಬಾರಿಸುವ ಮೂಲಕ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಟೀಮ್ ಇಂಡಿಯಾ ಮೊತ್ತವನ್ನು 208 ಕ್ಕೆ ತಂದು ನಿಲ್ಲಿಸಿದರು.

209 ರನ್​ಗಳ ಕಠಿಣ ಗುರಿ ಪಡೆದ ಆಸ್ಟ್ರೇಲಿಯಾಗೆ ಆರೋನ್ ಫಿಂಚ್ ಹಾಗೂ ಕ್ಯಾಮರೋನ್ ಗ್ರೀನ್ ಸಿಡಿಲಬ್ಬರದ ಆರಂಭ ಒದಗಿಸಿದ್ದರು. ಮೊದಲ ವಿಕೆಟ್​ಗೆ 39 ರನ್​ಗಳ ಜೊತೆಯಾಟವಾಡಿದ ಈ ಜೋಡಿ ಉತ್ತಮ ಅಡಿಪಾಯ ಹಾಕಿಕೊಟ್ಟರು. ಫಿಂಚ್ (22) ಔಟಾದ ಬೆನ್ನಲ್ಲೇ ಅಬ್ಬರಿಸಲಾರಂಭಿಸಿದ ಕ್ಯಾಮರೋನ್ ಗ್ರೀನ್ ಟೀಮ್ ಇಂಡಿಯಾ ಬೌಲರ್​ಗಳನ್ನು ದಂಡಿಸಿದರು. ಈ ನಡುವೆ ಅಕ್ಷರ್ ಪಟೇಲ್ ಕೈಬಿಟ್ಟ ಕ್ಯಾಚ್​ನ ಸಂಪೂರ್ಣ ಲಾಭ ಪಡೆದ ಗ್ರೀನ್ 30 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 8 ಫೋರ್​ನೊಂದಿಗೆ 61 ರನ್ ಬಾರಿಸಿ ಔಟಾದರು. ಅಷ್ಟರಲ್ಲಾಗಲೇ ಆಸ್ಟ್ರೇಲಿಯಾ ಮೊತ್ತವು 10 ಓವರ್​ಗಳಲ್ಲಿ 100 ರ ಗಡಿದಾಟಿತ್ತು.

ಇದಾಗ್ಯೂ ಕೊನೆಯ 6 ಓವರ್​ಗಳಲ್ಲಿ ಆಸ್ಟ್ರೇಲಿಯಾಗೆ 64 ರನ್​ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ಕಣಕ್ಕಿಳಿದಿದ್ದ ಎಡಗೈ ದಾಂಡಿಗ ಮ್ಯಾಥ್ಯೂವೇಡ್ 21 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 6 ಫೋರ್​ನೊಂದಿಗೆ ಅಜೇಯ 45 ರನ್​ ಚಚ್ಚಿದರು. ವೇಡ್​ಗೆ ಉತ್ತಮ ಸಾಥ್ ನೀಡಿದ ಟಿಮ್ ಡೇವಿಡ್ 14 ಎಸೆತಗಳಲ್ಲಿ 18 ರನ್​ ಬಾರಿಸಿದರು. ಅದರಂತೆ ಅಂತಿಮವಾಗಿ ಆಸ್ಟ್ರೇಲಿಯಾ ತಂಡವು 19.2 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 211 ರನ್​ ಬಾರಿಸಿ 4 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು.

ಟೀಮ್ ಇಂಡಿಯಾ ಪರ ಅಕ್ಷರ್ ಪಟೇಲ್ 4 ಓವರ್​ಗಳಲ್ಲಿ 17 ರನ್ ನೀಡಿ 3 ವಿಕೆಟ್ ಕಬಳಿಸಿದರೆ, ಭುವನೇಶ್ವರ್ ಕುಮಾರ್ ಯಾವುದೇ ವಿಕೆಟ್ ಪಡೆಯದೇ 4 ಓವರ್​ಗಳಲ್ಲಿ 52 ರನ್​ ನೀಡಿದರು. ಮತ್ತೊಂದೆಡೆ ಹರ್ಷಲ್ ಪಟೇಲ್ ಕೂಡ 4 ಓವರ್​ಗಳಲ್ಲಿ 49 ರನ್​ ಬಿಟ್ಟುಕೊಟ್ಟರು. ಇನ್ನು ಉಮೇಶ್ ಯಾದವ್ 2 ವಿಕೆಟ್ ಪಡೆದರೂ 2 ಓವರ್​ಗಳಲ್ಲಿ 27 ರನ್ ನೀಡಿದ್ದರು.

ಮೂರು ಪಂದ್ಯಗಳ ಈ ಸರಣಿಯ ಮೊದಲ ಪಂದ್ಯದಲ್ಲೇ ಭರ್ಜರಿ ಜಯ ಸಾಧಿಸುವ ಮೂಲಕ ಆಸ್ಟ್ರೇಲಿಯಾ ಶುಭಾರಂಭ ಮಾಡಿದೆ. ಇನ್ನು ಈ ಸರಣಿಯ 2ನೇ ಪಂದ್ಯವು ಸೆಪ್ಟೆಂಬರ್ 23 ರಂದು ನಡೆಯಲಿದೆ.

ಆಸ್ಟ್ರೇಲಿಯಾ (ಪ್ಲೇಯಿಂಗ್ XI): ಆರೋನ್ ಫಿಂಚ್ (ನಾಯಕ), ಕ್ಯಾಮೆರಾನ್ ಗ್ರೀನ್, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಜೋಶ್ ಇಂಗ್ಲಿಸ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಪ್ಯಾಟ್ ಕಮ್ಮಿನ್ಸ್, ನಾಥನ್ ಎಲ್ಲಿಸ್, ಆಡ್ಯಂ ಝಂಪಾ, ಜೋಶ್ ಹ್ಯಾಝಲ್‌ವುಡ್

ಭಾರತ (ಪ್ಲೇಯಿಂಗ್ XI): ರೋಹಿತ್ ಶರ್ಮಾ(ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್(ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಉಮೇಶ್ ಯಾದವ್, ಯುಜ್ವೇಂದ್ರ ಚಾಹಲ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada