ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಅಡಿಲೇಡ್ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾವನ್ನು 180 ರನ್‌ಗಳಿಗೆ ಆಲೌಟ್ ಮಾಡಿ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ್ದ ಆತಿಥೇಯ ಆಸ್ಟ್ರೇಲಿಯಾ 337 ರನ್‌ಗಳಿಗೆ ಇನ್ನಿಂಗ್ಸ್ ಮುಗಿಸಿದೆ. ಈ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ ಆತಿಥೇಯರು 157 ರನ್‌ಗಳ ಮುನ್ನಡೆ ಪಡೆದುಕೊಂಡಿದ್ದಾರೆ. ಆಸೀಸ್ ಪರ ಟ್ರಾವಿಸ್ ಹೆಡ್ 140 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಕಟ್ಟಿದರೆ, ಮಾರ್ನಸ್ ಲಬುಶೇನ್ 64 ರನ್‌ಗಳ ಕಾಣಿಕೆ ನೀಡಿದರು. ಉಳಿದವರಿಂದ ಅಲ್ಪ ಪ್ರಮಾಣದ ಕೊಡುಗೆ ಸಿಕ್ಕಿತು. ಇತ್ತ ಟೀಂ ಇಂಡಿಯಾ ಪರ ಬೌಲಿಂಗ್ನಲ್ಲಿ ಮಿಂಚಿದ ವೇಗಿಗಳಾದ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ ತಲಾ 4 ವಿಕೆಟ್ ಉರುಳಿಸಿದರೆ, ನಿತೀಶ್ ಹಾಗೂ ಆರ್ ಅಶ್ವಿನ್ ತಲಾ ಒಂದೊಂದು ವಿಕೆಟ್ ಪಡೆದರು.
ಮೊದಲ ದಿನದಾಟದಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 86 ರನ್ ಕಲೆಹಾಕಿದ್ದ ಆಸ್ಟ್ರೇಲಿಯಾ ಇಲ್ಲಿಂದ ತನ್ನ ಎರಡನೇ ದಿನದಾಟವನ್ನು ಆರಂಭಿಸಿತು. ಎರಡನೇ ದಿನದಾಟದ ಮೂರನೇ ಸೆಷನ್ ಆರಂಭದಲ್ಲೆ ಉಳಿದ 9 ವಿಕೆಟ್‌ಗಳನ್ನು ಕಳೆದುಕೊಂಡು 251 ರನ್ ಕಲೆಹಾಕಿತು. ಎರಡನೇ ದಿನದಾಟದ ಮೊದಲ ಸೆಷನ್ನಲ್ಲಿ ಆಸೀಸ್ ಪಡೆ ಮೆಕ್‌ಸ್ವೀನಿ (39), ಸ್ಟೀವ್ ಸ್ಮಿತ್ (2) ಮತ್ತು ಮಾರ್ನಸ್ ಲಬುಶೇನ್ ರೂಪದಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಮೆಕ್‌ಸ್ವೀನಿ ಮತ್ತು ಸ್ಮಿತ್ ಅವರನ್ನು ಬುಮ್ರಾ ಔಟ್ ಮಾಡಿದರೆ, ಲಬುಶೇನ್ಗೆ ನಿತೀಶ್ ರೆಡ್ಡಿ ಪೆವಿಲಿಯನ್ ಹಾದಿ ತೋರಿಸಿದರು.
ಇದರ ನಂತರ, ಎರಡನೇ ಸೆಷನ್ನಲ್ಲಿ ಟೀಂ ಇಂಡಿಯಾ ವೇಗಿಗಳನ್ನು ಹೈರಾಣಾಗಿಸಿದ ಟ್ರಾವಿಸ್ ಹೆಡ್ ತಮ್ಮ ಟೆಸ್ಟ್ ವೃತ್ತಿಜೀವನದ ಎಂಟನೇ ಶತಕವನ್ನು ಪೂರ್ಣಗೊಳಿಸಿದರು. ಅಂತಿಮವಾಗಿ ಹೆಡ್ 141 ಎಸೆತಗಳಲ್ಲಿ 17 ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳ ಸಹಾಯದಿಂದ 140 ರನ್ ಗಳಿಸಿ ಸಿರಾಜ್ಗೆ ಬಲಿಯಾದರು. ಉಳಿದಂತೆ ಮಿಚೆಲ್ ಮಾರ್ಷ್ ಒಂಬತ್ತು ರನ್ ಗಳಿಸಿ ಔಟಾದರೆ, ಅಲೆಕ್ಸ್ ಕ್ಯಾರಿ 15 ರನ್ ಗಳಿಸಿ ಔಟಾದರು. ಪ್ಯಾಟ್ ಕಮಿನ್ಸ್ ರೂಪದಲ್ಲಿ ಆಸ್ಟ್ರೇಲಿಯಾಕ್ಕೆ ಎಂಟನೇ ಹೊಡೆತ ಬಿದ್ದಿತು. ಪ್ಯಾಟ್ ಕಮಿನ್ಸ್ ಅವರನ್ನು ಬುಮ್ರಾ ಕ್ಲೀನ್ ಬೌಲ್ಡ್ ಮಾಡಿದರು. ಕೊನೆಯಲ್ಲಿ ಮಿಚೆಲ್ ಸ್ಟಾರ್ಕ್ 18 ರನ್‌ಗಳ ಕಾಣಿಕೆ ನೀಡಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:56 pm, Sat, 7 December 24