IND vs AUS: 100ನೇ ಟೆಸ್ಟ್ ಪಂದ್ಯವನ್ನಾಡಲಿರುವ ಪೂಜಾರ; ಶುಭ ಹಾರೈಸಿದ ಪ್ರಧಾನಿ ಮೋದಿ

IND vs AUS: 100ನೇ ಟೆಸ್ಟ್‌ಗೂ ಮುನ್ನ ಪೂಜಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದು, ಪೂಜಾರಗೆ ಮೋದಿ ಅಭಿನಂದನೆ ಸಲ್ಲಿಸಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

IND vs AUS: 100ನೇ ಟೆಸ್ಟ್ ಪಂದ್ಯವನ್ನಾಡಲಿರುವ ಪೂಜಾರ; ಶುಭ ಹಾರೈಸಿದ ಪ್ರಧಾನಿ ಮೋದಿ
ಪ್ರಧಾನಿ ಮೋದಿಯವರನ್ನು ಭೇಟಿಯಾದ ಪೂಜಾರ ದಂಪತಿ
Edited By:

Updated on: Feb 15, 2023 | 11:27 AM

ಭಾರತ ಮತ್ತು ಆಸ್ಟ್ರೇಲಿಯಾ (India Vs Australia) ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿಯ (Border-Gavaskar Trophy) ಎರಡನೇ ಟೆಸ್ಟ್ ಪಂದ್ಯ ದೆಹಲಿಯಲ್ಲಿ ನಡೆಯಲ್ಲಿದೆ. ಸರಣಿಯಲ್ಲಿ ಮುನ್ನಡೆ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಭಾರತ ತಂಡಕ್ಕೆ ದೆಹಲಿಯಲ್ಲಿ ನಡೆಯಲಿರುವ ಟೆಸ್ಟ್ ಮಹತ್ವದ್ದಾಗಿದೆ. ಆದರೆ ಭಾರತದ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ (Cheteshwar Pujara) ಅವರಿಗೆ ಈ ಟೆಸ್ಟ್ ಪಂದ್ಯ ವಿಶೇಷವಾಗಲು ಇನ್ನೊಂದು ದೊಡ್ಡ ಕಾರಣವಿದೆ. ಈ ಪಂದ್ಯವು ಅವರ ವೃತ್ತಿಜೀವನದ 100 ನೇ ಟೆಸ್ಟ್ ಆಗಿದೆ. ವಿಶ್ವ ಕ್ರಿಕೆಟ್‌ನಲ್ಲಿ ಕೆಲವೇ ಆಟಗಾರರು 100 ಟೆಸ್ಟ್ ಪಂದ್ಯಗಳ ಹೊಸ್ತಿಲನ್ನು ದಾಟ್ಟಿದ್ದು, ಪೂಜಾರ ಈಗ ಆ ಪಟ್ಟಿಗೆ ಸೇರುವ ಮುಂದಿನ ಬ್ಯಾಟ್ಸ್‌ಮನ್ ಆಗಿದ್ದಾರೆ. ವಿಶೇಷವೆಂದರೆ ಈ ಐತಿಹಾಸಿಕ ಸಾಧನೆಗಾಗಿ ಪೂಜಾರ ಪ್ರಧಾನಿ ಮೋದಿ (Prime Minister Narendra Modi) ಅವರಿಂದ ಶುಭ ಹಾರೈಕೆಯನ್ನು ಸ್ವೀಕರಿಸಿದ್ದಾರೆ.

100ನೇ ಟೆಸ್ಟ್‌ಗೂ ಮುನ್ನ ಪೂಜಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದು, ಪೂಜಾರಗೆ ಮೋದಿ ಅಭಿನಂದನೆ ಸಲ್ಲಿಸಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 100ನೇ ಟೆಸ್ಟ್‌ಗೂ ಮುನ್ನ ಪ್ರಧಾನಿ ಮೋದಿಯವರೊಂದಿಗಿನ ಭೇಟಿಯ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಪೂಜಾರ, ‘ಈ ಕ್ಷಣಗಳು ನನ್ನ ಉತ್ಸಾಹವನ್ನು ಹೆಚ್ಚಿಸಲಿವೆ. ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದು ನನಗೆ ಗೌರವದ ಸಂಗತಿ ಎಂದು ಬರೆದುಕೊಂಡಿದ್ದಾರೆ.

100ನೇ ಟೆಸ್ಟ್​ಗೆ ಪ್ರಧಾನಿ ಮೋದಿ ಶುಭ ಹಾರೈಕೆ

ಮೋದಿಯವರೊಂದಿಗಿನ ಭೇಟಿಯ ಫೋಟೋಗಳನ್ನು ಚೇತೇಶ್ವರ ಪೂಜಾರ ಟ್ವೀಟ್ ಮಾಡಿದ್ದು, ಅದಕ್ಕೆ ರೀ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಪೂಜಾರ ಅವರನ್ನು ಭೇಟಿಯಾಗುವುದು ಆಹ್ಲಾದಕರ ಭಾವನೆ. ಅವರ 100ನೇ ಟೆಸ್ಟ್ ಮತ್ತು ವೃತ್ತಿಜೀವನಕ್ಕೆ ನಾನು ಶುಭ ಹಾರೈಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಚೇತೇಶ್ವರ ಪೂಜಾರ ಟೆಸ್ಟ್ ವೃತ್ತಿಜೀವನ

ಇದುವರೆಗು ಭಾರತದ ಪರ ಪೂಜಾರ 99 ಟೆಸ್ಟ್ ಪಂದ್ಯಗಳನ್ನಾಡಿದ್ದು, ಅದರಲ್ಲಿ 44.15 ಸರಾಸರಿಯಲ್ಲಿ 7021 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು 19 ಶತಕ ಮತ್ತು 34 ಅರ್ಧ ಶತಕಗಳನ್ನು ಬಾರಿಸಿದ್ದಾರೆ. 99 ಟೆಸ್ಟ್‌ಗಳಲ್ಲಿ ಅಜೇಯ 206 ರನ್ ಗಳಿಸಿದ್ದು ಪೂಜಾರ ಅವರ ಅತ್ಯಧಿಕ ವೈಯಕ್ತಿಕ ಸ್ಕೋರ್ ಆಗಿದೆ. ವಿಶೇಷವೆಂದರೆ, ಚೊಚ್ಚಲ ಪಂದ್ಯದಿಂದಲೂ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ಎಸೆತಗಳನ್ನು ಎದುರಿಸಿದ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪೂಜಾರ ಪಾತ್ರರಾಗಿದ್ದು, ಅವರು ಇದುವರೆಗೆ ಟೆಸ್ಟ್‌ನಲ್ಲಿ 15797 ಎಸೆತಗಳನ್ನು ಎದುರಿಸಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:26 am, Wed, 15 February 23