IND vs AUS: ದೆಹಲಿ ಟೆಸ್ಟ್​ಗೂ ಮುನ್ನ ಹೋಟೆಲ್ ಬದಲಿಸಿದ ಟೀಂ ಇಂಡಿಯಾ! ಕಾರಣ ಇಲ್ಲಿದೆ

IND vs AUS: ಪಿಟಿಐ ವರದಿ ಪ್ರಕಾರ, ಈ ಬಾರಿ ಟೀಂ ಇಂಡಿಯಾದ ಆಟಗಾರರಿಗೆ ನೋಯ್ಡಾದ ಹೋಟೆಲ್ ಲೀಲಾದಲ್ಲಿ ವಸತಿ ಕಲ್ಪಿಸಲಾಗಿದೆ.

IND vs AUS: ದೆಹಲಿ ಟೆಸ್ಟ್​ಗೂ ಮುನ್ನ ಹೋಟೆಲ್ ಬದಲಿಸಿದ ಟೀಂ ಇಂಡಿಯಾ! ಕಾರಣ ಇಲ್ಲಿದೆ
ಹೋಟೆಲ್ ಬದಲಿಸಿದ ಟೀಂ ಇಂಡಿಯಾ
Image Credit source: insidesport
Updated By: ಪೃಥ್ವಿಶಂಕರ

Updated on: Feb 16, 2023 | 10:42 AM

ಬಾರ್ಡರ್-ಗವಾಸ್ಕರ್ ಟ್ರೋಫಿ (Border-Gavaskar Trophy) ಟೆಸ್ಟ್ ಸರಣಿಯಲ್ಲಿ ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದು ಬೀಗಿರುವ ಟೀಂ ಇಂಡಿಯಾ (Team India) 4 ಪಂದ್ಯಗಳ ಈ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದೆ. ಇದೀಗ ಎರಡನೇ ಟೆಸ್ಟ್ ಪಂದ್ಯವನ್ನು ಆಡಲು ದೆಹಲಿಗೆ ಬಂದಿಳಿದಿರುವ ಟೀಂ ಇಂಡಿಯಾದ ತಂಗುದಾಣ ಬದಲಾಗಿದೆ. ಅಂದರೆ ಇದರರ್ಥ ಟೀಂ ಇಂಡಿಯಾ ಉಳಿದುಕೊಳ್ಳುವ ಹೋಟೆಲ್ ಬದಲಾಗಿದೆ. ಈ ಬದಲಾವಣೆಗೆ ಪ್ರಮುಖವಾಗಿ 2 ಕಾರಣಗಳಿವೆ. ಸಾಮಾನ್ಯವಾಗಿ, ಟೀಂ ಇಂಡಿಯಾ ದೆಹಲಿಯಲ್ಲಿ ಪಂದ್ಯವನ್ನಾಡುವಾಗಲೆಲ್ಲ ಐಟಿಸಿ ಮೌರ್ಯ ಅಥವಾ ತಾಜ್ ಪ್ಯಾಲೇಸ್ (ITC Maurya or Taj Palace) ಹೋಟೆಲ್‌ಗಳನ್ನು ಬುಕ್ ಮಾಡಲಾಗುತ್ತಿತ್ತು. ಆದರೆ ಇದೀಗ ಪಿಟಿಐ ಮಾಡಿರುವ ವರದಿ ಪ್ರಕಾರ, ಈ ಬಾರಿ ಭಾರತ ತಂಡ ಈ ಎರಡು ಹೋಟೆಲ್‌ಗಳಲ್ಲಿಯೂ ಉಳಿದುಕೊಂಡಿಲ್ಲ.

ಈ ಬಾರಿ ಹೋಟೆಲ್ ಲೀಲಾದಲ್ಲಿ ವಾಸ್ತವ್ಯ

ಪಿಟಿಐ ವರದಿ ಪ್ರಕಾರ, ಈ ಬಾರಿ ಟೀಂ ಇಂಡಿಯಾದ ಆಟಗಾರರಿಗೆ ನೋಯ್ಡಾದ ಹೋಟೆಲ್ ಲೀಲಾದಲ್ಲಿ ವಸತಿ ಕಲ್ಪಿಸಲಾಗಿದೆ. ತಂಡದ ಹೋಟೆಲ್‌ನಲ್ಲಿ ಈ ಬದಲಾವಣೆಗೆ ಪ್ರಮುಖವಾಗಿ ಎರಡು ಕಾರಣಗಳಿವೆ ಎಂದು ತಿಳಿದುಬಂದಿದೆ. ಅದರಲ್ಲಿ ಮೊದಲನೇಯ ಕಾರಣ G20 ಸಮ್ಮೇಳನವಾಗಿದ್ದು, ಎರಡನೇಯದ್ದು ಮದುವೆ ಸೀಸನ್. ಈ ಎರಡು ಕಾರಣಗಳಿಂದ ದೆಹಲಿಯ ತಾಜ್ ಪ್ಯಾಲೇಸ್ ಮತ್ತು ಐಟಿಸಿ ಮೌರ್ಯ ಹೊಟೇಲ್​ಗೆ ಭಾರೀ ಬೇಡಿಕೆ ಉಂಟಾಗಿದೆ. ಈ ಕಾರಣದಿಂದ ಭಾರತ ತಂಡದ ತಂಗುದಾಣವನ್ನು ಬದಲಾಯಿಸಲಾಗಿದೆ. ವಿರಾಟ್ ಕೊಹ್ಲಿ ಹೊರತುಪಡಿಸಿ ತಂಡದ ಎಲ್ಲ ಆಟಗಾರರು ಅಲ್ಲಿಯೇ ಉಳಿದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ICC Rankings: ಟೆಸ್ಟ್​ ಕ್ರಿಕೆಟ್​ನಲ್ಲಿ ಅಶ್ವಿನ್ ನಂ.2; ಕ್ರಿಕೆಟ್​ನಿಂದ ದೂರವಿದ್ದರೂ ಪಂತ್​ಗಿಲ್ಲ ಸರಿಸಾಟಿ..!

ಇಂದು ಚೆಕ್ ಇನ್ ಮಾಡಲಿದ್ದಾರೆ ವಿರಾಟ್

ಪಿಟಿಐ ವರದಿ ಪ್ರಕಾರ, ವಿರಾಟ್ ಕೊಹ್ಲಿ ಇಂದು ಟೀಂ ಹೋಟೆಲ್‌ನಲ್ಲಿ ಚೆಕ್ ಇನ್ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಇಲ್ಲಿಯವರೆಗೆ ವಿರಾಟ್ ಕೊಹ್ಲಿ ಗುರುಗ್ರಾಮ್‌ನಲ್ಲಿರುವ ತಮ್ಮ ಮನೆಯಲ್ಲಿ ಉಳಿದುಕೊಂಡಿದ್ದರು. ಆದರೆ ಇದೀಗ ಅಭ್ಯಾಸ ಹಾಗೂ ಪಂದ್ಯದ ಸಲುವಾಗಿ ಕೊಹ್ಲಿ ತಂಡ ಸೇರಿಕೊಳ್ಳಲಿದ್ದಾರೆ. ಅಲ್ಲದೆ ಇಷ್ಟು ದಿನ ತಮ್ಮ ಮನೆಯಲ್ಲಿಯೇ ಉಳಿದುಕೊಳ್ಳಲು ಕೊಹ್ಲಿ, ತಂಡದ ಆಡಳಿತ ಮಂಡಳಿಯಿಂದ ವಿಶೇಷ ಅನುಮತಿ ಪಡೆದಿದ್ದರು ಎಂದು ತಿಳಿದುಬಂದಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:42 am, Thu, 16 February 23