ಭಾರತದ ವಿರುದ್ಧ ಸತತ 2 ಸೋಲು; ಟಿ20 ಸರಣಿಯಿಂದಲೇ ಹೊರಬಿದ್ದ ಆಸ್ಟ್ರೇಲಿಯಾದ 6 ಆಟಗಾರರು..!

|

Updated on: Nov 28, 2023 | 2:44 PM

IND vs AUS: ಭಾರತ ವಿರುದ್ಧದ ಮೂರನೇ ಟಿ20ಗೂ ಮುನ್ನ ಆಸ್ಟ್ರೇಲಿಯಾ ಮಹತ್ವದ ನಿರ್ಧಾರ ಕೈಗೊಂಡಿದ್ದು, ಅರ್ಧದಷ್ಟು ತಂಡವನ್ನು ಬದಲಾಯಿಸಿದೆ. ಸಿಕ್ಕಿರುವ ಮಾಹಿತಿಯ ಪ್ರಕಾರ, ಆಸ್ಟ್ರೇಲಿಯಾ ತನ್ನ 6 ಆಟಗಾರರಿಗೆ ಸರಣಿಯ ಮಧ್ಯದಲ್ಲಿಯೇ ಮನೆಗೆ ಮರಳಲು ಟಿಕೆಟ್ ನೀಡಿದೆ.

ಭಾರತದ ವಿರುದ್ಧ ಸತತ 2 ಸೋಲು; ಟಿ20 ಸರಣಿಯಿಂದಲೇ ಹೊರಬಿದ್ದ ಆಸ್ಟ್ರೇಲಿಯಾದ 6 ಆಟಗಾರರು..!
ಆಸ್ಟ್ರೇಲಿಯಾ ತಂಡ
Follow us on

ಭಾರತ ವಿರುದ್ಧದ ಮೂರನೇ ಟಿ20ಗೂ ಮುನ್ನ ಆಸ್ಟ್ರೇಲಿಯಾ (India vs Australia) ಮಹತ್ವದ ನಿರ್ಧಾರ ಕೈಗೊಂಡಿದ್ದು, ಅರ್ಧದಷ್ಟು ತಂಡವನ್ನು ಬದಲಾಯಿಸಿದೆ. ಸಿಕ್ಕಿರುವ ಮಾಹಿತಿಯ ಪ್ರಕಾರ, ಆಸ್ಟ್ರೇಲಿಯಾ ತನ್ನ 6 ಆಟಗಾರರಿಗೆ ಸರಣಿಯ ಮಧ್ಯದಲ್ಲಿಯೇ ಮನೆಗೆ ಮರಳಲು ಟಿಕೆಟ್ ನೀಡಿದೆ. ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಆಡಮ್ ಝಂಪಾ (Glenn Maxwell, Steve Smith, Adam Zampa) ಸೇರಿದಂತೆ ತಂಡದ 6 ಆಟಗಾರರು ಭಾರತ ವಿರುದ್ಧದ ಟಿ20 ಸರಣಿಯ ಮಧ್ಯದಲ್ಲಿ ತವರಿಗೆ ವಾಪಸ್ಸಾಗುತ್ತಿದ್ದಾರೆ. ಈ 6 ಆಟಗಾರರಲ್ಲಿ ಕೆಲವರು ಇಂದು ರಾತ್ರಿಯೇ ಆಸ್ಟ್ರೇಲಿಯಾಕ್ಕೆ ತೆರಳುತ್ತಿದ್ದು, ಇನ್ನು ಕೆಲವರು ನಾಳೆ ತವರಿಗೆ ವಾಪಸ್ಸಾಗಲಿದ್ದಾರೆ.

ಆಡಮ್ ಝಂಪಾ, ಮಾರ್ಕಸ್ ಸ್ಟೊಯಿನಿಸ್, ಜೋಶ್ ಇಂಗ್ಲಿಸ್, ಸೀನ್ ಅಬಾಟ್, ಸ್ಟೀವ್ ಸ್ಮಿತ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಸೇರಿದಂತೆ 6 ಆಟಗಾರರನ್ನು ಟಿ20 ಸರಣಿಯಿಂದ ಹೊರಗಿಟ್ಟಿದ್ದು, ಇದೀಗ ಉಳಿದ ಮೂರು ಟಿ20 ಪಂದ್ಯಗಳಿಗೆ ಆಸ್ಟ್ರೇಲಿಯಾದ ಹೊಸ ತಂಡವನ್ನು ಸಹ ಪ್ರಕಟಿಸಲಾಗಿದೆ. ಟಿ20 ಸರಣಿಯಿಂದ ಹಿಂದೆ ಸರಿದಿರುವ ಆಟಗಾರರ ಪೈಕಿ ಸ್ಟೀವ್ ಸ್ಮಿತ್ ಮತ್ತು ಆಡಮ್ ಝಂಪಾ ಇಂದು ರಾತ್ರಿ ಅಂದರೆ ನವೆಂಬರ್ 28 ರಂದು ಆಸ್ಟ್ರೇಲಿಯಾಕ್ಕೆ ವಿಮಾನದ ಮೂಲಕ ತೆರಳಲಿದ್ದಾರೆ. ಉಳಿದ 4 ಆಟಗಾರರು ನವೆಂಬರ್ 29 ರಂದು ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಲಿದ್ದಾರೆ.

IND vs AUS: ಹೆಚ್ಚುವರಿ ಬೌಲರ್​ಗೆ ಆಧ್ಯತೆ; 3ನೇ ಟಿ20 ಪಂದ್ಯಕ್ಕೆ ತಂಡ ಬದಲಿಸ್ತಾರಾ ಸೂರ್ಯ?

ಟಿ20 ಸರಣಿಯಿಂದ ಹೊರಗುಳಿದ್ಯಾದಕೆ?

ಈ ಸರಣಿಯಿಂದ ವಿಶ್ರಾಂತಿ ಪಡೆದಿರುವ 6 ಆಟಗಾರರು 2023 ರ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡದ ಭಾಗವಾಗಿದ್ದರು ಮತ್ತು ನಿರಂತರವಾಗಿ ಕ್ರಿಕೆಟ್ ಆಡುತ್ತಿದ್ದರು. ಹೀಗಾಗಿ ಮುಂಬರುವ ಟೆಸ್ಟ್ ಸರಣಿ ಮತ್ತು ಇತರ ಟೂರ್ನಿಗಳನ್ನು ಗಮನದಲ್ಲಿಟ್ಟುಕೊಂಡು ಈ ಆಟಗಾರರಿಗೆ ಟಿ20 ಸರಣಿಯಿಂದ ವಿರಾಮ ನೀಡಿರುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.

ಟಿ20 ಸರಣಿಯಲ್ಲಿ ಭಾರತದ ಮೇಲುಗೈ

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ 5 ಟಿ20 ಪಂದ್ಯಗಳ ಸರಣಿಯ ಮೊದಲ ಎರಡು ಪಂದ್ಯಗಳು ನಡೆದಿವೆ. ವಿಶಾಖಪಟ್ಟಣಂ ಮತ್ತು ತಿರುವನಂತಪುರಂನಲ್ಲಿ ಆಡಿದ ಮೊದಲ ಎರಡು ಪಂದ್ಯಗಳನ್ನೂ ಭಾರತ ಗೆದ್ದಿದೆ. ಇದರೊಂದಿಗೆ ಭಾರತ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಈಗ ಗುವಾಹಟಿಯಲ್ಲಿ ನಡೆಯಲಿರುವ ಮೂರನೇ ಟಿ20 ಪಂದ್ಯವನ್ನೂ ಗೆದ್ದರೆ ಭಾರತ ಸರಣಿ ವಶಪಡಿಸಿಕೊಳ್ಳಲಿದೆ. ಸ್ಮಿತ್, ಝಂಪಾ, ಮ್ಯಾಕ್ಸ್‌ವೆಲ್‌ರಂತಹ ದೊಡ್ಡ ಆಟಗಾರರ ಅನುಪಸ್ಥಿತಿಯಲ್ಲಿ ಭಾರತಕ್ಕೆ ಈ ಸಾಧನೆ ಮಾಡುವುದು ಸುಲಭವಾಗಿದೆ.

ಉಳಿದ 3 ಪಂದ್ಯಗಳಿಗೆ ಆಸ್ಟ್ರೇಲಿಯಾ ತಂಡ

ಮ್ಯಾಥ್ಯೂ ವೇಡ್ (ನಾಯಕ), ಜೇಸನ್ ಬೆಹ್ರೆನ್‌ಡಾರ್ಫ್, ಟಿಮ್ ಡೇವಿಡ್, ಬೆನ್ ದ್ವಾರಶುಯಿಸ್, ನಾಥನ್ ಎಲ್ಲಿಸ್, ಕ್ರಿಸ್ ಗ್ರೀನ್, ಆರನ್ ಹಾರ್ಡಿ, ಟ್ರಾವಿಸ್ ಹೆಡ್, ಬೆನ್ ಮೆಕ್‌ಡಾರ್ಮೊಟ್, ಜೋಶ್ ಫಿಲಿಪ್ಸ್, ತನ್ವೀರ್ ಸಂಘ. ಮ್ಯಾಟ್ ಶಾರ್ಟ್, ಕೇನ್ ರಿಚರ್ಡ್ಸನ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.