IND vs AUS: ಭಾರತ- ಆಸ್ಟ್ರೇಲಿಯಾ 2ನೇ ಏಕದಿನ ಪಂದ್ಯಕ್ಕೆ ಮಳೆ ಭೀತಿ; ಇಲ್ಲಿದೆ ಇಂದೋರ್‌ ಹವಾಮಾನ ವರದಿ

|

Updated on: Sep 24, 2023 | 8:14 AM

Indore Weather Forecast: ಇಂದೋರ್‌ನಲ್ಲಿ ಭಾನುವಾರ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ. ಆದರೆ ಭಾರೀ ಮಳೆಯಾಗುವುದಿಲ್ಲ ಎಂಬುದು ಸಮಾಧಾನಕರ ಸಂಗತಿಯಾಗಿದೆ. ಹೀಗಾಗಿ ಪಂದ್ಯದ ಫಲಿತಾಂಶ ನಿರ್ಧಾರವಾಗುವುದು ಖಚಿತ ಎಂದು ಭಾವಿಸಲಾಗಿದೆ.

IND vs AUS: ಭಾರತ- ಆಸ್ಟ್ರೇಲಿಯಾ 2ನೇ ಏಕದಿನ ಪಂದ್ಯಕ್ಕೆ ಮಳೆ ಭೀತಿ; ಇಲ್ಲಿದೆ ಇಂದೋರ್‌ ಹವಾಮಾನ ವರದಿ
ಇಂದೋರ್‌ ಹವಾಮಾನ ವರದಿ
Follow us on

ಮೊಹಾಲಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅದ್ಭುತ ಜಯ ಸಾಧಿಸಿದ ಭಾರತ ಕ್ರಿಕೆಟ್ ತಂಡ (India vs Australia) ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಈಗ ಈ ಎರಡೂ ತಂಡಗಳು ಭಾನುವಾರ ಇಂದೋರ್‌ನ ಹೋಲ್ಕರ್ ಕ್ರೀಡಾಂಗಣದಲ್ಲಿ (Holkar Cricket Stadium, Indore) ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ (Team India) ಮತ್ತೊಂದು ಗೆಲುವಿನ ಮೇಲೆ ಕಣ್ಣಿಟ್ಟಿದ್ದು, ಈ ಗೆಲುವಿನೊಂದಿಗೆ ಸರಣಿಯನ್ನು ಕೈವಶ ಮಾಡಿಕೊಳ್ಳುವ ತವಕದಲ್ಲಿದೆ. ಮತ್ತೊಂದೆಡೆ, ಪ್ರವಾಸಿ ಆಸ್ಟ್ರೇಲಿಯಾ ತಂಡ ಯಾವುದೇ ಬೆಲೆ ತೆತ್ತಾದರೂ ಈ ಪಂದ್ಯವನ್ನು ಗೆದ್ದು ಸರಣಿಯನ್ನು ಜೀವಂತವಾಗಿರಿಸಲು ಪ್ರಯತ್ನಿಸಲಿದೆ. ಆದರೆ ಈ ಎರಡನೇ ಪಂದ್ಯದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿ ಮಾಡಿರುವುದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.

ವಾಸ್ತವವಾಗಿ ಮೊದಲ ಏಕದಿನ ಪಂದ್ಯದಲ್ಲೂ ಮಳೆ ಕಾಣಿಸಿಕೊಂಡಿತ್ತು. ಹಾಗಾಗಿ ಪಂದ್ಯವನ್ನು ಕೆಲಕಾಲ ನಿಲ್ಲಿಸಲಾಯಿತು. ಆದರೆ ಮಳೆ ಪಂದ್ಯದ ಮೇಲೆ ಪರಿಣಾಮ ಬೀರಲಿಲ್ಲ. ಇದೀಗ ಎರಡನೇ ಏಕದಿನ ಪಂದ್ಯದಲ್ಲೂ ಮಳೆ ಹಾಜರಿ ಹಾಕಬಹುದು ಎಂದು ಹವಾಮಾನ ಇಲಾಖೆ ತನ್ನ ವರದಿಯಲ್ಲಿ ತಿಳಿಸಿದೆ.

IND vs AUS: ಹೋಳ್ಕರ್ ಮೈದಾನದಲ್ಲಿ ಟೀಂ ಇಂಡಿಯಾದ ಸಾಧನೆ ಏನು ಗೊತ್ತಾ?

ಹವಾಮಾನ ವರದಿ

ಇಂದೋರ್‌ನಲ್ಲಿ ಭಾನುವಾರ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ. ಆದರೆ ಭಾರೀ ಮಳೆಯಾಗುವುದಿಲ್ಲ ಎಂಬುದು ಸಮಾಧಾನಕರ ಸಂಗತಿಯಾಗಿದೆ. ಹೀಗಾಗಿ ಪಂದ್ಯದ ಫಲಿತಾಂಶ ನಿರ್ಧಾರವಾಗುವುದು ಖಚಿತ ಎಂದು ಭಾವಿಸಲಾಗಿದೆ. ಆದರೆ ಮಳೆಯಿಂದಾಗಿ ಪಂದ್ಯಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ.

ಪಂದ್ಯ ಮಧ್ಯಾಹ್ನ 1:30ಕ್ಕೆ ಆರಂಭವಾಗಲಿದೆ. ಅದಕ್ಕೂ ಮುನ್ನ ಮಧ್ಯಾಹ್ನ 12 ಗಂಟೆಗೆ ಶೇ.23ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಮಧ್ಯಾಹ್ನ 3 ರಿಂದ 6 ರವರೆಗೆ ಶೇ.24ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಶೇ. 19 ರಷ್ಟು ರಾತ್ರಿ ವೇಳೆ ಮಳೆಯಾಗುವ ಸಾಧ್ಯತೆ. ಹವಾಮಾನ ಇಲಾಖೆಯ ಒಟ್ಟಾರೆ ಮುನ್ಸೂಚನೆಯ ಪ್ರಕಾರ, ಮಳೆಯು ಪಂದ್ಯಕ್ಕೆ ಅಡ್ಡಿಪಡಿಸುತ್ತದೆಯಾದರೂ ಪಂದ್ಯವನ್ನು ಪೂರ್ಣಗೊಳಿಸಲು ಯಾವುದೇ ಸಮಸ್ಯೆಯಾಗುವುದಿಲ್ಲ. ಆದರೆ ಮೋಡ ಕವಿದ ವಾತಾವರಣವಿರುವುದರಿಂದ ಇದು ಬೌಲರ್‌ಗಳಿಗೆ ಹೆಚ್ಚು ನೆರವಾಗಲಿದೆ.

ಮೊದಲು ಬ್ಯಾಟ್ ಮಾಡುವುದು ಲಾಭದಾಯಕ

ಹೋಳ್ಕರ್ ಕ್ರೀಡಾಂಗಣದಲ್ಲಿ ಇದುವರೆಗೆ ಒಟ್ಟು ಎಂಟು ಏಕದಿನ ಪಂದ್ಯಗಳು ನಡೆದಿವೆ. ಈ ಎಂಟು ಪಂದ್ಯಗಳಲ್ಲಿ ಮೊದಲು ಬೌಲಿಂಗ್ ಮಾಡಿದ ತಂಡ ಗೆದ್ದಿರುವುದು ಎರಡು ಬಾರಿ ಮಾತ್ರ. ಈ ಕ್ರೀಡಾಂಗಣದಲ್ಲಿ ಮೊದಲ ಪಂದ್ಯ 2006ರಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದಿತ್ತು. ಈ ಪಂದ್ಯದಲ್ಲಿ ಭಾರತ ಗೆದ್ದಿತ್ತು. ಈ ಪಂದ್ಯದಲ್ಲೂ ಭಾರತ ಎರಡನೇ ಇನ್ನಿಂಗ್ಸ್ ಆಡುವ ಮೂಲಕ ಗೆಲುವು ಸಾಧಿಸಿದೆ. ಇದಾದ ಬಳಿಕ 2017ರಲ್ಲಿ ಭಾರತ ಎರಡನೇ ಇನ್ನಿಂಗ್ಸ್ ಆಡುವಾಗ ಜಯ ಸಾಧಿಸಿತ್ತು. ಈ ಎರಡು ಸಂದರ್ಭಗಳನ್ನು ಹೊರತುಪಡಿಸಿ ಉಳಿದ ಆರು ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿದ ತಂಡವೇ ಗೆಲುವು ಸಾಧಿಸಿದೆ. ಈ ಅಂಕಿಅಂಶಗಳನ್ನು ಗಮನಿಸಿದರೆ, ಉಭಯ ತಂಡಗಳ ನಾಯಕರು ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಲು ಬಯಸುತ್ತಾರೆ. ಆದರೆ, ಇಲ್ಲಿ ಭಾರತ ಎರಡನೇ ಇನ್ನಿಂಗ್ಸ್ ಆಡುವ ಮೂಲಕ ಹೇಗೆ ಗೆಲ್ಲಬೇಕು ಎಂಬುದನ್ನು ತೋರಿಸಿಕೊಟ್ಟಿದೆ, ಹೀಗಾಗಿ ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್ ಕೂಡ ಆಡಿದರೆ ತೊಂದರೆ ಇಲ್ಲ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ