ಐದು ದಿನಗಳ ಕಾಲ ಅಭಿಮಾನಿಗಳಿಗೆ ಮನರಂಜನೆ ನೀಡಬೇಕಿದ್ದ ನಾಗ್ಪುರ ಟೆಸ್ಟ್ (Nagpur Test) ಕೇವಲ ಮೂರೇ ದಿನದಲ್ಲಿ ಮುಕ್ತಾಯವಾಗಿದೆ. ಗೆಲುವು ಟೀಂ ಇಂಡಿಯಾ ಪಾಲಿಗಾದ್ದರಿಂದ ಅಭಿಮಾನಿಗಳಿಗೆ ಹೆಚ್ಚು ಬೇಸರವಾಗಿಲ್ಲ. ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಹೀನಾಯವಾಗಿ ಸೋಲಿಸಿರುವ ಟೀಂ ಇಂಡಿಯಾ (India Vs Australia) ಸರಣಿಯಲ್ಲಿ ಮುನ್ನಡೆ ಸಾಧಿಸುವುದರೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಆದರೆ ಈ ನಾಗ್ಪುರ ಟೆಸ್ಟ್ ಕಿಂಗ್ ಕೊಹ್ಲಿಗೆ (Virat Kohli) ಮಾತ್ರ ಹೇಳಿಕೊಳ್ಳುವಂತಹ ಹೆಸರು ತಂದು ಕೊಡಲಿಲ್ಲ. ಬ್ಯಾಟಿಂಗ್ನಲ್ಲಿ ಕೇವಲ 12 ರನ್‌ಗಳಿಗೆ ಸುಸ್ತಾದ ಕೊಹ್ಲಿ, ಫೀಲ್ಡಿಂಗ್ನಲ್ಲೂ ಬರೋಬ್ಬರಿ 3 ಕ್ಯಾಚ್ಗಳನ್ನು ಕೈಚೆಲ್ಲಿ, ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದರು. ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಕೊಹ್ಲಿ, ತನ್ನ ಎಂದಿನ ಶೈಲಿಯಲ್ಲಿ ಪಂದ್ಯದ ಪ್ರತಿ ಕ್ಷಣವನ್ನು ಎಂಜಾಯ್ ಮಾಡುವುದರೊಂದಿಗೆ, ಪಂದ್ಯದಲ್ಲಿ ನನ್ನ ಪ್ರದರ್ಶನ ಹೇಗಿದ್ದರೇನೂ, ನಾನು ಇರುವುದೇ ಹೀಗೆ ಎಂಬುದನ್ನು ಮತ್ತೊಮ್ಮೆ ಸಾಭೀತು ಮಾಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿ ಬಾಲಿವುಡ್ನಲ್ಲಿ ಅಬ್ಬರಿಸುತ್ತಿರುವ ಪಠಾಣ್ (Pathan) ಮೂವಿ ಹಾಡೊಂದಕ್ಕೆ ಸ್ಟೆಪ್ ಹಾಕಿರುವ ಕೊಹ್ಲಿಯ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಇದೀಗ ಸಖತ್ ವೈರಲ್ ಆಗುತ್ತಿದೆ.
ಈ ಪಂದ್ಯದ ಮೂರನೇ ದಿನ ಆಸ್ಟ್ರೇಲಿಯ ತಂಡ ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಲು ಮುಂದಾದಾಗ ಭಾರತ ತಂಡ ಬೌಂಡರಿ ಬಳಿ ಮೈದಾನ ಪ್ರವೇಶಿಸಲು ಕಾದು ನಿಂತಿತ್ತು. ಇದಾದ ಬಳಿಕ ಇದ್ದಕ್ಕಿದ್ದಂತೆ ವಿರಾಟ್ ಕೊಹ್ಲಿ ಡ್ಯಾನ್ಸ್ ಮಾಡಲು ಆರಂಭಿಸಿದರು. ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರೊಂದಿಗೆ ಮಾತನಾಡುವಾಗ, ಶಾರುಖ್ ಖಾನ್ ಅವರ ಸೂಪರ್‌ಹಿಟ್ ಚಿತ್ರ ಪಠಾಣ್‌ನ ‘ಜುಮೆ ಜೋ ಪಠಾಣ್’ ಹಾಡಿಗೆ ಹೆಜ್ಜೆ ಹಾಕಲು ಕೊಹ್ಲಿ ಪ್ರಾರಂಭಿಸಿದರು. ಜಡೇಜಾ ಕೂಡ ಕೊಹ್ಲಿ ಜೊತೆ ಸ್ಟೆಪ್ ಹಾಕಲು ಪ್ರಯತ್ನಿಸಿದರೂ ಯಶಸ್ವಿಯಾಗಲಿಲ್ಲ.
IND vs PAK: ಸ್ಮೃತಿ ಬದಲು ಯಾರು ಓಪನರ್? ಪಾಕ್ ವಿರುದ್ಧ ಭಾರತ ಸಂಭ್ಯಾವ್ಯ ತಂಡ ಹೀಗಿದೆ
ಈ ವಿಡಿಯೋವನ್ನು ಕೊಹ್ಲಿ ಅಭಿಮಾನಿಯೊಬ್ಬರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದು, ‘ಇದು ಕೊಹ್ಲಿ ಎಂದರೆ. ಪಂದ್ಯದಲ್ಲಿ ಏನನ್ನೂ ಮಾಡದಿರಬಹುದು. ಆದರೆ, ತಮ್ಮ ಸ್ಟೈಲ್ನಿಂದ ಕೆಲ ಕ್ಷಣ ಅಭಿಮಾನಿಗಳನ್ನು ರಂಜಿಸುತ್ತಾರೆ’ ಎಂದು ಬರೆದುಕೊಂಡಿದ್ದಾರೆ.
That’s Kohli ?… nothing Do in game But he give his moves So can Add A movement #jhum #ViratKohli? #Pathaan #INDvsAUS #BorderGavaskarTrophy2023 movement pic.twitter.com/5BuTrjstMp
— Sartaj ?? (@i_amSartaj) February 11, 2023
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸೀಸ್ ತಂಡ ಭಾರತದ ಸ್ಪಿನ್ ದಾಳಿಗೆ ಸಿಲುಕಿ ಕೇವಲ 177 ರನ್‌ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿತು. ಜಡೇಜಾ ಸ್ಪಿನ್ ದಾಳಿಗೆ ನಲುಗಿದ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್ಮನ್ಗಳು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಸೇರಿಕೊಂಡರು. ಬರೋಬ್ಬರಿ 5 ತಿಂಗಳ ನಂತರ ಮೈದಾನಕ್ಕೆ ಮರಳಿದ ಜಡೇಜಾ 5 ವಿಕೆಟ್ ಪಡೆದು ಮಿಂಚಿದರು. ಹಾಗೆಯೇ ಜಡೇಜಾ ಜೊತೆ ಕೈ ಜೋಡಿಸಿದ ಅಶ್ವಿನ್ ಕೂಡ 3 ಬಲಿ ಪಡೆದಿದ್ದರು.
ಇದಾದ ಬಳಿಕ ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ ರೋಹಿತ್ ಶರ್ಮಾ ಅವರ ಶತಕ (120 ರನ್) ಹಾಗೂ ರವೀಂದ್ರ ಜಡೇಜಾ (70 ರನ್) ಮತ್ತು ಅಕ್ಷರ್ ಪಟೇಲ್ (84 ರನ್) ಅವರ ಅರ್ಧಶತಕದ ನೆರವಿನಿಂದ 400 ರನ್ ಗಳಿಸಿತು. ಆಸ್ಟ್ರೇಲಿಯಾ ಪರ ಮೊದಲ ಇನ್ನಿಂಗ್ಸ್‌ನಲ್ಲಿ 7 ವಿಕೆಟ್ ಪಡೆದ ಟಾಡ್ ಮರ್ಫಿ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡರು.
ಮೊದಲ ಇನಿಂಗ್ಸ್‌ನಂತೆ ಆಸ್ಟ್ರೇಲಿಯಾದ ಎರಡನೇ ಇನ್ನಿಂಗ್ಸ್ ಕೂಡ ಉತ್ತಮ ಆರಂಭ ಪಡೆಯಲಿಲ್ಲ. ಓಪನರ್ ಉಸ್ಮಾನ್ ಖವಾಜಾ ಮತ್ತೊಮ್ಮೆ ನಿರಾಸೆ ಮೂಡಿಸಿದಲ್ಲದೆ, ಸತತ ಎರಡನೇ ಇನ್ನಿಂಗ್ಸ್‌ನಲ್ಲಿ ಸಿಂಗಲ್ ಡಿಜಿಟ್‌ಗೆ ವಿಕೆಟ್ ಒಪ್ಪಿಸಿದರು. ಅಶ್ವಿನ್, ಖವಾಜಾ ವಿಕೆಟ್ ಪಡೆದರು. ಇದಾದ ನಂತರ ಬಂದ ಜಡೇಜಾ, ವಿಶ್ವದ ನಂಬರ್ ಒನ್ ಟೆಸ್ಟ್ ಬ್ಯಾಟ್ಸ್‌ಮನ್ ಮಾರ್ನಸ್ ಲಬುಶೆನ್ರನ್ನು ಕೇವಲ 17 ರನ್‌ಗಳಿಗೆ ಪೆವಿಲಿಯನ್ಗಟ್ಟಿದರು. ಇದಾದ ಬಳಿಕ ಆಸ್ಟ್ರೇಲಿಯದ ಬ್ಯಾಟಿಂಗ್ ಬೆನ್ನೆಲುಬು ಮುರಿಯಲ್ಲಾರಂಭಿಸಿದ ಅಶ್ವಿನ್ ಒಂದರ ಹಿಂದೆ ಒಂದರಂತೆ ವಿಕೆಟ್ ಕೀಳಲಾರಂಭಿಸಿದರು. ಇತ್ತ ಅಶ್ವಿನ್ ಸ್ಪಿನ್ ಜಾದು ಅರಿಯುವಲ್ಲಿ ವಿಫಲರಾದ ಆಸೀಸ್ ಬ್ಯಾಟರ್ಗಳು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಸೇರಿಕೊಂಡರು. ತಂಡದ ಪರ ಸ್ಟೀವ್ ಸ್ಮಿತ್ (25) ಕೊಂಚ ಪ್ರತಿರೋಧ ತೋರಿದ್ದು ಬಿಟ್ಟರೆ, ಮತ್ತ್ಯಾವ ಆಟಗಾರನಿಗೂ ಭಾರತದ ಸ್ಪಿನ್ ದಾಳಿ ಮುಂದೆ ನೆಲಕಚ್ಚಿ ನಿಲ್ಲಲು ಸಾಧ್ಯವಾಗಲಿಲ್ಲ. ಇದರಿಂದ ಕಾಂಗರೂ ತಂಡ ಕೇವಲ 91 ರನ್‌ಗಳಿಗೆ ಆಲೌಟ್ ಆಯಿತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:53 am, Sun, 12 February 23