
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಅಕ್ಟೋಬರ್ 19 ರಂದು ಆರಂಭವಾಗಲಿದೆ. ಸರಣಿಗೆ ಸಿದ್ಧತೆ ನಡೆಸುತ್ತಿರುವ ಟೀಂ ಇಂಡಿಯಾ ಮೈದಾನದಲ್ಲಿ ಸಾಕಷ್ಟು ಬೆವರು ಹರಿಸುತ್ತಿದೆ. ಏತನ್ಮಧ್ಯೆ, ಆತಿಥೇಯ ಆಸ್ಟ್ರೇಲಿಯಾ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ತಂಡದ ಸ್ಟಾರ್ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಗಾಯದಿಂದಾಗಿ ಸರಣಿಯಿಂದ ಬಿದ್ದಿದ್ದಾರೆ.

ಫಿಟ್ನೆಸ್ ಸಮಸ್ಯೆಗಳಿಂದಾಗಿ ಸುಮಾರು 12 ತಿಂಗಳ ಕಾಲ ತಂಡದಿಂದ ಹೊರಗುಳಿದಿದ್ದ ಗ್ರೀನ್, ಈ ವರ್ಷದ ಆಗಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯೊಂದಿಗೆ ತಂಡಕ್ಕೆ ಮರಳಿದ್ದರು. ಆದಾಗ್ಯೂ ಅವರಿಗೆ ಬೆನ್ನು ನೋವಿನ ಸಮಸ್ಯೆ ಮತ್ತೆ ಕಂಡುಬಂದಿದ್ದು, ಇದರಿಂದಾಗಿ ಅವರ ಏಕದಿನ ಸರಣಿಯಿಂದ ಹೊರಬಿದಿದ್ದಾರೆ.

ಹೀಗಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಕ್ಯಾಮರೂನ್ ಗ್ರೀನ್ ಬದಲಿಗೆ ಸ್ಟಾರ್ ಬ್ಯಾಟ್ಸ್‌ಮನ್ ಮಾರ್ನಸ್ ಲಬುಶೇನ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದಕ್ಕಾಗಿ ಲಬುಶೇನ್ ಅವರನ್ನು ಭಾರತದ ವಿರುದ್ಧದ ಏಕದಿನ ಸರಣಿಗೆ ಆಯ್ಕೆದಾರರು ಆಯ್ಕೆ ಮಾಡಲಿಲ್ಲ. ಆದಾಗ್ಯೂ, ಇತ್ತೀಚಿನ ಶೆಫೀಲ್ಡ್ ಶೀಲ್ಡ್ ಮತ್ತು ದೇಶೀಯ ಏಕದಿನ ಪಂದ್ಯಾವಳಿಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ ಲಬುಶೇನ್ಗೆ ಮತ್ತೊಮ್ಮೆ ಆಸೀಸ್ ತಂಡದ ಬಾಗಿಲು ತೆರೆದಿದೆ.

ಏಕದಿನ ಕಪ್‌ನಲ್ಲಿ ಕ್ವೀನ್ಸ್‌ಲ್ಯಾಂಡ್ ಪರ ಆಡುತ್ತಿದ್ದ ಲಬುಶೇನ್ ಮೂರು ಇನ್ನಿಂಗ್ಸ್‌ಗಳಲ್ಲಿ ಎರಡು ಶತಕಗಳು ಸೇರಿದಂತೆ 79 ರ ಸರಾಸರಿಯಲ್ಲಿ 237 ರನ್ ಗಳಿಸಿದರು. ಆ ನಂತರ ನಡೆದ ಶೆಫೀಲ್ಡ್ ಶೀಲ್ಡ್‌ನಲ್ಲಿ ದಕ್ಷಿಣ ಆಸ್ಟ್ರೇಲಿಯಾ ವಿರುದ್ಧ 197 ಎಸೆತಗಳಲ್ಲಿ 159 ರನ್ ಗಳಿಸಿದರು. ಇದು ಐದು ಪಂದ್ಯಗಳಲ್ಲಿ ಅವರ ನಾಲ್ಕನೇ ಶತಕವಾಗಿದೆ.

ಆಸ್ಟ್ರೇಲಿಯಾ ತಂಡ: ಮಿಚೆಲ್ ಮಾರ್ಷ್ (ನಾಯಕ), ಕ್ಸೇವಿಯರ್ ಬಾರ್ಟ್ಲೆಟ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಕೂಪರ್ ಕಾನೊಲಿ, ಬೆನ್ ದ್ವಾರ್ಶುಯಿಸ್, ನಾಥನ್ ಎಲ್ಲಿಸ್, ಲಬುಶೇನ್, ಜೋಶ್ ಹೇಜಲ್‌ವುಡ್, ಟ್ರಾವಿಸ್ ಹೆಡ್, ಮ್ಯಾಥ್ಯೂ ಕುಹ್ನೆಮನ್, ಮಿಚೆಲ್ ಓವನ್, ಜೋಶ್ ಫಿಲಿಪ್ (ವಿಕೆಟ್ ಕೀಪರ್), ಮ್ಯಾಟ್ ರೆನ್‌ಶಾ, ಮ್ಯಾಥ್ಯೂ ಶಾರ್ಟ್, ಮಿಚೆಲ್ ಸ್ಟಾರ್ಕ್