Ranji Trophy: ಒಂದೇ ಇನ್ನಿಂಗ್ಸ್‌ನಲ್ಲಿ 8 ವಿಕೆಟ್ ಉರುಳಿಸಿದ ಕನ್ನಡಿಗ ಶ್ರೇಯಸ್ ಗೋಪಾಲ್
Ranji Trophy 2025-26: 2025-26ರ ರಣಜಿ ಟ್ರೋಫಿ ಪಂದ್ಯದಲ್ಲಿ ಶ್ರೇಯಸ್ ಗೋಪಾಲ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಸೌರಾಷ್ಟ್ರ ವಿರುದ್ಧ ಕರ್ನಾಟಕದ ಮೊದಲ ಇನ್ನಿಂಗ್ಸ್‌ನಲ್ಲಿ 56 ರನ್ ಗಳಿಸಿದ ನಂತರ, ಗೋಪಾಲ್ ತಮ್ಮ ವೃತ್ತಿಜೀವನದ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿ 8 ವಿಕೆಟ್ ಕಬಳಿಸಿದರು. ಅವರ ಆಲ್ರೌಂಡ್ ಪ್ರದರ್ಶನದಿಂದಾಗಿ ಕರ್ನಾಟಕ ತಂಡ ಸೌರಾಷ್ಟ್ರವನ್ನು ಬೃಹತ್ ಮುನ್ನಡೆ ಪಡೆಯದಂತೆ ತಡೆಯಲು ಸಾಧ್ಯವಾಯಿತು.
2025-26ರ ರಣಜಿ ಟ್ರೋಫಿಯ ಮೊದಲ ಪಂದ್ಯ ಕರ್ನಾಟಕ ಹಾಗೂ ಸೌರಾಷ್ಟ್ರ ನಡುವೆ ನಡೆಯುತ್ತಿದೆ. ಈ ಪಂದ್ಯದಲ್ಲಿ ಎರಡೂ ತಂಡಗಳು ಮೊದಲ ಇನ್ನಿಂಗ್ಸ್ ಆಡಿ ಮುಗಿಸಿದ್ದು, ಕರ್ನಾಟಕ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 372 ರನ್ ಕಲೆಹಾಕಿದರೆ, ಇತ್ತ ಸೌರಾಷ್ಟ್ರ ತಂಡ 376 ರನ್ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿದೆ. ಈ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ 4 ರನ್‌ಗಳ ಮುನ್ನಡೆ ಪಡೆದುಕೊಂಡಿದೆ. ಆತಿಥೇಯ ಸೌರಾಷ್ಟ್ರ ತಂಡ ಬೃಹತ್ ಮುನ್ನಡೆ ಪಡೆಯದಂತೆ ತಡೆಯುವಲ್ಲಿ ಪ್ರಮುಖ ಪಾತ್ರವಹಿಸಿದ ಶ್ರೇಯಸ್ ಗೋಪಾಲ್ ತಮ್ಮ ವೃತ್ತಿಜೀವನದ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡುವ ಮೂಲಕ ಸೌರಾಷ್ಟ್ರ ತಂಡದ ಪ್ರಮುಖ 8 ವಿಕೆಟ್‌ಗಳನ್ನು ಕಬಳಿಸಿದರು.
ಚಿರಾಗ್ ಜಾನಿ (90) ಅವರನ್ನು ಔಟ್ ಮಾಡುವ ಮೂಲಕ ತಮ್ಮ ವಿಕೆಟ್‌ಗಳ ಖಾತೆ ತೆರೆದ ಶ್ರೇಯಸ್, ಆ ನಂತರ ಜೇ ಗೋಹಿಲ್ (3), ಅರ್ಪಿತ್ ವಾಸವಾಡ (58), ಅಂಶ್ ಗೋಸಾಯಿ (19), ಪ್ರೇರಕ್ ಮಂಕಡ್ (27), ಗಜ್ಜರ್ ಸಮ್ಮರ್ (45), ಧರ್ಮೇಂದ್ರ ಸಿಂಗ್ ಜಡೇಜಾ (10) ಮತ್ತು ಚೇತನ್ ಸಕರಿಯಾ (29) ಅವರನ್ನು ಔಟ್ ಮಾಡಿದರು. ಒಟ್ಟು 39.3 ಓವರ್‌ಗಳನ್ನು ಬೌಲ್ ಮಾಡಿದ ಶ್ರೇಯಸ್ 110 ರನ್‌ಗಳನ್ನು ಬಿಟ್ಟುಕೊಟ್ಟು 8 ವಿಕೆಟ್ ಕಬಳಿಸಿದರು.
ಬೌಲಿಂಗ್ನಲ್ಲಿ ಮ್ಯಾಜಿಕ್ ಮಾಡುವುದಕ್ಕೂ ಮುನ್ನ ಬ್ಯಾಟಿಂಗ್ನಲ್ಲೂ ಮಿಂಚಿದ ಶ್ರೇಯಸ್, ಕರ್ನಾಟಕದ ಮೊದಲ ಇನ್ನಿಂಗ್ಸ್‌ನಲ್ಲಿ ಅದ್ಭುತ ಅರ್ಧಶತಕ (56) ಬಾರಿಸಿದರು. ಇದು ಅವರ 16 ನೇ ಪ್ರಥಮ ದರ್ಜೆ ಅರ್ಧಶತಕವಾಗಿತ್ತು. ಅರ್ಧಶತಕ ಬಾರಿಸಿದ್ದು ಮಾತ್ರವಲ್ಲದೆ ಸ್ಮರಣ್ ಅವರೊಂದಿಗೆ ಆರನೇ ವಿಕೆಟ್‌ಗೆ 90 ರನ್‌ಗಳ ನಿರ್ಣಾಯಕ ಪಾಲುದಾರಿಕೆಯನ್ನು ಹಂಚಿಕೊಂಡರು. ಅಂತಿಮವಾಗಿ ಗೋಪಾಲ್ 95 ಎಸೆತಗಳಲ್ಲಿ 56 ರನ್ ಗಳಿಸಿ ಔಟಾದರು, ಇದರಲ್ಲಿ ನಾಲ್ಕು ಬೌಂಡರಿಗಳು ಮತ್ತು ಮೂರು ಸಿಕ್ಸರ್‌ಗಳು ಸೇರಿದ್ದವು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

