34 ಎಸೆತಗಳಲ್ಲಿ ಸ್ಫೋಟಕ ಶತಕ; ವಿಶ್ವ ದಾಖಲೆ ನಿರ್ಮಿಸಿದ ಕಿರಣ್ ನವಗಿರೆ
Kiran Navgire's T20 World Record: ಭಾರತದ ಕಿರಣ್ ನವಗಿರೆ ದೇಶೀ ಮಹಿಳಾ T20 ಕ್ರಿಕೆಟ್‌ನಲ್ಲಿ ಮಹಾರಾಷ್ಟ್ರ ತಂಡದ ಪರ ಅತಿ ವೇಗದ ಶತಕ ಬಾರಿಸಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಪಂಜಾಬ್ ವಿರುದ್ಧ ಕೇವಲ 34 ಎಸೆತಗಳಲ್ಲಿ 106 ರನ್ ಗಳಿಸಿ, 2021ರಲ್ಲಿ ಸೋಫಿ ಡಿವೈನ್ ಹೆಸರಿನಲ್ಲಿದ್ದ 35 ಎಸೆತಗಳ ವಿಶ್ವ ದಾಖಲೆಯನ್ನು ಮುರಿದಿದ್ದಾರೆ. ಈ ಸ್ಫೋಟಕ ಇನ್ನಿಂಗ್ಸ್ ಮೂಲಕ ಮಹಾರಾಷ್ಟ್ರ ತಂಡ ಕೇವಲ 8 ಓವರ್‌ಗಳಲ್ಲಿ ಗೆಲುವು ಸಾಧಿಸಿತು.
ಭಾರತದ ಸ್ಫೋಟಕ ಮಹಿಳಾ ಕ್ರಿಕೆಟರ್ ಕಿರಣ್ ನವಗಿರೆ ದೇಶೀ ಪಂದ್ಯಾವಳಿಯಲ್ಲಿ ವಿಶ್ವ ದಾಖಲೆಯೊಂದಿಗೆ ಇತಿಹಾಸ ನಿರ್ಮಿಸಿದ್ದಾರೆ. ಮಹಾರಾಷ್ಟ್ರ ಮತ್ತು ಪಂಜಾಬ್ ನಡುವಿನ ಟಿ20 ಪಂದ್ಯದಲ್ಲಿ ಕಿರಣ್ ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕ ಬಾರಿಸಿ ವಿಶ್ವ ದಾಖಲೆ ಸೃಷ್ಟಿಸಿದ್ದಾರೆ.ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡ ಆರು ವಿಕೆಟ್ ನಷ್ಟಕ್ಕೆ 110 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ಮಹಾರಾಷ್ಟ್ರ ಪರ ರನ್‌ಗಳ ಮಳೆ ಹರಿಸಿದ ಕಿರಣ್ ಔಟಾಗದೆ 106 ರನ್ ಗಳಿಸಿ ತಂಡಕ್ಕೆ ಕೇವಲ ಎಂಟು ಓವರ್‌ಗಳಲ್ಲಿ ಭರ್ಜರಿ ಗೆಲುವು ತಂದುಕೊಟ್ಟರು.
ಪಂಜಾಬ್ ನೀಡಿದ 111 ರನ್‌ಗಳ ಗುರಿ ಬೆನ್ನಟ್ಟಿದ ಮಹಾರಾಷ್ಟ್ರಕ್ಕೆ ಆರಂಭಿಕ ಆಘಾತ ಎದುರಾಯಿತು ಆರಂಭಿಕ ಆಟಗಾರ್ತಿ ಈಶ್ವರಿ ಸಾವ್ಕರ್ ಕೇವಲ ಒಂದು ರನ್ ಗಳಿಸಿ ಔಟಾದರು. ಆದರೂ ತಮ್ಮ ಹೊಡಿಬಡಿ ಆಟವನ್ನು ಶುರು ಮಾಡಿದ ಕಿರಣ್ ನವಗಿರೆ, ಪಂಜಾಬ್‌ನ ಪ್ರಿಯಾ ಅವರ ಒಂದೇ ಓವರ್‌ನಲ್ಲಿ 30 ರನ್ ಕಲೆಹಾಕಿದರು. ನಂತರ ಅಕ್ಷಿತ್ ಅವರ ಓವರ್‌ನಲ್ಲಿ 24 ರನ್ ಚಚ್ಚಿದರು.
ಹೀಗಾಗಿ ಕಿರಣ್ 35 ಎಸೆತಗಳಲ್ಲಿ 14 ಬೌಂಡರಿ ಮತ್ತು ಆರು ಸಿಕ್ಸರ್‌ಗಳ ಸಹಾಯದಿಂದ 106 ರನ್‌ಗಳ ಅದ್ಭುತ ಇನ್ನಿಂಗ್ಸ್ ಗಳಿಸಿದರು. ಕೇವಲ 34 ಎಸೆತಗಳಲ್ಲಿ ಶತಕ ಪೂರೈಸುವ ಮೂಲಕ ಕಿರಣ್ ಅತಿ ವೇಗದ ಶತಕ ಸಿಡಿಸಿದ ವಿಶ್ವ ದಾಖಲೆ ನಿರ್ಮಿಸಿದರು. ಇದಕ್ಕೂ ಮೊದಲು, ಈ ವಿಶ್ವ ದಾಖಲೆ ನ್ಯೂಜಿಲೆಂಡ್‌ನ ಸೋಫಿ ಡಿವೈನ್ ಹೆಸರಿನಲ್ಲಿತ್ತು. 2021 ರಲ್ಲಿ ಸೋಫಿ 35 ಎಸೆತಗಳಲ್ಲಿ ಶತಕ ಗಳಿಸಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ದೆಹಲಿ ಸ್ಫೋಟ ನಡೆದಾಗ ಕಂಗಾಲಾಗಿ ಓಡಿದ ಜನರು; ಸಿಸಿಟಿವಿ ವಿಡಿಯೋ ವೈರಲ್
ಉತ್ತರ ಪ್ರದೇಶದ ಕಲ್ಲು ಗಣಿಗಾರಿಕೆ ವೇಳೆ ಭೂಕುಸಿತವಾಗಿ ಓರ್ವ ಸಾವು
ನಾಯಕತ್ವ ಬದಲಾವಣೆ ಬಗ್ಗೆ ನಂಗೇನೂ ಗೊತ್ತಿಲ್ಲ, ಸಿಎಂ ಹತ್ರನೇ ಕೇಳಿ; ಡಿಕೆಶಿ
ರಾಹುಲ್ ಗಾಂಧಿಗೆ ಧೈರ್ಯ ತುಂಬಿದ್ದೇನೆ; ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

