ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಪರ್ತ್‌ನ ಆಪ್ಟಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟ ಅಂತ್ಯಗೊಂಡಿದೆ. ಎರಡನೇ ದಿನದಾಟದಲ್ಲಿ ಆಸ್ಟ್ರೇಲಿಯಾವನ್ನು 104 ರನ್ಗಳಿಗೆ ಆಲೌಟ್ ಮಾಡಿದ ಟೀಂ ಇಂಡಿಯಾ ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದು, ದಿನದಾಟದಂತ್ಯಕ್ಕೆ ಯಾವುದೇ ವಿಕೆಟ್ ನಷ್ಟವಿಲ್ಲದೆ 172 ರನ್ ಕಲೆಹಾಕಿದೆ. ಈ ಮೂಲಕ ಎರಡನೇ ಇನ್ನಿಂಗ್ಸ್ನಲ್ಲಿ ಭಾರತ 218 ರನ್‌ಗಳ ಮುನ್ನಡೆ ಪಡೆದುಕೊಂಡಿದೆ. ತಂಡದ ಪರ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದ ಯಶಸ್ವಿ ಜೈಸ್ವಾಲ್ ಹಾಗೂ ಕೆಎಲ್ ರಾಹುಲ್ ತಲಾ ಅರ್ಧಶತಕ ಸಿಡಿಸುವ ಮೂಲಕ ದಿನವಿಡೀ ಕಾಂಗರೂ ಬೌಲರ್ಗಳನ್ನು ಕಾಡಿದರು. ಮೊದಲ ಇನ್ನಿಂಗ್ಸ್ನಲ್ಲಿ ವಿಕೆಟ್ಗಳ ಬೇಟೆಯಾಡಿದ್ದ ಆಸೀಸ್ ವೇಗಿಗಳು ಎರಡನೇ ಇನ್ನಿಂಗ್ಸ್ನಲ್ಲಿ ವಿಕೆಟ್ಗಾಗಿ ಕಾದು ಕಾದು ಸುಸ್ತಾದರು.
ಮೇಲೆ ಹೇಳಿದಂತೆ ಪರ್ತ್ ಟೆಸ್ಟ್ನ ಎರಡನೇ ದಿನದಾಟ ಭಾರತದ ಹೆಸರಲ್ಲಿತ್ತು. ಸದ್ಯ ಎರಡನೇ ದಿನದಾಟದಲ್ಲಿ ಅಜೇಯರಾಗಿ ಉಳಿದು ಮೂರನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿರುವ ಕನ್ನಡಿಗ ಕೆಎಲ್ ರಾಹುಲ್ 62 ರನ್ ಹಾಗೂ ಯಶಸ್ವಿ ಜೈಸ್ವಾಲ್ 90 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಇನ್ನು ಮೊದಲ ಇನ್ನಿಂಗ್ಸ್ನಲ್ಲಿ ಭಾರತವನ್ನು 150 ರನ್ಗಳಿಗೆ ಆಲೌಟ್ ಮಾಡಿದ್ದ, ಆಸ್ಟ್ರೇಲಿಯಾ ತಂಡ ತನ್ನ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 104 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಹೀಗಾಗಿ ಭಾರತ ಮೊದಲ ಇನಿಂಗ್ಸ್‌ನಲ್ಲಿ 46 ರನ್‌ಗಳ ಮುನ್ನಡೆ ಪಡೆದುಕೊಂಡಿತು. ಅಜೇಯರಾಗಿ ಉಳಿದಿರುವ ಯಶಸ್ವಿ 193 ಎಸೆತಗಳನ್ನು ಎದುರಿಸಿದ್ದು ಏಳು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳನ್ನು ಸಿಡಿಸಿದ್ದರೆ, ರಾಹುಲ್ ಇದುವರೆಗೆ 153 ಎಸೆತಗಳನ್ನು ಎದುರಿಸಿದ್ದು ನಾಲ್ಕು ಬೌಂಡರಿಗಳನ್ನು ಬಾರಿಸಿದ್ದಾರೆ.
ಇನ್ನು ಮೊದಲ ದಿನದಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 67 ರನ್ ಬಾರಿಸಿದ್ದ ಕಾಂಗರೂ ಪಡೆ, ಎರಡನೇ ದಿನ 37 ರನ್ ಗಳಿಸುವಷ್ಟರಲ್ಲಿ ಉಳಿದ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಎರಡನೇ ದಿನದಾಟದಲ್ಲಿ ಅಲೆಕ್ಸ್ ಕ್ಯಾರಿ ರೂಪದಲ್ಲಿ ಆಸ್ಟ್ರೇಲಿಯಾ ತನ್ನ 8ನೇ ವಿಕೆಟ್ ಕಳೆದುಕೊಂಡಿತು. ಬುಮ್ರಾ ಬೌಲಿಂಗ್ನಲ್ಲಿ ಕೀಪರ್ ಕೈಗೆ ಕ್ಯಾಚಿತ್ತು ಔಟಾದ ಕ್ಯಾರಿ, 21 ರನ್ ಕಲೆಹಾಕಿದರು. ಇದಾದ ನಂತರ ನಾಥನ್ ಲಿಯಾನ್ ಹರ್ಷಿತ್ ರಾಣಾಗೆ ಬಲಿಯಾದರು. ಆಟ ಆರಂಭವಾದ ಮೊದಲ ಗಂಟೆಯೊಳಗೆ ಭಾರತ ಈ ಎರಡೂ ವಿಕೆಟ್‌ಗಳನ್ನು ಉರುಳಿಸಿತ್ತು.
ಆದಾಗ್ಯೂ, ಕೊನೆಯ ಜೋಡಿಯಾದ ಸ್ಟಾರ್ಕ್ ಮತ್ತು ಜೋಶ್ ಹೇಜಲ್‌ವುಡ್ ಅವರನ್ನು ಔಟ್ ಮಾಡಲು ಟೀಂ ಇಂಡಿಯಾ ಒಂದು ಗಂಟೆ ತೆಗೆದುಕೊಂಡಿತು. ಸ್ಟಾರ್ಕ್ ಮತ್ತು ಹೇಜಲ್‌ವುಡ್ 10ನೇ ವಿಕೆಟ್‌ಗೆ 110 ಎಸೆತಗಳಲ್ಲಿ 25 ರನ್‌ಗಳ ಜೊತೆಯಾಟ ನೀಡಿದರು. ಸ್ಟಾರ್ಕ್ 112 ಎಸೆತಗಳಲ್ಲಿ ಎರಡು ಬೌಂಡರಿಗಳ ನೆರವಿನಿಂದ 26 ರನ್ ಗಳಿಸಿ, ಹರ್ಷಿತ್ ರಾಣಾಗೆ ಬಲಿಯಾದರೆ, ಹೇಜಲ್‌ವುಡ್ ಏಳು ರನ್ ಗಳಿಸಿ ಅಜೇಯರಾಗಿ ಉಳಿದರು. ಭಾರತ ತಂಡದ ನಾಯಕ ಜಸ್ಪ್ರೀತ್ ಬುಮ್ರಾ ಐದು ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:23 pm, Sat, 23 November 24