IND vs AUS: ಕಿಶನ್- ಸೂರ್ಯ ಸಿಡಿಲಬ್ಬರದ ಬ್ಯಾಟಿಂಗ್; ಕಾಂಗರೂಗಳ ಹೆಡೆಮುರಿ ಕಟ್ಟಿದ ಭಾರತ..!

|

Updated on: Nov 23, 2023 | 11:16 PM

IND vs AUS: ವಿಶಾಖಪಟ್ಟಣದಲ್ಲಿ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಟಿ20 ಪಂದ್ಯವನ್ನು ಟೀಂ ಇಂಡಿಯಾ 2 ವಿಕೆಟ್​ಗಳಿಂದ ಗೆದ್ದು ಬೀಗಿದೆ. ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಕಾಂಗರೂಗಳನ್ನು ಮಣಿಸಿರುವ ಭಾರತ, ಏಕದಿನ ವಿಶ್ವಕಪ್ ಫೈನಲ್ ಸೋಲಿಗೆ ಸೇಡು ತೀರಿಸಿಕೊಂಡಿದೆ.

IND vs AUS: ಕಿಶನ್- ಸೂರ್ಯ ಸಿಡಿಲಬ್ಬರದ ಬ್ಯಾಟಿಂಗ್; ಕಾಂಗರೂಗಳ ಹೆಡೆಮುರಿ ಕಟ್ಟಿದ ಭಾರತ..!
ಟೀಂ ಇಂಡಿಯಾ
Follow us on

ವಿಶಾಖಪಟ್ಟಣದಲ್ಲಿ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ನಡುವಿನ ಮೊದಲ ಟಿ20 ಪಂದ್ಯವನ್ನು ಟೀಂ ಇಂಡಿಯಾ 2 ವಿಕೆಟ್​ಗಳಿಂದ ಗೆದ್ದು ಬೀಗಿದೆ. ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಕಾಂಗರೂಗಳನ್ನು ಮಣಿಸಿರುವ ಭಾರತ, ಏಕದಿನ ವಿಶ್ವಕಪ್ ಫೈನಲ್ ಸೋಲಿಗೆ ಸೇಡು ತೀರಿಸಿಕೊಂಡಿದೆ. ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ (Ishan Kishan) ಅವರ ಸ್ಫೋಟಕ ಅರ್ಧಶತಕದ ಆಧಾರದ ಮೇಲೆ ಭಾರತ, ಆಸ್ಟ್ರೇಲಿಯಾವನ್ನು ಕೊನೆಯ ಎಸೆತದಲ್ಲಿ ಸೋಲಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಜೋಸ್ ಇಂಗ್ಲಿಸ್ (Josh Inglis) ಅವರ ಸ್ಫೋಟಕ ಶತಕದ ಆಧಾರದ ಮೇಲೆ 209 ರನ್​ಗಳ ಬೃಹತ್ ಟಾರ್ಗೆಟ್ ನೀಡಿತು. ಈ ಗುರಿ ಬೆನ್ನಟ್ಟಿದ ಭಾರತ 8 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು.

ಕೇವಲ 4 ದಿನಗಳ ಹಿಂದೆ, ಭಾರತ ಮತ್ತು ಆಸ್ಟ್ರೇಲಿಯಾ ಅಹಮದಾಬಾದ್‌ನಲ್ಲಿ 2023 ರ ವಿಶ್ವಕಪ್‌ನ ಫೈನಲ್‌ನಲ್ಲಿ ಆಡಿದ್ದು, ಅಲ್ಲಿ ಟೀಮ್ ಇಂಡಿಯಾ ಸೋಲನ್ನು ಎದುರಿಸಬೇಕಾಯಿತು. ಇದೀಗ ತಕ್ಷಣವೇ ಎರಡೂ ತಂಡಗಳು ವಿಭಿನ್ನ ಸ್ವರೂಪದಲ್ಲಿ ಹಣಾಹಣಿ ನಡೆಸಿದ್ದು, ಇದಕ್ಕೂ ವಿಶಾಖಪಟ್ಟಣಂ ಕ್ರೀಡಾಂಗಣ ‘ಹೌಸ್ ಫುಲ್’ ಆಗಿತ್ತು. ಆದರೆ, ಎರಡೂ ತಂಡಗಳ ಬಹುತೇಕ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಫೈನಲ್ ನಂತರ ಈ ಪಂದ್ಯದಲ್ಲಿ ಸೂರ್ಯ, ಸ್ಟೀವ್ ಸ್ಮಿತ್, ಜೋಶ್ ಇಂಗ್ಲಿಷ್ ಮಾತ್ರ ಮೈದಾನಕ್ಕಿಳಿದಿದ್ದರು.

IND vs AUS 1ST T20 Highlights: ಕೊನೆಯ ಎಸೆತದಲ್ಲಿ ರಿಂಕು ಸಿಕ್ಸರ್: ಭಾರತಕ್ಕೆ ರೋಚಕ ಜಯ

ಆಸೀಸ್​ಗೆ ಅಬ್ಬರದ ಆರಂಭ

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸೀಸ್ ಪರ ಸ್ಟೀವ್ ಸ್ಮಿತ್ ಮತ್ತು ಶಾರ್ಟ್ ಸ್ಫೋಟಕ ಆರಂಭ ನೀಡಿ 4 ಓವರ್​ಗಳಲ್ಲಿ 30 ರನ್ ಕಲೆಹಾಕಿದರು. ಆದರೆ 5ನೇ ಓವರ್​ನಲ್ಲಿ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್, ಶಾರ್ಟ್ (13) ಅವರನ್ನು ಔಟ್ ಮಾಡಿದರು. ಇದಾದ ಬಳಿಕ ಬಂದ ಜೋಶ್ ಇಂಗ್ಲಿಸ್ ಭಾರತದ ಬೌಲರ್​ಗಳನ್ನು ಬೆಂಡೆತ್ತಿದರು. 8ನೇ ಓವರ್‌ನಲ್ಲಿ ಪ್ರಸಿದ್ಧ್ ಕೃಷ್ಣ ವಿರುದ್ಧ 3 ಬೌಂಡರಿ ಮತ್ತು 1 ಸಿಕ್ಸರ್ ಸೇರಿದಂತೆ 19 ಕಲೆಹಾಕಿದ ಇಂಗ್ಲಿಸ್, ನಂತರ 12ನೇ ಓವರ್‌ನಲ್ಲೂ ಬಿಷ್ಣೋಯ್ ವಿರುದ್ಧ 2 ಸಿಕ್ಸರ್ ಮತ್ತು 1 ಬೌಂಡರಿ ಬಾರಿಸುವ ಮೂಲಕ ಮೊದಲ ಅರ್ಧಶತಕ ಪೂರೈಸಿದರು. 15ನೇ ಓವರ್‌ನಲ್ಲಿ ಮತ್ತೆ ಬಿಷ್ಣೋಯ್ ಅವರನ್ನು ಗುರಿಯಾಗಿಸಿಕೊಂಡ ಇಂಗ್ಲಿಸ್ 3 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ 21 ರನ್ ಗಳಿಸಿದರು.

ಇಂಗ್ಲಿಸ್ ಸ್ಫೋಟಕ ಶತಕ

ಮತ್ತೊಂದೆಡೆ ಸ್ಟೀವ್ ಸ್ಮಿತ್ ಕೂಡ ಅರ್ಧಶತಕ ಪೂರೈಸಿದರು. ಮುಂದಿನ ಎಸೆತದಲ್ಲಿಯೇ ಸ್ಮಿತ್ ಔಟಾದರೂ, ಅಬ್ಬರದ ಬ್ಯಾಟಿಂಗ್ ಮುಂದುವರೆಸಿದ ಇಂಗ್ಲಿಸ್ ಕೇವಲ 47 ಎಸೆತಗಳಲ್ಲಿ ಶತಕ ಪೂರೈಸಿದರು. ಇದು ಟಿ20ಯಲ್ಲಿ ಆಸ್ಟ್ರೇಲಿಯಾದ ಜಂಟಿ ವೇಗದ ಶತಕವಾಗಿದೆ. 18ನೇ ಓವರ್‌ನಲ್ಲಿ ಇಂಗ್ಲಿಷ್ ಔಟಾದರೆ, ಟಿಮ್ ಡೇವಿಡ್ ತಂಡವನ್ನು 208 ರನ್‌ಗಳಿಗೆ ಕೊಂಡೊಯ್ದರು. ಮುಖೇಶ್ ಕುಮಾರ್ ಎಸೆದ 20ನೇ ಓವರ್‌ನಲ್ಲಿ ಕೇವಲ 5 ರನ್‌ಗಳು ಬಂದವು.

ಕಳಪೆ ಆರಂಭ

209 ರನ್​ಗಳ ಗುರಿ ಬೆನ್ನಟ್ಟಿದ ಭಾರತದ ಆರಂಭ ಕೆಟ್ಟದಾಗಿತ್ತು. ಮೊದಲ ಓವರ್‌ನಲ್ಲಿಯೇ, ಆರಂಭಿಕರಾದ ರುತುರಾಜ್ ಗಾಯಕ್ವಾಡ್ ಯಾವುದೇ ಎಸೆತವನ್ನು ಆಡದೆ ರನೌಟ್ ಆದರು. ಮೂರನೇ ಓವರ್‌ನಲ್ಲಿ ಜೈಸ್ವಾಲ್ 2 ಬೌಂಡರಿಗಳನ್ನು ಬಾರಿಸಿದರಾದರೂ ನಂತರದ ಎಸೆತದಲ್ಲೇ ಔಟಾದರು. ಇಲ್ಲಿಂದ ನಾಯಕ ಸೂರ್ಯ ಇಶಾನ್ ಕಿಶನ್ ಜೊತೆಗೂಡಿ ಇನ್ನಿಂಗ್ಸ್ ನಿಭಾಯಿಸಿದ್ದು ಮಾತ್ರವಲ್ಲದೆ ಪ್ರತಿದಾಳಿ ನಡೆಸಿದರು. ನಿಧಾನಗತಿಯ ಆರಂಭದ ನಂತರ ಇಶಾನ್ ಅವರ ಬ್ಯಾಟ್ ವಿಜೃಂಭಿಸಿ 37 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

ಕೊನೆಯ ಎಸೆತದಲ್ಲಿ ರಿಂಕು ಸಿಕ್ಸರ್

ಆದರೆ, ಮುಂದಿನ ಎರಡು ಎಸೆತಗಳ ಬಳಿಕ ಇಶಾನ್ ಔಟಾದರು. ಈ ವೇಳಗೆ ಕಿಶನ್, ನಾಯಕ ಸೂರ್ಯ ಅವರೊಂದಿಗೆ 112 ರನ್‌ಗಳ ಜೊತೆಯಾಟ ನಡೆಸಿದರು. ಕಿಶನ್ ವಿಕೆಟ್ ಬಳಿಕವೂ ಸೂರ್ಯ ದಾಳಿ ಮುಂದುವರಿಸಿ ಕೇವಲ 29 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆದರೆ 4ನೇ ಕ್ರಮಾಂಕದಲ್ಲಿ ಬಂದ ತಿಲಕ್ ವರ್ಮಾ ಹೆಚ್ಚು ಹೊತ್ತು ಮೈದಾನದಲ್ಲಿ ನಿಲ್ಲದೆ ತನ್ವೀರ್ ಸಂಘಗೆ ಬಲಿಯಾದರು. ಇಲ್ಲಿಂದ ಸೂರ್ಯ ಮತ್ತು ರಿಂಕು ತಂಡವನ್ನು ಗೆಲುವಿನ ಸಮೀಪಕ್ಕೆ ಕೊಂಡೊಯ್ದರು. ಆದರೆ, ಗುರಿಗೆ ಮುನ್ನವೇ ಸೂರ್ಯ ಔಟಾದರು. ಇಲ್ಲಿಂದ ಪಂದ್ಯದಲ್ಲಿ ಡ್ರಾಮಾ ಶುರುವಾಯಿತು. ಕೊನೆಯ ಓವರ್‌ನಲ್ಲಿ 7 ರನ್‌ಗಳ ಅಗತ್ಯವಿತ್ತು ಮತ್ತು ಮೊದಲ 2 ಎಸೆತಗಳಲ್ಲಿ 5 ರನ್ ಕಲೆಹಾಕಲಾಯಿತು. ನಂತರ ಮುಂದಿನ 3 ಎಸೆತಗಳಲ್ಲಿ 3 ವಿಕೆಟ್‌ಗಳು ಬಿದ್ದವು. ಕೊನೆಯ ಎಸೆತದಲ್ಲಿ 1 ರನ್ ಅಗತ್ಯವಿತ್ತು, ಸ್ಟ್ರೈಕ್​ನಲ್ಲಿದ್ದ ರಿಂಕು ಸಿಕ್ಸರ್ ಬಾರಿಸಿದರು. ಆದರೆ, ಈ ಬಾಲ್ ನೋ ಬಾಲ್ ಆಗಿದ್ದರಿಂದ ರಿಂಕು ಸಿಕ್ಸರ್ ಭಾರಿಸದಿದ್ದರೂ ಭಾರತ ಜಯಭೇರಿ ಬಾರಿಸುತ್ತಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:04 pm, Thu, 23 November 23