ವಿಶ್ವ ಕ್ರಿಕೆಟ್​ನಲ್ಲಿ ಭಾರತವೇ ಸಾರ್ವಭೌಮ; ಮೂರೂ ಮಾದರಿಯಲ್ಲೂ ನಂ.1 ಸ್ಥಾನಕ್ಕೇರಿದ ಟೀಂ ಇಂಡಿಯಾ..!

|

Updated on: Sep 22, 2023 | 11:17 PM

ICC Rankings: ಮೊಹಾಲಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಐದು ವಿಕೆಟ್​ಗಳಿಂದ ಮಣಿಸಿದ ಭಾರತ ಇತಿಹಾಸ ನಿರ್ಮಿಸಿದೆ. ಈ ಗೆಲುವಿನೊಂದಿಗೆ ಏಕದಿನ ಮಾದರಿಯಲ್ಲಿ ನಂಬರ್ 1 ತಂಡವಾಗಿ ಹೊರಹೊಮ್ಮಿರುವ ಭಾರತ ತಂಡವು ಇದೀಗ ಮೂರೂ ಮಾದರಿಗಳಲ್ಲೂ ಅಂದರೆ, ಏಕದಿನ, ಟೆಸ್ಟ್ ಹಾಗೂ ಟಿ20 ಮಾದರಿಯಲ್ಲಿ ನಂ.1 ಸ್ಥಾನಕ್ಕೇರಿದೆ.

ವಿಶ್ವ ಕ್ರಿಕೆಟ್​ನಲ್ಲಿ ಭಾರತವೇ ಸಾರ್ವಭೌಮ; ಮೂರೂ ಮಾದರಿಯಲ್ಲೂ ನಂ.1 ಸ್ಥಾನಕ್ಕೇರಿದ ಟೀಂ ಇಂಡಿಯಾ..!
ಟೀಂ ಇಂಡಿಯಾ
Follow us on

ಮೊಹಾಲಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಐದು ವಿಕೆಟ್​ಗಳಿಂದ ಮಣಿಸಿದ ಭಾರತ (India vs Australia) ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಇತಿಹಾಸ ನಿರ್ಮಿಸಿದೆ. ಈ ಗೆಲುವಿನೊಂದಿಗೆ ಏಕದಿನ ಮಾದರಿಯಲ್ಲಿ ನಂಬರ್ 1 ತಂಡವಾಗಿ ಹೊರಹೊಮ್ಮಿರುವ ಭಾರತ ತಂಡವು ಇದೀಗ ಮೂರೂ ಮಾದರಿಗಳಲ್ಲೂ ಅಂದರೆ, ಏಕದಿನ, ಟೆಸ್ಟ್ ಹಾಗೂ ಟಿ20 ಮಾದರಿಯಲ್ಲಿ ನಂ.1 ಸ್ಥಾನಕ್ಕೇರಿದೆ. ಈ ಪಂದ್ಯಕ್ಕೂ ಮೊದಲು ಭಾರತ ಟೆಸ್ಟ್ ಹಾಗೂ ಟಿ20 ಸರಣಿಯಲ್ಲಿ ಬಹಳ ದಿನಗಳಿಂದ ನಂ.1 ಸ್ಥಾನದಲ್ಲಿತ್ತು. ಆದರೆ ಏಕದಿನ ಸರಣಿಯಲ್ಲಿ ಮಾತ್ರ ಆಸ್ಟ್ರೇಲಿಯಾ (Australia) ಮತ್ತು ಪಾಕಿಸ್ತಾನದ (Pakistan) ನಡುವೆ ನಂ.1 ಪಟ್ಟಕ್ಕಾಗಿ ಪೈಪೋಟಿ ನಡೆಯುತ್ತಿತ್ತು. ಆದರೀಗ ಕಾಂಗರೂಗಳ ಹೆಡೆಮುರಿ ಕಟ್ಟಿರುವ ಭಾರತ, ಈ ಮೊದಲು ನಂಬರ್ 1 ಏಕದಿನ ತಂಡವೆನಿಸಿಕೊಂಡಿದ್ದ ಪಾಕಿಸ್ತಾನವನ್ನು ನಂಬರ್-1 ಸ್ಥಾನದಿಂದ ಕೆಳಗಿಳಿಸಿದೆ.

ಮೂರೂ ಮಾದರಿಯಲ್ಲಿ ಭಾರತ ನಂ.1

ನಾವು ಎಲ್ಲಾ ಸ್ವರೂಪಗಳ ಬಗ್ಗೆ ಮಾತನಾಡುವುದಾದರೆ, ಪ್ರಸ್ತುತ ಭಾರತವು ಟಿ20 ಮಾದರಿಯಲ್ಲಿ 264 ರೇಟಿಂಗ್‌ನೊಂದಿಗೆ 1 ನೇ ಸ್ಥಾನದಲ್ಲಿದ್ದರೆ, ಇಂಗ್ಲೆಂಡ್ 261 ರೇಟಿಂಗ್‌ನೊಂದಿಗೆ 2 ನೇ ಸ್ಥಾನದಲ್ಲಿದೆ. ಟೆಸ್ಟ್‌ನಲ್ಲಿ ಭಾರತ 118 ರೇಟಿಂಗ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ ಕೂಡ ಅದೇ ಅಂಕಗಳನ್ನು ಹೊಂದಿದೆ ಆದರೆ ಎರಡನೇ ಸ್ಥಾನದಲ್ಲಿದೆ. ಇನ್ನು ಏಕದಿನ ಮಾದರಿಗೆ ಬಂದರೆ ಈ ಮೊದಲು ಪಾಕಿಸ್ತಾನ ಈ ಮಾದರಿಯಲ್ಲಿ ನಂಬರ್-1 ಆಗಿತ್ತು. ಆದರೆ ಏಷ್ಯಾಕಪ್‌ನಲ್ಲಿ ಹೀನಾಯ ಸೋಲಿನ ನಂತರ ಪಾಕ್ ತಂಡದ ನಂಬರ್ ಸ್ಥಾನ ಅಪಾಯದಲ್ಲಿಯತ್ತು.

ಮೊದಲು ಏಷ್ಯಾಕಪ್ ಗೆದ್ದ ಟೀಂ ಇಂಡಿಯಾ ನಂತರ ಮೊಹಾಲಿ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿತು. ಹೀಗಾಗಿ 116 ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿರುವ ಭಾರತ ನಂಬರ್ 1 ಸ್ಥಾನಕ್ಕೇರಿದರೆ, ಪಾಕಿಸ್ತಾನವು 115 ರೇಟಿಂಗ್ ಪಾಯಿಂಟ್‌ಗಳೊಂದಿಗೆ 2ನೇ ಸ್ಥಾನಕ್ಕೆ ಕುಸಿದಿದೆ. ಇನ್ನು ವಿಶ್ವಕಪ್ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾ ಹೊಸ ಮೈಲುಗಲ್ಲು ಸಾಧಿಸಿದ್ದು, ತಂಡದ ಆತ್ಮಸ್ಥೈರ್ಯವನ್ನು ಹೆಚ್ಚಿಸಿದೆ.

ಪಂದ್ಯ ಹೀಗಿತ್ತು

ಮೊಹಾಲಿಯಲ್ಲಿ ನಡೆದ ಏಕದಿನ ಪಂದ್ಯದ ಬಗ್ಗೆ ಮಾತನಾಡುವುದಾದರೆ, ಇಲ್ಲಿ ಮೊದಲು ಬೌಲಿಂಗ್ ಮಾಡಿದ ಭಾರತ ಆಸ್ಟ್ರೇಲಿಯಾ 276 ರನ್​ಗಳಿಗೆ ಸೀಮಿತಗೊಳಿಸಿತು. ಇದಕ್ಕೆ ಪ್ರತಿಯಾಗಿ ಭಾರತ ತಂಡ ಕೇವಲ 5 ವಿಕೆಟ್ ಕಳೆದುಕೊಂಡು ಈ ಗುರಿಯನ್ನು ಸುಲಭವಾಗಿ ಸಾಧಿಸಿತು. ಭಾರತದ ಪರ ಮೊಹಮ್ಮದ್ ಶಮಿ ಐದು ವಿಕೆಟ್ ಕಬಳಿಸಿದರೆ, ಶುಭ್​ಮನ್ ಗಿಲ್, ರುತುರಾಜ್ ಗಾಯಕ್ವಾಡ್, ಕೆಎಲ್ ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ ತಲಾ ಅರ್ಧಶತಕ ಸಿಡಿಸಿ ಮಿಂಚಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:35 pm, Fri, 22 September 23