IND vs AUS: ಅನನುಭವಿ ಸ್ಪಿನ್ನರ್​ಗಳಿಗೆ ಕೊಹ್ಲಿ ವಿಕೆಟ್ ಉರುಳಿಸುವುದು ನೀರು ಕುಡಿದಷ್ಟೇ ಸುಲಭ..!

|

Updated on: Mar 02, 2023 | 3:48 PM

Virat Kohli: ಇಲ್ಲಿಯವರೆಗೆ ಆಡಿರುವ ಟೆಸ್ಟ್ ಸರಣಿಯ 5 ಇನ್ನಿಂಗ್ಸ್‌ಗಳಲ್ಲಿ ಕೊಹ್ಲಿ ಕೇವಲ 110 ರನ್ ಮಾತ್ರ ಬಾರಿಸಿದ್ದಾರೆ. ಇದರಲ್ಲಿ ಒಂದೇ ಒಂದು ಅರ್ಧಶತಕವಿಲ್ಲ.

IND vs AUS: ಅನನುಭವಿ ಸ್ಪಿನ್ನರ್​ಗಳಿಗೆ ಕೊಹ್ಲಿ ವಿಕೆಟ್ ಉರುಳಿಸುವುದು ನೀರು ಕುಡಿದಷ್ಟೇ ಸುಲಭ..!
ವಿರಾಟ್ ಕೊಹ್ಲಿ
Follow us on

ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ (Border-Gavaskar Trophy) ಕೊಹ್ಲಿಯ ಮತ್ತೊಂದು ಇನ್ನಿಂಗ್ಸ್‌ ಸದ್ದಿಲ್ಲದೆ ಮುಗಿದು ಹೋಗಿದೆ. ವಿರಾಟ್ ಕೊಹ್ಲಿ 3ನೇ ಟೆಸ್ಟ್​ನಲ್ಲೂ ಮತ್ತೊಮ್ಮೆ ವಿಫಲರಾಗಿದ್ದಾರೆ. ಒಂದೆಡೆ ರನ್​ಗಾಗಿ ಹಾತೋರಿಯುತ್ತಿರುವ ಕೊಹ್ಲಿಗೆ (Virat Kohli) ದೀರ್ಘ ಇನ್ನಿಂಗ್ಸ್ ಆಡಲಾಗುತ್ತಿಲ್ಲ. ಇತ್ತ ಇನ್ನೊಂದು ತುದಿಯಲ್ಲಿ ನಿಂತು ಹೆಚ್ಚು ಸಮಯ ಕ್ರೀಸ್​ನಲ್ಲಿ ಕಳೆಯಲಾಗುತ್ತಿಲ್ಲ. ವಿಶ್ವಕ್ರಿಕೆಟ್​ನಲ್ಲಿ ರನ್​ ಸರದಾರನಾಗಿ ಹೆಸರು ಮಾಡಿರುವ ಕೊಹ್ಲಿಗೆ ಟೆಸ್ಟ್ ಕ್ರಿಕೆಟ್​ನಲ್ಲಿ ಮಾತ್ರ ಹೇಳಿಕೊಳ್ಳುವಂತಹ ಯಶಸ್ಸು ಇತ್ತೀಚಿನ ದಿನಗಳಲ್ಲಿ ಸಿಗುತ್ತಿಲ್ಲ. ಕೊಹ್ಲಿಯ ಟೆಸ್ಟ್ ಕ್ರಿಕೆಟ್​ನ ಬರ ಇದೀಗ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿಯೂ ಮುಂದುವರೆದಿದೆ. ಅದರಲ್ಲೂ ಇಡೀ ಸರಣಿಯಲ್ಲಿ ಕೊಹ್ಲಿ, ಆಸ್ಟ್ರೇಲಿಯಾದ ಇಬ್ಬರು ಅನನುಭವಿ ಆಟಗಾರರ ಮುಂದೆ ಮಂಕಾಗಿರುವುದು ಅವರ ಫಾರ್ಮ್​ ಬಗ್ಗೆ ಪ್ರಶ್ನೆ ಎತ್ತುವಂತೆ ಮಾಡಿದೆ. ಅದರಲ್ಲೂ ಚೊಚ್ಚಲ ಸರಣಿ ಆಡುತ್ತಿರುವ ಟಾಡ್ ಮರ್ಫಿ ಮತ್ತು ಮ್ಯಾಥ್ಯೂ ಕುಹ್ನೆಮನ್ (Todd Murphy and Matthew Kuhneman) ಇಡೀ ಸರಣಿಯಲ್ಲಿ ಕೊಹ್ಲಿಯನ್ನು ಇನ್ನಿಲ್ಲದಂತೆ ಕಾಡಿದ್ದಾರೆ.

ಮೊದಲೆರಡು ಟೆಸ್ಟ್​ನಂತೆಯೇ ಈ ಟೆಸ್ಟ್​ನಲ್ಲೂ ಕೊಹ್ಲಿ ಸ್ಪಿನ್ನರ್​ಗಳಿಗೆ ವಿಕೆಟ್ ಒಪ್ಪಿಸಿದರು. ಇಂದೋರ್ ಟೆಸ್ಟ್‌ನ ಎರಡನೇ ಇನ್ನಿಂಗ್ಸ್​ನಲ್ಲಿ ಮ್ಯಾಥ್ಯೂ ಕುಹ್ನೆಮನ್ ಎಸೆತದಲ್ಲಿ ವಿರಾಟ್ ಕೊಹ್ಲಿ ಔಟಾದರು. ಚೆಂಡನ್ನು ಆಡಲು ಆಯ್ದುಕೊಂಡ ಶಾಟ್ ಕೊಹ್ಲಿ ಔಟಾಗುವುದಕ್ಕೆ ಕಾರಣವಾಗಿತ್ತು. ಹೀಗಾಗಿ ಎಲ್​ಬಿಡಬ್ಲ್ಯು ಆದ ಬಳಿಕ ವಿರಾಟ್ ಕೊಹ್ಲಿ ಮುಖದಲ್ಲಿ ಸಿಟ್ಟು ಎದ್ದು ಕಾಣುತ್ತಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ 22 ರನ್ ಗಳಿಸಿ ಔಟಾಗಿದ್ದ ಕೊಹ್ಲಿ, ಎರಡನೇ ಇನ್ನಿಂಗ್ಸ್ ಕೇವಲ 13 ರನ್‌ಗಳಿಗೆ ಬ್ಯಾಟ್ ಎತ್ತಿಟ್ಟರು. ಮೊದಲನೇ ಇನ್ನಿಂಗ್ಸ್​ನಲ್ಲಿ ಟಾಡ್ ಮರ್ಫಿಗೆ ವಿಕೆಟ್ ಒಪ್ಪಿಸಿದ್ದ ಕೊಹ್ಲಿ ಎರಡನೇ ಇನ್ನಿಂಗ್ಸ್​ನಲ್ಲಿ ಮ್ಯಾಥ್ಯೂ ಕುಹ್ನೆಮನ್​ಗೆ ಬಲಿಯಾದರು. ವಿರಾಟ್ ಈ ಎರಡು ಇನ್ನಿಂಗ್ಸ್‌ಗಳಲ್ಲಿ ಮಾತ್ರ ಸ್ಪಿನ್ನರ್​​ಗಳಿಗೆ ಬಲಿಯಾಗಿಲ್ಲ. ಬದಲಿಗೆ, ಇದಕ್ಕೂ ಮುನ್ನ ಆಡಿದ 2 ಟೆಸ್ಟ್‌ಗಳ 3 ಇನ್ನಿಂಗ್ಸ್‌ಗಳಲ್ಲಿ ಕೊಹ್ಲಿಯದ್ದು ಇದೇ ಕಥೆ.

IND vs AUS: ತವರಿನಲ್ಲಿ ಶತಕದ ಸಾಧನೆ; ಹೀಗೊಂದು ದಾಖಲೆ ಬರೆದ ಉಮೇಶ್ ಯಾದವ್

ಮೊದಲು 3 ಇನ್ನಿಂಗ್ಸ್‌ಗಳಲ್ಲಿ ಕೇವಲ 75 ರನ್

ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಇಂದೋರ್ ಟೆಸ್ಟ್‌ಗೆ ಮೊದಲು ಕೊಹ್ಲಿ ಆಡಿದ 3 ಇನ್ನಿಂಗ್ಸ್‌ಗಳಲ್ಲಿ 75 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಇದರಲ್ಲಿ 2 ಬಾರಿ ಟಾಡ್ ಮರ್ಫಿಗೆ ಬಲಿಯಾದರೆ, ಒಮ್ಮೆ ಮ್ಯಾಥ್ಯೂ ಕುಹ್ನೆಮನ್​ಗೆ ಕೊಹ್ಲಿ ವಿಕೆಟ್ ಒಪ್ಪಿಸಿದ್ದರು.

5 ಇನ್ನಿಂಗ್ಸ್‌ಗಳಲ್ಲಿ 110 ರನ್

ಈ ಮೂಲಕ ಇಲ್ಲಿಯವರೆಗೆ ಆಡಿರುವ ಟೆಸ್ಟ್ ಸರಣಿಯ 5 ಇನ್ನಿಂಗ್ಸ್‌ಗಳಲ್ಲಿ ಕೊಹ್ಲಿ ಕೇವಲ 110 ರನ್ ಮಾತ್ರ ಬಾರಿಸಿದ್ದಾರೆ. ಇದರಲ್ಲಿ ಒಂದೇ ಒಂದು ಅರ್ಧಶತಕವಿಲ್ಲ. ಅಲ್ಲದೆ ಅವರ ಬ್ಯಾಟಿಂಗ್ ಸರಾಸರಿ ಕೂಡ 25ಕ್ಕಿಂತ ಕಡಿಮೆಯಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ವಿರಾಟ್ ಕೊಹ್ಲಿಯನ್ನು ಟಾಡ್ ಮರ್ಫಿ ಮೂರು ಬಾರಿ ಔಟ್ ಮಾಡಿದ್ದರೆ, ಮ್ಯಾಥ್ಯೂ ಕುನ್ಹೆಮನ್ 2 ಬಾರಿ ಔಟ್ ಮಾಡಿದ್ದಾರೆ. ವಿಶೇಷವೆಂದರೆ ಇದುವರೆಗೂ ವಿರಾಟ್ ಈ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡದ ಯಾವುದೇ ವೇಗದ ಬೌಲರ್‌ಗಳನ್ನು ಎದುರಿಸಿಲ್ಲ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ