VIDEO: ಅದ್ಭುತ… ಅತ್ಯದ್ಭುತ ಕ್ಯಾಚ್ ಹಿಡಿದು ಎಲ್ಲರನ್ನು ನಿಬ್ಬೆರಗಾಗಿಸಿದ ಸಿರಾಜ್
IND vs BAN 2nd Test: ಭಾರತ ಮತ್ತು ಬಾಂಗ್ಲಾದೇಶ್ ನಡುವಣ 2ನೇ ಟೆಸ್ಟ್ ಪಂದ್ಯವು ಡ್ರಾನಲ್ಲಿ ಕೊನೆಗೊಳ್ಳುವ ಸಾಧ್ಯತೆ ಹೆಚ್ಚಿದೆ. ಇದಾಗ್ಯೂ ಈ ಸರಣಿಯು ಟೀಮ್ ಇಂಡಿಯಾ ಪಾಲಾಗಲಿದೆ. ಏಕೆಂದರೆ ಎರಡು ಪಂದ್ಯಗಳ ಈ ಟೆಸ್ಟ್ ಸರಣಿಯ ಮೊದಲ ಮ್ಯಾಚ್ನಲ್ಲಿ ಟೀಮ್ ಇಂಡಿಯಾ 280 ರನ್ಗಳ ಅಮೋಘ ಗೆಲುವು ದಾಖಲಿಸಿದೆ. ಹೀಗಾಗಿ ದ್ವಿತೀಯ ಟೆಸ್ಟ್ ಡ್ರಾ ಆದರೂ ಸರಣಿ ಟೀಮ್ ಇಂಡಿಯಾ ಪಾಲಾಗಲಿದೆ.
ಬಾಂಗ್ಲಾದೇಶ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಅತ್ಯದ್ಭುತ ಕ್ಯಾಚ್ ಹಿಡಿದು ಮಿಂಚಿದ್ದಾರೆ. ಕಾನ್ಪುರದ ಗ್ರೀನ್ ಪಾರ್ಕ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಸಿರಾಜ್ ಅತ್ಯುತ್ತಮ ಫೀಲ್ಡಿಂಗ್ ಪ್ರದರ್ಶಿಸಿದರು. ರವಿಚಂದ್ರನ್ ಅಶ್ವಿನ್ ಎಸೆದ 56ನೇ ಓವರ್ನ ಕೊನೆಯ ಎಸೆತದಲ್ಲಿ ಶಕೀಬ್ ಅಲ್ ಹಸನ್ ಭರ್ಜರಿ ಹೊಡೆತ ಬಾರಿಸಿದ್ದರು.
ಇತ್ತ ಮಿಡ್-ಆಫ್ ಸರ್ಕಲ್‌ನಲ್ಲಿ ಫೀಲ್ಡಿಂಗ್ನಲ್ಲಿದ್ದ ಸಿರಾಜ್ ಚೆಂಡಿನ ಮೇಲೆ ಕಣ್ಣಿಟ್ಟರು. ಆಕಾಶದತ್ತ ಚಿಮ್ಮಿದ ಚೆಂಡನ್ನು ಹಿಡಿಯಲು ಹಿಮ್ಮುಖವಾಗಿ ಸಾಗಿದ ಟೀಮ್ ಇಂಡಿಯಾ ವೇಗಿ ಕೊನೆಯ ಕ್ಷಣದಲ್ಲಿ ಎಡಗೈಯಲ್ಲಿ ಚೆಂಡನ್ನು ಬಂಧಿಸುವ ಮೂಲಕ ಅದ್ಭುತವಾಗಿ ಕ್ಯಾಚ್ ಹಿಡಿದರು. ಇದೀಗ ಮೊಹಮ್ಮದ್ ಸಿರಾಜ್ ಹಿಡಿದ ಈ ಅದ್ಭುತ ಕ್ಯಾಚ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಿಂದ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಶುಕ್ರವಾರ ಮೊದಲ ಇನಿಂಗ್ಸ್ ಶುರು ಮಾಡಿದ ಬಾಂಗ್ಲಾದೇಶ್ ತಂಡವು ನಾಲ್ಕನೇ ದಿನದಾಟದಲ್ಲೂ ಬ್ಯಾಟಿಂಗ್ ಮುಂದುವರೆಸಿದೆ. ಇದಕ್ಕೆ ಮುಖ್ಯ ಕಾರಣ 2ನೇ ಮತ್ತು 3ನೇ ದಿನದಾಟಗಳು ಮಳೆಗೆ ಅಹುತಿಯಾಗಿರುವುದು.
ಇದೀಗ ಮೊದಲ ಇನಿಂಗ್ಸ್ ಆಡುತ್ತಿರುವ ಬಾಂಗ್ಲಾದೇಶ್ ತಂಡವು ಭೋಜನಾ ವಿರಾಮದ ವೇಳೆ 6 ವಿಕೆಟ್ ಕಳೆದುಕೊಂಡು 205 ರನ್ ಕಲೆಹಾಕಿದೆ. ಬಾಂಗ್ಲಾ ಪರ 176 ಎಸೆತಗಳನ್ನು ಎದುರಿಸಿದ ಮೊಮಿನುಲ್ ಹಕ್ 16 ಫೋರ್ ಹಾಗೂ 1 ಸಿಕ್ಸ್ನೊಂದಿಗೆ ಅಜೇಯ ಶತಕದೊಂದಿಗೆ ಬ್ಯಾಟಿಂಗ್ ಮುಂದುವರೆಸಿದ್ದಾರೆ. ಇನ್ನು ಕೇವಲ ಒಂದು ದಿನದಾಟ ಮಾತ್ರ ಉಳಿದಿದ್ದು, ಹೀಗಾಗಿ ಭಾರತ ಮತ್ತು ಬಾಂಗ್ಲಾದೇಶ್ ನಡುವಣ 2ನೇ ಟೆಸ್ಟ್ ಪಂದ್ಯವು ಡ್ರಾನಲ್ಲಿ ಅಂತ್ಯಗೊಳ್ಳುವ ಸಾಧ್ಯತೆ ಹೆಚ್ಚಿದೆ.
Published On - 12:43 pm, Mon, 30 September 24